ಉಗ್ರರು, ನಕ್ಸಲರು ಮತ್ತು ಸಂಚುಕೋರರ ದಾಳಿಯಿಂದ ಗಣ್ಯವ್ಯಕ್ತಿಗಳ ಜೀವ ಉಳಿಸಲು ರಾಜ್ಯ ಪೊಲೀಸ್ ಇಲಾಖೆ ಬಳಿಯಿರುವ ಬುಲೆಟ್ ಪ್ರೂಫ್ ಕಾರುಗಳ ಪೈಕಿ 5 ಕಾರುಗಳನ್ನು ನಿಯಮಬಾಹಿರವಾಗಿ ರೂಪಾಂತರಿಸಲಾಗಿದೆ ಎಂಬ ವಿಚಾರ ಆರ್ಟಿಒ ಅಧಿಕಾರಿಗಳ ಪರಿಶೀಲನೆಯಿಂದ ಬೆಳಕಿಗೆ ಬಂದಿದೆ.
ಸಾಮಾನ್ಯ ವಿನ್ಯಾಸದ ಪಜೆರೊ ಕಾರುಗಳನ್ನು ಬುಲೆಟ್ ಪ್ರೂಫ್ ವಾಹನಗಳಾಗಿ ಪೊಲೀಸ್ ಇಲಾಖೆ ರೂಪಾಂತರಗೊಳಿಸಿ ಅವುಗಳನ್ನು ಗಣ್ಯವ್ಯಕ್ತಿಗಳ ಬೆಂಗಾವಲಿಗೆ ಬಳಸುತ್ತಿದೆ. ಈ ಕಾರುಗಳಿಂದ ಭದ್ರತೆಗಿಂತ ಅಭದ್ರತೆಯೇ ಜಾಸ್ತಿ. ಆದ್ದರಿಂದ ಈ ವಾಹನಗಳು ವಿವಿಐಪಿ ಕರ್ತವ್ಯಕ್ಕೆ ಬಳಸಲು ಯೋಗ್ಯವಾಗಿಲ್ಲ ಎಂದು ಆರ್ಟಿಒ ಅಧಿಕಾರಿಗಳು ಷರಾ ಬರೆದಿದ್ದಾರೆ. ಆದ್ದರಿಂದ ರೂಪಾಂತರಕ್ಕಾಗಿ ಖರ್ಚು ಮಾಡಿರುವ ಕೋಟ್ಯಂತರ ರೂ. ಇದೀಗ ವ್ಯರ್ಥವಾದಂತಾಗಿದೆ.
ಅಜಗಜಾಂತರ ವ್ಯತ್ಯಾಸ: ಸಾಮಾನ್ಯ ವಾಹನದ ವಿನ್ಯಾಸ ಹಾಗೂ ಬುಲೆಟ್ ಬ್ರೂಫ್ ವಾಹನದ ವಿನ್ಯಾಸಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಸಾಮಾನ್ಯ ವಾಹನವನ್ನು ಬುಲೆಟ್ ಪ್ರೂಫ್ ವಾಹನವಾಗಿ ಮಾರ್ಪಡಿಸಿದರೆ ಅದರ ತೂಕ ಮೊದಲಿಗಿಂತ ಬರೋಬ್ಬರಿ 1 ಟನ್ ಹೆಚ್ಚಾಗುತ್ತದೆ. ಇದರಿಂದ ಮೊದಲು ನಿಗದಿಪಡಿಸಿದ್ದ ವಾಹನದ ಇಂಧನ ಕ್ಷಮತೆ ಹಾಗೂ ವೇಗ (ಬ್ರೇಕ್) ನಿಯಂತ್ರಣದ ಲೆಕ್ಕಾಚಾರ ಏರುಪೇರಾಗಿ ಅಪಘಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಅವೈಜ್ಞಾನಿಕ ಗಾಜು: ಅಲ್ಲದೆ, ಕಾರುಗಳ ಕಿಟಕಿಗಳಿಗೆ ಅಳವಡಿಸಿರುವ ಬುಲೆಟ್ ಪ್ರೂಫ್ ಗಾಜುಗಳೂ ವೈಜ್ಞಾನಿಕವಾಗಿಲ್ಲ. ಒಳಗೆ ಕುಳಿತವರಿಗೆ ಹೊರಗಿನ ದೃಶ್ಯ ಕಾಣುವುದಿಲ್ಲ. ಈ ವಾಹನಗಳನ್ನು ವಿವಿಐಪಿ ಭದ್ರತೆಗೆ ಬಳಸಬಾರದು. ಆದರೆ, ವಾಹನಗಳ ಸ್ಥಿತಿ ಉತ್ತಮವಾಗಿರುವುದರಿಂದ ಬುಲೆಟ್ ಪ್ರೂಫ್ ವಿನ್ಯಾಸ ತೆಗೆದು ಸಾಮಾನ್ಯ ವಾಹನಗಳಾಗಿ ಬಳಸುವಂತೆ ಆರ್ಟಿಒ ಅಧಿಕಾರಿಗಳು ಸೂಚಿಸಿದ್ದಾರೆ.
