ಗಂಗರ ಕಾಲದಲ್ಲೇ ಕನ್ನಡ ಪ್ರವರ್ಧಮಾನ

«ಆಳ್ವಾಸ್ ನುಡಿಸಿರಿಗೆ ಚಾಲನೆ ನೀಡಿ ಡಾ.ಷಡಕ್ಷರಿ ಷಟ್ಟರ್ ಅಭಿಪ್ರಾಯ»

ಮೂಡುಬಿದಿರೆ: ಕನ್ನಡದ ಉಗಮ ಹಲ್ಮಿಡಿ ಶಾಸನದಿಂದ ಆಗಿದೆ ಎನ್ನುವುದು ಅರ್ಧಸತ್ಯ. ಕ್ರಿ.ಶ. 3-4ನೇ ಶತಮಾನದಲ್ಲಿ ಗಂಗರ ಕಾಲದಲ್ಲೇ ಕನ್ನಡ ಪ್ರವರ್ಧಮಾನಕ್ಕೆ ಬಂದಿತ್ತು ಎನ್ನುವುದಕ್ಕೆ ಪುರಾವೆಗಳಿವೆ ಎಂದು ಇತಿಹಾಸ ತಜ್ಞ ಡಾ.ಷಡಕ್ಷರಿ ಷಟ್ಟರ್ ಹೇಳಿದರು.
15ನೇ ಆಳ್ವಾಸ್ ನುಡಿಸಿರಿ- ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಗಂಗರ ಕಾಲದಲ್ಲಿ ಲಿಪಿಕಾರರು ಇರಲಿಲ್ಲ, ಪಾಶ್ಚಾತ್ಯ ಪಂಡಿತರಿಂದಾಗಿ ಗಂಗರಿಗೆ ಅನ್ಯಾಯವಾಗಿದೆ. ಕದಂಬರ ಕಾಲದಲ್ಲಿ ಹಲ್ಮಿಡಿ ಶಾಸನ ಬರೆಯಲಾಯಿತು, ಅದಕ್ಕೆ ಹೆಚ್ಚು ಪ್ರಸಿದ್ಧಿ ಸಿಕ್ಕಿತು. ಗಂಗರ ಕಾಲದ 3-4ನೇ ಶತಮಾನಕ್ಕೆ ಸೇರಿದ, ಆದರೆ ಕ್ರಿ.ಶ 7-8ನೇ ಶತಮಾನದಲ್ಲಿ ಬರೆಸಲಾದ ತಾಮ್ರಪತ್ರಗಳ ಶಾಸನಗಳು ಸಿಕ್ಕಿವೆ. ಅದನ್ನು ಖೊಟ್ಟಿ ಎಂದು ಇತಿಹಾಸಕಾರರು ತಿರಸ್ಕರಿಸಿದರು. ಆದರೆ, ಈಗಿನ ಸಂಶೋಧನೆಗಳಿಂದಾಗಿ ಅವು ಖೊಟ್ಟಿಯಲ್ಲ, ಬದಲು ಸವೆದು ಹೋದ ಶಾಸನಗಳನ್ನು ಮತ್ತೆ ತಾಮ್ರದಲ್ಲಿ ಬಿಡುಗಡೆ ಮಾಡಿದ್ದು ಎಂಬ ಅಂಶ ವ್ಯಕ್ತವಾಗಿದೆ ಎಂದು ಕನ್ನಡ ಭಾಷಾ ಚರಿತ್ರೆಗೆ ಹೊಸ ಹೊಳಹು ಬೀರಿದರು.
ದೇಶವನ್ನು ಅಕ್ಷರ ಸಂಸ್ಕೃತಿಯ ನಾಡಾಗಿ ಮಾಡಿದ್ದು ಅಶೋಕ ಚಕ್ರವರ್ತಿ. ಆತನ ಕಾಲದಲ್ಲೇ ಸಾಕಷ್ಟು ಶಾಸನಗಳನ್ನು ಬಿಡುಗಡೆ ಮಾಡಿದ. ಅದರಲ್ಲಿ ಹೆಚ್ಚಿನವೂ ಕರ್ನಾಟಕದಲ್ಲಿ ಎನ್ನುವುದು ಮಹತ್ವದ್ದು. ದಕ್ಷಿಣದಲ್ಲಿ ಕನ್ನಡ ಲಿಪಿಯೇ ಮೊದಲು ಬಂತು, ಆ ಬಳಿಕ ತಮಿಳು, ತೆಲುಗು ಬೆಳೆದುಬಂದವು ಎಂದು ವಿಶ್ಲೇಷಿಸಿದರು.

ಕನ್ನಡ- ಸಂಸ್ಕೃತ ಒಡನಾಡಿ: ಸಂಸ್ಕೃತದ ಪ್ರಭಾವ ಕನ್ನಡದ ಮೇಲೆ ಆಗಿದೆ ಎಂದು ವಾದಿಸುವವರಿದ್ದಾರೆ, ಅದು ನಿಜವೇ. ಆದರೆ ಕನ್ನಡದ ಪ್ರಭಾವ ಸಂಸ್ಕೃತದ ಮೇಲೆಯೂ ಆಗಿದೆ ಎಂಬುದನ್ನು ಮರೆಯುವಂತಿಲ್ಲ. ಕನ್ನಡದ ಅನೇಕ ಪದಗಳನ್ನು ಸಂಸ್ಕೃತಕ್ಕೆ ಬಳಕೆ ಮಾಡಲಾಗಿದೆ. ಕನ್ನಡ- ಸಂಸ್ಕೃತ ದ್ವಿಭಾಷಾ ಶಾಸನಗಳೂ ಬಿಡುಗಡೆಯಾಗಿವೆ. ಇದರಿಂದಾಗಿ ಇವೆರಡೂ ಒಡನಾಡಿಯಾಗಿ ಸಂಸ್ಕೃತಿ ರೂಪಿಸಿರುವುದು ಸ್ಪಷ್ಟವಾಗುತ್ತದೆ ಎಂದ ಷಟ್ಟರ್, ಯಾವುದೇ ಭಾಷೆಯೂ ಮೇಲು ಕೀಳೆನ್ನುವುದು ಸಲ್ಲದು. ಒಟ್ಟಾಗಿ ಇದ್ದಾಗಲಷ್ಟೇ ಸಂಸ್ಕೃತಿ ಬಹುತ್ವ ಸಾರುತ್ತದೆ ಎಂದು ವಿವರಿಸಿದರು.

ಸಹಿಷ್ಣುತೆಯಿಂದ ಉಗ್ರತ್ವದೆಡೆಗೆ: ಪ್ರಾರಂಭದಿಂದಲೂ ನಮ್ಮ ನಾಡು ಮುಕ್ತವಾದ ಸಮಾಜವಾಗಿತ್ತು. 12ನೇ ಶತಮಾನದಲ್ಲಿ ಆರಂಭವಾದ ಉಗ್ರಪಂಥವಾದ ಇಂದಿಗೂ ಮುಂದುವರಿದು ಕಾಡುತ್ತಿದೆ, ಹಿಂದಿದ್ದ ಸಹಿಷ್ಣುತೆ ಉಳಿದಿಲ್ಲ. ಇದು ಇಂದು ಹುಟ್ಟಿರುವ ಉಗ್ರವಾದವಲ್ಲ. ಕಳೆದ 600 ವರ್ಷಗಳ ಸಮಯದಲ್ಲಿ ಸಾಗಿ ಬಂದಿರುವುದು. ಇದರ ಪರಿಶೀಲನೆಯಾಗದೆ ಇದಕ್ಕೆ ಪರಿಹಾರ ಸಾಧ್ಯವಿಲ್ಲ ಎಂದು ಹೇಳಿದರು.
ನಾಡು ನುಡಿಯ ಸೊಬಗು ತೆರೆದಿಡುವ ಕಲಾತಂಡಗಳ ಪ್ರದರ್ಶನದ ಮುನ್ನುಡಿಯೊಂದಿಗೆ ನುಡಿಸಿರಿ ಪ್ರಾರಂಭಗೊಂಡಿತು. ಆಳ್ವಾಸ್ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಂಪಿ ಕನ್ನಡ ವಿವಿ ಕುಲಪತಿ ಡಾ.ಮಲ್ಲಿಕಾ ಎಸ್.ಘಂಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಮರನಾಥ ಶೆಟ್ಟಿ, ದ.ಕ. ಜಿಲ್ಲಾ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮತ್ತಿತರರು ಪಾಲ್ಗೊಂಡರು. ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ವಂದಿಸಿದರು.

ಬಹುತ್ವ ಪರಂಪರೆ
ಕನ್ನಡ ನಾಡಿನ ಪರಂಪರೆ ಎಂದಿಗೂ ಬಹುತ್ವದ್ದಾಗಿಯೇ ಗುರುತಿಸಿಕೊಂಡಿದೆ. ಅರಸೊತ್ತಿಗೆಯ ಕಾಲದಲ್ಲಿ ಯಾವುದೇ ಅರಸನೂ ಯಾವುದೇ ಕೃತಿಯನ್ನು ಬಹಿಷ್ಕರಿಸಿದ ಉದಾಹರಣೆ ನಮ್ಮ ಮುಂದಿಲ್ಲ. 12ನೇ ಶತಮಾನದ ರಾಜ ವಿಷ್ಣುವರ್ಧನನ ಕುಟುಂಬವೇ ಬಹುತ್ವಕ್ಕೆ ನಿದರ್ಶನ. ಆತನ ಪತ್ನಿ ಶಾಂತಲ ಜೈನಧರ್ಮದವಳು. ಆಕೆಯ ತಾಯಿ ಮಾಚಿಕಬ್ಬೆ ಜೈನಧರ್ಮದವಳಾದರೆ ತಂದೆ ಶೈವ. ವಿಷ್ಣುವರ್ಧನ ವೈಷ್ಣವ ಧರ್ಮೀಯ. ಆದರೆ ಶಾಂತಲೆ ಜೈನ, ಶೈವ, ವೈಷ್ಣವ ಮೂರೂ ದೇಗುಲಗಳನ್ನು ಕಟ್ಟಿಸಿದ್ದು ಇತಿಹಾಸದಲ್ಲಿದೆ. ಆದರೆ ಅವರ‌್ಯಾರೂ ಮತಪರಿವರ್ತನೆ ಮಾಡಿರಲಿಲ್ಲ. ಅಂತಹ ಉದಾರ ಸಮಾಜ ಆಗಿನದ್ದು ಎಂದು ವಿವರಿಸಿದರು.

ಬೇರೆಯವರ ಇತಿಹಾಸ ಬೋಧಿಸಿದ್ದಕ್ಕೆ ವಿಷಾದ!
ನಾನು ಇತಿಹಾಸ ಕಲಿತು, ಕಲಿತದ್ದನ್ನು ಬೋಧಿಸಿದೆ. ಆದರೆ ಅದೆಲ್ಲವೂ ಬೇರೆಯವರು ಹೇಳಿದ ಇತಿಹಾಸ. ಆ ಬಗ್ಗೆ ಈಗ ಬೇಸರ ಇದೆ. ವಿದ್ಯಾರ್ಥಿಗಳ ಕ್ಷಮೆ ಯಾಚಿಸುತ್ತೇನೆ ಎಂದು ಹೇಳುವ ಮೂಲಕ ಷಟ್ಟರ್ ಅಚ್ಚರಿ ಮೂಡಿಸಿದರು. ಹಿಂದೆ ಬರೆದದ್ದೆಲ್ಲವೂ ಇತಿಹಾಸವಲ್ಲ. ಹಳೇ ಪುಸ್ತಕ ಬದಿಗಿಟ್ಟು ಹೊಸ ಚಿಂತನೆ ಮೂಡಿಸಿಕೊಳ್ಳಬೇಕು. ಕನ್ನಡದಲ್ಲಿ ಸಾಹಿತ್ಯ ಚರಿತ್ರೆ, ಲಿಪಿ ಚರಿತ್ರೆ ಇದೆ. ಆದರೆ ಭಾಷಾ ಚರಿತ್ರೆಯನ್ನು ಯಾರೂ ಬರೆದಿಲ್ಲ ಎಂದು ಹೇಳಿದರು.

