ಬದುಕಿನ ಪಲ್ಲಟಕ್ಕೆ ಚಾರಿತ್ರ್ಯ ನಿರ್ಮಾಣದ ಉತ್ತರ

«ಹಣದ ಭ್ರಮೆ, ಪಾಶ್ಚಾತ್ಯರ ಅನುಸರಣೆ ಬಗ್ಗೆ ಚಿಂತನೆಗೆ ಹಚ್ಚಿದ ನುಡಿಸಿರಿ»

ಮೋಹನ್‌ದಾಸ್ ಮರಕಡ, ಮೂಡುಬಿದಿರೆ
ನಾಲ್ಕು ದಿಕ್ಕುಗಳಿಂದಲೂ ಹರಿದು ಬಂದ ಜನಸಾಗರದ ಮಧ್ಯೆ ಮಕ್ಕಳಲ್ಲಿ ವ್ಯಕ್ತಿತ್ವ, ಚಾರಿತ್ರ್ಯ ನಿರ್ಮಾಣದ ವಿಷಯದಲ್ಲಿ ಗಂಭೀರ ಚಿಂತನೆ, ಪಾಶ್ಚಾತ್ಯರ ಅಂಧಾನುಕರಣೆ, ಹೊಸ ವಸ್ತುಗಳ ಆಗಮನದಿಂದ ಬದುಕಿನಲ್ಲಿ ಪಲ್ಲಟಗಳಾಗುತ್ತಿವೆ. ಯೂಸ್ ಆ್ಯಂಡ್ ತ್ರೋ ಎಂಬ ಗುಲಾಮಗಿರಿ ನಮ್ಮ ಬದುಕು ಆವರಿಸುತ್ತಿದೆ ಎಂಬ ವಾಸ್ತವಾಂಶದ ಮೇಲೆ ಬೆಳಕು ಚೆಲ್ಲುವಂತೆ ಮಾಡಿದ್ದು ಆಳ್ವಾಸ್ ನುಡಿಸಿರಿ 2018ರ ಎರಡನೇ ದಿನದ ಕಾರ್ಯಕ್ರಮ.
ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಸರ್ಟಿಫಿಕೆಟ್ ಕೊಡುವ ಕಾರ್ಖಾನೆಗಳಾಗಿವೆ. ಮೌಲ್ಯ ಕಲಿಸುವ ಶಿಕ್ಷಣ ಸಂಸ್ಥೆಗಳು ಇಂದು ಕಡಿಮೆಯಾಗುತ್ತಿವೆ ಎಂಬ ಗಂಭೀರ ವಿಷಯ ಪ್ರಸ್ತಾಪಿಸಿದ ಪ್ರೊ.ಜಿ.ಬಿ.ಶಿವರಾಜು, ಆಧುನಿಕ ಶೈಕ್ಷಣಿಕ ಪದ್ಧತಿ ಮೇಲೆ ಬೆಳಕು ಚೆಲ್ಲಿದರು. ಒಂದು ದೇಶದ ಸಂಪತ್ತು ಅಲ್ಲಿರುವ ಚಿನ್ನ, ಬೆಳ್ಳಿಗಳಲ್ಲ, ಆ ದೇಶದಲ್ಲಿರುವ ಚಿನ್ನದಂಥ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳು. ಉತ್ತಮ ಶಿಕ್ಷಣ ಸಿಕ್ಕಿದರೆ ಒಳ್ಳೆಯ ವ್ಯಕ್ತಿತ್ವ ನಿರ್ಮಾಣ ಮಾಡಬಹುದು ಎಂಬ ಅಂಶಗಳ ಬಗ್ಗೆ ಬೆಳಕು ಚೆಲ್ಲುವ ಮೂಲಕ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಏನು ಕಲಿಸಬೇಕು ಎಂಬುದರ ಸೂಕ್ಷ್ಮಪ್ರತಿಪಾದಿಸಿದರು.
ಪಾಶ್ಚಾತ್ಯ ದೇಶಗಳು ಭಾರತದ ಸಂಸ್ಕೃತಿ, ಇಲ್ಲಿನ ಆಚಾರ-ವಿಚಾರ ಅನುಸರಿಸಲು ಮುಂದಾಗುತ್ತಿರುವಾಗ ನಾವು ವಿದೇಶದ ಸಂಸ್ಕೃತಿ ಕಡೆಗೆ ಒಲವು ಬೆಳೆಸುತ್ತಿರುವ ಬಗ್ಗೆ ಆತಂಕ ವ್ಯಕ್ತವಾದುದು ದಿನದ ಹೈಲೈಟ್ಸ್. ಎರಡು ವಿಶೇಷೋಪನ್ಯಾಸಗಳಲ್ಲಿ ಈ ಅಂಶದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಗಮನ ಸೆಳೆದರು. ಭಾರತದ ನೈತಿಕ ನೆಲೆಗಟ್ಟು ಬೇರಾವ ದೇಶದಲ್ಲೂ ಇಲ್ಲ ಎಂದು ಹಿಂದೆಯೂ, ಈಗಲೂ ದೇಶೀಯ ಚಿಂತಕರು, ವಿದೇಶದ ಪ್ರಮುಖರು ಪ್ರತಿಪಾದಿಸುವಾಗ, ನಾವು ಮಕ್ಕಳಲ್ಲಿ ಹಣದ ಭ್ರಮೆ ಸೃಷ್ಟಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ಶಿಕ್ಷಣ ಮತ್ತು ಸಾಮರಸ್ಯ ವಿಷಯದಲ್ಲಿ ಮಾತನಾಡಿದ ಬಿ.ಗಣಪತಿ, ಮಾತೃಭಾಷೆ ಶಿಕ್ಷಣ ಬಗ್ಗೆ ಗಮನ ಸೆಳೆದರು. ಒಟ್ಟು ಎರಡನೇ ದಿನ ಕರ್ನಾಟಕ ದರ್ಶನ-ಬಹುರೂಪಿ ಆಯಾಮಗಳು ವಿಷಯದಲ್ಲಿ ಧ್ವನಿಸಿದ್ದು ಭಾರತೀಯತೆಯ ತುಡಿತ.
ಸಾಯಂಕಾಲ ನನ್ನ ಕಥೆ ನಿಮ್ಮ ಜೊತೆ ಹಂಚಿಕೊಂಡ ಮಂಗಳಮುಖಿ ಎ.ರೇವತಿ ಚೆನ್ನೈ ತನ್ನ ಮಾನಸಿಕ ತುಮುಲಗಳನ್ನು ಬಣ್ಣಿಸುತ್ತ ನೆರೆದಿದ್ದ ಸಭಿಕರಲ್ಲಿ ಮಂಗಳಮುಖಿಯರ ಕುರಿತ ಜನರ ಭಾವದ ಬಗ್ಗೆ ಮಾತನಾಡಿದರು.

