ರಾಜ್ಯದ 13 ಕಂಪನಿಗಳಿಂದ 5 ಸಾವಿರ ಕೋಟಿ ರೂ. ವಂಚನೆ!

| ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ಅಧಿಕ ಬಡ್ಡಿ, ಹಣ ದ್ವಿಗುಣ, ಕಡಿಮೆ ಬೆಲೆಗೆ ಸೈಟ್, ಕಮಿಷನ್ ಆಮಿಷವೊಡ್ಡಿ ರಾಜ್ಯಾದ್ಯಂತ 13 ಕಂಪನಿಗಳು 5 ಸಾವಿರ ಕೋಟಿ ರೂ.ಗೂ ಅಧಿಕ ಹಣವನ್ನು ನುಂಗಿ ನೀರು ಕುಡಿದಿವೆ! ಬಹುಕೋಟಿ ಆಂಬಿಡೆಂಟ್ ಪ್ರಕರಣ ಮೀರಿಸುವಂತೆ ರಾಜ್ಯದಲ್ಲಿ ಕಳೆದ 3 ವರ್ಷದ ಅವಧಿಯಲ್ಲಿ 18 ಸಾವಿರ ವಂಚನೆ ಪ್ರಕರಣ ದಾಖಲಾಗಿವೆ. ಅಚ್ಚರಿ ಎಂದರೆ ಇಷ್ಟು ಪ್ರಕರಣಗಳ ಪೈಕಿ 18 ಕೇಸ್​ಗಳಲ್ಲಷ್ಟೇ ಅಪರಾಧಿಗಳಿಗೆ ಶಿಕ್ಷೆ ಆಗಿದೆ. ಕರ್ನಾಟಕದ ಆರ್ಥಿಕ ಅಪರಾಧಗಳ ಈ ಕರಾಳ ಇತಿಹಾಸವನ್ನು ಪೊಲೀಸ್ ಇಲಾಖೆಯೇ ದೃಢಪಡಿಸಿದೆ. ರಾಜ್ಯದಲ್ಲಿ ಪ್ರತಿ ದಿನ ಸರಾಸರಿ 20 ವಂಚನೆ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರುತ್ತಿವೆ. ಸೆಪ್ಟೆಂಬರ್​ನಲ್ಲಿ 574 ಆರ್ಥಿಕ ವಂಚನೆ ಕೇಸು ದಾಖಲಾಗಿವೆ.

ಈ ಪೈಕಿ ನಂಬಿಕೆದ್ರೋಹ-35, ವಂಚನೆ-536 ಮತ್ತು ನಕಲಿ ನೋಟು-3 ಪ್ರಕರಣಗಳಾಗಿವೆ. ಬೆಂಗಳೂರಲ್ಲಿ ಅತೀ ಹೆಚ್ಚು ಎಫ್​ಐಆರ್ ದಾಖಲಾದರೆ, ಆನಂತರದ ಸ್ಥಾನ ಮಂಗಳೂರು, ಹಾವೇರಿ ಜಿಲ್ಲೆಯದ್ದಾಗಿವೆ.

ಭಾರತೀಯ ರಿಸರ್ವ್ ಬ್ಯಾಂಕ್(ಆರ್​ಬಿಐ), ಸೆಕ್ಯುರಿಟಿ ಎಕ್ಸ್​ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೇಬಿ) ಮತ್ತು ಸಹಕಾರ ಸಂಘಗಳ ಕಾನೂನು ಗಾಳಿಗೆ ತೂರಿ ಆರೋಪಿತ ಕಂಪನಿಗಳು ಸಿನಿಮಾ ಕಲಾವಿದರ ಮೂಲಕ ಮಾಧ್ಯಮ, ಜಾಲತಾಣದಲ್ಲಿ ಆಕರ್ಷಕ ಜಾಹೀರಾತು ನೀಡಿ ಜನರನ್ನು ಸೆಳೆಯುತ್ತಿವೆ.

ಜನರ ದುಡ್ಡಲ್ಲಿ ಮೋಜುಮಸ್ತಿ: ವಂಚಕ ಕಂಪನಿಗಳ ಮಾಲೀಕರು ಮತ್ತು ನಿರ್ದೇಶಕರು ಹೂಡಿಕೆದಾರರ ಬಹುತೇಕ ಹಣವನ್ನು ಸ್ವಂತ ಲಾಭಕ್ಕೆ, ಮೋಜುಮಸ್ತಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದುಬಾರಿ ಮನೆ, ಕಾರು, ಷೇರು, ಬ್ಯಾಂಕ್​ನಲ್ಲಿ ಠೇವಣೆ, ಚಲನಚಿತ್ರ ನಿರ್ವಣಕ್ಕೆ ಹೂಡಿಕೆ ಮಾಡಿಕೊಳ್ಳುತ್ತಾರೆ. ದೇಶ-ವಿದೇಶಗಳ ಪ್ರವಾಸ ನಡೆಸಿ ಮೋಜಿನ ಜೀವನ ನಡೆಸುತ್ತಿದ್ದಾರೆ.

