More

  ಅಂಬಿಗರ ಚೌಡಯ್ಯ ಶರಣ ಸಂಸ್ಕೃತಿ ಉತ್ಸವ ನಾಳೆಯಿಂದ

  ಹಾವೇರಿ: ತಾಲೂಕಿನ ನರಸೀಪುರದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಶರಣ ಸಂಸ್ಕೃತಿ ಉತ್ಸವ, ವಚನ ಮಹಾರಥೋತ್ಸವ, ಚೌಡಯ್ಯನವರ 900ನೇ ಜಯಂತಿ, ಲಿಂ. ಶಾಂತಮುನಿ ಸ್ವಾಮೀಜಿಗಳ 4ನೇ ಸ್ಮರಣೋತ್ಸವ, ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿಗಳ 3ನೇ ವರ್ಷದ ಪೀಠಾರೋಹಣ ವಾರ್ಷಿಕ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಜ. 14 ಹಾಗೂ 15ರಂದು ಆಯೋಜಿಸಲಾಗಿದೆ ಎಂದು ಶಾಸಕ ನೆಹರು ಓಲೇಕಾರ ತಿಳಿಸಿದರು.

  ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 14ರಂದು ಸಂಜೆ 5.30ಕ್ಕೆ ಸಾಂಸ್ಕೃತಿಕ ಹಾಗೂ ಜಾನಪದ ಕಲಾ ಮಹೋತ್ಸವ ಕಾರ್ಯಕ್ರಮದ ಉದ್ಘಾಟನೆ ಜರುಗಲಿದೆ. ಗುರುಪೀಠದ ಶ್ರೀ ಶಾಂತಭೀಷ್ಮಚೌಡಯ್ಯ ಸ್ವಾಮೀಜಿ ಉಪಸ್ಥಿತಿಯಲ್ಲಿ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಬಾಗಲಕೋಟ ಬಸವಲಿಂಗ ಸ್ವಾಮೀಜಿ, ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಸಿಂದಗಿಯ ಶಾಂತಗಂಗಾಧರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅಥಣಿಯ ಶಶಿಕಾಂತ ಪಡಸಲಗಿ ಸಮ್ಮುಖ ವಹಿಸುವರು. ಶಾಸಕ ಅರುಣಕುಮಾರ ಪೂಜಾರ ಉದ್ಘಾಟಿಸುವರು. ವಿಪ ಸದಸ್ಯ ಎನ್. ರವಿಕುಮಾರ ಅಧ್ಯಕ್ಷತೆ ವಹಿಸುವರು ಎಂದರು.

  ಜ. 15ರಂದು ಬೆಳಗ್ಗೆ 8ಕ್ಕೆ ಶಾಂತಭೀಷ್ಮಚೌಡಯ್ಯ ಸ್ವಾಮೀಜಿ ಧರ್ಮ ಧ್ವಜಾರೋಹಣ ನೆರವೇರಿಸುವರು. ಬೆಳಗ್ಗೆ 11.30ಕ್ಕೆ ಶರಣ ಸಂಸ್ಕೃತಿ ಉತ್ಸವ ಹಾಗೂ ನಿಜಶರಣ ಅಂಬಿಗರಚೌಡಯ್ಯನವರ 900ನೇ ಜಯಂತಿ ಕಾರ್ಯಕ್ರಮ ಜರುಗಲಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸುವರು. ನಿಡುಮಾಮುಡಿ ಮಠದ ಚನ್ನಮಲ್ಲವೀರಭದ್ರ ಸ್ವಾಮೀಜಿ, ಇಲಕಲ್ಲನ ಗುರುಮಹಾಂತ ಸ್ವಾಮೀಜಿ, ಬಾಲೇಹೊಸೂರ ದಿಂಗಾಲೇಶ್ವರ ಸ್ವಾಮೀಜಿ, ಹೊಸದುರ್ಗದ ಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಂತಭೀಷ್ಮಚೌಡಯ್ಯ ಸ್ವಾಮೀಜಿ ನೇತೃತ್ವ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ವಚನ ಪಠಣ ಮಾಡುವರು. ಮಾಜಿ ಸಿಎಂ ಸಿದ್ದರಾಮಯ್ಯ ಗಂಗಾಪರಮೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ದೋಣಿಗೆ ಪುಷ್ಪಾರ್ಪಣೆ ಮಾಡುವರು. ವೇದವ್ಯಾಸರ ಭಾವಚಿತ್ರಕ್ಕೆ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಪುಷ್ಪಾರ್ಪಣೆ ಮಾಡುವರು. ಶಾಸಕ ನೆಹರು ಓಲೇಕಾರ ಅಧ್ಯಕ್ಷತೆ ವಹಿಸುವರು. ಸಚಿವರು, ಜನಪ್ರತಿನಿಧಿಗಳು, ಇತರರು ಪಾಲ್ಗೊಳ್ಳುವರು ಎಂದರು.