ಸಾಫ್ಟ್‌ವೇರ್-ಹಾರ್ಡ್‌ವೇರ್
ನಮ್ಮ ಮಕ್ಕಳು ಸಾಫ್ಟ್‌ವೇರ್ ಇಂಜಿನಿಯರ್ ಆಗಬೇಕೆಂದು ಹೆಚ್ಚಿನ ಹೆತ್ತವರು ಬಯಸುತ್ತಾರೆ. ಆಧುನಿಕ ಕಾಲದ ಓಘದಲ್ಲಿ ಇದು ಸಹಜ. ಆದರೆ, ಸಾಫ್ಟ್‌ವೇರ್‌ನ ಕೆಟ್ಟ ಆಸೆಯಿಂದ ಜೀವನ ಹಾರ್ಡ್‌ವೇರ್ ಆಗುತ್ತಿದೆ. ಸಾಫ್ಟ್‌ವೇರ್‌ನ ಭರದಲ್ಲಿ ಚಾರಿತ್ರ್ಯ ನಿರ್ಮಾಣದ, ಮೌಲ್ಯ ಕಲಿಸಿಕೊಡುವ ಒತ್ತಾಸೆ ಕರಗುತ್ತಿದೆ ಎಂಬ ಅಂಶವೂ ನುಡಿಸಿರಿ ಎರಡನೇ ದಿನದ ವಿಶೇಷೋಪನ್ಯಾಸದಲ್ಲಿ ವ್ಯಕ್ತವಾಯಿತು. ಹಂಚಿಕೊಂಡು ತಿನ್ನುವ ಪರಿಕಲ್ಪನೆ ಹಳ್ಳಿ ಬದುಕಿನಲ್ಲಿತ್ತು, ಆಧುನಿಕ ಕಾಲದಲ್ಲಿ ಸಹಬಾಳ್ವೆಯ ಚಿಂತನೆ ಇದೆಯೇ? ಸ್ವಾರ್ಥಕೇಂದ್ರಿತ ಬದುಕು ಸಹಬಾಳ್ವೆಯ ಚಿಂತನೆಯನ್ನು ಕೊಲ್ಲುತ್ತಿದೆ ಎಂಬ ಸೂಕ್ಷ್ಮವೂ ಸುಳಿದು ಹೋಯಿತು.

ಕೀಳರಿಮೆ, ಗುಲಾಮರ ಮನೋಭಾವ
ಪಾಶ್ಚಾತ್ಯದ ಅನುಕರಣೆ ನಮ್ಮ ಮನಸ್ಸಿನಲ್ಲಿ ಕೀಳರಿಮೆಯ, ಗುಲಾಮಗಿರಿಯ ಮನೋಭಾವ ಸೃಷ್ಟಿಸಿದೆ. ಇದರಿಂದ ನಾವು ಸ್ವಾಭಿಮಾನದ, ಆತ್ಮವಿಶ್ವಾಸದ ಶಕ್ತಿ ಕಳೆದುಕೊಂಡಿದ್ದೇವೆ. ಆಡುವ ಮಾತು, ತಿನ್ನುವ ಆಹಾರ, ಉಡುಗೆ -ತೊಡುಗೆಯಲ್ಲೂ ಕೀಳರಿಮೆ ಹೊಂದುತ್ತಿದ್ದೇವಲ್ಲವೇ ಎಂದು ಚಿಂತನೆಗೆ ಹಚ್ಚಿದ್ದು ನರಹಳ್ಳಿ ಬಾಲಸುಬ್ರಹ್ಮಣ್ಯ. ಆಹಾರದ ಗುಲಾಮಿ ಮನೋಭಾವ ಎಷ್ಟು ಮುಂದುವರಿದಿದೆ ಎಂದರೆ ಅವನ ಬದುಕೇ ಚಿತ್ರಾನ್ನ ಆಗೋಗಿದೆ’ ಎಂಬ ಪದಪ್ರಯೋಗದ ತನಕ ಮುಂದುವರಿದಿದೆ ಎಂಬ ನಿದರ್ಶನದ ಮೂಲಕ ದೇಶೀಯ ಸಂಸ್ಕೃತಿ ಸತ್ವ ಕಳೆದುಕೊಳ್ಳುತ್ತಿದೆ ಎಂಬ ಸೂಕ್ಷ್ಮವನ್ನೂ ಪ್ರತಿಪಾದಿಸಿದರು.

ನಾಲ್ದೆಸೆಯಿಂದ ಜನಸಾಗರ
ಎರಡನೇ ದಿನ ಆಳ್ವಾಸ್‌ಗೆ ಹರಿದುಬಂದದ್ದು ನಾಲ್ದೆಸೆಯ ಜನಸಾಗರ. ಒಂದೆಡೆ ಏಳು ವೇದಿಕೆಗಳಲ್ಲಿ ಕಾರ್ಯಕ್ರಮ… ಇನ್ನೊಂದೆಡೆ ಬೃಹತ್ ಜನಸ್ತೋಮ. ಆದರೆ ಎಲ್ಲೂ ಕೊಂಚವೂ ಲೋಪವಿಲ್ಲ. ಸೂರ್ಯ ಪಡುವಣ ದಿಕ್ಕಿಗೆ ನಿಧಾನವಾಗಿ ಸರಿಯುತ್ತಿದ್ದಂತೆ ಜನರ ಹರಿವು ಹೆಚ್ಚುತ್ತಲೇ ಹೋಯಿತು. ಎಲ್ಲ ಏಳು ಸಭಾಂಗಣವೂ ಸಾಯಂಕಾಲವಾಗುವಾಗ ಭರ್ತಿ. ಇವೆಲ್ಲದರ ನಡುವೆಯೇ ಸಾವಿರಾರು ವಿದ್ಯಾರ್ಥಿಗಳು ವಿಜ್ಞಾನ ಸಿರಿ, ಕೃಷಿ ಸಿರಿ ವೀಕ್ಷಿಸಿದರು. ವಿದ್ಯುದ್ದೀಪಗಳಿಂದ ಅಲಂಕೃತ ವಿದ್ಯಾಗಿರಿ ಕ್ಯಾಂಪಸ್‌ನೊಳಗಡೆ ವಿಚಾರದ ಮಥನ ಬಳಿಕ ಸಾಂಸ್ಕೃತಿಕ ರಸದೌತಣ ಕಣ್ತುಂಬಿಕೊಂಡವರು ಹಲವು ಸಾವಿರ ಜನರು.

