ಜನರನ್ನು ಮೆಚ್ಚಿಸಲು ಕಣ್ಣೀರು ಹರಿಸಿಲ್ಲ

ಆಲೂರು: 60 ವರ್ಷಗಳ ರಾಜಕೀಯದ ಏಳುಬೀಳುಗಳನ್ನು ನೆನೆದು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರು ಕಣ್ಣೀರು ಹಾಕಿದರೆ ವಿನಹ ಜನರನ್ನು ಮೆಚ್ಚಿಸಲು ಅಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ಪಟ್ಟಣದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ತಾಲೂಕು ಜೆಡಿಎಸ್ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಎಚ್.ಡಿ.ದೇವೇಗೌಡರು ಬಿಜೆಪಿಗೆ ಹೆದರಿ ಕಣ್ಣೀರು ಹಾಕಲಿಲ್ಲ. ಜಿಲ್ಲೆಯ ಜನರ ಪ್ರೀತಿಯನ್ನು ನೆನೆದು ಕಣ್ಣೀರು ಹಾಕಿದರು ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ನಾಯಕರು ರಾಜ್ಯದ ಅಭಿವೃದ್ಧಿಗೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದನ್ನು ತಾಕತ್ತಿದ್ದರೆ ತಿಳಿಸಲಿ. ಅಲ್ಪಸಂಖ್ಯಾತರ ಅಭಿವೃದ್ಧಿಗೆ 40 ಕೋಟಿ ರೂ, ವಿಶ್ವಕರ್ಮ ಜನಾಂಗದ ಅಭಿವೃದ್ಧಿ ನಿಗಮಕ್ಕೆ 38 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಹಾಸನ-ಆಲೂರು- ಬೇಲೂರು ಮಾರ್ಗವಾಗಿ ಚಿಕ್ಕಮಗಳೂರಿಗೆ ತೆರಳಲು ರೈಲು ಮಾರ್ಗವಾಗಲಿದೆ. ಆಲೂರಿನಲ್ಲಿ ರೈಲು ನಿಲುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರೈತರ ಬೆನ್ನೆಲುಬಾಗಿ ನಿಂತು ಅಗತ್ಯವಿರುವ ನೀರಾವರಿ ಯೋಜನೆ, ಸಬ್ಸಿಡಿ, ಸಾಲಮನ್ನಾ ಯೋಜನೆಗಳನ್ನು ರೂಪಿಸಿ ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ಕೆಲಸವನ್ನು ಮಾಜಿ ಪ್ರಧಾನಿ ದೇವೇಗೌಡರು ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.

ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್ ಸೇರಿ ಹಲವು ಪಕ್ಷಗಳಲ್ಲಿ ಏಳೆಂಟು ತಲೆಮಾರಿನವರು ರಾಜಕೀಯ ಪ್ರವೇಶ ಮಾಡಿದ್ದಾರೆ. ಅದು ದೇವೇಗೌಡರ ಕುಟುಂಬಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ಹೇಳಿದರು.

ಲೋಕಸಭೆ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ಕ್ಷೇತ್ರದ ಕಾಫಿ ಬೆಳೆಗಾರರು ಕಾಡಾನೆಗಳ ಹಾವಳಿಯಿಂದ ನಷ್ಟ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ, ಬೇಲೂರು ತಾಲೂಕು ಜೆಡಿಎಸ್ ಅಧ್ಯಕ್ಷ ತೊ.ಚ.ಅನಂತಸುಬ್ಬರಾವ್, ಆಲೂರು ಜಿ.ಪಂ.ಸದಸ್ಯ ಲೋಕೇಶ್, ಬೇಲೂರು ಜಿ.ಪಂ. ಸದಸ್ಯ ಚಂದ್ರೇಗೌಡ, ಬೆಳಗೋಡು ಜಿ.ಪಂ.ಸದಸ್ಯೆ ಚಂಚಲಾ ಕುಮಾರಸ್ವಾಮಿ, ತಾ.ಪಂ. ಸದಸ್ಯರಾದ ನಟರಾಜ್ ನಾಕಲಗೂಡು, ತಾ.ಪಂ.ಮಾಜಿ ಉಪಾಧ್ಯಕ್ಷ ದಿನೇಶ್, ಪ.ಪಂ.ಅಧ್ಯಕ್ಷ ಎಚ್.ವಿ.ನಂದೀಶ್, ಉಪಾಧ್ಯಕ್ಷ ಮಂಜುನಾಥ್, ಮುಖಂಡರಾದ ಕದಾಳು ರಾಜಪ್ಪಗೌಡ ಹಾಜರಿದ್ದರು.