ವಿಷ್ಣುವರ್ಧನ್ ಸ್ಮಾರಕ, ತಾರಕಕ್ಕೇರಿದ ಸಂಘರ್ಷ

ಬೆಂಗಳೂರು: ರೆಬೆಲ್​ಸ್ಟಾರ್ ಅಂಬರೀಷ್ ವಿಧಿವಶರಾದ ಬೆನ್ನಲ್ಲೇ ಸಾಹಸಿಂಹ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ವಣದ ಸಂಘರ್ಷ ತಾರಕಕ್ಕೇರಿದೆ. ಡಾ. ರಾಜ್​ಕುಮಾರ್, ಅಂಬರೀಷ್ ಜತೆ ಕಂಠೀರವ ಸ್ಟುಡಿಯೋದಲ್ಲೇ ವಿಷ್ಣು ಸ್ಮಾರಕ ನಿರ್ವಿುಸಬೇಕೆಂಬ ಪ್ರಸ್ತಾಪಕ್ಕೆ ವಿರೋಧ ಸೂಚಿಸಿರುವ ವಿಷ್ಣು ಕುಟುಂಬ, ಸ್ಮಾರಕಕ್ಕೆ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಸಿಡಿದೆದ್ದಿದೆ.

ವಿಷ್ಣುವರ್ಧನ್ ಅಳಿಯ ನಟ ಅನಿರುದ್ಧ್ ಮಾಧ್ಯಮಗಳ ಮುಂದೆ ಉಡಾಫೆ ಸಿಎಂ ಎಂಬರ್ಥದಲ್ಲಿ ಕುಮಾರಸ್ವಾಮಿ ವಿರುದ್ಧ ಮಾತನಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಗೆ ಗರಂ ಆಗಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ‘ವಿಷ್ಣುವರ್ಧನ್ ನಿಧನರಾದಾಗ ನಾನು ಸಿಎಂ ಆಗಿರಲಿಲ್ಲ. ಇಷ್ಟು ವರ್ಷದಲ್ಲಿ ಏನೇನಾಗಿದೆಯೋ ನನಗೆ ಗೊತ್ತಿಲ್ಲ. ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕೆಂದು ತಿರುಗೇಟು ನೀಡಿದ್ದಾರೆ. ಈ ವಾಕ್ಸಮರದ ಬೆನ್ನಲ್ಲೆ ಸುದ್ದಿಗೋಷ್ಠಿ ಕರೆದು ಮಾತನಾಡಿದ ಭಾರತಿ ವಿಷ್ಣುವರ್ಧನ್, ‘ಯಾರಿಗೂ ಅಗೌರವ ತೋರಿಸುವ ಉದ್ದೇಶದಿಂದ ಅನಿರುದ್ಧ್ ಮಾತನಾಡಿಲ್ಲ. ಸ್ಮಾರಕ ನಿರ್ಮಾಣ ತಡವಾಗಿದ್ದಕ್ಕೆ ಅವರು ನೋವಿನಿಂದ ಹೇಳಿಕೆ ನೀಡಿದ್ದಾರೆ. ತಪ್ಪಾಗಿದ್ದರೆ ಕ್ಷಮೆ ಕೇಳುತ್ತೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಇದು ಸರ್ಕಾರದ ಕೆಲಸ

ಸ್ಮಾರಕ ನಿರ್ಮಾಣ ವಿಚಾರವಾಗಿ ಮಾತನಾಡಲು ಸಿಎಂ ಭೇಟಿಗೆ ಹೋದಾಗ ಕಚೇರಿಯಲ್ಲೇ 4 ಗಂಟೆ ಕಾಯಿಸಿದರು. ಸಿಎಂ ಭೇಟಿಗೆ ಸಮಯ ಕೊಡಿ ಎಂದು ಕಾರ್ಯದರ್ಶಿಗೆ ಕೇಳಿಕೊಂಡರೂ ಸಾಧ್ಯವಾಗಿಲ್ಲ. ಹೀಗೆ ಉಡಾಫೆ ಮಾಡಿದರೆ ನಾವೇನು ಮಾಡುವುದು. ಮಾನ-ಮರ್ಯಾದೆ ಗೌರವ ಏನಾದರು ಇದ್ದರೆ ಸ್ಮಾರಕ ನಿರ್ವಿುಸಿಕೊಡಲಿ. ಇದು ಸರ್ಕಾರದ ಕೆಲಸ. ನಾವು ಪದೇಪದೇ ಮನವಿ ಮಾಡುವ ಅಗತ್ಯವಿಲ್ಲ ಎಂದು ಅನಿರುದ್ಧ್ ಬುಧವಾರ ಬೆಳಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ಡಾ. ರಾಜಕುಮಾರ್, ಡಾ.ವಿಷ್ಣುವರ್ಧನ್ ಹಾಗೂ ಡಾ.ಅಂಬರೀಷ್ ಸ್ಮಾರಕಗಳು ಒಟ್ಟಿಗೆ ಇರುವುದೇ ಸೂಕ್ತ. ಇದು ರಾಜ್ಯದ ಅನೇಕರ ಇಚ್ಛೆ. ಹಳೆಯ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ಸಿಎಂಗೂ ಇದೇ ಸಲಹೆ ನೀಡುತ್ತೇನೆ.

