ಸಕಾರಾತ್ಮಕ ಧ್ವನಿ ಬಿಂಬಿಸಿದ ಸಿರಿನುಡಿ

 «ಕೃಷಿ, ಮಹಿಳಾಪರ ಚಿಂತನೆಯಲ್ಲಿ ಮಾರ್ದನಿಸಿದ ಭಾವದ ಒರತೆ»

| ಮೋಹನದಾಸ್ ಮರಕಡ

ಮೂಡುಬಿದಿರೆ: ಯಾವುದೇ ಆತುರ, ಗಡಿಬಿಡಿ ಇಲ್ಲದೆ ಗಂಭೀರ ಚಿಂತನೆ, ಯೋಚನೆಗೆ ಹಚ್ಚುವ ವಿಷಯಗಳಲ್ಲಿ ಚರ್ಚೆಗೆ ದಿಕ್ಕು ತೋರಿಸಿದ ಪ್ರಸಕ್ತ ಸಾಲಿನ ಆಳ್ವಾಸ್ ನುಡಿಸಿರಿ ಕೃಷಿ, ಮಹಿಳಾ ಪರ ವಿಷಯಗಳಲ್ಲಿ ಭಾವದ ಒರತೆ ಮೂಡಿಸಿ ಸಕಾರಾತ್ಮಕ ಕ್ರಾಂತಿಯ ಧ್ವನಿ ಮೊಳಗಿಸಿ ಭಾನುವಾರ ಸಮಾಪನ ಕಂಡಿತು.

ಸೂರ್ಯ ನಡುನೆತ್ತಿಗೆ ಬರುತ್ತಿರುವಂತೆ ಜನರ ಹರಿವು ಹೆಚ್ಚುತ್ತ ಹೋದಂತೆ, ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಗಳು, ಪ್ರದರ್ಶನ, ಮಾರಾಟ ಮಳಿಗೆಗಳು, ಬುಕ್‌ಸ್ಟಾಲ್‌ಗಳು, ಕೃಷಿಸಿರಿ ಅಂಗಣ ಭರ್ತಿಯಾಗತೊಡಗಿದ್ದು ಭಾನುವಾರದ ವಿಶೇಷ. ವೈಚಾರಿಕ ಮಂಥನದಿಂದ ಗಮನ ಸೆಳೆಯುತ್ತಿದ್ದ ರತ್ನಾಕರವರ್ಣಿ ಮುಖ್ಯ ವೇದಿಕೆ ದಿನವಿಡೀ ಪ್ರಬುದ್ಧ ವಿಚಾರಗಳ ಮಥನದ ತುಡಿತಕ್ಕೆ ಕಾರಣವಾಯಿತು.
ಜನಪದ ಬಗ್ಗೆ ಭಾನುವಾರದ ಮೂರು ವಿಚಾರಗೋಷ್ಠಿಗಳು ಜನಸಾಮಾನ್ಯರ ಜೀವನದ ಕುರಿತ ವಿಷಯಗಳ ಮೆಲುಕು ಹಾಕಿಸಿತು. ಈ ನಡುವೆ ಚಿಂತನೆಗೆ ಹಚ್ಚಿದ್ದು, ಸಮಕಾಲೀನ ಸಂದರ್ಭ-ಮಹಿಳಾ ಬಿಕ್ಕಟ್ಟು ಕುರಿತು ಡಾ.ಎಂ ಉಷಾ ಮಂಡಿಸಿದ ವಿಚಾರಗಳು ಹಾಗೂ ಐಟಿಯಿಂದ ಮೇಟಿಗೆ ಎಂಬ ವಿಷಯದಲ್ಲಿ ಕೃಷಿ ಜೀವನದ ಅನುಭವ ಹಂಚಿಕೊಂಡ ವಸಂತ ಕಜೆಯವರ ವಿಚಾರಧಾರೆಗಳು. ಈ ಇಬ್ಬರು ಪ್ರತಿಪಾದಿಸಿದ ವಿಷಯಗಳು ಸೇರಿದ್ದ ಸಭಿಕರಲ್ಲಿ ಹೌದಲ್ಲವೇ?’ ಎಂಬ ಭಾವ ರೂಪಿಸಿದ್ದು ಸುಳ್ಳಲ್ಲ. ವಸಂತ ಕಜೆ ತಮ್ಮ ಮಾತಿನ ಕೊನೆಯಲ್ಲಿ ಪ್ರತಿಪಾದಿಸಿದ ಎಸಿ ಕಾರಿನ ವಿಷಯ ಪ್ರಸ್ತುತ ಸನ್ನಿವೇಶದಲ್ಲಿ ಜಗತ್ತು ಎತ್ತ ಹೊರಳುತ್ತಿದೆ ಎಂಬುದರ ಸಂಕೇತವಾಗಿತ್ತು. ಜಗತ್ತು ಹಣದ ಮದದಲ್ಲಿ ಎತ್ತ ಹೊರಳುತ್ತಿದೆ ಎಂದರೆ ಜನ ಐಷಾರಾಮಿ ಎಸಿ ಕಾರು ಖರೀದಿಸಿ ಅದನ್ನು ನಿಲ್ಲಿಸುವ ಸಂದರ್ಭದಲ್ಲೂ ಎಸಿ ಆನ್ ಮಾಡಿ ಅದರೊಳಗೆ ಕುಳಿತು ಪರಿಸರಕ್ಕೆ ಹಾನಿ ಮಾಡಿಯಾದರೂ ತಾನು ಚೆನ್ನಾಗಿರಬೇಕೆಂಬ ಅಪಾಯಕಾರಿ ಮನಸ್ಥಿತಿ ಬೆಳೆಯುತ್ತಿರುವುದು ಆತಂಕಕಾರಿ ಮನೋಭಾವ ಎಂದು ಅವರಿಲ್ಲಿ ಪ್ರತಿಪಾದಿಸಿದರು.

