ರೈತರಿಗಾಗಿ ಕಡಿಮೆ ಬೆಲೆಯಲ್ಲಿ ಗಿಡಗಳು

ಆಲೂರು: ಅರಣ್ಯ ಇಲಾಖೆ ವತಿಯಿಂದ ಕಡಿಮೆ ಬೆಲೆಯಲ್ಲಿ ರೈತರಿಗೆ ಗಿಡಗಳನ್ನು ನೀಡುತ್ತಿದ್ದು, ರೈತರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಲಯ ಅರಣ್ಯಾಧಿಕಾರಿ ಎಚ್.ರಾಜಪ್ಪ ತಿಳಿಸಿದರು.
ಗುರುವಾರ ಪತ್ರಿಕೆಯೊಂದಿಗೆ ಮಾತನಾಡಿ, ಆಲೂರು ತಾಲೂಕಿನ ಬೈರಾಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ತಾಲೂಕು ಅರಣ್ಯ ಇಲಾಖೆಯ ಸ್ಥಳದಲ್ಲಿ 2 ಲಕ್ಷ ಸಿಲ್ವರ್ ಹಾಗೂ 25 ಸಾವಿರ ಹೆಬ್ಬೇವು ಗಿಡಗಳನ್ನು ಬೆಳೆಸಲಾಗಿದೆ. 1 ಪಹಣಿಗೆ 1 ರೂ.ನಂತೆ ಸಿಲ್ವರ್ ಹಾಗೂ 3 ರೂ.ದರದಲ್ಲಿ ಹೆಬ್ಬೇವು 300 ಸಸಿಗಳನ್ನು ನೀಡಲಾಗುತ್ತಿದೆ. ಅರಣ್ಯ ಇಲಾಖೆ ವತಿಯಿಂದ ಗಿಡಗಳನ್ನು ಸಂರಕ್ಷಿಸಿರುವ ರೈತರಿಗೆ ಸಹಾಯಧನ ನೀಡುತ್ತಿದ್ದು ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ಹಸಿರೀಕರಣ ಯೋಜನೆಯಡಿ ಬೈರಾಪುರ ಗ್ರಾಮದಿಂದ ಆಲೂರಿನವರೆಗೆ 1 ಕಿಮೀವರೆಗೆ ನೂರಾರು ಗಿಡಗಳನ್ನು ನೆಡಲಾಗಿದೆ. ಬೈರಾಪುರ ಗ್ರಾಮದಿಂದ ಹೊನ್ನೇನಹಳ್ಳಿ ಕ್ರಾಸ್‌ವರೆಗೆ ರಸ್ತೆ ಬದಿಯಲ್ಲಿ ಹಾಗೂ ಆಲೂರು ಪಟ್ಟಣದಿಂದ ಕಾಮತಿವರೆಗೆ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡಲಾಗಿದೆ. ಪರಿಸರ ದಿನಾಚರಣೆಯಂದು ತಾಲೂಕಿನ ಪೊಲೀಸ್ ಠಾಣೆ, ಮುರಾರ್ಜಿದೇಸಾಯಿ ಶಾಲೆ, ನ್ಯಾಯಾಲಯದ ಆವರಣದ ಮುಂತಾದ ಕಡೆ ಗಿಡನೆಟ್ಟು ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸಲಾಗಿದೆ.
ಉಪವಲಯ ಅರಣ್ಯಾಧಿಕಾರಿ ರಂಗೇಗೌಡ, ಅರಣ್ಯ ರಕ್ಷಕರಾದ ನಾಗಪ್ಪ, ಜಯಪಾಲ್, ಕಚೇರಿ ಸಹಾಯಕ ಚನ್ನೇಗೌಡ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *