23ರಂದು ಆಳ್ವಾಸ್ ಸಾಂಸ್ಕೃತಿಕ ವೈಭವ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಅತ್ಯಂತ ಶಿಸ್ತುಬದ್ಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮೂಲಕ ವಿಶ್ವದ ಗಮನ ಸೆಳೆದಿರುವ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಲಬುರಗಿಯಲ್ಲಿ 23ರಂದು ಜರುಗಲಿದೆ.

ಶ್ರೀ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಅಂದು ಸಂಜೆ 6ಕ್ಕೆ ದೇಶ ವಿದೇಶಗಳ ವಿವಿಧ ಕಲಾ ಪ್ರಕಾರಗಳ ಶಾಸ್ತ್ರೀಯ, ಜನಪದ, ಸಾಂಸ್ಕೃತಿಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಆಳ್ವಾಸ್ ನುಡಿಸಿರಿ ಕಲಬುರಗಿ ಘಟಕದ ಗೌರವಾಧ್ಯಕ್ಷ ಖ್ಯಾತ ವೈದ್ಯ ಡಾ.ಪಿ.ಎಸ್.ಶಂಕರ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಳ್ವಾಸ್ ಪ್ರತಿಷ್ಠಾನದ ಡಾ.ಮೋಹನ ಆಳ್ವಾ ಅವರು ನುಡಿಸಿರಿ, ವಿರಾಸತ್ ಮತ್ತು ಸಾಂಸ್ಕೃತಿಕ ವೈಭವದ ಮೂಲಕ ಸಮಾಜವನ್ನು ಒಗ್ಗೂಡಿಸುವ ಮಹತ್ವದ ಕೆಲಸ ಮಾಡುತ್ತಿದ್ದಾರೆ. ವಿವಿಧ ರಾಜ್ಯಗಳ ಪ್ರಮುಖ ಕಲಾಪ್ರಕಾರಗಳಲ್ಲಿ ಪರಿಣತಿ ಹೊಂದಿದ ಆಳ್ವಾಸ್ ಸಂಸ್ಥೆಯ 250 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ವೈಭವ ಮೆರೆಯಲಿದ್ದಾರೆ ಎಂದರು.

ಎಚ್ಕೆಸಿಸಿಐ ಅಧ್ಯಕ್ಷ ಮತ್ತು ಆಳ್ವಾಸ್ ನುಡಿಸಿರಿ ಘಟಕದ ಅಧ್ಯಕ್ಷ ಅಮರನಾಥ ಸಿ.ಪಾಟೀಲ್ ಮಾತನಾಡಿ, ಕಲಾಪ್ರಕಾರಗಳ ಮೂಲಕ ಶಿಕ್ಷಣವನ್ನು ನೋಡುವ ಆಧುನಿಕ ಆಯಾಮಗಳಿಗೆ ಪೂರಕ ವಾತಾವರಣ ಸೃಷ್ಟಿಸುವುದು ಈ ಉತ್ಸವದ ಉದ್ದೇಶ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಮನಸ್ಸುಗಳನ್ನು ಬೆಳೆಸುವ, ಕಟ್ಟುವ ಮಹತ್ತರ ಉದ್ದೇಶದ ಈ ಕಾರ್ಯಕ್ರಮಕ್ಕೆ ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಸ್ಥೆ ಸಹಯೋಗ ನೀಡಿದೆ ಎಂದು ಹೇಳಿದರು.

ನಗರೇಶ್ವರ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಮತ್ತು ನುಡಿಸಿರಿ ಘಟಕದ ಕಾರ್ಯದರ್ಶಿ ರವೀಂದ್ರ ಮುಕ್ಕಾ ಮಾತನಾಡಿ, ಶಾಲಾ ಮಕ್ಕಳಿಂದ ದೇಸಿ ಕಲೆಗಳ ಪ್ರದರ್ಶನ ಮಾಡಿಸುವುದರಿಂದ ಮುಂದಿನ ಪೀಳಿಗೆಗೆ ನಮ್ಮ ಸಾಂಸ್ಕೃತಿಕ ಪರಂಪರೆ ಪರಿಚಯವಾಗುತ್ತದೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿದವರು ಸಮಾಜಕ್ಕೆ ಪ್ರಯೋಜನಕಾರಿಯಾಗಿ ಬಾಳುತ್ತಾರೆ ಎಂಬುದು ಕಾರ್ಯಕ್ರಮದ ಸಂದೇಶ ಎಂದರು.

ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿದ್ಯಾಸಾಗರ ಕುಲಕರ್ಣಿ, ದಕ್ಷಿಣ ಕನ್ನಡ ಸಂಘದ ಪ್ರವೀಣ ಜತ್ತನ್, ರಮೇಶ ಬಂಧು, ಹರ್ಷ ಗುತ್ತೇದಾರ್, ಉಮೇಶ ಶೆಟ್ಟಿ, ಅರುಣ ಮೂಡಬಿದಿರೆ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನರಸಿಂಹ ಮೆಂಡನ್, ವೆಂಕಟೇಶ ಕಡೇಚೂರ್ ಸುದ್ದಿಗೋಷ್ಠಿಯಲ್ಲಿದ್ದರು.

ಬೆರಗುಗೊಳಿಸಲಿದೆ ಸಾಂಸ್ಕೃತಿಕ ವೈಭವ
ಅಂತಾರಾಷ್ಟ್ರೀಯ ಗುಣಮಟ್ಟದ ದೇಶಾದ್ಯಂತ ಇರುವ ಆಳ್ವಾಸ್ ಶೈಕ್ಷಣಿಕ ಸಂಸ್ಥೆಗಳ 350 ವಿದ್ಯಾರ್ಥಿ ಕಲಾವಿದರು ಭಾಗವಹಿಸಿ ತಮ್ಮ ಕಲೆಯಿಂದ ಸಹೃದಯರನ್ನು ಸಾಂಸ್ಕೃತಿಕ ವೈಭವದ ಮೂಲಕ ಬೆರಗುಗೊಳಿಸಲಿದ್ದಾರೆ. ಕೇರಳದ ಮೋಹಿನಿಯಾಟ್ಟಂ, ಕರ್ನಾಟಕದ ಯಕ್ಷಗಾನ, ಆಂಧ್ರದ ಬಂಜಾರ ನೃತ್ಯ, ಮಣಿಪುರದ ಸ್ಪಿಕ್ ನೃತ್ಯ, ಓಡಿಸ್ಸಾದ ಗೋಟಿಪೊವು ಹಾಗೂ ಯೋಗ ನೃತ್ಯ, ಭರತನಾಟ್ಯ, ಮಲ್ಲಗಂಬ, ಕಥಕ್ ನೃತ್ಯ, ಮಹಾರಾಷ್ಟ್ರದ ಲಾವಣಿ ನೃತ್ಯ, ಬಂಗಾಲದ ಪುರಲಿಯೋ ನೃತ್ಯಗಳನ್ನೊಳಗೊಂಡ ವಿವಿಧ ಕಲಾ ಪ್ರಕಾರಗಳನ್ನು ಪ್ರದರ್ಶಿಸಲಿದ್ದಾರೆ. ನಿರಂತರ ಮೂರು ಗಂಟೆಯ ಈ ಕಾರ್ಯಕ್ರಮ ಸಮಯಬದ್ಧವಾಗಿದ್ದು, 15 ನಿಮಿಷ ಮುಂಚಿತವಾಗಿ ಬಂದು ವೀಕ್ಷಿಸಬೇಕು ಎಂದು ಆಯೋಜಕರು ಕೋರಿದರು.