ಸಮಾರೋಪದಲ್ಲಿ ಆಳ್ವಾಸ್ ನುಡಿಸಿರಿಯ ಮಾದರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಸಮ್ಮೇಳನ ಸರ್ವಾಧ್ಯಕ್ಷೆ ಮಲ್ಲಿಕಾ ಎಸ್. ಘಂಟಿ ಇಂಥ ಮಾದರಿಯನ್ನು ಕರ್ನಾಟಕದ ಎಲ್ಲ ಸಾಹಿತ್ಯ ಸಮ್ಮೇಳನದಲ್ಲೂ ಅಳವಡಿಸಿಕೊಳ್ಳಬೇಕು ಎಂಬ ಕಿವಿಮಾತು ಹೇಳುವುದರೊಂದಿಗೆ 15ನೇ ನುಡಿಸಿರಿಗೆ ಮುಕ್ತಾಯದ ಚುಕ್ಕಿ ಇಟ್ಟರು.

ಶುದ್ಧ ನೀರಿಗೆ ವೈಕುಂಠ ಸಮಾರಾಧನೆ!

ಇಂದು ಎಲ್ಲ ಕಡೆಯಲ್ಲೂ ಕಲುಷಿತ ನೀರಿನದೇ ಸುದ್ದಿ. ಒಂದು ಕಡೆ ನೀರಿನ ಅಭಾವ ಮತ್ತೊಂದು ಕಡೆ ಕಲುಷಿತ ನೀರಿನ ಸಮಸ್ಯೆ ಹೊಡೆದೋಡಿಸಲು ನೀರು ಸಂಸ್ಕರಣಾ ಘಟಕಗಳ ಸುದ್ದಿಯೇ ಹೆಚ್ಚು ಕೇಳಿಬರುತ್ತಿದೆ. ಮಂಗಳೂರಿನಲ್ಲಿ ಉಪ್ಪು ನೀರಿನ ಸಂಸ್ಕರಣಾ ಘಟಕ ಮುಂದಿನ ವರ್ಷ ಆರಂಭವಾಗಲಿದೆ ಎಂದು ವರದಿಯಾಗಿದೆ. ಯಾವಾಗ ಉಪ್ಪು ನೀರಿನ ಘಟಕ ನಿರ್ಮಾಣವಾಗಿ ಕಾರ್ಯಾರಂಭ ಮಾಡುವುದೋ ಅಂದಿಗೆ ಶುದ್ಧ ನೀರಿಗೆ ವೈಕುಂಠ ಸಮಾರಾಧನೆ ಎಂದು ವಸಂತ ಕಜೆ ಹೇಳಿದರು. ಅಂದರೆ ಮುಂದೊಂದು ದಿನ ಕಲುಷಿತ ನೀರನ್ನೇ ಮಾನವ ಕುಡಿಯಬೇಕಾದ ಅನಿವಾರ್ಯ ಪರಿಸ್ಥಿತಿ ಬರಲಿದೆ ಎಂಬ ಧ್ವನಿ ಅವರ ಮಾತಲ್ಲಿ ವ್ಯಕ್ತವಾಯಿತು.

ಆಪ್ತ ಭಾವದ ಗೋಷ್ಠಿಗಳು

ಆಳ್ವಾಸ್ ನುಡಿಸಿರಿಯ ಮೂರೂ ದಿನದ ಗೋಷ್ಠಿಗಳು ವಿಚಾರ ಮಥನದ ದೃಷ್ಟಿಯಿಂದ ಆಪ್ತ ಭಾವ ಮೂಡಿಸಿದವು. ಭಾನುವಾರ ವಿಶೇಷೋಪನ್ಯಾಸದಲ್ಲಿ ವಿಚಾರ ಮಂಡಿಸಿದ ವಸಂತ ಕಜೆ ಕೃಷಿ ಬದುಕಿನ ಮಜಲುಗಳನ್ನು ತೆರೆದಿಟ್ಟರೆ, ಡಾ.ಎಂ.ಉಷಾ ಮಹಿಳೆಯರ ಧ್ವನಿ ಎಲ್ಲಿ ಅಡಗುತ್ತಿದೆ? ಮಹಿಳಾ ಚಳವಳಿ ಎಲ್ಲಿ ದಾರಿ ತಪ್ಪುತ್ತಿದೆ ಎಂದು ಅವಲೋಕನ ಮಾಡಿದರು. ಒಟ್ಟು ಮೂರೂ ದಿನದ ಗೋಷ್ಠಿಗಳು ಬಿಂಬಿಸಿದ್ದು ಒಂದು ರೀತಿಯ ಸಕಾರಾತ್ಮಕ ಕ್ರಾಂತಿಯ ನೆಲೆಗಟ್ಟನ್ನೇ. ಅನ್ನದ ಬೆಲೆ ಜನರಿಗೆ ಗೊತ್ತಾಗಬೇಕಿದ್ದರೆ ಕೃಷಿಯಲ್ಲೇ ಕ್ರಾಂತಿ ಆಗಬೇಕಿದೆ ಎಂಬ ಸೂಚ್ಯ ವಸಂತ ಕಜೆಯವರಾದರೆ, ಡಾ.ಎಂ. ಉಷಾ ಬಿಂಬಿಸಿದ್ದು ಮಹಿಳಾಪರ ಚಿಂತನೆಯಲ್ಲಿ ಜನಾಭಿಪ್ರಾಯ ಮೂಡಿಸಲು ಆಗಬೇಕಾದ ಸಕಾರಾತ್ಮಕ ಕ್ರಾಂತಿಯನ್ನು.