ಆಳ್ವಾಸ್ ನುಡಿಸಿರಿ 15ನೇ ವರ್ಷದ ಹೊಸ್ತಿಲಲ್ಲಿದೆ. ಕರ್ನಾಟಕ ದರ್ಶನ: ಬಹುರೂಪಿ ಆಯಾಮಗಳು ಎಂಬ ಪರಿಕಲ್ಪನೆಯಡಿ ಈ ಬಾರಿ ಸಮ್ಮೇಳನ ನಡೆಯುತ್ತಿದೆ. ಕರ್ನಾಟಕದ ಬಹುರೂಪತ್ವಕ್ಕೆ ಕರ್ನಾಟಕದ ವೈವಿಧ್ಯವೇ ಕಾರಣ. ಈ ಅಂಶಗಳನ್ನು ಸ್ಥೂಲವಾಗಿ ಗುರುತಿಸಿ ಅವುಗಳ ಬಹುರೂಪವನ್ನು ಚರ್ಚೆಗೆ ಒಡ್ಡುವುದು ಈ ಬಾರಿಯ ನುಡಿಸಿರಿ ಉದ್ದೇಶ.
ಡಾ.ಎಂ.ಮೋಹನ ಆಳ್ವ, ಆಳ್ವಾಸ್ ಪ್ರತಿಷ್ಠಾನ ಅಧ್ಯಕ್ಷ

 

ನೆಮ್ಮದಿಯೇ ಯಶಸ್ಸು
ಕಥೆ ಹೇಳಿದ ನಟ ರಮೇಶ್ ಅರವಿಂದ್
ಮನಸ್ಸಿನ ನೆಮ್ಮದಿ ಶಾಂತಿಗಿಂತ ದೊಡ್ಡ ಯಶಸ್ಸು ಬೇರೆ ಇಲ್ಲ. ಪ್ರಪಂಚದಲ್ಲೇ ದೊಡ್ಡ ಶ್ರೀಮಂತನಾಗಿ ರಾತ್ರಿ ನಿದ್ದೆ ಬರದಿದ್ದರೆ ಅದೊಂದು ಜನ್ಮಾನೇನ್ರಿ? ಯಶಸ್ಸಿನ ಫಾರ್ಮುಲಾ ನಮ್ಮ ಯೋಚನೆ ರೀತಿ, ಆಡುವ ಮಾತು, ಮಾಡುವ ಕೆಲಸವನ್ನು ಅವಲಂಬಿಸಿದೆ.
– ಹೀಗೆಂದರು ನಟ, ನಿರ್ದೇಶಕ ರಮೇಶ್ ಅರವಿಂದ್.
ರತ್ನಾಕರ ವರ್ಣಿ ವೇದಿಕೆಯಲ್ಲಿ ಶುಕ್ರವಾರ ನನ್ನ ಕಥೆ-ನಿಮ್ಮ ಜತೆ ವಿಶೇಷ ಕಾರ್ಯಕ್ರಮದಲ್ಲಿ ತಮ್ಮ ಜೀವನದ ಏಳು ಬೀಳುಗಳನ್ನು ತೆರೆದಿಟ್ಟು, ಸಭಿಕರಿಗೆ ಕೆಲವು ಕಿವಿಮಾತುಗಳನ್ನೂ ಹೇಳಿದರು.
ಇನ್ನೊಬ್ಬರು ಬೊಟ್ಟು ಮಾಡಿ ತೋರಿಸದ ಹಾಗೆ ನಮ್ಮ ಕೆಲಸಗಳನ್ನು ಮಾಡಬೇಕು. ಜೀವನದ ಕೊನೆವರೆಗೂ ನಿರಂತರವಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳವ ಮೂಲಕ ವಿದ್ಯಾರ್ಥಿಯಾಗಿರಬೇಕು. ಎಲ್ಲ ವಿಚಾರಗಳನ್ನು ಸಮಾಧಾನದಿಂದ ತೆಗೆದುಕೊಳ್ಳುವುದು ಹಾಗೂ ಯಾವಾಗಲೂ ಪ್ರೀತಿಯ ದಾರಿಯನ್ನೇ ಆಯ್ಕೆ ಮಾಡಬೇಕು. ತಲೆಯೊಳಗೆ ಧನಾತ್ಮಕ ಯೋಚನೆಗಳನ್ನು ಇಟ್ಟುಕೊಂಡಾಗ ಜೀವನ ಸುಂದರ ಎಂದರು.
ಸಮ್ಮೇಳನಾಧ್ಯಕ್ಷೆ ಡಾ.ಮಲ್ಲಿಕಾ ಎಸ್.ಘಂಟಿ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿ ಉಪಾಧ್ಯಕ್ಷ ನಾ.ದಾಮೋದರ ಶೆಟ್ಟಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಪ್ರಶಾಂತ್ ಜಿ.ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

