ಬೆಂಗಳೂರು: ಬಿಜೆಪಿ ಜತೆಗಿನ ಮೈತ್ರಿಗೆ ಜೆಡಿಎಸ್‌ನಲ್ಲೇ ಅಪಸ್ವರ ಕೇಳಿ ಬಂದಿದೆ. ಜೆಡಿಎಸ್ ಅಲ್ಪಸಂಖ್ಯಾತ ಮುಖಂಡರು ರಾಜೀನಾಮೆ ನೀಡಿ ಪಕ್ಷಕ್ಕೆ ಗುಡ್‌ಬೈ ಹೇಳಿದ್ದಾರೆ.
ಈಗ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮೈತ್ರಿ ಬಗ್ಗೆ ತುಟಿಬಿಚ್ಚಿಸಲ್ಲ. ಈ ನಡುವೆ ಸಿಎಂ ಇಬ್ರಾಹಿಂ ಜೆಡಿಎಸ್ ತೊರೆಯುತ್ತಾರೆಯೆ ಎಂಬ ಚರ್ಚೆಗಳು ರಾಜ್ಯ ರಾಜಕೀಯದಲ್ಲಿ ಶುರುವಾಗಿವೆ. ಬಿಜೆಪಿ ವರಿಷ್ಠರ ಜತೆಗಿನ ಮೈತ್ರಿ ಮಾತುಕತೆ ಸಂದರ್ಭದಲ್ಲಿಯೂ ಸಿಎಂ ಇಬ್ರಾಹಿಂ ಗೈರಾಗಿದ್ದರು. ಮೈತ್ರಿ ಪ್ರಸ್ತಾಪದ ಬಳಿಕ ಇಬ್ರಾಹಿಂ ಜೆಡಿಎಸ್ ನಾಯಕರ ಜತೆ ಕಾಣಿಸಿಕೊಂಡಿಲ್ಲ. ಇದು ಹಲವು ಅನುಮಾನ ಉಂಟು ಮಾಡಿದೆ.
ಅಕ್ಟೋಬರ್ ಎರಡನೇ ವಾರ ಇಬ್ರಾಹಿಂ ಪಕ್ಷದ ಅಸಮಾಧಾನಿತ ಶಾಸಕರು, ಮಾಜಿ ಶಾಸಕರು, ಮುಖಂಡರು ಹಾಗೂ ಮುಸ್ಲಿಂ ನಾಯಕರ ಜತೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಮೈತ್ರಿಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ಈ ಬೆಳವಣಿಗೆ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ಕೆಲವರು ಗುಂಪು ಮಾಡಿಕೊಂಡು ಸಭೆ ಮಾಡಲು ಉದ್ದೇಶಿಸಿದ್ದಾರೆ. ಅವರಿಗೆ ನಾನು ಹೇಳುವುದು ಇಷ್ಟೇ, ನಾವೆಂದೂ ನಿಮಗೆ ಅಗೌರವ ತೋರಿಸಿಲ್ಲ. ಇದನ್ನು ಅರಿತುಕೊಳ್ಳಿ ಎಂದು ಮನವಿ ಮಾಡಿದರು.