ಸಂವಿಧಾನ ಬಲಪಡಿಸಲು ಇದು ಸಕಾಲ

ವಿಜಯವಾಣಿ ಸುದ್ದಿಜಾಲ ಬೀದರ್
ಸರ್ವರಿಗೂ ಸಮಾನತೆ ಕಲ್ಪಿಸಿದ ಮತ್ತು ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಕೊಟ್ಟಿರುವ ಸರ್ವ ಶ್ರೇಷ್ಠ ಸಂವಿಧಾನವನ್ನು ಇನ್ನಷ್ಟು ಬಲಪಡಿಸಲು ಇದು ಸಕಾಲ ಎಂದು ಮುಂಬಯಿ ಹೈಕೋರ್ಟ್​ ನಿವೃತ್ತ ನ್ಯಾಯಮೂರ್ತಿ ಹಾಗೂ ಮಹಾರಾಷ್ಟ್ರದ ಹಿರಿಯ ಚಿಂತಕ ಬಿ.ಜಿ. ಪಾಟೀಲ್ ಕೊಳಸೆ ಪ್ರತಿಪಾದಿಸಿದರು.
ಡಾ.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನ ನಿಮಿತ್ತ ಗುರುವಾರ ರಾತ್ರಿ ಅಂಬೇಡ್ಕರ್ ವೃತ್ತದ ಹತ್ತಿರ ದಲಿತ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ಬೃಹತ್ ಐಕ್ಯತಾ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಸಂವಿಧಾನ ದೇಶದ ಪ್ರತಿಯೊಬ್ಬರ ಅಸ್ಮಿತೆಯಾಗಿದೆ. ವಿಶ್ವದಲ್ಲೇ ನಮ್ಮ ಪ್ರಜಾತಂತ್ರ ವ್ಯವಸ್ಥೆಗೆ ಶ್ರೇಷ್ಠ ಎಂಬ ಖ್ಯಾತಿ ಕೊಟ್ಟಿದ್ದೇ ಸಂವಿಧಾನ. ಸಂವಿಧಾನ ಆಶಯದಂತೆ ಸಮಾಜ ಕಟ್ಟಬೇಕಿದೆ. ಇದು ಪ್ರತಿಯೊಬ್ಬರ ಹೊಣೆ ಎಂದರು.
ಜಾತಿಯತೆ ಪ್ರಾಬಲ್ಯ ಮೆರೆಯಲು ಆರಂಭಿಸಿದರೆ ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಕೆಳ ವರ್ಗದವರ ಮೇಲೆ ಶೋಷಣೆ, ದಬ್ಬಾಳಿಕೆ ನಡೆಯುವುದು ಸಹಜ. ಇದಕ್ಕೆ ಅವಕಾಶ ಕೊಡಬಾರದು. ರಾಜಕೀಯ ಹಾಗೂ ಅಧಿಕಾರಕ್ಕೆ ಜಾತಿಯೇ ಮಾನದಂಡವಾಗುವುದು ಸಮಾಜದ ಹಿತಕ್ಕೆ ಒಳ್ಳೆಯದಲ್ಲ. ಮತಕ್ಕಾಗಿ ಸಮಾಜ, ಧರ್ಮ ಒಡೆಯುವುದು ಹಾಗೂ ಜಾತಿ ಜಗಳ ಹಚ್ಚುವುದು ಸಲ್ಲದು. ಡಾ.ಅಂಬೇಡ್ಕರ್ ಅವರ ಆಶಯ, ತತ್ವಗಳಿಗೆ ಬದ್ಧರಾಗಿ ನಾವು ನಡೆಯಬೇಕಿದೆ. ಅವರ ಬಗ್ಗೆ ಬರೀ ಹೇಳಿಕೆ ನೀಡಿದರೆ ಅಥವಾ ಅಭಿಮಾನದ ಮಾತನಾಡಿದರೆ ಸಾಲದು, ನಿಜಾರ್ಥದಲ್ಲಿ ಅವರ ಆಶಯಗಳು ಕಾರ್ಯರೂಪದಲ್ಲಿ ಬರಬೇಕು. ಆಗಲೇ ಸಮಾಜದಲ್ಲಿ ಅಗಾಧ ಬದಲಾವಣೆ ಕಾಣಲು ಸಾಧ್ಯ ಎಂದು ಪ್ರತಿಪಾದಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ದೇಶದ ಪ್ರತಿಯೊಬ್ಬರಿಗೆ ಅಮೂಲ್ಯವಾದ ಮತದ ಹಕ್ಕು ನೀಡಿದ್ದಾರೆ. ಪ್ರತಿ ಭಾರತೀಯನಿಗೆ ಕೊಟ್ಟ ಬಹುದೊಡ್ಡ ಅಸ್ತ್ರ ಇದಾಗಿದೆ. ಇದರ ಸದ್ಬಳಕೆ ಮಾಡಿಕೊಂಡು ಅವರು ಬಯಸಿದಂಥ ಸಮಾಜ ಕಟ್ಟಬೇಕಿದೆ. ಮಹಾಪುರುಷರನ್ನು ಒಂದು ಜಾತಿಗೆ ಸೀಮಿತಗೊಳಿಸದೆ, ಅವರ ಚಿಂತನೆ ಮತ್ತು ಆದರ್ಶಗಳನ್ನು ಎಲ್ಲರೂ ಪಾಲಿಸಬೇಕಿದೆ ಎಂದರು.
ಸಂಸದ ಭಗವಂತ ಖೂಬಾ, ಶಾಸಕ ರಹೀಮ್ ಖಾನ್, ಎಂಎಲ್ಸಿ ವಿಜಯಸಿಂಗ್, ಜಿಪಂ ಅಧ್ಯಕ್ಷೆ ಭಾರತಬಾಯಿ, ಕಾಂಗ್ರೆಸ್ ಹಿರಿಯ ಮುಖಂಡ ಬಸವರಾಜ ಬುಳ್ಳಾ, ಮಾಜಿ ಶಾಸಕ ಎಂ.ಜಿ.ಮುಳೆ, ದಿನಾಚರಣೆ ಸಮಿತಿ ಅಧ್ಯಕ್ಷ ಅನೀಲಕುಮಾರ ಬೆಲ್ದಾರ್, ಗೌರವಾಧ್ಯಕ್ಷ ರಾಜು ಕಡ್ಯಾಳ್, ಪ್ರಮುಖರಾದ ಗೊಳ್ಳಹಳ್ಳಿ ಶಿವಪ್ರಸಾದ, ಪ್ರದೀಪ ನಾಟೇಕರ್, ಕೆ.ಸೌಮ್ಯ, ವಿಜಯಕುಮಾರ ರಾಮಲು, ಗೀತಾ ಚಿದ್ರಿ, ಶಂಕರರಾವ ದೊಡ್ಡಿ, ಬಾಬುರಾವ ಪಾಸ್ವಾನ್ ಸೇರಿ ದಲಿತಪರಗಳ ಸಂಘಟನೆ ಮುಖಂಡರು, ವಿವಿಧೆಡೆಯಿಂದ ಆಗಮಿಸಿದ್ದ ಸಹಸ್ರಾರು ಜನರು ಪಾಲ್ಗೊಂಡಿದ್ದರು.