ಮಿಸ್ ಯೂಸ್-ಅತಿ ಹೆಚ್ಚು ಬಳಕೆ

ಪ್ರಸ್ತುತ ಸನ್ನಿವೇಶಗಳ ಬಗ್ಗೆ ಮೆಲುಕು ಹಾಕಿದ ಡಾ.ಎಂ.ಉಷಾ ಈ ವರ್ಷ ಅತಿ ಹೆಚ್ಚು ಬಳಕೆಯಾದ ಪದ ಮಿಸ್ ಯೂಸ್ ಬಗ್ಗೆ ಗಮನ ಸೆಳೆದರು. ಅದೇ ಮಿಸ್ ಯೂಸ್ ಎಂಬ ಪದ ಬಳಸಿ ನಾವು ಸಂಪ್ರದಾಯವನ್ನು ಮುರಿಯುವ ಕಾರ್ಯಕ್ಕಿಳಿಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದು ಸದ್ಯದ ಎಲ್ಲ ಸನ್ನಿವೇಶಗಳಿಗೂ ಉತ್ತರ ನೀಡಿದಂತಿತ್ತು. ಸ್ಯಾನಿಟರಿ ಪ್ಯಾಡ್ ಮೇಲಿನ ಜಿಎಸ್‌ಟಿ ಕಡಿಮೆ ಮಾಡಬೇಕು ಎಂಬ ಮಾತು ಕೇಳಿಬಂದಾಗ ಪರಿಸರವಾದಿಗಳು ವಿರೋಧಿಸಿ, ಮರಳಿ ಬಟ್ಟೆಗೆ ಹೋಗಿ ಎಂದು ಪ್ರತಿಪಾದಿಸಿದರು. ಬಹುರಾಷ್ಟ್ರೀಯ ಕಂಪನಿಗಳು ಮಾರುಕಟ್ಟೆ ಸೃಷ್ಟಿಸುತ್ತಿವೆ ಎಂದರು ಕೆಲವರು. ಇವೆಲ್ಲ ಏನು ಸೂಚಿಸುತ್ತಿವೆ? ಮಿಸ್ ಯೂಸ್ ಎಂಬ ಪದ ಬಳಕೆಯಿಂದಲೇ ಮಹಿಳಾ ಪರ ಧ್ವನಿಯನ್ನು ಉಡುಗಿಸುವ ಯತ್ನ ನಡೆಯುತ್ತಿರುವುದು ವಿಷಾದನೀಯ ಎಂಬ ಅಭಿಪ್ರಾಯ ಇಲ್ಲಿ ವ್ಯಕ್ತವಾಯಿತು. ಮೂರು ದಿನದ ಕಾರ‌್ಯಕ್ರಮಕ್ಕೆ ಸುಮಾರು ಒಂದೂವರೆ ಲಕ್ಷ ಜನ ಆಗಮಿಸಿದ್ದರು.


ನುಡಿಸಿರಿ ಸಾರ್ಥಕ ಚರ್ಚೆ

«ಕರಾವಳಿ, ಉತ್ತರ ಕರ್ನಾಟಕ ಬೆಸುಗೆಯಾಗಲಿ ಎಂದ ಸಮ್ಮೇಳನಾಧ್ಯಕ್ಷೆ ಮಲ್ಲಿಕಾ ಘಂಟಿ»

ವೇಣುವಿನೋದ್ ಕೆ.ಎಸ್.

ಮೂಡುಬಿದಿರೆ: ತಾಳ್ಮೆ, ಸಂಯಮ ಹಾಗೂ ಮಹಿಳೆಯನ್ನು ಗೌರವಿಸುವ ಗುಣಗಳ ಗಣಿಯಾದ ಕರಾವಳಿ ಜನರು ಹಾಗೂ ಕುಟುಂಬ ಪ್ರೀತಿ ಮೆರೆಯುವ ಉತ್ತರ ಕರ್ನಾಟಕ ಜನರ ನಡುವೆ ಕೊಡುಕೊಳ್ಳುವಿಕೆ ನಡೆಯಬೇಕು. ಇದು ನುಡಿಸಿರಿ ಸರ್ವಾಧ್ಯಕ್ಷೆ, ಹಂಪಿ ಕನ್ನಡ ವಿವಿ ಕುಲಪತಿ ಡಾ.ಮಲ್ಲಿಕಾ ಘಂಟಿ ಅಭಿಪ್ರಾಯ.

