ಚಿಕ್ಕಬಳ್ಳಾಪುರ: ಸ್ವಾತಂತ್ರೃ ಬಂದು ಹಲವು ದಶಕಗಳೇ ಕಳೆದರೂ ದೇಶದಲ್ಲಿ ಶೋಷಣೆ, ಅಸ್ಪಶ್ಯತೆ, ಅಸಮಾನತೆ ದೂರವಾಗಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಸದಸ್ಯ ಶ್ರೀಧರ್ ಕಲಿವೀರ್ ಬೇಸರ ವ್ಯಕ್ತಪಡಿಸಿದರು.
ಅಂಬೇಡ್ಕರ್ 63ನೇ ಪರಿ ನಿಬ್ಬಾಣ ದಿನದ ಅಂಗವಾಗಿ ನಗರದ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿ ಸೋಮವಾರ ಹಮ್ಮಿಕೊಂಡಿದ್ದ ಭಾರತ ಸಂವಿಧಾನ ಯಥಾವತ್ತಾಗಿ ಜಾರಿ ಮಾಡಿ, ಇಲ್ಲ ಖುರ್ಚಿ ಖಾಲಿ ಮಾಡಿ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಸಂವಿಧಾನವು ಸಮಾನತೆ, ಜಾತ್ಯತೀತ ತತ್ವ ಪ್ರತಿಪಾದಿಸುತ್ತದೆ. ಇದರ ನಡುವೆಯೂ ಸಾಮಾಜಿಕ ಪಿಡುಗುಗಳಿಂದ ದಲಿತರು ಶೋಷಣೆಗೆ ಗುರಿಯಾಗುತ್ತಿದ್ದು, ಸೂಕ್ತ ಕ್ರಮಕೈಗೊಳ್ಳಲು ಆಡಳಿತ ನಡೆಸಿದ ಎಲ್ಲ ಸರ್ಕಾರಗಳು ವಿಲವಾಗಿವೆ ಎಂದರು.
ಪ್ರತಿ ಪ್ರಜೆಯೂ ಸಂವಿಧಾನದ ತತ್ವಗಳನ್ನು ಚಾಚೂ ತಪ್ಪದೇ ಪಾಲಿಸಬೇಕು, ಇವುಗಳ ಅನುಷ್ಠಾನದಲ್ಲಿ ಲೋಪಗಳಾಗದಿರಲು ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಳ್ಳಬೇಕು. ಆಗ ಮಾತ್ರ ಅಂಬೇಡ್ಕರ್‌ಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಸಮಾನತೆ, ಸಹೋದರತ್ವ ಮತ್ತು ಜಾತ್ಯತೀತ ಆಧಾರದ ಮೇಲೆ ಅಂಬೇಡ್ಕರ್ ಪ್ರಪಂಚದಲ್ಲಿಯೇ ಅತ್ಯುತ್ತಮವಾದ ಸಂವಿಧಾನ ಕೊಡುಗೆಯಾಗಿ ನೀಡಿದ್ದಾರೆ, ಸಮಪಾಲು-ಸಮಬಾಳು ಸಿದ್ಧಾಂತಗಳ ಕಾನೂನುಗಳ ರಚನೆ ಮೂಲಕ ಗಮನ ಸೆಳೆದಿದ್ದಾರೆ ಎಂದ ರಾಜ್ಯ ಸಂಚಾಲಕ ಎಂ.ಸೋಮಶೇಖರ್ ಬಣ್ಣಿಸಿದರು.
ರಾಜ್ಯ ದಸಂಸ ಸಂಚಾಲಕರಾದ ನಾರಾಯಣಸ್ವಾಮಿ, ಕವಾಲಿ ವೆಂಕಟರವಣಪ್ಪ, ಆನಂದ್ ಕುಮಾರ್, ಭಾಗ್ಯಮ್ಮ, ಜಿಲ್ಲಾ ಸಂಚಾಲಕರಾದ ಮೇಲೂರು ಮಂಜುನಾಥ್, ಕಂಗಾನಹಳ್ಳಿ ನಾರಾಯಣಸ್ವಾಮಿ ಮತ್ತಿತರರು ಇದ್ದರು.
ಹೋರಾಟ ಅಗತ್ಯ : ಎಲ್ಲರೂ ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸೇರಿ ವಿವಿಧ ಕ್ಷೇತ್ರಗಳಲ್ಲಿ ನ್ಯಾಯಯುತ ಸವಲತ್ತುಗಳನ್ನು ಸಕಾಲಕ್ಕೆ ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು. ಈ ನಿಟ್ಟಿನಲ್ಲಿ ವಿದ್ಯಾವಂತರಾಗುವುದರ ಜತೆಗೆ ಹೋರಾಟವೂ ಅಗತ್ಯವಿದೆ. ಸ್ವಾತಂತ್ರ್ಯ ಬಂದು ಹಲವು ದಶಕಗಳೇ ಕಳೆದರೂ ದೇಶದಲ್ಲಿ ಶೋಷಣೆ, ಅಸ್ಪಶ್ಯತೆ, ಅಸಮಾನತೆ ದೂರವಾಗಿಲ್ಲ ಎಂದು ದಸಂಸ ಸಂಸ್ಥಾಪಕ ಸದಸ್ಯ ಶ್ರೀಧರ್ ಕಲಿವೀರ್ ಅಭಿಪ್ರಾಯಪಟ್ಟರು.
ಮಕ್ಕಳಿಗೆ ಶಿಕ್ಷಣ ಕೊಡಿಸಿ : ಬಡತನದ ನಡುವೆಯೂ ಅಂಬೇಡ್ಕರ್ ಕಷ್ಟಪಟ್ಟು ಚೆನ್ನಾಗಿ ಓದಿ ವಿದ್ಯಾವಂತರಾದರು. ನಿರಂತರ ಅಧ್ಯಯನದಿಂದ ಜ್ಞಾನ ವೃದ್ಧಿಸಿಕೊಂಡು ದೇಶದ ಜನರ ಹಿತಕ್ಕಾಗಿ ಶ್ರಮಿಸಿದರು. ಇದರಿಂದಾಯೇ ಸಂವಿಧಾನ ರಚನೆಯ ಮಹತ್ತರವಾದ ಜವಾಬ್ದಾರಿ ಜತೆಗೆ ವಿಶ್ವಮಾನ್ಯತೆಯ ಗೌರವ ಸಿಕ್ಕಿತು. ಆದ್ದರಿಂದ ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಯಾವುದೇ ಮಗು ಶಾಲೆಯಿಂದ ದೂರ ಉಳಿಯಬಾರದು ಎಂದು ಅಪರ ಜಿಲ್ಲಾಧಿಕಾರಿ ಆರತಿ ಆನಂದ್ ತಿಳಿಸಿದರು.