ಆಲೂರು: ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಗರಾಭಿವೃದ್ಧಿ ಇಲಾಖೆ ಮೀಸಲಾತಿ ಪಟ್ಟಿ ಪ್ರಕಟಿಸಿದ್ದು, ಇಲ್ಲಿನ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.
ಒಂದು ವರ್ಷದಿಂದ ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಜನಪ್ರತಿನಿಧಿಗಳಿದ್ದರೂ ಇಲ್ಲದಂತಾಗಿತ್ತು. ಇದರಿಂದ ಸ್ಥಳೀಯ ನಿವಾಸಿಗಳು ನಾಗರಿಕ ಸೇವೆ ಪಡೆಯಲು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳನ್ನೇ ಆಶ್ರಯಿಸುವಂತಾಗಿತ್ತು. ಇದು ಆಡಳಿತಾಧಿಕಾರಿ ಮೇಲೂ ಹೆಚ್ಚಿನ ಒತ್ತಡ ಸೃಷ್ಟಿಗೆ ಕಾರಣವಾಗಿತ್ತು.
ಇನ್ನು 11 ಸದಸ್ಯ ಬಲ ದಪಟ್ಟಣ ಪಂಚಾಯಿತಿಯಲ್ಲಿ 6 ಜೆಡಿಎಸ್ (ಅನಾರೋಗ್ಯ ಹಿನ್ನಲೆ 11ನೇ ವಾರ್ಡ್‌ನ ಅರುಣ್ ನಾಯಕ್ ಮೃತಪಟ್ಟಿದ್ದಾರೆ), 2 ಬಿಜೆಪಿ, 1 ಕಾಂಗ್ರೆಸ್ ಮತ್ತು ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಈ ಬಾರಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ಸ್ತ್ರೀಯರೇ ಪಾರಮ್ಯ ಮೆರೆಯಲಿದ್ದಾರೆ. 10ನೇ ವಾರ್ಡ್‌ನಿಂದ ಗೆದ್ದಿರುವ ಜೆಡಿಎಸ್‌ನ ಬಿ.ಪಿ.ರಾಣಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇನ್ನು ವೇದಾವತಿ ಅವರು ಹಿಂದಿನ ಎರಡೂವರೆ ವರ್ಷ ಅಧ್ಯಕ್ಷರಾಗಿದ್ದರಿಂದ ಜೆಡಿಎಸ್ ವರಿಷ್ಠರು ಜಯಮ್ಮ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬಹುದು ಎಂಬ ಮಾತು ಕೇಳಿ ಬಂದಿವೆ.