ಇಂದು ಸಮಾರೋಪ
ಎರಡು ದಿನ ಲಕ್ಷಾಂತರ ಜನರನ್ನು ತನ್ನ ಕಕ್ಷೆಯೊಳಗೆ ಸೇರಿಸಿಕೊಂಡ ಆಳ್ವಾಸ್ ನುಡಿಸಿರಿ ನ.18ರಂದು ಸಮಾಪನಗೊಳ್ಳಲಿದೆ. ಜಾನಪದ ಪರಂಪರೆಯ ಮೂರು ಗೋಷ್ಠಿಗಳು, ಸಮಕಾಲೀನ ಸಂದರ್ಭ: ಮಹಿಳಾ ಬಿಕ್ಕಟ್ಟುಗಳು ಬಗ್ಗೆ ಡಾ.ಎಂ.ಉಷಾ(ಬೆಳಗ್ಗೆ 9.40-10.15), ಸಾಮಾಜಿಕ ಜಾಲತಾಣ ಬಗ್ಗೆ ರೋಹಿತ್ ಚಕ್ರತೀರ್ಥ(ಬೆಳಗ್ಗೆ 11-11.35), ವಸಂತ ಕಜೆಯವರಿಂದ ಐಟಿಯಿಂದ ಮೇಟಿಗೆ ಈ ಮೂರು ವಿಶೇಷೋಪನ್ಯಾಸ(ಮಧ್ಯಾಹ್ನ 12.20-12.55) ಇವೆ. ಸಾಯಂಕಾಲ 4ಕ್ಕೆ ನುಡಿಸಿರಿ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ.

 

ದರಿದ್ರ ರಾಜಕಾರಣದಿಂದ ರಾಜ್ಯದ ಅಖಂಡತೆಗೆ ಪೆಟ್ಟು

«ವಿಶೇಷೋಪನ್ಯಾಸದಲ್ಲಿ ಮಾಜಿ ಶಾಸಕ ವೈ.ಎಸ್.ವಿ. ದತ್ತ ಅಭಿಪ್ರಾಯ»

ಯಶೋಧರ ಬಂಗೇರ, ಮೂಡುಬಿದಿರೆ
ರಾಜ್ಯದ ಸ್ಥಿತಿಗತಿ ಕುರಿತ ಅಂಕಿ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಎಲ್ಲ ಕಡೆಗೂ ಅನುದಾನ, ಸಂಪತ್ತಿನ ಸಮಾನ ಹಂಚಿಕೆ ಆಗಬೇಕು. ಅದು ಬಿಟ್ಟು ಸ್ವಾರ್ಥ ಸಾಧನೆಗಾಗಿ ಜಾತಿ, ಪಕ್ಷದ ಹೆಸರಿನಲ್ಲಿ ಜನರನ್ನು ವಿಂಗಡಿಸಿ ಪ್ರತ್ಯೇಕತೆ ಸೃಷ್ಟಿಸುವ ದರಿದ್ರ ರಾಜಕಾರಣ ಮಾಡಿದರೆ ಕನ್ನಡದ ಅಸ್ಮಿತೆ, ಅಖಂಡ ಕರ್ನಾಟಕದ ಪರಿಕಲ್ಪನೆಗೆ ಪೆಟ್ಟು ಬೀಳುತ್ತದೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಅಭಿಪ್ರಾಪಟ್ಟರು.
ಆಳ್ವಾಸ್ ನುಡಿಸಿರಿ ಎರಡನೇ ದಿನವಾದ ಶನಿವಾರ ಅಖಂಡ ಕರ್ನಾಟಕ ವಿಶೇಷೋಪನ್ಯಾಸದಲ್ಲಿ ವಿಚಾರ ಮಂಡಿಸಿದರು.
ಸಂಪತ್ತಿನ ಕೇಂದ್ರೀಕರಣ ಅಖಂಡತೆಗೆ ದೊಡ್ಡ ಸವಾಲು. ವ್ಯಕ್ತಿ ಪ್ರತಿಷ್ಠೆಯ ಮೂರ್ಖತನ ಆರ್ಥಿಕತೆಯ ವಿಕೇಂದ್ರೀಕರಣಕ್ಕೆ ಅಡ್ಡಿ ಮಾಡಿವೆ, ಮಾಡುತ್ತಿದೆ. ಇದನ್ನು ಹೋಗಲಾಡಿಸಲು ಭೌಗೋಳಿಕ ರಾಜಕೀಯ ವ್ಯವಸ್ಥೆಯೊಳಗೆ ಪ್ರಾದೇಶಿಕ ಸಮಾನತೆ ಕಾಪಾಡುವ ಏಕರೂಪತೆ ಬರಬೇಕು. ಹೋಬಳಿಗಳು, ಗ್ರಾಮ ಪಂಚಾಯಿತಿಗಳ ಪರಿಧಿ ಹಾಗೂ ವಿಸ್ತಾರಗಳನ್ನು ಪುನಃವಿಮರ್ಶೆ ಮಾಡಿ ಅಖಂಡ ಕರ್ನಾಟಕಕ್ಕೆ ಸುವ್ಯವಸ್ಥಿತ ಆಡಳಿತ ವ್ಯವಸ್ಥೆ ಕೊಟ್ಟಾಗ ಮಾತ್ರ ಸರ್ಕಾರ ನೀಡುವ ಅನುದಾನದ ಸಮರ್ಪಕ ವಿತರಣೆ ಸಾಧ್ಯ ಎಂದರು.
ಕೆಂಗಲ್ ಹನುಮಂತಯ್ಯ ಅವರಂಥ ಮಹಾನ್ ವ್ಯಕ್ತಿಗಳ ಪರಿಶ್ರಮದಿಂದ ಹುಟ್ಟಿಕೊಂಡ ಅಖಂಡ ಕರ್ನಾಟಕದಲ್ಲಿ ಪ್ರಸ್ತುತ ರಾಜಕಾರಣ, ಜಾತಿ, ಧರ್ಮ, ಸ್ವಾರ್ಥಗಳಿಂದ ಮಾತ್ರವಲ್ಲ, ಮುಖ್ಯವಾಗಿ ಸಂಪತ್ತಿನ ಕ್ರೋಡೀಕರಣದಿಂದ ಬೇಸತ್ತ ರಾಜ್ಯದ ಜನ ಪ್ರತ್ಯೇಕ ರಾಜ್ಯಗಳ ಬೇಡಿಕೆ ಇಡುತ್ತಿದ್ದಾರೆ. ರಾಜಕೀಯ ನಾಯಕರು ಅಖಂಡ ಕರ್ನಾಟಕದಲ್ಲಿ ಹಿಂದುಳಿದ ಪ್ರದೇಶಗಳು ಸರಿಸಮಾನ ಅಭಿವೃದ್ಧಿ ಹೊಂದಲು ಗಮನ ಕೊಡಬೇಕು ಎಂಬ ಗಹನ ಚಿಂತನೆ ಹೊಮ್ಮಿಸಿದರು.