ರಮೇಶ್ ಜೀವನ ಕಥೆ
ಅಪ್ಪನ ಶಿಸ್ತು ಅಮ್ಮನ ತಾಳ್ಮೆ ಜೀವನಕ್ಕೆ ದೊಡ್ಡ ಪಾಠ. ಈಗ ಟಿವಿಯಲ್ಲಿ ಕೋಟ್ಯಾಧಿಪತಿ ಕಾರ್ಯಕ್ರಮ ನಿರೂಪಿಸುತ್ತಿರಬಹುದು. ಆದರೆ ಸಂಸ್ಕಾರವಂತ ಅಪ್ಪ ಅಮ್ಮನನ್ನು ಪಡೆಯುವ ಮೂಲಕ ಹುಟ್ಟಿದ ಕ್ಷಣದಲ್ಲೇ ಕೋಟ್ಯಾಧಿಪತಿಯಾದೆ. ಒಂದು ಕೋಣೆಯ ಚಿಕ್ಕ ಮನೆಯಲ್ಲಿ ಅಣ್ಣ ತಮ್ಮ ಅಕ್ಕ ನಾನು ಅಮ್ಮ ಅಪ್ಪ ಸುಂದರ ಸಂಸಾರ ಸಾಗಿತ್ತು. ಜೀವನದ ಏಳು ಬೀಳಿನ ನಡುವೆಯೂ ಅಪ್ಪ ಮೂರು ಜನರನ್ನು ಇಂಜಿನಿಯರಿಂಗ್‌ವರೆಗೆ ಕಲಿಸಿದರು. ಜೀವನ ಮೌಲ್ಯ ಜವಾಬ್ದಾರಿ ತಿಳಿಸಿ ಸ್ವಾತಂತ್ರ್ಯ ಕೊಟ್ಟಿದ್ದರಿಂದ ನಾನು ನಾನಾದೆ.

ಎಸ್ಸೆಸ್ಸೆಲ್ಸಿಯಲ್ಲಿ ಏಳನೇ ರ‌್ಯಾಂಕ್
ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಏಳನೇ ರ‌್ಯಾಂಕ್ ಬಂದಾಗ ಪ್ರಥಮ ಬಾರಿಗೆ ಪತ್ರಿಕೆಗಳಲ್ಲಿ ಹೆಸರು ಬಂತು. ಇಂಜಿನಿಯರಿಂಗ್ ಕಲಿಯುವಾಗ ಮೊದಲ ಬಾರಿಗೆ ಕಿರುನಾಟಕ ರಚಿಸಿ ನಿರ್ದೇಶಿಸುವ ಅವಕಾಶ ಸಿಕ್ಕಿತು. ಇದೇ ಸಮಯದಲ್ಲಿ ಜೀವನ ಗೆಳತಿಯಾಗಿ ಸಿಕ್ಕವಳು ಅರ್ಚನಾ. ಅವಳನ್ನೇ ಮದುವೆಯಾದೆ. ಮುಂದೆ ರೇಡಿಯೋ, ಟಿವಿಗಳಲ್ಲಿ ಅವಕಾಶ, ಅಲ್ಲಿಂದ ಸಿನಿಮಾ ಕಡೆಗೆ ತಿರುಗಿ ಇಂದು ನಟನಾಗುವ ಜತೆಗೆ ನಿರ್ದೇಶಕನಾಗಿಯೂ ಯಶಸ್ವಿಯಾದೆ.

ಯಾವ ಕೆಲಸವೂ ಜುಜುಬಿಯಲ್ಲ. ಸಿನಿಮಾ ಜೀವನಕ್ಕೆ ಕಾಲಿಟ್ಟ ಹತ್ತು ವರ್ಷದ ಬಳಿಕ ನಾಯಕನಾಗುವ ಅವಕಾಶ ಸಿಕ್ಕಿತು. ಒಂದು ಹಂತದಲ್ಲಿ ಚೆನ್ನೈನಲ್ಲಿ ಸಿನಿಮಾ ಮಾಡುತ್ತಿದ್ದಾಗ ಶೇವ್ ಮಾಡಲೂ ದುಡ್ಡಿರಲಿಲ್ಲ. ನಾಯಕನಾಗಿ ಒಂದರ ನಂತರ ಒಂದರಂತೆ 11 ಸಿನಿಮಾಗಳು ಯಶಸ್ವಿಯಾಗಲು ಕಾರಣರಾದ ಅಭಿಮಾನಿಗಳಿಗೆ ಕೃತಜ್ಞತೆ.
– ರಮೇಶ್ ಅರವಿಂದ್, ನಟ

 