  ಗಂಗಾಮತ ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ ಭೋವಿ ಮಾತನಾಡಿ, ಜ. 14ರಂದು ಹೊರರಾಜ್ಯದ 10 ಕಲಾತಂಡಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ ಎಂದರು.

  ಅಂಬಿಗರಚೌಡಯ್ಯ ಗುರುಪೀಠದ ಕಾರ್ಯಾಧ್ಯಕ್ಷ ಅಶೋಕ ವಾಲಿಕಾರ, ಗಂಗಾಮತ ಸಮಾಜದ ಜಿಲ್ಲಾ ಉಪಾಧ್ಯಕ್ಷ ಪರಶುರಾಮ ಸೊನ್ನದ, ತಾಲೂಕಾಧ್ಯಕ್ಷ ಬಸವರಾಜ ಕಳಸೂರ, ಪ್ರಕಾಶ ಅಂಬಿಗೇರ, ಕರಬಸಪ್ಪ ಹಳದೂರ, ರಾಜು ಕಲ್ಲೂರ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

  ಪ್ರಾಧಿಕಾರ ಘೊಷಣೆ: ಅಂಬಿಗರ ಚೌಡಯ್ಯನವರ ಪುಣ್ಯಕ್ಷೇತ್ರವನ್ನು ಕಾಗಿನೆಲೆ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲು ಅಭಿವೃದ್ಧಿ ಪ್ರಾಧಿಕಾರದ ಅವಶ್ಯಕತೆಯಿದೆ. ಅದನ್ನು ಸಿಎಂ ಗಮನಕ್ಕೆ ತಂದು ಘೊಷಣೆ ಮಾಡಿಸಿ, ಚೌಡಯ್ಯನವರನ್ನು ವಿಶ್ವಕ್ಕೆ ಪರಿಚಯಿಸುವ ಕಾರ್ಯ ಮಾಡಲಾಗುವುದು ಎಂದು ಶಾಸಕ ಓಲೇಕಾರ ತಿಳಿಸಿದರು.

  ರೊಟ್ಟಿ ಜಾತ್ರೆ: ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು, ಅವರ ಪ್ರಸಾದಕ್ಕೆ ರೊಟ್ಟಿಯನ್ನು ಭಕ್ತರು ನೀಡುತ್ತಿದ್ದಾರೆ. ಈಗಾಗಲೇ ಮಠದಲ್ಲಿ 30 ಸಾವಿರಕ್ಕೂ ಅಧಿಕ ರೊಟ್ಟಿಗಳು ಬಂದಿವೆ. ಭಕ್ತರು ಮಠಕ್ಕೆ ಕಳಿಸಿಕೊಡುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಮುಂದಿನ ದಿನಗಳಲ್ಲಿ ಇದು ರೊಟ್ಟಿ ಜಾತ್ರೆಯೆಂದೇ ಪ್ರಸಿದ್ಧಿಗೊಳ್ಳಲಿದೆ ಎಂದು ಮಂಜುನಾಥ ಭೋವಿ ತಿಳಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts