ಅಂಬೇಡ್ಕರ್ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಿ

ಚಾಮರಾಜನಗರ: ಅಂಬೇಡ್ಕರ್ ಅವರ ತತ್ವ, ಸಿದ್ಧಾಂತಗಳನ್ನು ಯುವ ಜನಾಂಗ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಕೀಲ ಪುಟ್ಟಸ್ವಾಮಿ ತಿಳಿಸಿದರು.

ನಗರದ ರಾಮಸಮುದ್ರ ಬಡಾವಣೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜಯಂತಿ ಅಂಗವಾಗಿ ಜೈ ಭೀಮ್ ಯುವಜನ ಸಂಘದಿಂದ ಭಾನುವಾರ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಂಬೇಡ್ಕರ್ ಅವರು ಶೋಷಿತ ಸಮಾಜಕ್ಕೆ ನ್ಯಾಯ ಕಲ್ಪಿಸಿದರು. ಜೈ ಭೀಮ್ ಯುವಜನ ಸಂಘದ ಪದಾಧಿಕಾರಿಗಳು ಹುಮ್ಮಸ್ಸಿನಿಂದ ಕ್ರೀಡಾಕೂಟವನ್ನು ಆಯೋಜನೆ ಮಾಡಿ ಕ್ರೀಡಾಪುಟಗಳಿಗೆ ಉತ್ತೇಜನ ನೀಡುತ್ತಿರುವುದು ಶ್ಲಾಘನೀಯ. ವಾಲಿಬಾಲ್, ಕಬಡ್ಡಿ, ಮ್ಯೂಸಿಕಲ್ ಚೇರ್ ಕ್ರೀಡೆಗಳನ್ನು ಯುವಕರು ಭಾಗವಹಿಸುವ ಮೂಲಕ ಒಗ್ಗಟ್ಟು ಹಾಗೂ ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.

ನಗರಸಭಾ ಮಾಜಿ ಸದಸ್ಯ ಬಸವರಾಜು ಮಾತನಾಡಿ, ಅಂಬೇಡ್ಕರ್ ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಪ್ರತಿಯೊಬ್ಬರೂ ನಡೆದಾಗ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಕ್ರೀಡೆಗಳು ವ್ಯಕ್ತಿಯ ದೇಹ ಹಾಗೂ ಮನಸ್ಸಿಗೆ ಉಲ್ಲಾಸವನ್ನು ನೀಡುತ್ತವೆ. ಪ್ರತಿಯೊಬ್ಬರು ಆಟೋಟಗಳಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ನಂತರ ವಾಲಿಬಾಲ್, ಕಬಡ್ಡಿ ಹಾಗೂ ಮ್ಯೂಸಿಕಲ್ ಚೇರ್ ಸ್ಪರ್ಧೆಗಳಲ್ಲಿ ಬಡಾವಣೆಯ ಯುವಕ, ಯುವತಿಯರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ರಾಮಸಮುದ್ರ ಚಿಕ್ಕ ಬೀದಿ ಮುಖಂಡ ಮರಿಸ್ವಾಮಿ, ಬುದ್ಧ ಮಹೇಶ್, ಬಿಎಸ್ಪಿ ಮುಖಂಡರಾದ ಪಾಪಣ್ಣ, ಶೇಖರ್, ಜೈ ಭೀಮ್ ಯುವ ಜನ ಸಂಘದ ಉಪಾಧ್ಯಕ್ಷ ಜಯಕುಮಾರ್, ಪದಾಧಿಕಾರಿಗಳಾದ ರಮೇಶ್, ಪ್ರವೀಣ್ ಇತರರಿದ್ದರು.

Leave a Reply

Your email address will not be published. Required fields are marked *