ಬ್ಯಾಂಕ್ ಠೇವಣಿ ಇದ್ದರೂ ಇಲ್ಲ ಅಭಿವೃದ್ಧಿ!
2011-12ನೇ ಸಾಲಿನ ಕರ್ನಾಟಕ ರಾಜ್ಯದಲ್ಲಿನ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಠೇವಣಿಯ ಅಂಕಿ ಅಂಶಗಳನ್ನು ಗಮನಿಸಿದಾಗ ರಾಜ್ಯದ ಹಿಂದುಳಿದ ಜಿಲ್ಲೆಗಳು ಎಂದು ಕರೆಯಲ್ಪಡುವ ಬೆಳಗಾವಿ, ಕಾರವಾರ, ಬಳ್ಳಾರಿ, ಉತ್ತರ ಕನ್ನಡ, ಕಲಬುರಗಿ, ಬಾಗಲಕೋಟೆ, ರಾಯಚೂರು, ಹಾವೇರಿ, ಬೀದರ್, ಗದಗಗಳಲ್ಲಿ 2000 ಕೋಟಿ ರೂ.ಗಿಂತ ಹೆಚ್ಚಿನ ಬ್ಯಾಂಕ್ ಠೇವಣಿ ಇದ್ದು, ನಗರೀಕರಣದ ವಿಷಯಕ್ಕೆ ಹೋಲಿಸಿದರೆ ಈ ಜಿಲ್ಲೆಗಳು ಅಭಿವೃದ್ಧಿ ಪಥದಲ್ಲಿವೆ. ಆದರೆ ಬಡತನದ ವಿಷಯಕ್ಕೆ ಬಂದಾಗ ಅಲ್ಲಿನ ಸಮಸ್ಯೆಗಳ ವಾಸ್ತವ ಅರ್ಥವಾಗುತ್ತದೆ. ರಾಜ್ಯದ ಸರಾಸರಿ ಬಡತನ ದರ ಶೇ.21.2 ಆಗಿದ್ದು, ಈ ಎಲ್ಲ ಜಿಲ್ಲೆಗಳಲ್ಲಿ ಬ್ಯಾಂಕ್ ಠೇವಣಿ ಹೆಚ್ಚಾಗಿದ್ದರೂ ಬಡತನ ದರ 40ರ ಆಸುಪಾಸಿನಲ್ಲಿದೆ. ಬಡತನ ಸಮಸ್ಯೆಗೆ ಪ್ರಮುಖ ಕಾರಣ ಸಂಪತ್ತು ಕೆಲವೇ ಜನರ ಕೈಯಲ್ಲಿ ಕ್ರೋಡೀಕರಣವಾಗಿರುವುದು ಎಂದು ಉತ್ತರದ ವಾಸ್ತವ ತೆರೆದಿಟ್ಟರು.

