ದೇಶದ ರಕ್ಷಣೆ, ಅಭಿವೃದ್ಧಿಗಾಗಿ ಮೋದಿ ಬೆಂಬಲಿಸಿ

ಆಲೂರು: ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟತನದ ಆಡಳಿತದಿಂದ ಭಾರತ ಪ್ರಪಂಚದಲ್ಲಿಯೇ ಮೂರನೇ ಅಭಿವೃದ್ಧಿ ರಾಷ್ಟ್ರ ಹಾಗೂ ವಿಜ್ಞಾನ, ತಂತ್ರಜ್ಞಾನದಲ್ಲಿ ನಾಲ್ಕನೇ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಟೀಮ್ ಮೋದಿ ತಂಡದ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.

ಪಟ್ಟಣದಲ್ಲಿ ಕೊನೆಪೇಟೆಯಲ್ಲಿ ಟೀಂ ಮೋದಿ ತಂಡದ ವತಿಯಿಂದ ಏರ್ಪಡಿಸಿದ್ದ ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಮಂತ್ರಿ ದಿವಂಗತ ವಾಜಪೇಯಿ ಅವರು ಜೈ ಜವಾನ್, ಜೈ ಕಿಸಾನ್ ಎಂಬ ಘೋಷಣೆಗೆ ಜೈ ವಿಜ್ಞಾನ್ ಎಂದು ಸೇರಿಸಿ ಭಾರತವನ್ನು ಅಭಿವೃದ್ಧಿ ಉತ್ತುಂಗಕ್ಕೆ ಕರೆದೊಯ್ದಿದ್ದರು. ನಂತರ 10 ವರ್ಷ ಕಾಲ ಆಡಳಿತ ನಡೆಸಿದ ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರು ದೇಶವನ್ನು ಹತ್ತು ವರ್ಷ ಹಿಂದಕ್ಕೆ ಕೊಂಡೊಯ್ದರು. ಇದೀಗ ಮೋದಿ ಅವರು ದೇಶವನ್ನು ಮತ್ತೆ ಅಭಿವೃದ್ಧಿ ಪಥದತ್ತ ಮುಖ ಮಾಡಿಸಿದ್ದಾರೆ ಎಂದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೊಟ್ಟೆಗೆ ಹಿಟ್ಟಿಲ್ಲದೆ ಜನರು ಸೈನ್ಯಕ್ಕೆ ಸೇರುತ್ತಾರೆ ಎಂದು ಹೇಳಿಕೆ ನೀಡಿರುವುದು ದುರ್ದೈವದ ಸಂಗತಿ. ಪ್ರಜ್ವಲ್ ರೇವಣ್ಣ ಅವರಿಗೆ ಒಂದು ಕೋಟಿ ರೂ. ಹಣ ಕೊಡುತ್ತೇವೆ. ಸೈನಿಕರಾಗಿ ದೇಶವನ್ನು ಕಾಯುತ್ತಾರಾ ? ಎಂದು ಸವಾಲು ಹಾಕಿದ ಸೂಲಿಬೆಲೆ, ದೇಶ, ರಾಜ್ಯದಲ್ಲಿ ಕುಟುಂಬ ರಾಜಕಾರಣ ತಾಂಡವವಾಡುತ್ತಿದೆ. ಇದನ್ನು ಕಿತ್ತೊಗೆದು ದೇಶದ ರಕ್ಷಣೆ, ಅಭಿವೃದ್ಧಿಗಾಗಿ ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಬೇಕು ಎಂದು ಕೋರಿದರು.

ಸಾವಯವ ಕೃಷಿಕ ಧರ್ಮಲಿಂಗಂ, ಮಾಜಿ ಸೈನಿಕ ರಂಗಸ್ವಾಮಿ, ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.