ಶಿಸ್ತು ಸಂಯಮದ ಜನ ಕರಾವಳಿಯಲ್ಲಿದ್ದಾರೆ, ಆದರೆ ಐಟಿ ಹಾವಳಿಯಿಂದಾಗಿ ಮಕ್ಕಳು ಹೆತ್ತವರನ್ನು ವೃದ್ಧಾಶ್ರಮಕ್ಕೆ ಬಿಡುವುದು ದುರಂತ. ನಮ್ಮ ಉತ್ತರ ಕನ್ನಡದಲ್ಲಿನ್ನೂ ಇಂತಹ ಪರಿಸ್ಥಿತಿ ಇಲ್ಲ. ಮಕ್ಕಳು ದುಡಿಯಲು ಹೋದರೆ ಹೆತ್ತವರು ಮೊಮ್ಮಕ್ಕಳನ್ನು ನೋಡಿಕೊಂಡು ಅಪರೂಪದ ಜೀವನ ಪ್ರೀತಿ ತೋರುತ್ತಾರೆ ಎಂದರು.

ಕರ್ನಾಟಕಕ್ಕೇ ಮಾದರಿ ಎನಿಸುವ ಸಮ್ಮೇಳನವನ್ನು ಡಾ.ಮೋಹನ ಆಳ್ವ ನುಡಿಸಿರಿ ಮೂಲಕ ತೋರಿದ್ದಾರೆ. ಈ ಬಾರಿ ಕರ್ನಾಟಕ ದರ್ಶನ ಬಹುರೂಪಿ ಆಯಾಮಗಳ ಬಗ್ಗೆ ಸಾರ್ಥಕ ಚರ್ಚೆ ನಡೆದಿದೆ, ಸಮಾಜದಲ್ಲಿರುವ ಮತೀಯವಾದಿಗಳಿಗೆ ಇಲ್ಲಿನ ವೈವಿಧ್ಯತೆಯ ಮೂಲಕ ಉತ್ತರ ಸಿಕ್ಕಿದೆ. ಕಲೆಗೆ ಪ್ರೋತ್ಸಾಹ ಎಂಬ ಭಾಷಣದ ಬದಲು ನುಡಿಸಿರಿಯಲ್ಲಿ ನಿಜಾರ್ಥದಲ್ಲಿ ಪೋಷಣೆ ಸಿಕ್ಕಿದೆ ಎಂದರು.

ಸಾಮಾನ್ಯವಾಗಿ ಸಮ್ಮೇಳನಗಳಲ್ಲಿ ರಾಜಕಾರಣಿಗಳು, ಪೊಲೀಸರ ಮುತ್ತಿಗೆ ಇರುತ್ತದೆ, ಹಲವು ಸಮ್ಮೇಳನಗಳಲ್ಲಿ ಅವರ ಹಾವಳಿಯಿಂದ ನಾನು ಕಕ್ಕಾಬಿಕ್ಕಿಯಾಗಿದ್ದೇನೆ, ಆದರೆ ಇಲ್ಲಿ ಶಾಂತಿಯುತ ಸಮ್ಮೇಳನ ನೋಡುವುದಕ್ಕಾಗಿದೆ ಎಂದರು.

ಹಿರಿಯ ಸಾಹಿತಿ, ಚಲನಚಿತ್ರ ನಿರ್ದೇಶಕ ಡಾ.ಚಂದ್ರಶೇಖರ ಕಂಬಾರ, ನುಡಿಸಿರಿ ಉದ್ಘಾಟಿಸಿದ್ದ ಇತಿಹಾಸತಜ್ಞ ಡಾ.ಷ.ಷಟ್ಟರ್, ಶಾಸಕ ಎ.ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೆಗೌಡ, ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ನುಡಿಸಿರಿ ಸಂಘಟಕ ಡಾ.ಎಂ.ಮೋಹನ ಆಳ್ವ ಮೊದಲಾದವರು ಇದ್ದರು.

