ಸಿಬಿಐನಲ್ಲಿ ನಿಲ್ಲದ ಬಿರುಗಾಳಿ

ನವದೆಹಲಿ: ದೇಶದ ಪ್ರಮುಖ ತನಿಖಾ ಸಂಸ್ಥೆ ಸಿಬಿಐನಲ್ಲಿ ಎದ್ದಿರುವ ಬಿರುಗಾಳಿ ಸದ್ಯಕ್ಕೆ ಶಾಂತವಾಗುವ ಲಕ್ಷಣ ಕಂಡುಬರುತ್ತಿಲ್ಲ. ಸಿಬಿಐ ನಿರ್ದೇಶಕ ಹುದ್ದೆಯಿಂದ ವರ್ಗಾವಣೆಗೊಂಡಿರುವ ಅಲೋಕ್ ವರ್ಮಾ, ಸೇವೆಗೆ ರಾಜೀನಾಮೆ ನೀಡಿದ್ದಾರೆ. ಇತ್ತ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ವಿರುದ್ಧದ ಸಿಬಿಐ ತನಿಖೆಗೆ ದೆಹಲಿ ಹೈಕೋರ್ಟ್ ಹಸಿರು ನಿಶಾನೆ ತೋರಿದೆ. ಪ್ರಭಾರ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿರುವ ನಾಗೇಶ್ವರ್ ರಾವ್, ವರ್ಮಾ ಅವರ ಎಲ್ಲ ಆದೇಶಗಳನ್ನು ರದ್ದುಪಡಿಸಿ ಇನ್ನೊಂದು ಹಂತದ ಸರ್ಜರಿಗೆ ಮುಂದಾಗಿದ್ದಾರೆ. ಶುಕ್ರವಾರ ಸಿಬಿಐನಲ್ಲಿ ದಿನವಿಡೀ ಬಿರುಸಿನ ಚಟುವಟಿಕೆ ನಡೆಯಿತು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ಗುರುವಾರ ರಾತ್ರಿ ಅಲೋಕ್ ವರ್ಮಾ ರನ್ನು ಸಿಬಿಐನಿಂದ ಅಗ್ನಿಶಾಮಕ ಇಲಾಖೆಗೆ ವರ್ಗಾಯಿಸಿತ್ತು. ಆದರೆ ತಾಂತ್ರಿಕ ಕಾರಣಗಳನ್ನು ನೀಡಿ ಆ ಹುದ್ದೆ ಸ್ವೀಕರಿಸಲು ನಿರಾಕರಿಸಿದ ವರ್ಮಾ, ಸೇವೆಗೆ ರಾಜೀನಾಮೆ ನೀಡಿದ್ದಾರೆ.

ಅಸ್ಥಾನಾ ಅರ್ಜಿ ವಜಾ: ಕಡ್ಡಾಯ ರಜೆ ಮೇಲಿರುವ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ವಿರುದ್ಧದ ಲಂಚ ಪ್ರಕರಣವನ್ನು ರದ್ದುಪಡಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದು, ಈ ಹಂತದಲ್ಲಿ ತನಿಖೆ ರದ್ದುಪಡಿಸಲಾಗದು. ಸಿಬಿಐ ಅಧಿಕಾರಿಗಳು ವಿಚಾರಣೆ ಮುಂದುವರಿಸಲಿ ಎಂದು ನ್ಯಾಯಪೀಠ ಸೂಚಿಸಿದೆ. ಇದರಿಂದ ಅಸ್ಥಾನಾ ಬಂಧಿಸದಂತೆ ಕೋರ್ಟ್ ನೀಡಿದ್ದ ಆದೇಶ ಕೂಡ ಕೊನೆಯಾದಂತಾಗಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಅಸ್ಥಾನಾ ಸುಪ್ರೀಂಕೋರ್ಟ್​ಗೆ ಹೋಗುವ ಸಾಧ್ಯತೆಯಿದೆ. ಖುರೇಷಿ ಪ್ರಕರಣದಲ್ಲಿ ತನಿಖೆ ವಿಳಂಬ ಹಾಗೂ ಜಾಮೀನು ಕೊಡಿಸಲು ಅಸ್ಥಾನಾ ಲಂಚ ಪಡೆದಿದ್ದಾರೆ ಎಂಬ ಆರೋಪವಿದೆ. ಉದ್ಯಮಿ ಸತೀಶ್ ಹೇಳಿಕೆ ಆಧರಿಸಿ ಮಾಜಿ ನಿರ್ದೇಶಕ ವರ್ಮಾ ಸೂಚನೆ ಮೇರೆಗೆ ಅ.23ರಂದು ಅಸ್ಥಾನಾ ವಿರುದ್ಧ ಎಫ್​ಐಆರ್ ದಾಖಲಿಸಲಾಗಿತ್ತು. ಈ ಎಫ್​ಐಆರ್ ಬಳಿಕವೇ ಸಿಬಿಐನಲ್ಲಿ ಹೈಡ್ರಾಮಾ ನಡೆದಿತ್ತು. ಅದರ ಮುಂದುವರಿದ ಭಾಗವಾಗಿ ವರ್ಮಾ ಅವರನ್ನು ಸಿಬಿಐನಿಂದ ಹೊರಹಾಕಲಾಗಿದೆ.

