ನನ್ನ ತಂದೆ ರಾಜನಂತೆ ಬಾಳಿ ಹೋಗಲು ಕಾರಣ ಮಂಡ್ಯದ ಜನ: ಅಂಬಿ ಪುತ್ರ

ಮಂಡ್ಯ: ಅಂಬರೀಶ್ ಹೇಗಿದ್ದರು, ಹೇಗೆ ಹೋದರು ಎಂಬುದು ನಿಮ್ಮೆಲ್ಲರಿಗೂ ಗೊತ್ತಿದೆ. ಹಣ ಮುಖ್ಯ ಅಲ್ಲ, ಜನ ಮುಖ್ಯ ಎಂದು ಅಪ್ಪ ಹೇಳುತ್ತಿದ್ದರು. ಅವರು ರಾಜನಂತೆ ಬಾಳಿ ಹೋಗಿದ್ದಾರೆ. ಅದಕ್ಕೆ ಕಾರಣ ಮಂಡ್ಯದ ಜನ. ಅವರಿಗೆ ನಾನು ಚಿರಋಣಿ ಎಂದು ದಿವಂಗತ ರೆಬೆಲ್​ ಸ್ಟಾರ್​ ಅಂಬರೀಷ್​ ಪುತ್ರ ಅಭಿಷೇಕ್​ ತಿಳಿಸಿದರು.

ನಗರದ ಸರ್​ ಎಂ.ವಿ. ಕ್ರೀಡಾಂಗಣದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅಭಿಷೇಕ್​, ನಮ್ಮ ತಂದೆ ಹೇಳಿದಂತೆ ಒಳ್ಳೆಯ ಕೆಲಸ ಮಾಡುತ್ತೇನೆ. ನಿಮ್ಮ‌ ಪ್ರೀತಿಯನ್ನು ನಾನು ಗಳಿಸುತ್ತೇನೆ ಎಂದು ರೆಬೆಲ್​ ಆಗಿ ಮಾತನಾಡಿದರು.

ಅಂಬರೀಶ್ ಅವರ ಅಭಿಮಾನಿಗಳಿಗೆ ಅನಂತ ಧನ್ಯವಾದಗಳು. ಅವರನ್ನು ರಾಜಕೀಯ, ಚಿತ್ರರಂಗದಲ್ಲಿ ಬೆಳೆಸಿದ್ದು ನೀವೆ. ಈ ಶ್ರದ್ಧಾಂಜಲಿ ಸಭೆ ಮಂಡ್ಯದಲ್ಲಿ ಮಾಡಬೇಕು ಎಂದಾಗ ಸರಿ ಎನಿಸಿತು ಎಂದು ಅಂಬರೀಶ್ ಪತ್ನಿ ಸುಮಲತಾ ತಿಳಿಸಿದರು.

ನ.24ರಂದು ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬದವರ ದುಖಃ ಕಡಿಮೆ ಮಾಡಲು ಸಾಧ್ಯವಿಲ್ಲ. ಅಭಿಮಾನಿಗಳು ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ದುರಂತ ಮಾಡಬೇಡಿ. ಅಭಿಮಾನ ಈ ರೀತಿ ತೋರಿಸಬೇಡಿ, ಇದರಿಂದ ನಿಮ್ಮ ಕುಟುಂಬದವರ ಕಥೆ ಏನು ಎಂದು ಅಭಿಮಾನಿಗಳಿಗೆ ಬುದ್ಧಿಮಾತು ಹೇಳಿದರು.

ರಾಕಿಂಗ್​ಸ್ಟಾರ್​ಗೆ ಮುಜುಗರ
ನುಡಿ ನಮನ ಕಾರ್ಯಕ್ರಮದಲ್ಲಿ ನಟ ರಾಕಿಂಗ್​ ಸ್ಟಾರ್ ಯಶ್ ಭಾಷಣ ಆರಂಭಿಸುತ್ತಿದ್ದಂತೆ ಅಲ್ಲಿನ ಜನ ಡಿ ಬಾಸ್… ಡಿ ಬಾಸ್… ಎಂದು ದರ್ಶನ್​ ಪರ ಅಭಿಮಾನಿಗಳು ಘೋಷಣೆ ಕೂಗಿದ್ದಾರೆ.

ಇದರ ನಡುವೆಯೂ ಯಶ್ ಭಾಷಣ ಆರಂಭಿಸಿ, ಸರ್‌ಎಂವಿ ಕ್ರೀಡಾಂಗಣದ ವೇದಿಕೆಗೆ ಸಾಕಷ್ಟು ಸಲ ಬಂದಿದ್ದೇನೆ. ಅಂಬರೀಶಣ್ಣ ಜತೆ ಹಲವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಅವರ ಮೃತದೇಹ ತಂದಾಗ ನಡೆದ ಸನ್ನಿವೇಶಗಳನ್ನು ಮರೆಯಲು ಸಾಧ್ಯವಿಲ್ಲ. ಅಂಬರೀಶಣ್ಣನ ಮೇಲೆ ಎಷ್ಟು ಪ್ರೀತಿ ಇದೆ ಎನ್ನುವುದನ್ನು ಅವತ್ತು ಜನ ತೋರಿಸಿದ್ದರು. ಮಂಡ್ಯ ಜನ ಎಲ್ಲರಿಗೂ ಪ್ರೀತಿ ತೋರಿಸುತ್ತಾರೆ ಎಂದರು.

ನಟ ದರ್ಶನ್​ ಕಾರ್ಯಕ್ರಮದಲ್ಲಿ ಗೈರಾಗಿದ್ದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *