ಏರೋ ಇಂಡಿಯಾ ಸಮೀಪಿಸುತ್ತಿದ್ದರೂ ಐಎಎಫ್​​ ಸುತ್ತಲಿನ ರಸ್ತೆಗಳ ಅಭಿವೃದ್ಧಿಗೆ ನಿರ್ಲಕ್ಷ್ಯ

blank

ಬೆಂಗಳೂರು: ಯಲಹಂಕದಲ್ಲಿರುವ ಭಾರತಿಯ ವಾಯುಪಡೆ (ಐಎಎಫ್​​) ಕೇಂದ್ರದಲ್ಲಿ ನಡೆಯಲಿರುವ ಜಾಗತಿಕ ಮಟ್ಟದ ದ್ವೆವಾರ್ಷಿಕ ಏರ್ ಶೋ ‘ಏರೋ ಇಂಡಿಯಾ – 2025’ ದಿನಗಣನೆ ಆರಂಭವಾಗಿದ್ದರೂ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಸುತ್ತಮುತ್ತ ರಸ್ತೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ.

ಈ ಬಾರಿಯ ವೈಮಾನಿಕ ಮೇಳ ಮುಂಬರುವ ಫೆ.10ರಿಂದ 15ರವರೆಗೆ ನಿಗದಿಯಾಗಿದೆ. ವಿಶ್ವದ ಮುಂಚೂಣಿ ರಾಷ್ಟ್ರಗಳು ಸೇರಿ ಏಷ್ಯದ ಹಲವು ದೇಶಗಳ ನಾಯಕರು ಹಾಗೂ ಮಿಲಿಟರಿ ಅಧಿಕಾರಿಗಳ ನಿಯೋಗ ಬರಲಿವೆ. ಸಾವಿರಾರು ಕೋಟಿ ರೂ. ಮೊತ್ತದ ಒಡಂಬಡಿಕೆ ಹಾಗೂ ಅಷ್ಟೇ ಮೊತ್ತದ ಖರೀದಿ ವಹಿವಾಟು ನಡೆದು ಭಾರತದ ರಕ್ಷಣಾ ಹಾಗೂ ವೈಮಾನಿಕ ಕ್ಷೇತ್ರದ ಶಕ್ತಿ ಪ್ರದರ್ಶಿಸುವ ಪ್ರಬಲ ವೇದಿಕೆಯಾಗಿದೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ರಕ್ಷಣಾ ಇಲಾಖೆ ಚಟುವಟಿಕೆ ಆರಂಭಿಸಿದ್ದರೂ, ಮೂಲಸೌಕರ್ಯ ಕಲ್ಪಿಸುವ ಹೊಣೆ ಹೊತ್ತಿರುವ ರಾಜ್ಯ ಸರ್ಕಾರ ಇನ್ನೂ ತನ್ನ ಕಾರ್ಯಚಟುವಟಿಕೆಯನ್ನು ಆರಂಭಿಸಿಲ್ಲ. ಮುಖ್ಯವಾಗಿ ಏರ್‌ಶೋಗೆ ಹೋಗಿಬರುವ ಮಾರ್ಗಗಳ ಸಹಿತ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಗೊಳಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿಲ್ಲ.

ರಸ್ತೆಗಳ ಅಧ್ವಾನ:

ಐಎಎಫ್​​ ಸುತ್ತಮುತ್ತಲಿನ ರಸ್ತೆಗಳು ಕಿರಿದಾಗಿರುವ ಕಾರಣ ಏರೋ ಇಂಡಿಯಾ ವೀಕ್ಷಣೆಗೆ ಬರುವ ಲಕ್ಷಾಂತರ ಮಂದಿ ತೆರಳಲು ಕಷ್ಟವಾಗಿದೆ. ಹಾಲಿ ಏರ್‌ಪೋರ್ಟ್ ರಸ್ತೆ ಹೊರತುಪಡಿಸಿದರೆ ಇನ್ನುಳಿದ ಮಾರ್ಗಗಳು ಕಡಿಮೆ ವಿಸ್ತೀರ್ಣ ಹೊಂದಿವೆ. ಅದರಲ್ಲೂ ಐಎಎಫ್​ ಸುತ್ತಲಿನ ರಸ್ತೆಗಳು ಬಹಳಷ್ಟು ಹದೆಗೆಟ್ಟಿವೆ. ಗುಂಡಿ ಬಿದ್ದ ರಸ್ತೆಗಳಲ್ಲಿ ವಾಹನ ಸಂಚಾರ ಅಸಾಧ್ಯವಾಗಿದೆ. ಬೀದಿ ದೀಪಗಳಿಲ್ಲದೆ ರಾತ್ರಿ ವೇಳೆಯ ಸಂಚಾರ ದುಸ್ತರವಾಗಿದೆ. ಹೀಗಿದ್ದರೂ ಸಂಬಂಧಿಸಿದ ಇಲಾಖೆಯಿಂದ ರಸ್ತೆ ಮೇಲ್ದರ್ಜೆಗೇರಿಸುವ ಕೆಲಸ ಇರಲಿ, ಗುಂಡಿ ಮುಚ್ಚವ ಕಾರ್ಯವೂ ಆಗಿಲ್ಲ. ಈ ರಸ್ತೆಗಳನ್ನು ಸದಾ ಉತ್ತಮ ಮಟ್ಟದಲ್ಲಿ ಕಾಯ್ದುಕೊಳ್ಳಬೇಕಿದ್ದ ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯ್ತಿ ಹಾಗೂ ಬಿಬಿಎಂಪಿ ನಿರ್ವಹಣೆಯನ್ನೇ ಮರೆತಂತಿದೆ. ಹಣದ ಕೊರತೆ ಮುಂದು ಮಾಡಿ ಅಭಿವೃದ್ಧಿ ಕಾಮಗಾರಿ ಆರಂಭಿಸಲು ಹಿಂದೇಟು ಹಾಕಲಾಗಿದೆ.

ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬ:

ಏರ್‌ಪೋರ್ಟ್ ರಸ್ತೆಯ ಐಎಎಫ್​ ಕೇಂದ್ರದ ಬಳಿಯಿರುವ ಸರ್ ಎಂವಿಐಟಿ ರಸ್ತೆಯ ತಿಮ್ಮಸಂದ್ರ ರೈಲ್ವೆ ಗೇಟ್ ಬಳಿ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಎರಡು ವರ್ಷದ ಹಿಂದೆ ಆರಂಭಿಸಿರುವ ಕಾಮಗಾರಿ ಈವರೇಗೂ ಅರ್ಧ ಭಾಗವೂ ಪೂರ್ಣಗೊಂಡಿಲ್ಲ. ತಾತ್ಕಾಲಿಕ ರಸ್ತೆಯು ಗುಂಡಿಮಯವಾಗಿದ್ದು, ವಾಹನ ಸಂಚಾರ ಹದೆಗೆಟ್ಟಿದೆ. ಈ ರಸ್ತೆ ದೊಡ್ಡಬಳ್ಳಾಪುರ ರಸ್ತೆಯಿಂದ ಏರ್‌ಪೋರ್ಟ್‌ಗೆ ರಸ್ತೆ ನೇರ ಸಂಪರ್ಕ ಕಲ್ಪಿಸುತ್ತಿದ್ದು, ಏರ್ ಶೋ ವೇಳೆ ಸಂಚಾರ ಮಾರ್ಪಾಡು ಮಾಡಿದಾಗ ಭಾರಿ ವಾಹನಗಳು ಈ ಮಾರ್ಗವಾಗಿಯೇ ತೆರಳಬೇಕಾಗುತ್ತದೆ. ಕಾಮಗಾರಿ ವಿಳಂಬ ಆಗಿರುವ ಕಾರಣ ಈ ಬಾರಿಯೂ ಮೇಳದ ವೇಳೆ ಟ್ರಾಫಿಕ್ ಜಾಮ್ ಭೀತಿ ಎದುರಾಗಿದೆ.

ಪರ್ಯಾಯ ರಸ್ತೆಗಿಲ್ಲ ಕಾಯಕಲ್ಪ:

ಏರ್ ಶೋ ಆರಂಭವಾಗಲು ಇನ್ನು 60 ದಿನಗಳು ಮಾತ್ರ ಬಾಕಿ ಇದೆ. ಈ ಅವಧಿಯಲ್ಲಿ ಹಲವು ಪ್ರಮುಖ ರಸ್ತೆಗಳು ಸೇರಿ ಏರ್‌ಪೋರ್ಟ್ ಹಾಗೂ ಐಎಎಫ್​ ಸುತ್ತಲಿರುವ ರಸ್ತೆಗಳಿಗೆ ಡಾಂಬರು ಹಾಕುವ ಹಾಗೂ ಕೆಲ ಮಾರ್ಗಗಳನ್ನು ಹೊಸದಾಗಿ ಅಭಿವೃದ್ಧಿಪಡಿಸುವ ಕೆಲಸ ಕೈಗೆತ್ತಿಕೊಳ್ಳಲು ಸಮಯದ ಅಭಾವ ಇದೆ. ಇಷ್ಟೊತ್ತಿಗೆ ಸಮನ್ವಯ ಸಭೆ ನಡೆದು ಕಾಮಗಾರಿ ಆರಂಭಿಸಬೇಕಿತ್ತು. ಆದರೆ, ಯಾವ ರಸ್ತೆಗೂ ಡಾಂಬರು ಹಾಕುವ ಕೆಲಸ ಆಗಿಲ್ಲ. ಮುಖ್ಯವಾಗಿ ಕೆಐಎಗೆ ಪರ್ಯಾಯ ಮಾರ್ಗವೆಂದು ಪರಿಗಣಿಸಿರುವ 22 ಕಿ.ಮೀ. ಉದ್ದದ ಹೆಣ್ಣೂರು – ಬಾಗಲೂರು – ಮೈಲನಹಳ್ಳಿ – ಬೇಗೂರು ರಸ್ತೆಯನ್ನು ಮೇಲ್ದರ್ಜೆಗೇರಿಸುವ ಕಾರ್ಯ ದಶಕದ ನಂತರವೂ ನಡೆದೇ ಇಲ್ಲ. ಇದರಿಂದಾಗಿ ಏರ್ ಶೋ ನಡೆಯುವ ವೇಳೆ ಕೆಐಎಗೆ ತೆರಳಬೇಕಾದ ಪ್ರಯಾಣಿಕರು ಪ್ರಯಾಸಪಡಬೇಕಿದೆ. ಜತೆಗೆ ಬಳ್ಳಾರಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್‌ನಿಂದಾಗಿ ನೂರಾರು ಮಂದಿ ವಿಮಾನ ತಪ್ಪಿಸಿಕೊಳ್ಳುವಂತಾಗಿದೆ. ಪ್ರತೀ ಬಾರಿ ಈ ಸಮಸ್ಯೆ ಬಗ್ಗೆ ಸಂಘಟಕರು ಸರ್ಕಾರಕ್ಕೆ ತಿಳಿಸುತ್ತಿದ್ದರೂ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ.

ಅಭಿವೃದ್ಧಿಪಡಿಸಬೇಕಿರುವ ರಸ್ತೆಗಳ ವಿವರ:
* ಹೆಣ್ಣೂರು – ಬಾಗಲೂರು – ಮೈಲನಹಳ್ಳಿ – ಬೇಗೂರು ರಸ್ತೆ
* ದೊಡ್ಡಜಾಲ – ಬಿ.ಕೆ.ಹಳ್ಳಿ ರಸ್ತೆ – ಏರ್‌ಪೋಟ್ ರಸ್ತೆ
* ಬಂಡಿಕೊಡಿಗೇಹಳ್ಳಿ ರಸ್ತೆ – ಬೇಗೂರು ರಸ್ತೆ
* ಏರ್‌ಪೋರ್ಟ್ ರಸ್ತೆ (ಬಿಎಸ್‌ಎಫ್​) – ಬಾಗಲೂರು ರಸ್ತೆ
* ಸುಗ್ಗಟ್ಟ – ಗಂಟಿಗಾನಹಳ್ಳಿ – ನಿಟ್ಟೆ ಕಾಲೇಜ್ ರಸ್ತೆ
* ಕೋಗಿಲು – ಬೆಳ್ಳಹಳ್ಳಿ – ಕಣ್ಣೂರು ರಸ್ತೆ
* ರಾಜಾನುಕುಂಟೆ – ಸರ್ ಎಂವಿಐಟಿ ರಸ್ತೆ
* ಬಿಎಸ್‌ಎಫ್​ ಕೇಂದ್ರದ ಹಿಂಭಾಗದಲ್ಲಿರುವ ರಸ್ತೆಗಳು.