ನುಡಿಸಿರಿ ಪ್ರಶಸ್ತಿ ಪ್ರದಾನ

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮೆರೆದ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮುಂಬೈಯ ಡಾ.ಜಿ.ಡಿ.ಜೋಶಿ, ಡಾ.ಭಾರತಿ ವಿಷ್ಣುವರ್ಧನ, ಎಲ್.ಬಂದೇನವಾಜ ಖಲೀಫ್ ಆಲ್ದಾಳ ಕಲಬುರಗಿ, ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಫಾ.ಪ್ರಶಾಂತ್ ಮಾಡ್ತ, ಅರುವ ಕೊರಗಪ್ಪ ಶೆಟ್ಟಿ, ಡಾ.ಎ.ವಿ.ನರಸಿಂಹಮೂರ್ತಿ ಮೈಸೂರು, ಡಾ.ಅರುಂಧತಿ ನಾಗ್, ಡಾ.ಕೆ.ರಮಾನಂದ ಬನಾರಿ ಕಾಸರಗೋಡು, ಪ್ರೊ.ಎ.ವಿ.ನಾವಡ, ಹೊ.ನಾ.ರಾಘವೇಂದ್ರ(ಗರ್ತಿಕೆರೆ ರಾಘಣ್ಣ) ಶಿವಮೊಗ್ಗ, ಮೈ.ಶ್ರೀ.ನಟರಾಜ ವಾಷಿಂಗ್ಟನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇಂಗ್ಲಿಷ್ ಕಲಿಸಿದ್ದಕ್ಕೆ ಪಾಪಪ್ರಜ್ಞೆ

ಮಕ್ಕಳಿಗೆ ನಾವು ಥರ್ಡ್‌ರೇಟ್ ಇಂಗ್ಲಿಷ್ ಭಾಷೆ ಕಲಿಸುತ್ತಿದ್ದೇವೆ, ಅದನ್ನೇ ಅನ್ನದ ಭಾಷೆಯಾಗಿ ಮಾಡುತ್ತಿದ್ದೇವೆ, ಇದಕ್ಕೆ ನಮಗೆ ಖುಷಿಯಾಗುವುದಲ್ಲ ಪಾಪಪ್ರಜ್ಞೆ ಕಾಡಬೇಕು ಎಂದು ಹಿರಿಯ ಸಾಹಿತಿ ಡಾ.ಕಂಬಾರ ಹೇಳಿದರು. ಕಳಪೆ ಇಂಗ್ಲಿಷ್ ಕಲಿಸುವ ಮೂಲಕ ನಾವು ಮಕ್ಕಳ ಸೃಜನಶೀಲತೆ ನಾಶ ಮಾಡುತ್ತಿದ್ದೇವೆ, ಇಂಗ್ಲಿಷ್ ಶಿಕ್ಷಣ ಪಡೆಯುವ ಮೂಲಕ ಪ್ರಶ್ನಿಸುವ ಗುಣವನ್ನೇ ಮಕ್ಕಳು ಕಳೆದುಕೊಳ್ಳುತ್ತಿದ್ದಾರೆ, ಇಂಗ್ಲಿಷ್ ಭೂತ ಮತ್ತು ವರ್ತಮಾನ ಕಾಲವನ್ನೇ ಬೇರ್ಪಡಿಸಿದೆ, ಇದು ಎಷ್ಟರಮಟ್ಟಿಗೆ ಎಂದರೆ ನಮ್ಮ ಪರಂಪರೆಯನ್ನೇ ಮಕ್ಕಳು ಪರಕೀಯವಾಗಿ ಯೋಚಿಸುವಷ್ಟರ ಮಟ್ಟಿಗೆ ಬೆಳೆದಿದೆ. ಮೆಕಾಲೆ ಪ್ರವರ್ತಿತ ಶಿಕ್ಷಣ ಪದ್ಧತಿ ನಮಗೆ ಬೇಕೆ? ಈಗಿನ ಭಾರತೀಯ ಶಿಕ್ಷಣ ವ್ಯವಸ್ಥೆ ಬಗ್ಗೆ ನಾವು ಮತ್ತೊಮ್ಮೆ ವಿಮರ್ಶೆ ಮಾಡಬೇಕಾಗಿದೆ ಎಂದು ಕಂಬಾರ ಹೇಳಿದರು.


