ಸರ್ವ ಸಮಾಜದ ಏಳಿಗೆಗೆ ಬದ್ಧ

ಆಲಮೇಲ: ನನ್ನ ಅವಧಿಯಲ್ಲಿ ಎಲ್ಲ ಸಮುದಾಯದ ಅಭಿವೃದ್ಧಿಗಾಗಿ ಅನುದಾನ ಒದಗಿಸಿ ಅವರ ಏಳಿಗೆ ಮಾಡುವುದೇ ನನ್ನ ಮೂಲ ಗುರಿಯಾಗಿದೆ ಎಂದು ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಹೇಳಿದರು.
ಪಟ್ಟಣದ ಕುಂಬಾರ ಓಣಿಯಲ್ಲಿ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಸಮುದಾಯ ಭವನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕುಂಬಾರ ಸಮುದಾಯದವರು ಚುನಾವಣೆ ಪ್ರಚಾರದ ವೇಳೆ ಸಮುದಾಯ ಭವನದ ಬೇಡಿಕೆ ಇಟ್ಟಿದ್ದರು. ಆಗ ಅವರಿಗೆ ಕೊಟ್ಟ ಮಾತಿನಂತೆ ಸದ್ಯ 4 ಲಕ್ಷ ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಪಟ್ಟಣದಲ್ಲಿ ಏನೇ ಸಮಸ್ಯೆಗಳು ಇದ್ದರೆ ನೇರವಾಗಿ ನನ್ನ ಗಮನಕ್ಕೆ ತರಬೇಕು. ನಾನು ನೇರವಾಗಿ ಅದರ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ಯುವ ಮುಖಂಡ ಶ್ರೀಶೈಲ ಕುಂಬಾರ ಮಾತನಾಡಿ, ಸಚಿವರು ಭರವಸೆ ನೀಡಿದಂತೆ ಸಮುದಾಯ ಭವನದ ಬೇಡಿಕೆ ಈಡೇರಿಸಿದ್ದಾರೆ. ಅವರಿಗೆ ಕುಂಬಾರ ಸಮಾಜ ಚಿರಋಣಿಯಾಗಿರುತ್ತದೆ. ಸಚಿವರ ಸರಳತೆ, ಸಮಾಧಾನವೇ ಅಭಿವೃದ್ಧಿಗೆ ಸಾಕ್ಷಿಯಾಗಿದೆ ಎಂದರು.
ಮುಖಂಡರಾದ ಶ್ರೀಶೈಲ ಅಳ್ಳೊಳಿಮಠ, ಗ್ರಾಮೀಣ ಅಭಿವೃದ್ಧಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಿವುಕುಮಾರ ಗುಂದಗಿ, ದೇವಪ್ಪ ಗುಣಾರಿ, ನಾನಾಗೌಡ ಅಜಲಪುರ, ಬಸವರಾಜ ಜೋಗುರ, ಶ್ರೀಶೈಲ ಕುಂಬಾರ, ಚಂದು ಹಳಮನಿ, ಪರಶುರಾಮ ಕಾಂಬಳೆ, ಪುಂಡಲಿಕ ದೊಡ್ಡಮನಿ, ಮುದಕಪ್ಪ ಜಮಾದಾರ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *