ಆಳ್ವಾಸ್ ಶಿಲ್ಪ ವಿರಾಸತ್‌ಗೆ ಚಾಲನೆ

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಆಳ್ವಾಸ್ ವಿರಾಸತ್-2019ರ ಅಂಗವಾಗಿ ಡಿ.22ರಿಂದ ಜ.6ವರೆಗೆ ನಡೆಯಲಿರುವ ಆಳ್ವಾಸ್ ಶಿಲ್ಪ ವಿರಾಸತ್-2019, ರಾಷ್ಟ್ರೀಯ ಶಿಲ್ಪ ಕಲಾ ಶಿಬಿರಕ್ಕೆ ಶನಿವಾರ ವಿದ್ಯಾಗಿರಿ ಕುವೆಂಪು ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.

ಶಿಲ್ಪ ಕಲಾವಿದ ವೆಂಕಟರಮಣ ಭಟ್ ಚಾಲನೆ ನೀಡಿ, ಕಲಾವಿದರಲ್ಲಿ ಬದ್ಧತೆಯಿದ್ದಲ್ಲಿ ಅವರಿಂದ ಅರಳುವ ಕಲೆಗೆ ಜನಮನ್ನಣೆ ಸಿಗುತ್ತದೆ. ಸಮರ್ಪಣೆ ಇದಲ್ಲಿ ಪ್ರತಿಯೊಬ್ಬ ಕಲಾವಿದನಿಂದ ಉತ್ತಮ ಶಿಲ್ಪಕಲೆ ಅರಳುತ್ತದೆ. ಕಲೆಗೆ ಹೆಚ್ಚಿನ ಪ್ರೋತ್ಸಾಹ ಸಿಗುವ ಕಾಲಘಟ್ಟದಲ್ಲಿ ಕಲಾವಿದರು ಕೂಡ ಕೌಶಲ ಅಭಿವೃದ್ಧಿಪಡಿಸಿದರೆ ಉತ್ತಮ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ದೇಶದ ವಿವಿಧ ಭಾಗದ ಕಲೆ, ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದೆ. ಸಂಸ್ಥೆ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅವರ ಪರಿಕಲ್ಪನೆಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳು ಕಲಾ ಶಿಬಿರಗಳ ಮಹತ್ವ ಅರಿತು, ಕಲೆಯ ಪ್ರಭಾವವದಿಂದ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು. ಶಿಬಿರ ಸಲಹಾ ಸಮಿತಿಯ ಕೋಟಿ ಪ್ರಸಾದ್ ಆಳ್ವ, ಗಣೇಶ್ ಸೋಮಯಾಜಿ, ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು. ದೀಕ್ಷಾ ಗೌಡ ಕಾರ್ಯಕ್ರಮ ನಿರೂಪಿದರು.