ಹಿತಕಾಯದ ಸರ್ಕಾರ

ಕರ್ನಾಟಕ ರಾಜ್ಯ ಠೇವಣಿದಾರರ ಹಿತರಕ್ಷಣಾ ಸಂರಕ್ಷಣಾ ಅಧಿನಿಯಮ 2004ರ ಕಲಂ 3ರ ಅಡಿ ಅಗ್ರಿಗೋಲ್ಡ್ ಕಂಪನಿಯ 430 ಎಕರೆ, ಮೈತ್ರಿ ಪ್ಲಾ್ಯಂಟೇಷನ್​ನ 383 ಎಕರೆ ಹಾಗೂ ಗ್ರೀನ್ ಬಡ್ಸ್ 205 ಎಕರೆ ಜಮೀನು ಮುಟ್ಟುಗೋಲಿಗೆ 2017ರಲ್ಲೇ ರಾಜ್ಯ ಸರ್ಕಾರಕ್ಕೆ ಸಿಐಡಿ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ದೂರು ನೀಡಿ

ಆಸ್ತಿ ಖರೀದಿ, ಹಣ ಹೂಡಿಕೆ ವೇಳೆ ಕಂಪನಿಗಳು ಅಧಿಕೃತವೇ ಎಂದು ಖಚಿತಪಡಿಸಿಕೊಳ್ಳಿ. ಆರ್​ಬಿಐ, ಸೇಬಿ, ರಿಜಿಸ್ಟ್ರಾರ್ ಆಫ್ ಕಂಪನೀಸ್ ಮತ್ತು ರಿಜಿಸ್ಟ್ರಾರ್ ಆಫ್ ಕೋ ಅಪರೇಟಿವ್ ಸೊಸೈಟಿಯಿಂದ ಕಂಪನಿಗಳು ಪರವಾನಗಿ ಪಡೆದಿರುವ ಕುರಿತು ಪರೀಕ್ಷಿಸಿ. ಅನುಮಾನ ಬಂದರೆ ಪೊಲೀಸರಿಗೆ ದೂರು ನೀಡಿ.

ಗಣ್ಯರಿಗೂ ಟೋಪಿ

ಖ್ಯಾತ ಕ್ರೀಡಾಪಟುಗಳಾದ ರಾಹುಲ್ ಡ್ರಾವಿಡ್, ಪ್ರಕಾಶ್ ಪಡುಕೋಣೆ, ಐಪಿಎಸ್ ಅಧಿಕಾರಿ, ಉದ್ಯಮಿಗಳು ಕೋಟ್ಯಂತರ ರೂ. ಹಣವನ್ನು ವಿಕ್ರಂ ಇನ್​ವೆಸ್ಟ್​ಮೆಂಟ್ ಕಂಪನಿಗೆ ಹೂಡಿಕೆ ಮಾಡಿ ಮೋಸಕ್ಕೆ ಒಳಗಾದರು. ಅಗ್ರಿಗೋಲ್ಡ್ ಕಂಪನಿಗೆ ರೈತರು, ಸಣ್ಣ ವ್ಯಾಪಾರ ಸ್ಥರು ಗೃಹಿಣಿಯರು ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದರು.

10 ವರ್ಷಗಳ ಇತಿಹಾಸ

ಕಳೆದ 10 ವರ್ಷಗಳಲ್ಲಿ 10 ನಕಲಿ ಕಂಪನಿಗಳು 17.93 ಲಕ್ಷ ಮಂದಿಗೆ 3,450 ಕೋಟಿ ರೂ. ವಂಚಿಸಿವೆ. ಈ ಕಂಪನಿಗಳ ಮಾಲೀಕರ, ನಿರ್ದೇಶಕರ ಹೆಸರಿನಲ್ಲಿದ್ದ 594.10 ಆಸ್ತಿ ಜಪ್ತಿಗೆ ಸಿಐಡಿ ಶಿಫಾರಸು ಮಾಡಿತ್ತು. ನಂತರ ವಿಕ್ರಂ ಇನ್​ವೆಸ್ಟ್​ಮೆಂಟ್​ನ 700 ಕೋಟಿ ರೂ. ವಂಚನೆ, ಆಂಬಿಡೆಂಟ್​ನ 940 ಕೋಟಿ ರೂ., ಅಜ್ಮೇರಾ ಗ್ರೂಪ್​ನ 500 ಕೋಟಿ ರೂ. ವಂಚನೆ ಬೆಳಕಿಗೆ ಬಂದಿದೆ.