ಚಿಕ್ಕಮಗಳೂರು: ಡಾ. ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳು ಸದಾ ಜೀವಂತ. ಅವುಗಳನ್ನು ನಮ್ಮ ಜೀನವದಲ್ಲಿ ಅಳವಡಿಸಿಕೊಂಡಲ್ಲಿ ಉತ್ತಮ ಜೀವನ ನಿರ್ವಹಿಸಲು ಸಾಧ್ಯ ಎಂದು ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ನಾಗಪುರದ ಡಾ. ಬಿ.ಆರ್. ಅಂಬೇಡ್ಕರ್ ದೀಕ್ಷಾ ಭೂಮಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ವಿಶ್ವ ಕಂಡ ಧೀಮಂತ ವ್ಯಕ್ತಿಗಳಲ್ಲಿ ಅಗ್ರ ಗಣ್ಯರಾಗಿದ್ದಾರೆ. ಇವರ ವಿಚಾರಧಾರೆಗಳಿಗೆ, ಜ್ಞಾನ ಭಂಡಾರಕ್ಕೆ ವಿಶ್ವದಾಂತ್ಯ ತಮ್ಮ ಅನುಯಾಯಿಗಳನ್ನು ಹೊಂದಿದ್ದಾರೆ. ವಿಶ್ವದ ಅನೇಕ ಸಂವಿಧಾನವನ್ನು ಅಧ್ಯಯನ ಮಾಡಿ ಭಾರತಕ್ಕೆ ಸಂವಿಧಾನ ರೂಪಿಸಿ ಕೊಡುವಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪಾತ್ರ ಬಹು ಮುಖ್ಯವಾಗಿದೆ ಎಂದರು.
ಸಮಾಜದ ಕಟ್ಟಕಡೆಯ ವ್ಯಕ್ತಿಯ ಆರ್ಥಿಕ, ಸಾಮಾಜಿಕ, ರಾಜಕೀಯ ಸಮಾನತೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರಿಗೂ ಸ್ವತಂತ್ರವಾದ ಜೀವನ ರೂಪಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಬುದ್ಧನ ವಿಚಾರಧಾರೆಗಳಿಂದ ಪ್ರೇರಿತರಾಗಿ ಅವುಗಳನ್ನು ಅನುಸರಿಸುವುದಲ್ಲದೇ, ೧೯೫೪ರಂದು ಮಹಾರಾಷ್ಟçದ ನಾಗಪುರದಲ್ಲಿ ಬೌದ್ಧ ಧರ್ಮದ ದೀಕ್ಷೆ ಪಡೆಯುವುದರ ಮೂಲಕ ಬೌದ್ಧ ಧರ್ಮಕ್ಕೆ ಮರುಹುಟ್ಟು ನೀಡಿದರು ಎಂದು ಹೇಳಿದರು.
ಕರುಣೆ, ಮೈತ್ರಿ, ಪ್ರೀತಿ, ವಾತ್ಸಲ್ಯ ಮತ್ತು ಸಮಾನತೆಯ ಸಂದೇಶವನ್ನು ಸಾರುವ ಬೌದ್ಧ ಧರ್ಮದ ತತ್ವಗಳನ್ನು ತಮ್ಮಲ್ಲಿ ಅಳವಡಿಸಿಕೊಂಡ ಅವರು ತಮ್ಮ ಅನುಯಾಯಿಗಳಿಗೂ ಅವುಗಳನ್ನು ಬೋಧಿಸಿದರು. ಜಿಲ್ಲೆಯಿಂದ ಸುಮಾರು ೧೫೦ ಕ್ಕೂ ಹೆಚ್ಚು ಬುದ್ಧ ಹಾಗೂ ಅಂಬೇಡ್ಕರ್ ಅನುಯಾಯಿಗಳು ನಾಗಪುರದ ದೀಕ್ಷಾ ಭೂಮಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಇದರಿಂದ ಬುದ್ಧ ಹಾಗೂ ಅಂಬೇಡ್ಕರ್ ವಿಚಾರಗಳನ್ನು ಇನ್ನಷ್ಟು ಅಧ್ಯಯನ ನಡೆಸಿ ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ ಇತರರಿಗೂ ಬೌದ್ಧ ಧರ್ಮದ ತತ್ವಗಳನ್ನು ಸಾರಬೇಕು. ಇದರಿಂದ ಸಮಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದರು.
ಜಿಲ್ಲಾ ವಕೀಲ ಸಂಘದ ಕಾರ್ಯದರ್ಶಿ ಅನಿಲ್ ಕುಮಾರ್ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಧಾರೆಗಳು ಸಮಾಜದಲ್ಲಿನ ಜಾತಿ ಪದ್ಧತಿ ನಿರ್ಮೂಲನೆ ಮಾಡಿ ಸಮಸಮಾಜ ರೂಪಿಸಲು ಉತ್ತಮ ಮಾರ್ಗಗಳಾಗಿವೆ. ಅಸಮಾನತೆ, ಶೋಷಣೆ ವಿರುದ್ಧ ನಿಂತು ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸುವಲ್ಲಿ ಅಂಬೇಡ್ಕರ್ ಶ್ರಮಿಸಿದ್ದಾರೆ. ಸಮಾಜದ ಅಸಹಾಯಕರ ಬಾಳಿನ ಧರ್ಮ ಗ್ರಂಥವಾಗಿ ಸಂವಿಧಾನವನ್ನು ರಚಿಸಿ ಸಮಾಜದಲ್ಲಿ ಶಾಂತಿ ನಿರ್ಮಾಣಕ್ಕೆ ಕಾರಣ ಕರ್ತರಾಗಿರುವ ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಅನುಸರಿಸಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಯೋಗೀಶ್, ದಲಿತ ಮುಖಂಡರಾದ ಹೊನ್ನೇಶ್, ಧರ್ಮೇಶ್, ಹರೀಶ್, ಹುಣಸೆಮಕ್ಕಿ ಲಕ್ಷö್ಮಣ್ ಮತ್ತಿತರರಿದ್ದರು.