ಅಲ್ಲು ಅರ್ಜುನ್​ಗೆ ರಶ್ಮಿಕಾ ನಾಯಕಿ: ‘ರಂಗಸ್ಥಳಂ’ ನಿರ್ದೇಶಕನ ಸಿನಿಮಾದಲ್ಲಿ ಕನ್ನಡತಿ

ಬೆಂಗಳೂರು: ಸ್ಟಾರ್ ನಟರ ಸಿನಿಮಾಗಳು ಅನೌನ್ಸ್ ಆದಾಗೆಲ್ಲ, ಅದಕ್ಕೆ ನಟಿ ರಶ್ಮಿಕಾ ಮಂದಣ್ಣ ನಾಯಕಿ ಎಂಬ ಸುದ್ದಿಗಳು ಹಿಂದಿನಿಂದಲೂ ಕೇಳಿಬರುತ್ತಿದ್ದವು. ಆದರೆ, ಅದು ಬರೀ ವದಂತಿ ಎಂಬುದು ನಂತರ ಸಾಬೀತಾಗುತ್ತಿತ್ತು. ಆದರೆ, ಈ ಬಾರಿ ಹಾಗಾಗಿಲ್ಲ! ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಸಿನಿಮಾಕ್ಕೆ ರಶ್ಮಿಕಾ ನಾಯಕಿಯಾಗಿ ಆಯ್ಕೆ ಆಗಿರುವುದು ಕನ್ಪಮ್ರ್ ಎನ್ನುತ್ತಿವೆ ಮೂಲಗಳು!

ಹೌದು, ಅಲ್ಲು ಅರ್ಜುನ್ ಮತ್ತು ‘ರಂಗಸ್ಥಳಂ’ ನಿರ್ದೇಶಕ ಸುಕುಮಾರ್ ಜತೆಯಾಗಿ ಮಾಡುತ್ತಿರುವ ಸಿನಿಮಾಗೆ ರಶ್ಮಿಕಾಗೆ ನಾಯಕಿಪಟ್ಟ ನೀಡಲಾಗಿದೆ. ಈ ಕುರಿತು ಟ್ವೀಟ್​ವೊಂದಕ್ಕೆ ರೀ-ಟ್ವೀಟ್ ಮಾಡಿರುವ ರಶ್ಮಿಕಾ ‘ನಾನು ತುಂಬ ಉತ್ಸುಕಳಾಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಏ.8ರಂದು ಅಲ್ಲು ಅರ್ಜುನ್ ಬರ್ತ್​ಡೇ.

ಆ ಸಲುವಾಗಿ ಸಾಲು ಸಾಲು ಸಿನಿಮಾಗಳಿಗೆ ಅವರು ಚಾಲನೆ ನೀಡಿದ್ದಾರೆ. 2018ರಲ್ಲಿ ತೆರೆಕಂಡ ‘ನಾ ಪೇರು ಸೂರ್ಯ’ ಸಿನಿಮಾ ಹೀನಾಯ ಸೋಲು ಕಂಡಿತ್ತು. ಅಲ್ಲಿಂದೀಚೆಗೆ ಅವರು ಬೇರಾವ ಸಿನಿಮಾಗಳನ್ನೂ ಒಪ್ಪಿಕೊಂಡಿರಲಿಲ್ಲ. ಇದೀಗ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಜತೆಗೆ ಒಂದು ಸಿನಿಮಾಕ್ಕೆ ಓಕೆ ಎಂದಿದ್ದಾರೆ. ‘ದಿಲ್’ ರಾಜು ನಿರ್ವಣದಲ್ಲಿ ‘ಐಕಾನ್’ ಹೆಸರಿನ ಚಿತ್ರ ಒಪ್ಪಿಕೊಂಡಿದ್ದಾರೆ. ಶ್ರೀರಾಮ್ ವೇಣು ಅದರ ನಿರ್ದೇಶಕರು. ಆನಂತರ ಸುಕುಮಾರ್ ಮತ್ತು ಮೈತ್ರಿ ಮೂವೀ ಮೇಕರ್ಸ್ ಕಾಂಬಿನೇಷನ್​ನ ಸಿನಿಮಾದಲ್ಲಿಯೂ ಅರ್ಜುನ್ ಬಣ್ಣ ಹಚ್ಚಲಿದ್ದಾರೆ.

ಡಾನ್ಸ್​ನಲ್ಲಿ ಅಲ್ಲು ಅರ್ಜುನ್ ಪರಿಣಿತರು. ಹಾಗಾಗಿ, ರಶ್ಮಿಕಾ ಕೂಡ ಈಗಾಗಲೇ ಡಾನ್ಸ್ ಕಲಿಕೆಯಲ್ಲಿ ಬಿಜಿ ಆಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಎಲ್ಲ ಅಂದುಕೊಂಡಂತೆ ಆದರೆ, ಈ ವರ್ಷದ ಕೊನೆಯಲ್ಲಿ ಈ ಸಿನಿಮಾ ಶುರುವಾಗುವ ಸಾಧ್ಯತೆಗಳಿವೆ. ಸದ್ಯ ರಶ್ಮಿಕಾ ಕೈಯಲ್ಲೂ ಸಿಕ್ಕಾಪಟ್ಟೆ ಸಿನಿಮಾಗಳಿವೆ. ಕನ್ನಡದಲ್ಲಿ ಧ್ರುವ ಸರ್ಜಾ ಜತೆ ‘ಪೊಗರು’ ಹಾಗೂ ತೆಲುಗಿನಲ್ಲಿ ನಿತಿನ್ ಜತೆ ‘ಭೀಷ್ಮ’ ಚಿತ್ರದ ಚಿತ್ರೀಕರಣದಲ್ಲಿ ಅವರೀಗ ಬಿಜಿ ಇದ್ದಾರೆ. ವಿಜಯ್ ದೇವರಕೊಂಡ ಅವರೊಂದಿಗೆ ನಟಿಸಿರುವ ‘ಡಿಯರ್ ಕಾಮ್ರೇಡ್’ ಸಿನಿಮಾ ನಾಲ್ಕು ಭಾಷೆಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಈ ಮಧ್ಯೆ ಎರಡು ತಮಿಳು ಸಿನಿಮಾಗಳನ್ನು ಅವರು ಒಪ್ಪಿಕೊಂಡಿದ್ದಾರೆ.

Leave a Reply

Your email address will not be published. Required fields are marked *