ನಾಡು-ನುಡಿಹಬ್ಬಕ್ಕೆ ಸಂಸ್ಕೃತಿಯ ಶೃಂಗಾರ
ಎರಡು ದಿನಗಳಿಂದ ವಿದ್ಯಾಗಿರಿ ವಾತಾವರಣ ಸಂಗೀತಮಯವಾಗಿದೆ. ವಿದ್ಯಾರ್ಥಿಸಿರಿಯಿಂದಾಗಿ ಗುರುವಾರ ಚಿಣ್ಣರ ಪ್ರತಿಭೆಗಳಿಗೆ ವೇದಿಕೆಯಾದ ವಿದ್ಯಾಗಿರಿಯಲ್ಲಿ ಶುಕ್ರವಾರ ಯುವ ಹಾಗೂ ಹೆಸರಾಂತ ಕಲಾವಿದರ ಪ್ರದರ್ಶನ ನುಡಿಸಿರಿಗೆ ವಿಶೇಷ ಶೋಭೆ ನೀಡಿತು.
ಇಳಿಸಂಜೆ ಹೊತ್ತಲ್ಲಿ ರತ್ನಾಕರವರ್ಣಿ ವೇದಿಕೆಯಲ್ಲಿ ಮೈಸೂರು ಮಂಜುನಾಥ್, ಮೈಸೂರು ನಾಗರಾಜ್ ಬಳಗದ ವಯೋಲಿನ್ ವಾದನ, ನೃತ್ಯ ನಿಕೇತನ ಕೊಡವೂರು ತಂಡದಿಂದ ‘ನೃತ್ಯ ದರ್ಪಣ’ ಪ್ರದರ್ಶನವಿತ್ತು. ಡಾ.ವಿ.ಎಸ್.ಆಚಾರ್ಯ ಸಭಾಭವನದಲ್ಲಿ ಬೆಳಗ್ಗೆ ಅರ್ಚನಾ ಕುಲಕರ್ಣಿ ಬೆಂಗಳೂರು ಬಳಗದಿಂದ ‘ದಾಸರ ಪದಗಳು’, ಸೀಮಾ ಕೆ.ಎಸ್. ಅವರಿಂದ ಭರತನಾಟ್ಯ, ಶ್ರೀಧರ್ ಮಾಂಡ್ರೆ ಧಾರವಾಡ ಮತ್ತು ಬಳಗದವರಿಂದ ‘ತ್ರಯೋತಬಲ ಜುಗಲ್‌ಬಂದಿ’, ಬೆಂಗಳೂರು ಕವಿತಾ ಉಡುಪ ಮತ್ತು ಬಳಗದಿಂದ ಗೀತಾ ಗಾಯನ, ಎಸ್.ಪಿ.ಗುರುದಾಸ್ ಅವರಿಂದ ಕಥಾ ಕೀರ್ತನ, ಕಾಂಚನಾ ಸಹೋದರಿಯರಿಂದ ಕರ್ನಾಟಕ ಸಂಗೀತ, ಸಾಯಂಕಾಲ ಮಂಗಳಮುಖಿ ಎ.ರೇವತಿ ಚೆನ್ನೈ ಅವರಿಂದ ಏಕವ್ಯಕ್ತಿ ಪ್ರದರ್ಶನ, ನಾಡಿನ ಹೆಸರಾಂತ ಕಲಾವಿದರಿಂದ ‘ನಾದತರಂಗಂ’ ಸಂಗೀತ ಕಾರ್ಯಕ್ರಮ, ನಿರಂತರ ಬೆಂಗಳೂರು ತಂಡದಿಂದ ಯುಗಳ ಕಥಕ್ ನೃತ್ಯ, ಸೂರ್ಯ ಎನ್.ರಾವ್ ಬೆಂಗಳೂರು ತಂಡದಿಂದ ಕೂಚುಪುಡಿ ನೃತ್ಯ, ನೃತ್ಯ ದಿಶಾ ಟ್ರಸ್ಟ್ ತಂಡ ಭರತನಾಟ್ಯ, ಶಿವೋಹಮ್ ಇನ್‌ಸ್ಟಿಟ್ಯೂಟ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಮುಂಬೈ ತಂಡದವರು ‘ಹರಿಹರಾಯ ನಮಃ’ ನೃತ್ಯ ಪ್ರಸ್ತುತಪಡಿಸಿದರು.
ಕೆ.ವಿ.ಸುಬಣ್ಣ ಬಯಲು ರಂಗಮಂದಿರದಲ್ಲಿ ನಾಡೋಜ ಬುರ‌್ರಕಥಾ ಈರಮ್ಮ ಫೌಂಡೇಶನ್ ಬಳ್ಳಾರಿ ತಂಡದಿಂದ ‘ಹಗಲುವೇಷ’, ನಮ್ಮ ಜವನೆರ್ ಮೂಡುಬಿದಿರೆ ತಂಡದಿಂದ ಹುಲಿವೇಷ, ಸುನೀತಾ ಕೆ.ಪಾಟೀಲ್ ಬೆಳಗಾವಿ ಬಳಗದಿಂದ ಸುಗಮ ಸಂಗೀತ, ನೃತ್ಯ ವಸಂತ ನಾಟ್ಯಾಲಯ ಕುಂದಾಪುರ ತಂಡದಿಂದ ನೃತ್ಯೋಲ್ಲಾಸ ಪ್ರದರ್ಶನಗೊಂಡಿತು.

ಕೂಚುಪುಡಿ ವೈಭವದಿಂದ ಹರಿಕಥೆವರೆಗೆ
ಕು.ಶಿ.ಹರಿದಾಸ್ ಭಟ್ ವೇದಿಕೆಯಲ್ಲಿ ಕೂಚುಪುಡಿ ಪರಂಪರಾ ಫೌಂಡೇಶನ್ ಅವರಿಂದ ‘ಕೂಚುಪುಡಿ ವೈಭವಂ’, ಸಿರಿಗೆರೆ ತರಳಬಾಳು ಕಲಾಸಂಘದಿಂದ ‘ಸಾಂಸ್ಕೃತಿಕ ಕಲಾ ವೈಭವ’ ನಡೆಯಿತು. ಕಮಲಾದೇವಿ ಚಟ್ಟೋಪಾಧ್ಯಾಯ ವೇದಿಕೆಯಲ್ಲಿ ಪುತ್ತೂರಿನ ನಂದಿನಿ ವಿನಾಯಕ್ ಹಾಗೂ ಮಯೂರಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಿತು. ಬಳ್ಳಾರಿ ಪ್ರತೀಕ್ಷಾ ಪಿ.ಕೆ. ಮತ್ತು ಬಳಗದವರಿಂದ ದಾಸರ ಪದಗಳು, ಉಡುಪಿಯ ಮಯೂರಿ ಗುರುರಾಜ್ ಅವರಿಂದ ಭರತನಾಟ್ಯ, ಕಾಸರಗೋಡು ಶ್ರದ್ಧಾ ಪೈವಳಿಕೆ ಅವರಿಂದ ಹರಿಕಥಾ ಕೀರ್ತನಾ, ಪುತ್ತೂರು ಅಕ್ಷಯ ಪಾರ್ವತಿ ಅವರಿಂದ ಭರತನಾಟ್ಯ ನಡೆಯಿತು.

ಶಹನಾಯಿ ವಾದನ-ರಂಗಗೀತೆ
ಆನಂದ ಬೋಳಾರ್ ವೇದಿಕೆಯಲ್ಲಿ ಹಾವೇರಿಯ ಸತೀಶ್ ಭಜಂತ್ರಿ ಹಾಗೂ ಬಳಗದಿಂದ ಶಹನಾಯಿ ವಾದನ, ಬೆಂಗಳೂರು ಡಬ್ಲುೃ.ಎಚ್.ಶಾಂತ ಕುಮಾರ ಬಳಗದಿಂದ ಪೌರಣಿಕ ರಂಗಗೀತೆ, ಗೋಕಾಕ್ ಶ್ರೀ ಮುತ್ತಪ್ಪ ಸವದಿ ಮತ್ತು ಬಳಗದಿಂದ ತತ್ವಪದ ಗಾಯನ, ಇಳಕಲ್ ಅವರಿಂದ ಸ್ವರ ಸಾಗರ ಸಾಂಸ್ಕೃತಿಕ ಮತ್ತು ಕಲಾ ಸಂಸ್ಥೆ ಅವರಿಂದ ಜನಪದ ಸೊಬಗು, ಬಾರ್ಕೂರು ಪಿ.ಕಾಳಿಂಗ ರಾವ್, ಸ್ಮತಿ ಮೆಲೋಡಿಸ್ ಅವರಿಂದ ಸುಗಮ ಸಂಗೀತ, ಮಂಗಳೂರಿನ ಸನಾತನ ಯಕ್ಷಾಲಯದ ತಂಡದಿಂದ ಪುಂಡುವೇಷ, ಸ್ತ್ರೀ ವೇಷ ವೈಭವ, ಕುಡ್ಲ ಕಲಾಶ್ರೀ ತಂಡದಿಂದ ಕುಸಲ್ದ ಕುರ್ಲರಿ, ಫ್ರೆಂಡ್ಸ್ ಮಂಗಳೂರು ತಂಡದಿಂದ ತೆಲಿಕೆ ಬಾಯಿನಿಲಿಕೆ, ರಾಕೇಶ್ ರೈ ಅಡ್ಕ ಸಂಯೋಜನೆಯಲ್ಲಿ ‘ಗಜೇಂದ್ರ ಮೋಕ್ಷ-ರಕ್ತರಾತ್ರಿ’ ತೆಂಕುತಿಟ್ಟು ಯಕ್ಷಗಾನ ನಡೆಯಿತು.

ಒಂದೇ ಸೂರಿನಡಿ ಜ್ಞಾನ ಭಂಡಾರ
ಹದಿನಾಲ್ಕು ವರ್ಷದಿಂದ ನುಡಿಸಿರಿಯೊಂದಿಗೆ ಸಾಗಿಬಂದ ಬೃಹತ್ ಪುಸ್ತಕ ಪ್ರದರ್ಶನ, ಈ ಬಾರಿ ಯುವ ಓದುಗರನ್ನು ಹೆಚ್ಚಿನ ಪ್ರಮಾಣದಲ್ಲಿ ಸೆಳೆಯುತ್ತಿದೆ. ರಾಜ್ಯದ ಪೃತಿಷ್ಠಿತ ಪುಸ್ತಕ ಮಾರಾಟ ಮಳಿಗೆಗಳು ಸೇರಿದಂತೆ 200ಕ್ಕೂ ಅಧಿಕ ಪುಸ್ತಕ ಮಳಿಗೆಗಳು ಈ ಬಾರಿ ನುಡಿಸಿರಿಯಲ್ಲಿವೆ. ವ್ಯಕ್ತಿತ್ವ ವಿಕಸನ ಪುಸ್ತಕಗಳು ಯುವಕರನ್ನು ಆಕರ್ಷಿಸಿದರೆ, ವೈಚಾರಿಕ ಪುಸ್ತಕಗಳನ್ನು ಹಿರಿಯರು ಖರೀದಿಸುತ್ತಿರುವುದು ಹೆಚ್ಚಿನ ಮಳಿಗೆಗಳಲ್ಲಿ ಕಂಡುಬಂತು. ಶಿವರಾಮ ಕಾರಂತ, ಪೂರ್ಣಚಂದ್ರ ತೇಜಸ್ವಿ ಹಾಗೂ ಎಸ್.ಎಲ್.ಭೈರಪ್ಪ, ಅ.ರಾ.ಮಿತ್ರ, ಚೇತನ್ ಭ ಗತ್ ಪುಸ್ತಕಗಳಿಗೆ ಹೆಚ್ಚಿನ ಬೇಡಿಕೆಯಿದೆ. ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಪುಸ್ತಕಗಳನ್ನು ವಿದ್ಯಾರ್ಥಿಗಳು ಖರೀದಿಸುತ್ತಿರುವುದು ಕಂಡುಬಂತು. ಶ್ರೀನಿಧಿ ಸುಬ್ರಹ್ಮಣ್ಯ ಅವರ ಮುತುವರ್ಜಿಯಲ್ಲಿ ಸಮ್ಮೇಳನದ ಅಧ್ಯಕ್ಷೆ ಮಲ್ಲಿಕಾ ಎಸ್.ಘಂಟಿ ಬರೆದಿರುವ ಪುಸ್ತಕಗಳನ್ನು ಹಾಗೂ ಮಳಿಗೆ ತುಂಬ ಅವರ ಭಾವಚಿತ್ರ ಅಳವಡಿಸಲಾಗಿತ್ತು.

 

ಸಾಂಸ್ಕೃತಿಕ ಜಾಲತಾಣ ಅವಶ್ಯ
ಚಲನಚಿತ್ರ ಸಿರಿಗೆ ಚಾಲನೆ ನೀಡಿ ಡಾ.ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯ
ಇಂದಿನ ಯುವಜನತೆ ಹೊಂದಿಕೊಂಡಿರುವ ಸಾಮಾಜಿಕ ಜಾಲತಾಣವನ್ನು, ಸಾಂಸ್ಕೃತಿಕ ಜಾಲತಾಣವನ್ನಾಗಿ ಪರಿವರ್ತಿಸುವ ಕಾರ್ಯ ಆಗಬೇಕಿದೆ. ಆ ನಿಟ್ಟಿನಲ್ಲಿ ಕಲಾತ್ಮಕ ಸಿನಿಮಾಗಳಿಗೆ ಯಾವುದೇ ರೀತಿಯ ಮೋಸ ಆಗಬಾರದು ಎಂದು ಈ ರೀತಿ ಸಿನಿಮಾ ಉತ್ಸವ ನಡೆಸಬೇಕು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
ಆಳ್ವಾಸ್ ನುಡಿಸಿರಿ ಅಂಗವಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಬೆಂಗಳೂರು ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ‘ಕನ್ನಡ ಮತ್ತು ಪ್ರಾದೇಶಿಕ ಭಾಷಾ ಚಲನಚಿತ್ರಸಿರಿ’ ಚಲನಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ನಾ.ದಾಮೋದರ ಶೆಟ್ಟಿ, ಆಧುನಿಕ ಯುಗದಲ್ಲಿ ಜನರ ಸದಭಿರುಚಿ ತಕ್ಕಂತೆ ಮಕ್ಕಳ ಆಸಕ್ತಿಗೆ ಯೋಗ್ಯವಾದ ಸಿನಿಮಾಗಳ ಪ್ರದರ್ಶನ ಈ ಸಂಸ್ಥೆಯೊಳಗೆ ನಡೆಯುತ್ತಿದೆ. ಇದರಿಂದ ಸಿನಿಸಿರಿಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗಿದೆ. ಮೌಲ್ಯಾಧಾರಿತ ಸಿನಿಮಾಗಳನ್ನು ಮಕ್ಕಳಿಗೆ ಪ್ರದರ್ಶಿಸುವುದರಿಂದ ಇದರಲ್ಲಿನ ಶ್ರೇಷ್ಠ ಅಂಶವನ್ನು ಪರಿಗಣಿಸುವ ಅವಕಾಶ ಸಿಕ್ಕಂತಾಗುತ್ತದೆ ಎಂದರು. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಡಾ.ಶ್ರೀನಿವಾಸ ಹೊಡಿಯಾಲ ಉಪಸ್ಥಿತರಿದ್ದರು. ಡಾ.ಮೌಲ್ಯ ಜೀವನ್‌ರಾಮ್ ಕಾರ್ಯಕ್ರಮ ನಿರೂಪಿಸಿದರು.

ಪ್ರೇಕ್ಷಕರು ಕಲಾತ್ಮಕ ಚಿತ್ರ ನೋಡಲು ಆಸಕ್ತರಾಗಬೇಕು. ಕನ್ನಡ ಭಾಷೆ ಹಾಗೂ ಕೃಷಿಗೆ ಸಂಬಂಧಿಸಿದಂತೆ ಚಿತ್ರ ನಿರ್ಮಾಣ ಮಾಡುವ ಉದ್ದೇಶ ಇದೆ.
– ಡಾ.ಮೋಹನ್ ಆಳ್ವ, ಅಧ್ಯಕ್ಷ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ 

ಇಂದು 3 ಸಿನಿಮಾ ಪ್ರದರ್ಶನ
ನುಡಿಸಿರಿಯ ಮೊದಲ ದಿನ ಅಮ್ಮಚ್ಚಿಯೆಂಬ ನೆನಪು(ಕುಂದ ಕನ್ನಡ), ತಳಂಗ್ ನೀರ್(ಕೊಡವ) ಚಲನಚಿತ್ರಗಳು ಪ್ರದರ್ಶನಗೊಂಡವು. ಶನಿವಾರ ಕುವೆಂಪು ಸಭಾಂಗಣದಲ್ಲಿ ಬೆಳಗ್ಗೆ 10ಗಂಟೆಗೆ ಕಾಡಹಾದಿ ಹೂಗಳು(ಕನ್ನಡ), ಮಧ್ಯಾಹ್ನ 3ಗಂಟೆಗೆ ಶುದ್ಧಿ (ಕನ್ನಡ), ಸಾಯಂಕಾಲ 5.30ಕ್ಕೆ ಪಡ್ಡಾಯಿ(ತುಳು) ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ. ನ.18ರಂದು ಬೆಳಗ್ಗೆ 10ಗಂಟೆಗೆ ಸೋಫಿಯಾ-ಎ ಡ್ರೀಮ್ ಗರ್ಲ್ (ಕೊಂಕಣಿ) ಹಾಗೂ ಸಾಯಂಕಾಲ 5 ಗಂಟೆಗೆ ಹೆಬ್ಬೆಟ್ ರಾಮಕ್ಕ(ಕನ್ನಡ) ಸಿನಿಮಾ ಪ್ರದರ್ಶನಗೊಳ್ಳಲಿದೆ.

 

ರಾಮಾಯಣ-ಕಾರುಣ್ಯ ರಸದ ಪ್ರಯೋಗ ಸೃಷ್ಟಿ
ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಸತ್ಯ ತೆರೆದಿಟ್ಟ ಚಿಂತಕ ಲಕ್ಷ್ಮೀಶ ತೋಳ್ಪಾಡಿ