| ಬಿ.ಎಸ್. ಯಡಿಯೂರಪ್ಪ ಬಿಜೆಪಿ ರಾಜ್ಯಾದ್ಯಕ್ಷ

ಬೆಂಗಳೂರಿನಲ್ಲಾದರೆ ಅಭಿಮಾನ್ ಸ್ಟುಡಿಯೋದಲ್ಲೇ ಸ್ಮಾರಕ ಆಗಲಿ. ಇಲ್ಲವಾದರೆ ಮೈಸೂರಿನಲ್ಲಿ ಮಾಡಲಿ. ನಮ್ಮ ಅಭಿಪ್ರಾಯಕ್ಕೆ ಗೌರವ ನೀಡದೆ ಸ್ಮಾರಕ ನಿರ್ವಿುಸುವುದಾದರೆ ಎಲ್ಲಾದರೂ ಮಾಡಲಿ. ನಿಜವಾದ ಅಭಿಮಾನಿಗಳು ನಮ್ಮ ಜತೆಗಿದ್ದಾರೆ. ಸ್ಮಾರಕ ಆದರೂ ಸಂತೋಷ, ಆಗದಿದ್ದರೂ ಅಸಮಾಧಾನ ಇಲ್ಲ.

| ಭಾರತಿ ವಿಷ್ಣುವರ್ಧನ್

ಕುಮಾರಸ್ವಾಮಿ ಬಗ್ಗೆ ನಮಗೆ ಗೌರವವಿದೆ. ವಿಷ್ಣುವರ್ಧನ್ ಮೃತಪಟ್ಟಾಗ ಅವರು ನೀಡಿದ ಸಹಕಾರಕ್ಕೆ ನಾವೆಲ್ಲ ಚಿರಋಣಿ. ಆದರೆ ಸ್ಮಾರಕ ನಿರ್ಮಾಣ ವಿಚಾರದಲ್ಲಿ ನಮ್ಮ ತಾಳ್ಮೆ ಕೊನೆಯಾಗಿದೆ. ಕಂಠೀರವ ಸ್ಟುಡಿಯೋದಲ್ಲಿ ಸ್ಮಾರಕ ನಿರ್ವಿುಸಿದರೆ ನಾವ್ಯಾರೂ ಅಲ್ಲಿಗೆ ಹೋಗುವುದಿಲ್ಲ. ಮನೆಯಲ್ಲೇ ಫೋಟೋ ಇಟ್ಟು ಪೂಜೆ ಮಾಡುತ್ತೇವೆ. ನಮ್ಮ ಮನಸ್ಸಿನಲ್ಲೇ ಅವರಿದ್ದಾರೆ.

| ಅನಿರುದ್ಧ್ ವಿಷ್ಣುವರ್ಧನ್ ಅಳಿಯ

ಶೀಘ್ರದಲ್ಲೇ ಎಲ್ಲರೊಂದಿಗೆ ಕುಳಿತು ರ್ಚಚಿಸಿ ವಿಷ್ಣು ಸ್ಮಾರಕ ನಿರ್ವಣಕ್ಕೆ ಕ್ರಮ ಕೈಗೊಳ್ಳಲಾಗುವುದು.

| ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ

ಸ್ಮಾರಕ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಭಾರತಿ ಅವರ ಅಭಿಪ್ರಾಯವನ್ನು ಯಾರೂ ಕೇಳುತ್ತಿಲ್ಲ. ಹಾಗಾಗಿ ನಮಗೆ ಬೇಸರವಾಗಿದೆ. ವಿಷ್ಣು ಅಭಿಮಾನಿ ಎಂದು ಹೇಳಿಕೊಳ್ಳುವ ವೀರಕಪುತ್ರ ಶ್ರೀನಿವಾಸ್ ನಮ್ಮ ವಿರುದ್ಧವೇ ಮಾತನಾಡುತ್ತಾರೆ. ನಿಜವಾದ ಅಭಿಮಾನಿ ಹೀಗೆ ಮಾಡುತ್ತಾರಾ?

| ಕೀರ್ತಿ ವಿಷ್ಣುವರ್ಧನ್ ಪುತ್ರಿ