ವಿಚ್ಛೇದಿತೆಗೆ ಸಿಗಲಿದೆ ನಂ.1 ಶ್ರೀಮಂತೆ ಪಟ್ಟ!

ಸಿಯಾಟಲ್ (ಅಮೆರಿಕ): ಸಂಬಂಧಗಳನ್ನು ಮುರಿದು ಸಂಸಾರಗಳನ್ನೇ ಬೀದಿಗೆ ತಳ್ಳುವ ವಿಚ್ಛೇದನ ಅದೃಷ್ಟ ಇದ್ದವರಿಗೆ ಅಷ್ಟೈಶ್ವರ್ಯದ ಸುಪ್ಪತ್ತಿಗೆಯೂ ಹೌದು. ಇ-ಕಾಮರ್ಸ್ ಕ್ಷೇತ್ರದ ದೈತ್ಯ ಅಮೆಜಾನ್ ಸಂಸ್ಥೆ ಸಂಸ್ಥಾಪಕ ಹಾಗೂ ಫೋರ್ಬ್ಸ್ ಪಟ್ಟಿಯಲ್ಲಿ ವಿಶ್ವದ ನಂ.1 ಶ್ರೀಮಂತನ ಸ್ಥಾನf ಪಡೆದಿರುವ ಜೆಫ್ ಬೆಜೋಸ್​ನ ದಾಂಪತ್ಯ ಕಥೆ ಈಗ ಇದೇ ವಿಚಾರದಿಂದ ಚರ್ಚೆಯ ಮುನ್ನೆಲೆಯಲ್ಲಿದೆ. 25 ವರ್ಷಗಳ ದಾಂಪತ್ಯದ ಬಳಿಕ ಪ್ರತ್ಯೇಕ ಹಾದಿ ತುಳಿಯಲು ಸಜ್ಜಾಗಿರುವ ಇವರಿಬ್ಬರ ವಿಚ್ಛೇದನ ಜಗತ್ತಿನ ಅತ್ಯಂತ ದುಬಾರಿ ಪ್ರಕ್ರಿಯೆ ಎನಿಸುವ ಸಾಧ್ಯತೆ ಇದೆ.

ಅಮೆಜಾನ್ ಸ್ಥಾಪನೆಗೆ ಮೊದಲೇ ಇವರಿಬ್ಬರು ವಿವಾಹವಾಗಿದ್ದರಿಂದ ಅಮೆಜಾನ್ ಮಾರುಕಟ್ಟೆ ಮೌಲ್ಯದ 57 ಲಕ್ಷ ಕೋಟಿ ರೂ.ಗಳ ಪೈಕಿ 4.76 ಲಕ್ಷ ಕೋಟಿ ರೂ. ಆಸ್ತಿ ಕಾದಂಬರಿಗಾರ್ತಿಯೂ ಆದ ಅವರ ಪತ್ನಿ ಮ್ಯಾಕೆನ್ಜಿಗೆ ಸಿಗಲಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮ್ಯಾಕೆನ್ಜಿ ವಾಲ್​ವಾರ್ಟ್ ಸಂಸ್ಥೆಯ ಆಲೀಸ್ ವಾಲ್ಟನ್ ಅವರನ್ನು ಹಿಂದಿಕ್ಕಿ ವಿಶ್ವದ ನಂ.1 ಶ್ರೀಮಂತ ಮಹಿಳೆ ಎಂಬ ದಾಖಲೆ ಬರೆಯಲಿದ್ದಾರೆ. ವಿಚ್ಛೇದನ ಖಚಿತವಾಗಿದ್ದರೂ ಬೆಜೋಸ್ ದಂಪತಿ ವಾಸವಿರುವ ಕಿಂಗ್ ಕೌಂಟಿ ವ್ಯಾಪ್ತಿಯ ಕೌಟುಂಬಿಕ ನ್ಯಾಯಾಲಯದಲ್ಲಿ ಈವರೆಗೂ ವಿಚ್ಛೇದನ ಅರ್ಜಿ ಸಲ್ಲಿಕೆಯಾಗಿಲ್ಲ.

ಮ್ಯಾಕೆನ್ಜಿ ಜತೆ ರ್ಚಚಿಸಿಯೇ ವಿಚ್ಛೇದನ ಪಡೆಯುತ್ತಿದ್ದೇನೆ. ಒಳ್ಳೆಯ ಸ್ನೇಹಿತರಾಗಿ ಉಳಿಯಲು ಇಬ್ಬರೂ ನಿರ್ಧರಿಸಿದ್ದೇವೆ.

| ಜೆಫ್ ಬೆಜೋಸ್

ಸಂದರ್ಶನದಲ್ಲೇ ಲವ್ ಆಗಿತ್ತು…

1992ರಲ್ಲಿ ಹೆಜ್ ಕಂಪನಿಯ ಹುದ್ದೆಗೆ ಸಂದರ್ಶನಕ್ಕಾಗಿ ತೆರಳಿದ್ದ ಮ್ಯಾಕೆನ್ಜಿ ಅವರನ್ನು ಸಂದರ್ಶಕರಾಗಿದ್ದ ಜೆಫ್ ಬೆಜೋಸ್ ಆಯ್ಕೆ ಮಾಡಿದ್ದರು. ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಲೇ ಪ್ರೀತಿ ಹುಟ್ಟಿ 1993ರಲ್ಲಿ ವಿವಾಹವಾದರು. 1994ರಲ್ಲಿ ಮನೆಯ ಗ್ಯಾರೇಜ್​ನಲ್ಲೇ ಅಮೆಜಾನ್ ಇ-ಕಾಮರ್ಸ್ ಕಂಪನಿ ಸ್ಥಾಪಿಸಿದ ಜೆಫ್​ಗೆ ಬಳಿಕ ಮುಟ್ಟಿದ್ದೆಲ್ಲ ಚಿನ್ನವಾಯಿತು.

ವಿಶ್ವದ ದುಬಾರಿ ವಿಚ್ಛೇದನಗಳಿವು

  • 2009: ಹಾಲಿವುಡ್ ನಟ ಮೆಲ್ ಗಿಬ್ಸನ್, ಪತ್ನಿ ರಾಬಿನ್ ಮೂರೆ – 2992 ಕೋಟಿ ರೂ. ಪರಿಹಾರ
  • 2010: ಗಾಲ್ಪರ್ ಟೈಗರ್​ವುಡ್ಸ್, ಪತ್ನಿ ಎಲಿನ್ ನಾರ್ಡೆಗ್ರೆನ್ – 7040 ಕೋಟಿ ರೂ. ಪರಿಹಾರ
  • 2015: ಗೂಗಲ್ ಸಹಸಂಸ್ಥಾಪಕ ಸರ್ಗಿ ಬ್ರಿನ್, ಪತ್ನಿ ಅನ್ನೆ ವೊಜ್​ಸಿಕಿ – 211 ಕೋಟಿ ರೂಪಾಯಿ ಪರಿಹಾರ

Leave a Reply

Your email address will not be published. Required fields are marked *