
ಕೆ.ಎಂ.ದೊಡ್ಡಿ: ನನ್ನ ಅನುದಾನದಲ್ಲಿ ಗ್ರಾಮದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಜತೆಗೆ ಜನಸೇವೆಗೆ ಸದಾ ಸಿದ್ಧ ಇರುವುದಾಗಿ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಭರವಸೆ ನೀಡಿದರು.
ಸಮೀಪದ ಗುಡಿಗೆರೆ ಗ್ರಾಮದಲ್ಲಿ ಸೋಮೇಶ್ವರ ದೇವಾಲಯದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನಕ್ಕೆ 4 ಲಕ್ಷ ರೂ. ಅನುದಾನ ನೀಡಿದ ಹಿನ್ನೆೆಲೆಯಲ್ಲಿ ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಸಮುದಾಯ ಭವನಕ್ಕೆ ಪ್ರಸ್ತುತ 4 ಲಕ್ಷ ರೂ. ಅನುದಾನ ನೀಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ನೀಡುವುದಾಗಿ ತಿಳಿಸಿದರು.
ಗ್ರಾಮದ ಅಭಿವೃದ್ಧಿಗೆ ನನ್ನ ಅನುದಾನದಲ್ಲಿ ಆರ್ಥಿಕ ನೆರವು ನೀಡುವುದರ ಜತೆಗೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸುತ್ತೇನೆ. ನಾನು ಪರಿಷತ್ ಸದಸ್ಯನಾಗಿದ್ದರೂ ಕೂಡ ನನ್ನ ಶಕ್ತಿ ಮೀರಿ ಅಭಿವೃದ್ಧಿ ಕಾರ್ಯಗಳ ಮಾಡುತ್ತೇನೆ. ನಿಮ್ಮ ಕೆಲಸ ಕಾರ್ಯಗಳು ಆಗಬೇಕಾದರೆ ಯಾವುದೇ ಸಂದರ್ಭದಲ್ಲೂ ನನ್ನನ್ನು ಭೇಟಿ ಮಾಡಿ, ನಾನು ನಿಮ್ಮ ಸೇವೆಗೆ ಸದಾ ಸಿದ್ಧನಿದ್ದೇನೆ ಎಂದರು.
ಸರ್ಕಾರದ ಮಟ್ಟದಲ್ಲಿ ಯಾವುದೇ ಕೆಲಸಗಳು ಆಗಬೇಕಾದರೂ ನಾನು ನಿಮ್ಮ ನೆರವಿಗೆ ನಿಲ್ಲುತ್ತೇನೆ. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಸೀಲ್ದಾರ್, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಕಚೇರಿ ಸೇರಿದಂತೆ ಸರ್ಕಾರದ ಯಾವುದೇ ಇಲಾಖೆಯಲ್ಲೂ ಸಾರ್ವಜನಿಕ ಕೆಲಸ ಕಾರ್ಯಗಳಾಗಬೇಕಾದರೆ ನನ್ನನ್ನು ನೇರವಾಗಿ ಭೇಟಿ ಮಾಡಿ ಎಂದು ಸಲಹೆ ನೀಡಿದರು.
ನಾನು ಕಳೆದ ಮೂರು ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಸೋತಿದ್ದರೂ ನನ್ನ ನಿಷ್ಠಾವಂತ ಕಾರ್ಯಕರ್ತರು ನನ್ನನ್ನು ಕೈಬಿಟ್ಟಿಲ್ಲ. ನನ್ನ ಬೆಂಬಲಿಗರ ಹಿತಕಾಯ್ದಿದ್ದು ಈಗ ವಿಧಾನ ಪರಿಷತ್ ಸದಸ್ಯನಾಗಿದ್ದೇನೆ. ಬೆಂಬಲಿಗರ ಕೆಲಸ ಕಾರ್ಯಗಳನ್ನು ನನ್ನ ಕೈಲಾದಷ್ಟು ಮಟ್ಟಿಗೆ ಕಾರ್ಯಗತಗೊಳಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಖಂಡರಾದ ನಾಡಗೌಡ ಬೊಮ್ಮೇಗೌಡ, ಸಿದ್ದಪ್ಪ. ಸ್ವರೂಪ್ ಬಸವೇಗೌಡ, ಸೋಮೇಶ್ವರ ಸಮುದಾಯದ ಭವನ ಟ್ರಸ್ಟ್ ಅಧ್ಯಕ್ಷ ರಾಮಲಿಂಗೇಗೌಡ, ಸದಸ್ಯರಾದ ಮಿಥುನ್, ಮಂಜುನಾಥ್, ಸಿದ್ದೇಗೌಡ, ಬೋರೇಗೌಡ, ಸುರೇಶ್, ಪುಟ್ಟಲಿಂಗ, ನಾಗರಾಜು ಸೇರಿದಂತೆ ಇದ್ದರು.