ಯೋಧ ಮೋಹನ್‌ಕುಮಾರ್ ಅಂತ್ಯಕ್ರಿಯೆ

ಆಲೂರು: ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ತಾಲೂಕಿನ ಕುಂದೂರು ಹೋಬಳಿ ಕದಾಳು ಗ್ರಾಮದ ಯೋಧ ಮೋಹನ್ ಕುಮಾರ್ ಅವರ ಅಂತ್ಯಕ್ರಿಯೆ ಸೋಮವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಗ್ರಾಮದಲ್ಲಿ ನೆರವೇರಿತು.
ಮೋಹನ್‌ಕುಾರ್ ಅವರು ಭಾರತೀಯ ವಾಯುಸೇನೆಯಲ್ಲಿ ಸೈನಿಕನಾಗಿ ಹರಿಯಾಣದ ಶಿರಸ ಎಂಬಲ್ಲಿ 8 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಶುಕ್ರವಾರ ತಾವೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಪಾರ್ಥಿವ ಶರೀರವನ್ನು ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಭಾನುವಾರ ತರಲಾಯಿತು. ರಾತ್ರಿ ಆಲೂರಿಗೆ ತಂದು ಹೌಸಿಂಗ್ ಬೋರ್ಡ್‌ನಲ್ಲಿರುವ ಅವರ ಮನೆಯಲ್ಲಿ ಕೆಲ ಕಾಲ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ನಂತರ ಮೆರವಣಿಗೆ ಮೂಲಕ ಸ್ವಗ್ರಾಮ ಕದಾಳು ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಯಿತು. ವಾಯುಪಡೆಯ ಸೈನಿಕರು ಹಾಗೂ ಸೇನಾಧಿಕಾರಿಗಳ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ 12 ಗಂಟೆಗೆ ಅಂತ್ಯಕ್ರಿಯೆ ನೆರವೇರಿತು.
ಶಾಸಕ ಎಚ್.ಕೆ ಕುಮಾರಸ್ವಾಮಿ, ಜಿಪಂ ಸದಸ್ಯ ಲೊಕೇಶ್, ಡಿವೈಎಸ್‌ಪಿ ಶಶಿಧರ್, ತಹಸೀಲ್ದಾರ್ ಶಿರೀನ್ ತಾಜ್, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ, ತಾಪಂ ಸದಸ್ಯರಾದ ನಟರಾಜ್ ನಾಕಲಗೂಡು, ಬಿಜೆಪಿ ತಾಲೂಕು ಅಧ್ಯಕ್ಷ ಲೋಕೇಶ್, ಪೊಲೀಸ್ ಇನ್ಸ್‌ಪೆಕ್ಟರ್ ಮಲ್ಲೇಶ್, ಮುಖಂಡರಾದ ಮಲ್ಲಿಕಾರ್ಜುನ್, ಕದಾಳು ರಾಜಪ್ಪಗೌಡ, ನರೇಶ್, ಸವಿತಾ ಸಮಾಜದ ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *