ಶಿವಮೊಗ್ಗ: ಓದಿನ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಸಾಧಿಸಿ ಸರ್ವತೋಮುಖ ಬೆಳವಣಿಗೆ ಪಡೆಯುವುದೇ ಶಿಕ್ಷಣದ ನಿಜವಾದ ಗುರಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಅಭಿಪ್ರಾಯಪಟ್ಟರು.
ನಗರದ ನ್ಯಾಷನಲ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ ಹಂತದ ನಂತರ ಮುಂದಿನ ಶಿಕ್ಷಣ ಆಯ್ಕೆ ಮಾಡಿಕೊಳ್ಳುವಾಗ, ಬಲವಂತದ ಅಥವಾ ಗೊಂದಲದ ಆಯ್ಕೆಗಿಂತ ಆಸಕ್ತಿಯಿರುವ ವಿಷಯದಲ್ಲಿ ಅಧ್ಯಯನಶೀಲರಾಗಬೇಕು. ನೀಟ್, ಸಿಇಟಿ ಪರೀಕ್ಷೆಗಳ ಬಗ್ಗೆ ಪ್ರೌಢಶಾಲೆಯ ಹಂತದಲ್ಲೇ ಅರಿವು ಹೊಂದಬೇಕು. ಪಾಲಕರು ಮಕ್ಕಳ ಇಷ್ಟದ ಓದಿಗೆ ಪ್ರೇರಣೆ ನೀಡಬೇಕೆಂದರು.
ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಮಾತನಾಡಿ, ವಿದ್ಯೆಯ ಪರಿಪೂರ್ಣತೆಗೆ ಇಚ್ಛಾಶಕ್ತಿಯ ಅವಶ್ಯಕತೆಯಿದೆ. ಹಿರಿಯರ ಜೀವನ ಚರಿತ್ರೆ ಗಮನಿಸಿದಾಗ, ಅವರ ಯಶಸ್ಸಿನ ಹಿಂದೆ ಕಲಿತ ವಿದ್ಯೆ, ಪಡೆದ ಸಂಸ್ಕಾರ ಪ್ರಮುಖ ಪಾತ್ರ ವಹಿಸಿರುತ್ತದೆ. ಸಮಾಜಮುಖಿ ಮನೋಭಾವವನ್ನು ಮಕ್ಕಳಿಗೆ ಕಲಿಸಬೇಕು ಎಂದು ಹೇಳಿದರು.
ಭದ್ರಾವತಿಯ ಸೆಂಟ್ ಜೋಸೆಫ್ ಶಾಲೆಯ ಪ್ರಾಚಾರ್ಯೆ ಲತಾ ರಾಬರ್ಟ್ ಮಾತನಾಡಿ, ಪ್ರೌಢಶಾಲಾ ಶಿಕ್ಷಣ ಬದುಕಿಗೆ ಭದ್ರ ಬುನಾದಿ. ಆರಾಮದಾಯಕ ಮನಸ್ಥಿತಿಯಿಂದ ಮಕ್ಕಳು ಹೊರಗೆ ಬರಬೇಕು. ಈ ಹಂತದಲ್ಲಿ ಶ್ರಮವಹಿಸಿ ಕಲಿಯುವುದು ಅವಶ್ಯ ಎಂದರು.
ಔಪಚಾರಿಕ ಶಿಕ್ಷಣವನ್ನು ವಿದ್ಯಾಸಂಸ್ಥೆಗಳು ನೀಡಿದರೆ, ಅನೌಪಚಾರಿಕ ಶಿಕ್ಷಣ ಮನೆಯಲ್ಲಿ ಸಿಗುತ್ತದೆ. ಶಾಲೆಗೆ ಸೇರಿಸಿದ ಮಾತ್ರಕ್ಕೆ ನಮ್ಮ ಜವಾಬ್ದಾರಿ ಮುಗಿಯಿತು ಎನ್ನುವ ಮನಸ್ಥಿತಿ ಪಾಲಕರಿಗೆ ಬೇಡ. ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರಗಳನ್ನು ಪಾಲಕರು ನೀಡಬೇಕು ಎಂದು ಹೇಳಿದರು.
ನ್ಯಾಷನಲ್ ಪಬ್ಲಿಕ್ ಶಾಲೆಯ ಪ್ರಾಚಾರ್ಯೆ ನವೀನ ಎಂ.ಪಾಯಸ್ ಅಧ್ಯಕ್ಷತೆ ವಹಿಸಿದ್ದರು. ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ವಾರ್ಷಿಕೋತ್ಸವದ ಸಂದರ್ಭದಲ್ಲಿ ಸನ್ಮಾನಿಸಲಾಯಿತು.