ಮದ್ದೂರು: ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುವ ಜತೆಗೆ ಮಹಾನ್ ವ್ಯಕ್ತಿಗಳ ಚರಿತ್ರೆಗಳನ್ನು ಓದಿ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯ ಎಂದು ರಾಣಿ ಐಶ್ವರ್ಯ ಡೆವಲಪರ್ಸ್ ಮತ್ತು ಬಿಲ್ಡರ್ಸ್ ಮಾಲೀಕ ಹಳ್ಳಿಕೆರೆ ಸತೀಶ್ ಅಭಿಪ್ರಾಯಪಟ್ಟರು.

ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಭಾರತ ಸಂವಿಧಾನ ರಕ್ಷಣಾ ವೇದಿಕೆ ಮತ್ತು ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆಯಿಂದ ಆಯೋಜಿಸಿದ್ದ ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಹಾಗೂ 2024-25ನೇ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಯಾವುದೇ ದೇಶದ ಅಭಿವೃದ್ಧಿಯನ್ನು ಅಲ್ಲಿನ ಬಹುಕಟ್ಟಡ ಹಾಗೂ ಶ್ರೀಮಂತಿಕೆಯಿಂದ ನಿರ್ಣಹಿಸಲು ಸಾಧ್ಯವಿಲ್ಲ. ಅಲ್ಲಿಯಾ ವಿದ್ಯಾವಂತರ ಸಂಖ್ಯೆಯನ್ನು ಆಧರಿಸುತ್ತದೆ ಎಂಬುವುದು ಅರಿತು ಇಂದಿನ ಯುವ ಜನಾಂಗ ವ್ಯಾಸಂಗದತ್ತ ಗಮನ ನೀಡಿ ಸದೃಢ ದೇಶ ನಿರ್ಮಾಣ ಮಾಡಲು ಮುಂದಾಗಬೇಕೆಂದು ಕಿವಿಮಾತು ಹೇಳಿದರು.
ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಬೋಧನೆಗಳನ್ನು ಅನುಸರಿಸುವ ಮೂಲಕ ಜಾತಿ, ಧರ್ಮ ಮತ್ತು ಇತರ ಸಾಂಸ್ಕೃತಿಕ ಗುರುತುಗಳನ್ನು ಆಧರಿಸಿದ ಸಾಮಾಜಿಕ ತಾರತಮ್ಯವನ್ನು ಎದುರಿಸಿ ಸಮಾನತೆ ಮತ್ತು ಸಾಮರಸ್ಯವನ್ನು ಸ್ಥಾಪಿಸಬಹುದು. ಬುದ್ಧನ ಶಾಂತಿ ಸಂದೇಶ, ಬಸವಣ್ಣನವರ ಸಮಾನತೆ, ಕಾಯಕ ಮತ್ತು ದಾಸೋಹ ಹಾಗೂ ಅಂಬೇಡ್ಕರ್ ಅವರ ಸಮಸಮಾಜದ ಪರಿಕಲ್ಪನೆ ಹಿಂದೆಂದಿಗಿಂತಲೂ ಪ್ರಸ್ತುತ ದಿನಗಳಲ್ಲಿ ಹೆಚ್ಚು ಅವಶ್ಯಕವಾಗಿದೆ ಎಂದರು.
ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಮುನ್ನಡೆಯುವ ಜತೆಗೆ ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸುವಂತಹ ಕೆಲಸವಾಗಬೇಕಿದೆ. ಮುಂದಿನ ದಿನಗಳಲ್ಲಿ ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಸಹಾನುಭೂತಿಗಳ ಮೌಲ್ಯದ ನೆಲೆಗಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿ ಸುಸಂಸ್ಕೃತ ಸಮಾಜವನ್ನು ನಿರ್ಮಾಣ ಮಾಡಬೇಕೆಂದರು.
ತಾಲೂಕಿನಲ್ಲಿ ಅಂತರ್ಜಾತಿ ವಿವಾಹಯಾಗುವವರಿಗೆ ತಾವು ವೈಯಕ್ತಿಕವಾಗಿ 25 ಸಾವಿರ ರೂ. ಪ್ರೋತ್ಸಾಹ ಧನವನ್ನು ವಿತರಿಸುವ ಭರವಸೆ ನೀಡಿದರು.
ಬುದ್ದೀಸ್ಟ್ ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ ಎಂ.ಸಿ.ಬಸವರಾಜು ಮಾತನಾಡಿ, ಶಾಂತಿ ಮಾರ್ಗದಿಂದ ಧರ್ಮ ಆರಂಭಿಸಿ ಶಾಂತಿ ಮಂತ್ರ ಭೋದಿಸಿದ ಏಕೈಕ ವ್ಯಕ್ತಿ ಭಗವಾನ್ ಬುದ್ಧರಾಗಿದ್ದು, ಅಂಬೇಡ್ಕರ್ ಅವರು ಅಹಿಂಸಾ ಮಾರ್ಗದಲ್ಲಿ ನಡೆದು ಶಾಂತಿ ಸ್ಥಾಪನೆಗೆ ಮುಂದಾದರು. ಅಂಬೇಡ್ಕರ್ ಅವರ ಸಂವಿಧಾನ ಬಸವಣ್ಣನವರ ಮಾನವತಾವಾದದ ತತ್ವವನ್ನು ಒಳಗೊಂಡಿದ್ದು ಅನುಭವ ಮಂಟಪದ ಮೂಲಕ ಎಲ್ಲರೊಳಗೊಂದಾಗಿ ಸಮಸಮಾಜ ಕಟ್ಟಲು ಶ್ರಮಿಸಿದ ದಾರ್ಶನಿಕ ಮಹಾನ್ ವ್ಯಕ್ತಿಯೆಂದು ಬಣ್ಣಿಸಿದರು.
ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಎಂ.ವಿನಿಯ್‌ಕುಮಾರ್ ಅವರು ಬಸವಣ್ಣನವರ ಸಾಮಾಜಿಕ ಚಿಂತನೆ ಹಾಗೂ ಡಿ.ದೇವರಾಜು ಅರಸು ಚಾರಿಟಬಲ್ ಟ್ರಸ್ಟ್‌ನ ನಾಗರತ್ನ ಅಂಬೇಡ್ಕರ್ ಅವರ ಸಂವಿಧಾನ ಆಶಯಗಳನ್ನು ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ವೇಳೆ ಜಿ.ಪಂ. ಮಾಜಿ ಸದಸ್ಯ ಬೋರಯ್ಯ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಸದಸ್ಯೆ ಪ್ರಮೀಳಾ, ಬಿ.ಇ.ಒ ಧನಂಜಯ, ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷ ಯೋಗಾನಂದ, ಭಾರತ ಸಂವಿಧಾನದ ರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ಕೆ.ಟಿ.ಶಿವಕುಮಾರ್, ಪಿ.ಶಶಿಕುಮಾರ್, ದಾಕ್ಷಾಯಿಣಿ, ರಾಚಯ್ಯ, ರಶ್ಮಿಪುಟ್ಟಲಿಂಗಯ್ಯ ಇದ್ದರು.