ರಾಷ್ಟ್ರೀಯ ಸರ್ವನಾಶ ಸಮಿತಿ!: ಸಮಾವೇಶದಲ್ಲಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆ ಧುರೀಣೆ ಕೆ.ನೀಲಾ, ಆರೆಸ್ಸೆಸ್ ಎಂದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಲ್ಲ, ಅದು ರಾಷ್ಟ್ರೀಯ ಸರ್ವನಾಶ ಸಮಿತಿ ಎಂದು ವ್ಯಾಖ್ಯಾನಿಸಿದರು. ಆರೆಸ್ಸೆಸ್ನವರಿಗೆ ದೇಶದ ಸಂವಿಧಾನ, ಪ್ರಜಾತಂತ್ರ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ಅವರಿಗೆ ಮನುಸ್ಮತಿ ಆಧರಿತ ಆಡಳಿತ ಬೇಕಿದೆ. ಹೆಣ್ಣನ್ನು ಕೀಳಾಗಿ ಕಾಣುವ ಸಮಾಜ ಮಾಡಬೇಕಿದೆ. ಸಂವಿಧಾನ ರಚನೆ ಸಂದರ್ಭದಲ್ಲಿ ಆರೆಸ್ಸೆಸ್ ಮುಖಂಡ ಗೋಳವಾಲರಕ್ ಅವರು ನಾವು ಇದನ್ನು ಒಪ್ಪುವುದಿಲ್ಲ ಎಂಬ ಮಾತು ಹೇಳಿದ್ದರು. ತಮ್ಮ ಪತ್ರಿಕೆಯಲ್ಲಿ ಈ ವಿಷಯ ಸಹ ಪ್ರಕಟಿಸಿದ್ದರು. ಆಗಲೂ, ಈಗಲೂ ಆರೆಸ್ಸೆಸ್ನವರ ಧೋರಣೆ ಬದಲಾಗಿಲ್ಲ. ಇದನ್ನು ನಾವೆಲ್ಲ ಗಂಭೀರ ಪರಿಗಣಿಸಬೇಕಿದೆ ಎಂದರು. ಅಂಬೇಡ್ಕರ್ ಕೊಟ್ಟ ಸಂವಿಧಾನದ ಫಲವಾಗಿಯೇ ಇಂದು ಚಹಾ ಮಾರುವ ವ್ಯಕ್ತಿ ದೇಶದ ಪ್ರಧಾನಿಯಾಗಿದ್ದಾರೆ. ಮನುವಾದಿಗಳು ಇದನ್ನು ಅರಿಯಲಿ ಎಂದು ಹೇಳಿದರು.

ಖೂಬಾಗೆ ಇರಿಸು ಮುರಿಸು: ಸಮಾವೇಶದಲ್ಲಿ ಮಾತನಾಡುವಾಗ ಕೆಲವರು ಬಿಜೆಪಿ ಹಾಗೂ ಆರೆಸ್ಸೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕೇಂದ್ರ ಸಕರ್ಾರ ಸಂವಿಧಾನ ಬದಲಿಸುವ ಹುನ್ನಾರ ನಡೆಸಿದೆ ಎಂದು ಆಕ್ರೋಶವೂ ಹೊರಹಾಕಿದರು. ಇದು ಒಂದು ರೀತಿ ವೇದಿಕೆಯಲ್ಲಿದ್ದ ಬಿಜೆಪಿ ಸಂಸದ ಭಗವಂತ ಖೂಬಾ ಅವರಿಗೆ ಸಾಕಷ್ಟು ಇರಿಸು-ಮುರಿಸು ತಂದಿತು. ಇನ್ನು ಆಯೋಜಕರು ಸಂಸದ ಖೂಬಾ ಅವರಿಗೆ ಮಾತನಾಡುವುದಕ್ಕೂ ಅವಕಾಶ ನೀಡಲಿಲ್ಲ.