ಜಾತಿ, ಧರ್ಮ, ಸ್ವಾರ್ಥ, ರಾಜಕಾರಣಗಳಂಥ ಕುಂಠಿತ ಮನೋಭಾವಗಳಿಗೆ ಬೆಲೆ ನೀಡದೆ ಅಖಂಡ ಕರ್ನಾಟಕದ ಉಳಿವು ಹಾಗೂ ಉತ್ತರ ಕರ್ನಾಟಕದ ಜನರ ಅಪನಂಬಿಕೆಗಳನ್ನು ಹೋಗಲಾಡಿಸುವಲ್ಲಿ ರಾಜಕಾರಣಗಳು ಕಾರ್ಯನಿರ್ವಹಿಸಬೇಕು.
ವೈ.ಎಸ್.ವಿ.ದತ್ತ, ಮಾಜಿ ಶಾಸಕ

 

ಭಾವನೆಗಳು ಹೆಣ್ಣಾಗಿದ್ದದ್ದು ನನ್ನ ತಪ್ಪೇ?

«‘ನನ್ನ ಕಥೆ ನಿಮ್ಮ ಜೊತೆ’ಯಲ್ಲಿ ಮಂಗಳಮುಖಿ ಎ.ರೇವತಿ ಪ್ರಶ್ನೆ»

ಭರತ್‌ರಾಜ್ ಸೊರಕೆ, ಮೂಡುಬಿದಿರೆ
ಗಂಡಾಗಿ ಹುಟ್ಟಿದರೂ ಭಾವನೆಗಳು ಹೆಣ್ಣಾಗಿದ್ದದ್ದು ನನ್ನ ತಪ್ಪೇ? ಯಾರೂ ಕೆಲಸ ಕೊಡದಿದ್ದಾಗ ಹೊಟ್ಟೆ ತುಂಬಿಸಿಕೊಳ್ಳಲು ಲೈಂಗಿಕ ಕಾರ್ಯಕರ್ತೆಯಾದೆ…
– ಚೆನ್ನೈಯ ಮಂಗಳಮುಖಿ ಎ.ರೇವತಿ ತಮ್ಮ ಬದುಕಿನಲ್ಲಿ ಅನುಭವಿಸಿದ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದಂತೆ ಸಭಾಂಗಣ ಭಾವುಕವಾಯಿತು. ಸಮ್ಮೇಳನಾಧ್ಯಕ್ಷರು ಸೀರೆಯಂಚಿನಲ್ಲಿ ಕಣ್ಣೀರು ಒರೆಸಿಕೊಂಡರು.
ಅಪ್ಪ ಅಮ್ಮನಿಗೆ ನಾವು 4 ಮಕ್ಕಳು. ನಾನು ಕೊನೆಯವ. ಹುಟ್ಟುವಾಗ ಗಂಡಾಗಿದ್ದೆ. ಅಣ್ಣ ನಮ್ಮದೇ ಲಾರಿ ಓಡಿಸುತ್ತಿದ್ದ. ನಾನು, ಅಕ್ಕ ಓದುತ್ತಿದ್ದೆವು. ಕ್ಲಾಸ್ ರೂಂನಲ್ಲಿ ನನ್ನನ್ನು ಎಲ್ಲರೂ ವಿಚಿತ್ರವಾಗಿ ನೋಡುತ್ತಿದ್ದರು. ಹಾವ, ಭಾವ ಹುಡುಗಿಯರ ಥರ ಇತ್ತು. ಹೀಗಾಗಿ ಎಲ್ಲರೂ ತಮಾಷೆ ಮಾಡುತ್ತಿದ್ದರು. ವಿಜ್ಞಾನ ಟೀಚರ್ ಉದಾಹರಣೆ ಕೊಡುವ ಸಂದರ್ಭ ನನ್ನನ್ನು ತೋರಿಸಿ ತಮಾಷೆ ಮಾಡುತ್ತಿದ್ದರು. ಇದು ತುಂಬ ನೋವು ಉಂಟುಮಾಡುತ್ತಿತ್ತು. ನಾನು ಎಲ್ಲರಿಗಿಂತ ಭಿನ್ನ ಎಂದು ನನಗೂ ಅನ್ನಿಸಿದುಂಟು. ಹುಡುಗರ ಜತೆ ಮೂತ್ರ ಮಾಡಲು ಹೋಗಲೂ ಮುಜುಗರ.
ಬರುಬರುತ್ತಾ ಹುಡುಗಿರ ಥರ ಬಟ್ಟೆ ಹಾಕಬೇಕೆಂಬ ಆಸೆ ಶುರುವಾಯಿತು. ಹೈಸ್ಕೂಲ್‌ನಲ್ಲಿರುವಾಗ ನಾಗೇಶ್ ಎಂಬ ಹುಡುಗನ ಬಗ್ಗೆ ಪ್ರೇಮ ಕವನ ಬರೆದೆ. ಹುಡುಗನೋರ್ವ ಹುಡುಗನಿಗೆ ಪ್ರೇಮ ಕವನ ಬರೆಯುವುದು ನನಗೂ ವಿಚಿತ್ರ ಎನಿಸುತ್ತಿತ್ತು. ನಾನು ಹೆಣ್ಣೇ, ಗಂಡೇ ಎಂಬ ಗೊಂದಲದಿಂದ 10ನೇ ತರಗತಿ ಪಾಸ್ ಮಾಡಲೂ ಸಾಧ್ಯವಾಗಲಿಲ್ಲ.
ಕೊನೆಗೆ ಪತ್ರಿಕೆಗಳಲ್ಲಿ ಬರುತ್ತಿದ್ದ ಮಾಹಿತಿ ಹಿಡಿದು ಮಂಗಳಮುಖಿ ಸಮುದಾಯ ಸೇರಿಕೊಳ್ಳುವ ಮನಸ್ಸು ಮಾಡಿದೆ. ಮನೆಯಿಂದ ತಪ್ಪಿಸಿಕೊಂಡು ದಿಂಡಿಕಲ್‌ನಲ್ಲಿ ನನ್ನ ಸಮುದಾಯದವರನ್ನು ಭೇಟಿ ಮಾಡಿದೆ. ಬಳಿಕ ಸಮುದಾಯದ ಗುರುಗಳನ್ನು ಭೇಟಿ ಮಾಡಲು ದೆಹಲಿಗೆ ಹೋದೆ. ಖರ್ಚಿಗೆಂದು ಅಮ್ಮನ ಓಲೆಗಳನ್ನು ಮಾರಿ ಓಡಿ ದೆಹಲಿ ಸೇರಿದೆ. ಇಲ್ಲಿಯೇ ನಾನು ಮೊದಲು ಸೀರೆ ಉಟ್ಟಿದ್ದು.
ಸಮುದಾಯದ ಗುರುಗಳ ಸೂಚನೆಯಂತೆ ಭಿಕ್ಷೆ ಬೇಡಲು ಶುರು ಮಾಡಿದೆ. ಮೊದಮೊದಲು ಇದು ಕಷ್ಟವೆನಿಸಿದರೂ ಬದುಕಿಗೆ ಅನಿವಾರ್ಯವಾಯಿತು. ಒಬ್ಬ ಮಲೆಯಾಳಿ ಅಂಗಡಿಯವನ ಮುಖಾಂತರ ಮನೆಯವರ ಜತೆ ಪತ್ರ ವ್ಯವಹಾರ ಇಟ್ಟುಕೊಂಡಿದ್ದೆ. ಒಮ್ಮೆ ಅಮ್ಮನಿಗೆ ಹುಷಾರಿಲ್ಲ ಎಂದು ನನಗೆ ಪತ್ರ ಬಂದಿತು. ಸುಳ್ಳಿನ ಅರಿವಿಲ್ಲದೆ ಮನೆಗೆ ಹೋದಾಗ ಅಮ್ಮ ಹುಷಾರಿದ್ದಳು. ಅಣ್ಣ ಕೋಪದಿಂದ ನನಗೆ ಕ್ರಿಕೆಟ್ ಬ್ಯಾಟಿನಿಂದ ಮೈ ಮೇಲೆ ರಕ್ತ ಬರುವಂತೆ ಹೊಡೆದ. ಆಗ ರೂಮಿಗೆ ಹೋಗಿ ಬಾಗಿಲು ಹಾಕಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನವನ್ನೂ ಮಾಡಿದೆ. ಬಳಿಕ ಮುಂಬೈಗೆ ಹೋದೆ. ಅಲ್ಲಿ ರೌಡಿಗಳು ನನ್ನ ಮೇಲೆ ಅಟ್ಯಾಕ್ ಮಾಡಿದರು. ಬೆಂಗಳೂರಿಗೆ ಬಂದಾಗ ಪೊಲೀಸರು ಬೆತ್ತಲೆ ಮಾಡಿ ಕಿರುಕುಳ ಕೊಟ್ಟರು.
1992ರಲ್ಲಿ ಬೆಂಗಳೂರಿನಲ್ಲಿ ಸಂಗಮ ಲೈಂಗಿಕ ಅಲ್ಪಸಂಖ್ಯಾತ ಹಕ್ಕುಗಳ ಹೋರಾಟ ಸಂಸ್ಥೆಗೆ ಸೇರಿ 2,500 ರೂ.ಗೆ ಕೆಲಸ ಆರಂಭಿಸಿದೆ. ಸಂಗಮ ಸೇರಿದ ಬಳಿಕ ನನ್ನಂತೆ ಶೋಷಿತ ಸಮಾಜಕ್ಕಾಗಿ ಕೆಲಸ ಮಾಡಲಾರಂಭಿಸಿದೆ. ನಾನು ಪುಸ್ತಕ ಬರೆದ ಬಳಿಕ ಹಲವಾರು ಮಂಗಳಮುಖಿಯರು ಪ್ರೇರಿತರಾಗಿ ಪುಸ್ತಕ ಬರೆದರು. ಈಗ ನಮ್ಮ ಸಮಾಜದವರು ವೈದ್ಯರಾಗಿದ್ದಾರೆ. ಉನ್ನತ ಸರ್ಕಾರಿ ಕೆಲಸದಲ್ಲಿ ಕಾಣುವಾಗ ಹೆಮ್ಮೆ ಎನಿಸುತ್ತದೆ.

ಅಂದು ಮನೆ ಬಿಟ್ಟು ಓಡಿ ಹೆಣ್ಣಾಗಲು ಪ್ರಯತ್ನಿಸಿದಾಗ ಅಮ್ಮ ಹೇಳಿದ್ದಳು. ಮಗಾ….ಹೆಣ್ಣು ಯಾವತ್ತೂ ಸುಖವಾಗಿ ಇರುವುದಿಲ್ಲ. ನೀನ್ಯಾಕೆ ಹೆಣ್ಣಾಗಲು ಪ್ರಯತ್ನಿಸುವೆ ಎಂದು. ನನಗೆ ಅಮ್ಮನ ಮಾತು ಈಗಲೂ ಸತ್ಯ ಎನಿಸುತ್ತಿದೆ. ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ನಿರಂತರ ಅತ್ಯಾಚಾರ, ಕಿರುಕುಳಗಳು ನಡೆಯುತ್ತಿವೆ.
– ಎ.ರೇವತಿ, ಮಂಗಳಮುಖಿ

ಗಂಡಿಗೂ ಪಾಠ ಅಗತ್ಯ
ಸಮಾಜ ವ್ಯವಸ್ಥೆ ಆಧಾರಿತವಾಗಿದೆ. ಹಿರಿಯರು ಬಾಲ್ಯದಲ್ಲಿ ಸರಿಯಾಗಿ ಮಾರ್ಗದರ್ಶನ ಮಾಡದಿರುವುದು ಮೇಲು ಕೀಳೆಂಬ ಭಾವನೆ ಬರಲು ಮುಖ್ಯ ಕಾರಣ. ಹೆಣ್ಣಿನ ನಡವಳಿಕೆ ಹೇಗಿರಬೇಕು ಎಂಬುದನ್ನು ಹುಡುಗಿಯರಿಗೆ ಹೇಳುವಂತೆ, ಸಮಾಜ ಗಂಡಿಗೂ ಹೇಳಬೇಕು. ಹೀಗಾದಲ್ಲಿ ಮಾತ್ರ ಹೆಣ್ಣಿನ ಮೇಲೆ ನಿರಂತರ ಅತ್ಯಾಚಾರ ಕಡಿಮೆಯಾಗಲು ಸಾಧ್ಯ. ಇಲ್ಲಿ ಎಲ್ಲರೂ ಮನುಷ್ಯರು ಎಂಬ ಭಾವನೆ ಮೊದಲು ಬರಬೇಕು. ಬಳಿಕ ಹೆಣ್ಣು, ಗಂಡು. ನಿಮ್ಮ ಪಕ್ಕದ ಮನೆಯಲ್ಲಿ ಮಂಗಳಮುಖಿ ಮಗುವಿದ್ದರೆ ಅದನ್ನು ದಯವಿಟ್ಟು ಮನುಷ್ಯನಾಗಿ ಸ್ವೀಕರಿಸಿ. ಇದೊಂದೇ ನನ್ನ ಬೇಡಿಕೆ ಎಂದು ಎ.ರೇವತಿ ಮನವಿ ಮಾಡಿದರು.