ಕಾಂಗ್ರೆಸ್​ ಮೈತ್ರಿಕೂಟ ಸೇರಬೇಕಿದ್ದರೆ ನಮ್ಮ ಮಾತನ್ನೂ ಸ್ವಲ್ಪ ಕೇಳಿ ಎಂದ ಮಾಯಾವತಿ

ನವದೆಹಲಿ: ನಮಗೆ ಸಮಾಧಾನವಾಗುವಷ್ಟು ಸಂಖ್ಯೆಯ ಸ್ಥಾನಗಳನ್ನು ಬಿಟ್ಟುಕೊಟ್ಟರೆ ಮಾತ್ರ ನಾವು ಮೈತ್ರಿ ಕೂಟ ಸೇರುತ್ತೇವೆ ಎಂದು ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಇಂದು ಕಾಂಗ್ರೆಸ್​ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಎಸ್​ಪಿ ಮತ್ತು ಎಸ್​ಪಿ ಮೈತ್ರಿಯಿಂದಾಗಿ ಕೇಂದ್ರದ ಆಡಳಿತಾರೂಢ ಬಿಜೆಪಿಗೆ ಹಿನ್ನಡೆಯಾಗಿದ್ದು, ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್​ ಮೈತ್ರಿ ಕೂಟ ರಚನೆಯಾಗುವಲ್ಲಿ ಮಾಯಾವತಿಯವರೂ ಪ್ರಮುಖ ಪಾತ್ರ ವಹಿಸಿದ್ದರ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಪಕ್ಷವು ರಾಷ್ಟ್ರಮಟ್ಟದಲ್ಲಿ ಬಿಎಸ್ಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನ ನಡೆಸುತ್ತಿದೆ. ಪ್ರಮುಖವಾಗಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಘಡದ ವಿಧಾನಸಭೆ ಚುನಾವಣೆ ಮೂಲಕ ಈ ಮೈತ್ರಿ ರಚಿಸಿಕೊಳ್ಳಲು ಕಾಂಗ್ರೆಸ್​ ಉತ್ಸುಕವಾಗಿದೆ.

ಅಲ್ಲದೆ, 2019ರ ಚುನಾವಣೆಯಲ್ಲಿ ಏಕಾಂಗಿಯಾಗಿ ಬಿಜೆಪಿಯನ್ನು ಎದುರಿಸಲು ಸಾಧ್ಯವಿಲ್ಲ ಎಂದು ಅರಿತಿರುವ ಕಾಂಗ್ರೆಸ್​ ಸಣ್ಣ ಪುಟ್ಟ ಪಕ್ಷಗಳೊಂದಿಗೆ ಮೈತ್ರಿ ಸಾಧಿಸಲು ಹೆಚ್ಚಿನ ಆಸಕ್ತಿ ಹೊಂದಿದೆ. ಅದರಲ್ಲಿ ಬಿಎಸ್​ಪಿ ಕೂಡ ಒಂದು. ಹೀಗಿರುವಾಗಲೇ ಮಾಯಾವತಿ ಅವರು ಕಾಂಗ್ರೆಸ್​ಗೆ ಸಂದೇಶ ರವಾನಿಸಿರುವುದು ರಾಷ್ಟ್ರ ರಾಜಕಾರಣದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಇದೇ ವರ್ಷ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್​ಘಡದ ವಿಧಾನಸಭೆಗೆ ಚುನಾವಣೆಗಳು ನಡೆಯುತ್ತಿವೆ. ಈ ಮೂರೂ ರಾಜ್ಯಗಳಲ್ಲೂ ಬಿಜೆಪಿ ಅಧಿಕಾರದಲ್ಲಿದೆ. ಬಿಜೆಪಿ ಹತ್ತು ವರ್ಷಗಳಿಂದ ಅಧಿಕಾರದಲ್ಲಿರುವ ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ಆಡಳಿತಾರೂಢ ಪಕ್ಷಕ್ಕೆ ಆಡಳಿತ ವಿರೋಧಿ ಅಲೆ ವ್ಯಕ್ತವಾಗುತ್ತಿದ್ದು ಕಾಂಗ್ರೆಸ್​ಗೆ ಪೂರಕ ವಾತಾವರಣವಿದೆ. ಆದರೂ, ತನ್ನ ದಲಿತ ಬಾಹುಳ್ಯವನ್ನು ವಿಸ್ತರಿಸಿಕೊಳ್ಳಲು ಬಿಎಸ್​ಪಿಯ ನೆರವು ಅಗತ್ಯ ಎಂಬ ಸ್ಥಿತಿ ಕಾಂಗ್ರೆಸ್​ನದ್ದು.

ಈ ಮೂರು ರಾಜ್ಯಗಳಲ್ಲೂ ಕಾಂಗ್ರೆಸ್​ – ಬಿಎಸ್​ಪಿ ಮೈತ್ರಿ ಮಾಡಿಕೊಳ್ಳಲಿವೆ ಎಂದು ಮೊದಲಿಗೆ ಹೇಳಲಾಗಿತ್ತಾದರೂ, ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಆಗಿಲ್ಲ ಎಂದು ಸ್ವತಃ ಮಾಯಾವತಿ ಅವರೇ ಘೋಷಿಸಿದ್ದರು.

ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್​ಘಡದ ವಿಧಾನಸಭೆ ಚುನಾವಣೆಯ ಫಲತಾಂಶ ಕಾಂಗ್ರೆಸ್​ಗೆ ಅತ್ಯಂತ ಪ್ರಮುಖ. ಇದಕ್ಕಾಗಿ ಬಿಎಸ್​ಪಿ ಮೈತ್ರಿಯೂ ಅನಿವಾರ್ಯ.
ಹೀಗಿರುವಾಗಲೇ ಸ್ಥಾನಗಳ ಹಂಚಿಕೆ ಬಗ್ಗೆ ಮಾಯಾವತಿ ಸ್ಪಷ್ಟ ನಿಲುವು ಪ್ರಕಟಿಸಿದ್ದಾರೆ. ತನಗೆ ಸಮಾಧಾನವಾಗುವ ಸ್ಥಾನಗಳನ್ನು ನೀಡಿದರಷ್ಟೇ ಮೈತ್ರಿ ಎಂಬ ನಿರ್ಧಾರಕ್ಕೆ ಮಾಯಾವತಿ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮೈತ್ರಿಯ ಬಗ್ಗೆ ಈಗ ಸಾಕಷ್ಟು ಕುತೂಹಲ ಮನೆ ಮಾಡಿದೆ.