ಜಾಗತಿಕ ಮಟ್ಟದ ಮೇಳ ನಡೆಯುವುದಿದ್ದರೂ, ಈವರೆಗೂ ರಸ್ತೆ ಮೂಲಸೌಕರ್ಯ ಕಲ್ಪಿಸುವ ಕೆಲಸ ಆರಂಭಿಸದಿರುವುದು ಸರ್ಕಾರದಲ್ಲಿ ಹಣ ಇಲ್ಲವೆಂಬುದನ್ನು ದೃಢಪಡಿಸಿದೆ. ಪ್ರಮುಖ ರಸ್ತೆಗಳಲ್ಲಿ ಗುಂಡಿಮುಚ್ಚುವ ಕೆಲಸವೂ ವರ್ಷದಿಂದ ಆಗಿಯೇ ಇಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ ವೈಜ್ಞಾನಿಕವಾಗಿ ಗುಂಡಿ ಮುಚ್ಚದ ಕಾರಣ ಮತ್ತೆ ಮತ್ತೆ ರಸ್ತೆಗಳು ಹಾಳಾಗುತ್ತಿವೆ. ನಾಗರಿಕರ ತೆರಿಗೆ ಹಣವನ್ನು ಪೋಲು ಮಾಡದೆ ತಕ್ಷಣವೇ ರಸ್ತೆಗಳ ಮೇಲ್ದರ್ಜೆ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು.
– ಮುನೀಂದ್ರಕುಮಾರ್, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ

Share This Article

ಕೇವಲ 10 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಬ್ರೆಡ್ ಪಿಜ್ಜಾ; ಇಲ್ಲಿದೆ ಸಿಂಪಲ್​ ವಿಧಾನ | Recipe

ಮನೆಯಲ್ಲಿದ್ದಾಗ ಕೆಲವೊಮ್ಮೆ ಬಹಳ ಹಸಿವಾಗುತ್ತಿರುತ್ತದೆ ಆದರೆ ಆ ಸಮಯದಲ್ಲಿ ಏನು ತಿನ್ನಬೇಕು ಎಂಬುದೆ ನಮಗೆ ತಿಳಿಯುವುದಿಲ್ಲ.…

ಊಟದ ಬಳಿಕ ಬೆಲ್ಲದ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಭಾರತದಲ್ಲಿ ಬೆಲ್ಲವನ್ನು ಸಾಮಾನ್ಯವಾಗಿ ಊಟದ ನಂತರ ತಿನ್ನಲಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ಇದನ್ನು ಸಿಹಿಯಾಗಿ ಸೇವಿಸಬಹುದು.…

ಟೊಮೆಟೊ ಸೇವನೆ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುತ್ತದೆಯೇ; ಈ ಬಗ್ಗೆ ತಜ್ಞರು ಹೇಳೋದೇನು? | Health Tips

ಕ್ಯಾನ್ಸರ್ ಚಿಕಿತ್ಸೆಯು ಇನ್ನೂ ಅತ್ಯಂತ ದುಬಾರಿ ಮತ್ತು ಅಸಾಧ್ಯವಾಗಿದೆ. ಇತ್ತೀಚೆಗೆ ಯುವಕರನ್ನೂ ಕಾಡುತ್ತಿರುವ ರೋಗ ಕ್ಯಾನ್ಸರ್​​.…