ಮೋಹನದಾಸ್ ಮರಕಡ, ಮೂಡುಬಿದಿರೆ
ನೂರು ರೀತಿಯಲ್ಲಿ ನಮ್ಮ ಮನಸ್ಸಿನೊಳಗಿನ ಭಾವ ಮಾಧುರ್ಯ ಪ್ರಕಟಿಸುವ ಮಾಧ್ಯಮವೇ ರಾಮಾಯಣ… ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರು ಒಂದೇ ವಾಕ್ಯದಲ್ಲಿ ರಾಮಾಯಣವನ್ನು ವಿಸ್ತತವಾಗಿ ವಿಶ್ಲೇಷಿಸಿದ್ದು ಹೀಗೆ.
ಆಳ್ವಾಸ್ ನುಡಿಸಿರಿಯ ಮೊದಲ ವಿಚಾರಗೋಷ್ಠಿ-ಕರ್ನಾಟಕ ದರ್ಶನ: ಸಾಹಿತ್ಯ-ರಾಮಾಯಣ: ಸಮಕಾಲೀನ ನೆಲೆಗಳು ಬಗ್ಗೆ ವಿಚಾರ ಮಂಡಿಸಿದ ತೋಳ್ಪಾಡಿ, ವಾಲ್ಮೀಕಿ ರಾಮಾಯಣ ಕಾರುಣ್ಯ ರಸದ ಪ್ರಯೋಗ ಸೃಷ್ಟಿ ಎಂದು ಬಣ್ಣಿಸಿದರು. ತನ್ನ ಕಾಲದಲ್ಲಿ ಯಾರು ಒಳ್ಳೆಯವರ ಎಂಬ ಪ್ರಶ್ನೆ ಮಹರ್ಷಿ ವಾಲ್ಮೀಕಿಗೆ ಸೃಷ್ಟಿಯಾದಾಗ ನಾರದರು ಶ್ರೀರಾಮನ ಕಥೆ ಹೇಳಿದರು. ಶ್ರೀರಾಮನ ಕಥೆಯನ್ನು ಆಗಲೇ ಕೃತಿ ರೂಪಕ್ಕಿಳಿಸುವ ಶಕ್ತಿ ವಾಲ್ಮೀಕಿಗೆ ಇತ್ತಾದರೂ ಆಗಲೇ ಅದು ಹೊರಬರಲಿಲ್ಲ. ನಾರದರು ಹೇಳಿದ ಕಥೆಗೆ ವಾಲ್ಮೀಕಿಗೆ ತಕ್ಷಣದ ಸ್ಪಂದನೆ’ ಸಿಕ್ಕಿದ್ದು ಪಕ್ಷಿಗಳ ಘಟನೆ ಸಂದರ್ಭ. ಸೃಷ್ಟಿಶೀಲ ತಲ್ಲಣದ ಬಹಳ ಕಾಲದ ಯೋಚನೆಗೆ ತಕ್ಷಣದ ನೆಗೆತ ಸಿಕ್ಕಿದಾಗ ಅಲ್ಲಿ ಸೃಷ್ಟಿಯಾಗಿದ್ದು ಕರುಣ ರಸ. ಬೇಡ ಗಂಡು ಹಕ್ಕಿಯನ್ನು ಕೊಂದಾಗ ಹೆಣ್ಣು ಹಕ್ಕಿಯಲ್ಲಾದ ಕಾರುಣ್ಯ ಭಾವ ವಾಲ್ಮೀಕಿಯಿಂದ ರಾಮಾಯಣ ಕಾವ್ಯ ಸೃಷ್ಟಿಸಿತು. ಕರುಣಾ ರಸದಲ್ಲಿ ಪ್ರಯೋಗ ಕಂಡ ಜಗತ್ತಿನ ಮೊತ್ತಮೊದಲ ಕೃತಿ ವಾಲ್ಮೀಕಿ ರಾಮಾಯಣ… ಹೀಗೆ ಸಾಗಿತು ತೋಳ್ಪಾಡಿಯವರ ಚಿಂತನೆ. ಯಾರು ಒಳ್ಳೆಯವ ಎಂಬ ಪ್ರಶ್ನೆ ಸಾರ್ವಕಾಲಿಕ ಎನ್ನುವ ಮೂಲಕ ಹಿಂದೆಯೂ, ಈಗಲೂ ಸಜ್ಜನರ ಹುಡುಕಾಟ ನಡೆದಿದೆ ಎಂಬುದನ್ನೂ ಸೂಚ್ಯವಾಗಿ ಪ್ರಸ್ತುತಪಡಿಸಿದರು.
ಸಮ್ಮೇಳನ ಸರ್ವಾಧ್ಯಕ್ಷೆ ಡಾ.ಮಲ್ಲಿಕಾ ಘಂಟಿ, ಹಿರಿಯ ಸಾಹಿತಿ ನಾ.ದಾ.ಶೆಟ್ಟಿ ಉಪಸ್ಥಿತರಿದ್ದರು. ಯೋಗೀಶ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.

ಕುವೆಂಪು ದೃಷ್ಟಿ
ಮಹಾಕಾವ್ಯಕ್ಕೆ ರಾಮಾಯಣವನ್ನೇ ಏಕೆ ಆಯ್ದುಕೊಂಡಿರಿ ಎಂದು ಒಬ್ಬರು ಕುವೆಂಪು ಅವರನ್ನು ಪ್ರಶ್ನಿಸಿದ್ದರು. ಅದಕ್ಕೆ ಕುವೆಂಪು ಕೊಟ್ಟ ಉತ್ತರ-ರಾಮಾಯಣದ ಪಾತ್ರಗಳು ಎಲ್ಲರಿಗೂ ಚಿರಪರಿಚಿತ. ಇನ್ನೊಂದು ಕಾರಣ ಭೂಮಿ, ಆಕಾಶವನ್ನು ಒಂದಾಗಿ ಬಿಂಬಿಸಬಲ್ಲ ಆಂಜನೇಯನ ತಾತ್ವಿಕ ವ್ಯಕ್ತಿತ್ವ ನನ್ನನ್ನು ಸೆಳೆಯಿತು ಅದಕ್ಕಾಗಿ ಆಯ್ದುಕೊಂಡೆ ಎನ್ನುತ್ತಾರೆ ಕುವೆಂಪು. ಜನಮನದಲ್ಲಿರುವ ವಾಂಛೆ(ಆಸಕ್ತಿ) ಅಂದರೆ ಒಳಮನಸ್ಸಿನ ಮಿಡಿತ ಕುವೆಂಪು ಕೊಟ್ಟ ಇನ್ನೊಂದು ಕಾರಣ. ಕುವೆಂಪು ತಮ್ಮ ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಲೋಕ ಜೀವನದ ಸತ್ಯಗಳನ್ನು ಪ್ರತಿಪಾದಿಸಲು ಹೊರಟಿಲ್ಲ, ಲೋಕದಲ್ಲಿ ನಾವು ಕಾಣುವ ಪರಿಚಿತ ಸಂಗತಿಗಳು ಸತ್ಯ. ಇದರಲ್ಲಿ ಇನ್ನೊಂದು ಸತ್ಯ ಅಡಿಗಿದೆ. ಅದು ಸತ್ಯಸ್ಯ ಸತ್ಯ. ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಕುವೆಂಪು ಹೇಳಲು ಹೊರಟಿದ್ದು ಆ ಸತ್ಯಸ್ಯ ಸತ್ಯವನ್ನು ಎಂಬ ಪ್ರತಿಪಾದನೆ ಲಕ್ಷ್ಮೀಶ ತೋಳ್ಪಾಡಿಯವರದ್ದು.