ಒಂದು ಕಾರಿಗೆ 40 ಲಕ್ಷ ರೂ. ಖರ್ಚು
ಒಂದು ಕಾರನ್ನು ಬುಲೆಟ್ ಪ್ರೂಫ್ ವಾಹನವಾಗಿ ಮಾರ್ಪಡಿಸಲು 40 ರಿಂದ 60 ಲಕ್ಷ ರೂ. ವೆಚ್ಚವಾಗುತ್ತದೆ. ಕಂಪನಿಯಿಂದಲೇ ಆರ್ಡರ್ ಕೊಟ್ಟು ಮಾಡಿಸಿದರೆ ಅಂದಾಜು ಒಂದೂವರೆ ಕೋಟಿ ರೂ.ನಿಂದ 2 ಕೋಟಿ ರೂ. ಆಗುತ್ತದೆ. ಕಾರಿಗೆ ಅಳವಡಿಸುವ ತಾಂತ್ರಿಕ ಸಲಕರಣೆಗಳ ಮೇಲೆ ವಾಹನ ಬೆಲೆ ನಿಗದಿಯಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ವಿಮೆಯೂ ಕ್ಲೇಮ್ ಆಗಲ್ಲ!
ನಿಯಮದ ಪ್ರಕಾರ ಸಾಮಾನ್ಯ ಕಾರುಗಳನ್ನು ಬುಲೆಟ್ ಪ್ರೂಫ್ ಕಾರುಗಳಾಗಿ ಮಾರ್ಪಡಿಸಲು ಅವಕಾಶವಿಲ್ಲ. ಬುಲೆಟ್ ಪ್ರೂಫ್ ಕಾರ್ಗಾಗಿ ತಯಾರಿಕಾ ಕಂಪನಿಗೇ ಆರ್ಡರ್ ಕೊಟ್ಟು ಖರೀದಿಸಬೇಕು. ಒಂದು ವೇಳೆ ರೂಪಾಂತರಿಸಿ ಕಾರು ಅಪಘಾತವಾದರೆ ವಿಮೆ ಹಣವೂ ದೊರೆಯುವುದಿಲ್ಲ. ಕಂಪನಿ ಅನುಮತಿ ಇಲ್ಲದೆ ನಿಯಮಬಾಹಿರವಾಗಿ ಕಾರಿನ ವಿನ್ಯಾಸ ಮಾರ್ಪಾಡು ಮಾಡಲಾಗಿದೆ ಎಂದು ವಿಮಾ ಕಂಪನಿಗಳು ವಿಮೆಯನ್ನು ತಿರಸ್ಕರಿಸುತ್ತವೆ.
ಆರ್ಟಿಒ ಪರಿಶೀಲನೆ ಬಳಿಕ ಬಳಕೆ
ಗಣ್ಯರಿಗೆ ಬುಲೆಟ್ ಪ್ರೂಫ್ ವಾಹನ ನೀಡುವ ಮುನ್ನ ಆರ್ಟಿಒ ಹಾಗೂ ಬಾಂಬ್ ನಿಷ್ಕ್ರಿಯ ದಳ ಅದನ್ನು ಪರಿಶೀಲಿಸಿ ಅನುಮತಿ ಕೊಡಬೇಕು. ಬಾಂಬ್ ನಿಷ್ಕ್ರಿಯ ದಳ ಸ್ಪೋಟದ ತೀವ್ರತೆಯಿಂದ ರಕ್ಷಣೆ ಕೊಡುವುದನ್ನು ಪರಿಶೀಲಿಸುತ್ತದೆ. ವಾಹನದ ಸ್ಥಿತಿಗತಿ ಬಗ್ಗೆ ಆರ್ಟಿಒ ಅಧಿಕಾರಿಗಳು ತಪಾಸಣೆ ನಡೆಸುತ್ತಾರೆ. ತಪಾಸಣೆ ಸಂದರ್ಭದಲ್ಲಿ ವಾಹನಗಳ ರೂಪಾಂತರ ವಿಚಾರ ಬೆಳಕಿಗೆ ಬಂದಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯಕ್ಕೆ ಬೇಕು 30 ವಾಹನ
ಪ್ರಸ್ತುತ ಪೊಲೀಸ್ ಇಲಾಖೆಯಲ್ಲಿ 10 ಬುಲೆಟ್ ಪ್ರೂಫ್ ವಾಹನಗಳಿವೆ. ಗುಪ್ತದಳ ವಿಭಾಗದಲ್ಲಿ 3, ಬೆಂಗಳೂರು ನಗರ ಕಮಿಷನರೇಟ್ನಲ್ಲಿ 3, ಮೈಸೂರು, ಮಂಗಳೂರು, ಬೆಳಗಾವಿ ಹಾಗೂ ಬಳ್ಳಾರಿ ಕಮಿಷನರೇಟ್ಗಳಲ್ಲಿ ತಲಾ 1 ಕಾರುಗಳಿವೆ. ಹೊರರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಬುಲೆಟ್ ಪ್ರೂಫ್ ಕಾರುಗಳ ಸಂಖ್ಯೆ ತೀರಾ ಕಡಿಮೆ. ಆಂಧ್ರಪ್ರದೇಶದಲ್ಲಿ 60, ತಮಿಳುನಾಡಲ್ಲಿ 40 ಬುಲೆಟ್ ಪ್ರೂಫ್ ವಾಹನಗಳಿವೆ. ಕರ್ನಾಟಕಕ್ಕೂ ಕನಿಷ್ಠ 30 ವಾಹನಗಳು ಬೇಕೆಂಬ ಬೇಡಿಕೆ ಹಲವು ದಿನಗಳಿಂದ ಬಾಕಿ ಇದೆ.
| ಕೀರ್ತಿನಾರಾಯಣ ಸಿ. ಬೆಂಗಳೂರು