ಬಂಧನ ಭೀತಿಯಲ್ಲಿ ಮಾಜಿಗಳು

ಮಾಂಸದ ವ್ಯಾಪಾರಿ ಮೊಯೀನ್ ಖುರೇಷಿ ಪ್ರಕರಣಕ್ಕೆ ಸಂಬಂಧಿಸಿ ಲಂಚ ಪಡೆದ ಆರೋಪದ ಮೇಲೆ ಸಿಬಿಐನ ಇಬ್ಬರು ಮಾಜಿ ಅಧಿಕಾರಿಗಳು ಬಂಧನ ಭೀತಿಯಲ್ಲಿದ್ದಾರೆ. ಮಾಜಿ ನಿರ್ದೇಶಕ ಅಲೋಕ್ ವರ್ಮಾ ಹಾಗೂ ಕಡ್ಡಾಯ ರಜೆ ಮೇಲಿರುವ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾರನ್ನು ವಿಚಾರಣೆಗಾಗಿ ಬಂಧಿಸುವ ಸಾಧ್ಯತೆಯಿದೆ. ಸಿಬಿಐ ಎರಡೂ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದು, ಪರಸ್ಪರ ಕಿತ್ತಾಟದ ಪರಿಣಾಮವಾಗಿ ಅವರು ಬಂಧನ ಎದುರಿಸುವ ಸ್ಥಿತಿ ತಲುಪಿದ್ದಾರೆ.

ಸಿಬಿಐಗೆ ಖುರೇಷಿ ತಲೆನೋವು

ಮಾಂಸದ ಉದ್ಯಮಿ ಮೊಯೀನ್ ಖುರೇಷಿ ಲಂಚದ ಪ್ರಕರಣದಲ್ಲಿ ಈವರೆಗೆ ಮೂವರು ಸಿಬಿಐ ನಿರ್ದೇಶಕರಿಗೆ ಕಳಂಕ ಅಂಟಿದೆ. ಎ.ಪಿ. ಸಿಂಗ್, ರಂಜಿತ್ ಸಿನ್ಹಾ ಹಾಗೂ ಅಲೋಕ್ ವರ್ಮಾ ಅವರು ಖುರೇಷಿ ಪ್ರಕರಣದಲ್ಲಿ ನೆರವು ನೀಡಿದ್ದರು ಎಂಬ ಆರೋಪವಿದೆ. ಇದಲ್ಲದೇ ಅಸ್ಥಾನಾ ವಿರುದ್ಧದ ಆರೋಪದಲ್ಲಿಯೂ ಈತನ ಹೆಸರಿದೆ.

ಸಿಬಿಐ ಸೇರಿ ಅನೇಕ ಸ್ವಾಯತ್ತ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಅದು ಹೆಚ್ಚಾಗಿದೆ.ಚುನಾವಣೆ ಸಂದರ್ಭದಲ್ಲಿ ಯಾರನ್ನಾದರೂ ಹಣಿಯಲು ತನಿಖಾ ಸಂಸ್ಥೆಗಳನ್ನು ಹೇಗೆ ಬೇಕೋ ಹಾಗೆ ಬಳಸಿಕೊಳ್ಳಲಾಗುತ್ತಿದೆ.

| ಎಚ್.ಡಿ.ದೇವೇಗೌಡ ಮಾಜಿ ಪ್ರಧಾನಿ

ನಿರ್ದೇಶಕರ ಹುದ್ದೆಗೆ ಯಾರು?

