ಅಂಬರೀಷ್​ ಅಸ್ಥಿ ವಿಸರ್ಜನೆಗೆ ತೆರಳಿದ ಮಗ ಅಭಿ, ನಟ ದರ್ಶನ್​: 11ನೇ ದಿನಕ್ಕೆ ಹಾಲು-ತುಪ್ಪ ಶಾಸ್ತ್ರ

ಬೆಂಗಳೂರು: ಅಂಬರೀಷ್​ ಚಿತಾಭಸ್ಮವನ್ನು ಇಂದು ಪಶ್ಚಿಮ ವಾಹಿನಿಯಲ್ಲಿ ವಿಸರ್ಜನೆ ಮಾಡಲಿರುವ ಹಿನ್ನೆಲೆಯಲ್ಲಿ ಅಂಬರೀಷ್​ ಪುತ್ರ ಅಭಿಷೇಕ್​, ದರ್ಶನ್​, ದರ್ಶನ್​ ಅಣ್ಣನ ಮಗ ಮಧು ಅಸ್ಥಿ ತೆಗೆದುಕೊಂಡು ಶ್ರೀರಂಗಪಟ್ಟಣಕ್ಕೆ ಕಾರಿನಲ್ಲಿ ತೆರಳಿದರು. ಅಲ್ಲಿ ಡಾ. ಭಾನುಪ್ರಕಾಶ ಶರ್ಮ ನೇತೃತ್ವದಲ್ಲಿ ಅಸ್ಥಿ ವಿಸರ್ಜನಾ ವಿಧಿವಿಧಾನಗಳು ನಡೆಯಲಿವೆ.

ಅದಕ್ಕೂ ಮೊದಲು ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಲಾಗಿತ್ತು. ಸುಮಲತಾ, ರಾಕ್​ಲೈನ್​ ವೆಂಕಟೇಶ್​, ಸಾ.ರಾ. ಗೋವಿಂದ್​ ಮತ್ತಿತರರು ಸಮಾಧಿ ಬಳಿ ಬೆಳಗ್ಗೆಯೇ ಆಗಮಿಸಿದ್ದರು.

ಅಂಬರೀಷ್​ ಸಮಾಧಿಗೆ ಕೋಲ್ಕತದಿಂದ ತರಿಸಿರುವ ಬಿಳಿ ಕ್ರೆಸೆಂಟೇರಿಯಂ ಹೂವು, ಜರ್ಬೇರಾ ಹೂವುಗಳಿಂದ ಅಲಂಕಾರ ಮಾಡಲಾಗಿದ್ದು, ಅದರ ಸಮೀಪ ಅಂಬಿ ಅವರ ದೊಡ್ಡ ಫೋಟೋ ಹಾಕಲಾಗಿದೆ.

11ನೇ ದಿನಕ್ಕೆ ಹಾಲು-ತುಪ್ಪ
ಅಂಬರೀಷ್​ ಸಮಾಧಿಗೆ ಹಾಲು-ತುಪ್ಪ ಶಾಸ್ತ್ರ ಇಂದು ನಡೆಯುತ್ತದೆ ಎನ್ನಲಾಗಿತ್ತು. ಆದರೆ ಇಂದು ಈ ಬಗ್ಗೆ ಸ್ಪಷ್ಟನೆ ನೀಡಿದ ಅಂಬರೀಷ್​ ಅಣ್ಣನ ಮಗ, ಇಂದು ಅಸ್ಥಿ ಶಾಸ್ತ್ರವಷ್ಟೇ ನಡೆದಿದೆ. ನಮ್ಮ ಸಂಪ್ರದಾಯದ ಪ್ರಕಾರ 11ನೇ ದಿನಕ್ಕೆ ಹಾಲು-ತುಪ್ಪ ಶಾಸ್ತ್ರ ಮಾಡುತ್ತೇವೆ ಎಂದು ತಿಳಿಸಿದರು.

ಅಭಿಮಾನಿಗಳಿಗೂ ಅಸ್ಥಿ ಕೊಟ್ಟ ಅಭಿ
ಅಂಬರೀಷ್​ ಅಸ್ಥಿಯನ್ನು ಅವರ ಮಗ ಅಭಿಷೇಕ್​ ಅಭಿಮಾನಿಗಳಿಗೂ ನೀಡಿದ್ದಾರೆ. ಜನರ ಕೋರಿಕೆ ಮೇರೆಗೆ ಅಸ್ಥಿಯನ್ನು ಕೊಟ್ಟಿದ್ದಾರೆ. ಇದು ಇತಿಹಾಸದಲ್ಲೇ ಮೊದಲ ಬಾರಿಗೆ ದೊಡ್ಡ ನಟನ ಚಿತಾಭಸ್ಮವನ್ನು ಅಭಿಮಾನಿಗಳಿಗೆ ಕೊಟ್ಟಂತಾಗಿದೆ. ಅಭಿಮಾನಿಗಳು ತಂದ ಹಾಲನ್ನು ಅಭಿಷೇಕ್​ ಅಸ್ಥಿ ಮೇಲೆ ಹಾಕಿದ್ದಾರೆ.