ಮಹಿಳಾ ಧ್ವನಿಗೆ ‘ಕುಟುಂಬ’ದ ಗುಮ್ಮ

«ಧ್ವನಿ ಉಡುಗಿಸಲು ತಂತ್ರಗಾರಿಕೆ * ಪ್ರಾಧ್ಯಾಪಕಿ ಡಾ.ಎಂ.ಉಷಾ ಆತಂಕ»

ಮೂಡುಬಿದಿರೆ: ಎಲ್ಲೆಲ್ಲಿ ಮಹಿಳೆಯರು ಧ್ವನಿ ಎತ್ತುತ್ತಾರೋ, ಅಲ್ಲೆಲ್ಲ ನಾವೊಂದು ಕುಟುಂಬ ಎಂಬ ಗುಮ್ಮನನ್ನು ತೋರಿಸಿ ಧ್ವನಿ ಉಡುಗಿಸುವ ತಂತ್ರ ನಡೆಯುತ್ತಿದೆ. ವೃತ್ತಿಪರವಾಗಿರುವ ಖಾಸಗಿ, ಸಾರ್ವಜನಿಕ ವಲಯವೂ ಒಮ್ಮೆಲೇ ಕುಟುಂಬವಾಗಿ ಬದಲಾಗುತ್ತದೆ ಎಂದು ಹಂಪಿ ಕನ್ನಡ ವಿವಿ ಪ್ರಾಧ್ಯಾಪಕಿ ಡಾ.ಎಂ.ಉಷಾ ಆತಂಕ ವ್ಯಕ್ತಪಡಿಸಿದರು.

ಆಳ್ವಾಸ್ ನುಡಿಸಿರಿ ರತ್ನಾಕರವರ್ಣಿ ವೇದಿಕೆಯಲ್ಲಿ ಸಮಕಾಲೀನ ಸಂದರ್ಭ- ಮಹಿಳಾ ಬಿಕ್ಕಟ್ಟುಗಳು ಕುರಿತು ವಿಶೇಷೋಪನ್ಯಾಸ ನೀಡಿ, ಮಹಿಳೆಯರ ಕುರಿತ ಯಾವುದೇ ಕಾನೂನು ರೂಪುಗೊಳ್ಳುವ ಮೊದಲು ಜನಾಭಿಪ್ರಾಯ ಮೂಡಿಸಬೇಕಾದ ಅಗತ್ಯವಿದೆ ಎಂದರು.

ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತು ಸಮ್ಮೇಳನಾಧ್ಯಕ್ಷೆ ಡಾ.ಮಲ್ಲಿಕಾ ಎಸ್.ಘಂಟಿ ಅವರು ತಮ್ಮ ಅಧ್ಯಕ್ಷೀಯ ಭಾಷಣ ವೇಳೆ ಮಂಡಿಸಿದ ವಿಚಾರವನ್ನು ಬೆಂಬಲಿಸಿದ ಡಾ.ಉಷಾ, ಅದೇ ದಿನ ತಸ್ಲೀಮಾ ನಸ್ರೀನ್ ಮಾಡಿದ ಟ್ವೀಟ್ ಬಗ್ಗೆಯೂ ಗಮನ ಸೆಳೆದರು. ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು ಗಾಂಧಿ ಮಾರ್ಗ ಅನುಸರಿಸಿ ನಡೆಯುತ್ತಿದೆ ಎಂದಾದರೆ ಗಾಂಧಿಗಿರಿ ಎಂದು ಬಗೆದು ಏನು ಬೇಕಾದರೂ ಮಾಡಬಹುದೇ ಎಂದು ಪ್ರಶ್ನಿಸುವ ಜೊತೆಗೆ ಶಬರಿಮಲೆಗೆ ಪ್ರವೇಶ ಬಯಸಿ ಹೊರಟಿರುವ ಮಹಿಳೆಯರು ನಿಜವಾಗಿಯೂ ಭಕ್ತರೇ? ಹಾಗಾದರೆ ಅವರು ಯಾರು ಎಂಬ ಗೊಂದಲವಿದೆ ಎಂಬ ದ್ವಂದ್ವವನ್ನೂ ಜನರ ಮುಂದಿಟ್ಟರು. ಇಂಥ ಸೂಕ್ಷ್ಮ ವಿಷಯದಲ್ಲಿ ಕಾಯ್ದೆ ಆಗಬೇಕಾದರೆ ಜನಾಭಿಪ್ರಾಯ ರೂಪುಗೊಳ್ಳಬೇಕು. ಮಹಿಳೆಯರು ಮೂರು ದಿನ’ ತಮ್ಮ ಮನೆಯ ದೇವರನ್ನು ಮೊದಲು ಮುಟ್ಟಿ ಇದರಿಂದ ನಮಗೆ ಯಾವುದೇ ತೊಂದರೆ ಆಗಿಲ್ಲ ಎಂಬುದನ್ನು ಸಮಾಜದ ಮುಂದೆ ತೋರಿಸಿ ಈ ವಿಷಯದಲ್ಲಿ ಜನಾಭಿಪ್ರಾಯ ಮೂಡಿಸಬೇಕು. ಆದರೆ ಇದು ವ್ಯವಸ್ಥಿತವಾಗಿ ಆಗುತ್ತಿಲ್ಲ ಎಂದರು. ಸಮ್ಮೇಳನಾಧ್ಯಕ್ಷೆ ಮಲ್ಲಿಕಾ ಘಂಟಿ ಉಪಸ್ಥಿತರಿದ್ದರು.

ಮೀ ಟೂ ಚಳವಳಿ ಪರ-ವಿರೋಧ

ಮೀ ಟೂ ವಿಷಯದಲ್ಲಿ ವಾದ-ವಿವಾದ, ಚರ್ಚೆ, ಆರೋಪ -ಪ್ರತ್ಯಾರೋಪಗಳು ನಡೆದಿವೆ. ಆದರೆ ಈ ವಿಷಯದಲ್ಲಿ ಮಹಿಳೆಯರ ಧ್ವನಿ ಅಡಗಿಸಲು ಚಿತ್ರರಂಗ ಒಂದು ಕುಟುಂಬವಿದ್ದಂತೆ ಎಂಬ ಅಂಶವನ್ನು ಮುನ್ನೆಲೆಗೆ ತರಲಾಯಿತು. ಮಹಿಳೆ ತಮ್ಮ ಮನೆಯೊಳಗಿನ ವಿಷಯ ಹೊರಗೆ ಹೇಳಬಾರದು ಎಂಬ ಕಟ್ಟುಪಾಡು ಪಾಲಿಸಬೇಕೆಂದು ಕುಟುಂಬದ ಕಲ್ಪನೆ ತರಲಾಗಿದೆ. ಅಂದರೆ ಮಹಿಳೆಯರು ದೌರ್ಜನ್ಯದ ಬಗ್ಗೆ ಮಾತನಾಡುವಾಗ ಅವರ ಧ್ವನಿ ಕಡಿಮೆ ಮಾಡಲು ತಂತ್ರಗಾರಿಕೆಯಾಗಿ ಕುಟುಂಬ ಪರಿಕಲ್ಪನೆ ಮುನ್ನೆಲೆಗೆ ಬರುತ್ತಿದೆ ಎಂದು ಉಷಾ ಆತಂಕ ವ್ಯಕ್ತಪಡಿಸಿದರು.