ಸಿಬಿಐಗೆ ನೂತನ ನಿರ್ದೇಶಕರ ನೇಮಕಕ್ಕೆ ಪ್ರಕ್ರಿಯೆ ಆರಂಭವಾಗಿದೆ. ಗುರುವಾರ ರಾತ್ರಿ ನಡೆದ ಆಯ್ಕೆ ಸಮಿತಿ ಸಭೆಯ ಮುಂದೆ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರನ್ನು ಪ್ರಸ್ತಾಪಿಸಲಾಗಿದೆ. ರಾಷ್ಟ್ರೀಯ ತನಿಖಾ ದಳದ ಡಿಐಜಿ ವೈ.ಸಿ. ಮೋದಿ, ಉತ್ತರಪ್ರದೇಶದ ಡಿಜಿಪಿ ಓ.ಪಿ.ಸಿಂಗ್ ಹಾಗೂ ಸಿಐಎಸ್​ಎಫ್ ಮುಖ್ಯಸ್ಥ ರಾಜೇಶ್ ರಂಜನ್ ಹೆಸರು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಮೋದಿ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.

ವರ್ಮಾ ವಿರುದ್ಧ ಎಫ್​ಐಆರ್?

ಖುರೇಷಿ ಅಕ್ರಮ ಹಣ ವರ್ಗಾವಣೆ ಹಾಗೂ ಐಆರ್​ಸಿಟಿಸಿ ಹಗರಣದ ತನಿಖೆ ಮೇಲೆ ಪ್ರಭಾವ ಬೀರಿರುವ ಆರೋಪಕ್ಕೆ ಸಂಬಂಧಿಸಿ ಕ್ರಿಮಿನಲ್ ಪ್ರಕರಣ ದಾಖ ಲಿಸಲು ಸಿಬಿಐಗೆ ಸಿವಿಸಿ ಶಿಫಾರಸು ಮಾಡಿದೆ. ಆಯ್ಕೆ ಸಮಿತಿ ಕೂಡ ವಿಚಾರ ಣೆಗೆ ಸಮ್ಮತಿಸಿದೆ ಎನ್ನಲಾಗಿದೆ. ಹೀಗಾಗಿ ಶೀಘ್ರದಲ್ಲೇ ವರ್ಮಾ ವಿರುದ್ಧವೂ ಎಫ್​ಐಆರ್ ದಾಖಲಾಗುವ ಸಾಧ್ಯತೆಯಿದೆ.

ನ್ಯಾ.ಸಿಕ್ರಿ ಸಮರ್ಥನೆ

ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿ ನಿಲುವಿಗೆ ಸುಪ್ರೀಂ ಕೋರ್ಟ್ ನ್ಯಾ.ಎ.ಕೆ.ಸಿಕ್ರಿ ಸಮರ್ಥನೆ ನೀಡಿದ್ದಾರೆ. ನ್ಯಾ.ಮಾರ್ಕಂಡೇಯ ಕಾಟ್ಜು ಅವರು ನ್ಯಾ.ಸಿಕ್ರಿ ಅಭಿಪ್ರಾಯವನ್ನು ಟ್ವೀಟ್ ಮಾಡಿದ್ದಾರೆ. ಅದು ಹೀಗಿದೆ:

  • ವರ್ಮಾ ವಿರುದ್ಧ ಕೆಲ ಗಂಭೀರ ಆರೋಪಗಳಿದ್ದು, ಸಿವಿಸಿ ವಿಚಾರಣೆಯಲ್ಲಿ ಮೇಲ್ನೋಟಕ್ಕೆ ಸಾಬೀತಾಗಿದೆ. ಆರೋಪಗಳಿಗೆ ಸಂಬಂಧಿಸಿ ಸಿವಿಸಿ ವರ್ಮಾ ಅಭಿಪ್ರಾಯ ಪಡೆದಿದೆ.
  • ಪ್ರಕರಣದ ಅಂತಿಮ ವಿಚಾರಣೆವರೆಗೆ ಸಿಬಿಐ ನಿರ್ದೇಶಕರ ಹುದ್ದೆಯಲ್ಲಿ ವರ್ಮಾ ಮುಂದುವರಿಯಕೂಡದು. ್ಞರ್ವ ಅವರನ್ನು ಸೇವೆಯಿಂದ ವಜಾಗೊಳಿಸದೇ ಬೇರೊಂದು ಹುದ್ದೆಗೆ ವರ್ಗಾಯಿಸಲಾಗುತ್ತಿದೆ.
  • ಅಮಾನತುಗೊಳಿಸಲು ಆರೋಪಿಯ ವಿವರಣೆ ಪಡೆಯುವ ಅಗತ್ಯವಿಲ್ಲ, ಮುಂದಿನ ವಿಚಾರಣೆ ಸಂದರ್ಭದಲ್ಲಿ ವಿವರಣೆ ನೀಡಲು ಅವಕಾಶವಿರುತ್ತದೆ.