ಮೈತ್ರಿಗೆ ಸರ್ಕಾರ ಉಳಿಸಿಕೊಳ್ಳುವ ಶಕ್ತಿ ಇದೆ – ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿ: ಶಾಸಕ ರಮೇಶ ಜಾರಕಿಹೊಳಿ ಅವರೊಬ್ಬರು ಬದ್ಧತೆ ಇಲ್ಲದೆ ರಾಜಕಾರಣಿ. ಅಳಿಯನ ಹಿತಾಸಕ್ತಿಗಾಗಿ ಬಿಜೆಪಿ ಸೇರುತ್ತಿರುವ ವ್ಯಕ್ತಿಯ ಬಗ್ಗೆ ಪದೇ ಪದೇ ಮಾತನಾಡುವುದು ಸರಿಯಲ್ಲ. ಸರ್ಕಾರ ರಚಿಸಿದ ನಾಯಕರಿಗೆ ಸರ್ಕಾರ ಉಳಿಸಿಕೊಳ್ಳುವ ಶಕ್ತಿ ಮತ್ತು ಯುಕ್ತಿ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎರಡು ದಿನಗಳಿಂದ ರಮೇಶ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳುತ್ತಿದ್ದಾರೆ. ಆದರೆ ರಾಜೀನಾಮೆ ಕೊಡ್ತಿಲ್ಲ. ದಿನಕ್ಕೊಂದು ಹೇಳಿಕೆ ನೀಡುತ್ತ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬಲಿಷ್ಠವಾಗಿದೆ. ಈ ಸರ್ಕಾರ ಐದು ವರ್ಷ ಅಧಿಕಾರ ಅವಧಿ ಪೂರ್ಣಗೊಳಿಸಲಿದೆ. ಸರ್ಕಾರ ರಚನೆ ಮಾಡಿರುವವವರಿಗೆ ಸರ್ಕಾರ ಉಳಿಸುವುದು ಗೊತ್ತಿರುತ್ತದೆ. ಸರ್ಕಾರ ಉಳಿಸುವ ಶಕ್ತಿ ಕಾಂಗ್ರೆಸ್- ಜೆಡಿಎಸ್ ನಾಯಕರಲ್ಲಿದೆ ಎಂಬುದನ್ನು ರಮೇಶ ಜಾರಕಿಹೊಳಿ ಅರ್ಥ ಮಾಡಿಕೊಳ್ಳಬೇಕು. ಸಮಸ್ಯೆಗಳಿದ್ದರೆ ಪರಿಹರಿಸಿಕೊಳ್ಳುವ ಬದಲು ಬೇಕಾಬಿಟ್ಟಿ ಹೇಳಿಕೆ ನೀಡುತ್ತಿರುವುದು ಒಳ್ಳೆಯದಲ್ಲ ಎಂದು ಕಿವಿ ಮಾತು ಹೇಳಿದರು.

ಈಗಾಗಲೇ ರಮೇಶ ಜಾರಕಿಹೊಳಿ ಸೇರಿದಂತೆ ಕೆಲವರು ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ. ಇದೀಗ ಮತ್ತೆ ಅದೇ ಕೆಲಸಕ್ಕೆ ಕೈ ಹಾಕಿದ್ದಾರೆ. ಆದರೆ, ರಮೇಶ ಜಾರಕಿಹೊಳಿ ಬೆಂಬಲಕ್ಕೆ ಯಾವುದೇ ಶಾಸಕರು ಇಲ್ಲ. ಸುಮ್ಮನೆ ಸರ್ಕಾರಕ್ಕೆ ಭಯ ಹುಟ್ಟಿಸುವ ಹೇಳಿಕೆ ನೀಡುತ್ತಿದ್ದಾರೆ. ಅವರ ಕ್ಷೇತ್ರದಲ್ಲಿ ಕಾರ್ಯಕರ್ತರೇ ಬೆಂಬಲ ನೀಡುತ್ತಿಲ್ಲ ಎಂದು ಹೇಳಿದರು.

ಅಥಣಿ ಶಾಸಕ ಮಹೇಶ ಕುಮಠಳ್ಳಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ. ರಮೇಶ ಜಾರಕಿಹೊಳಿ ಬಿಜೆಪಿ ಪರ ಕೆಲಸ ಮಾಡುವಂತೆ ಹೇಳಿದರೂ ಅವರು ಪಕ್ಷಕ್ಕೆ ನಿಷ್ಠರಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಅವರು ಬಿಜೆಪಿ ಸೇರುತ್ತಾರೆ ಎಂಬ ಅನುಮಾನ ಬೇಡ. ಶಾಸಕ ಸ್ಥಾನಕ್ಕೆ ರಾಜೀನಾಮ ಕೊಡುವುದು ಬಿಡುವುದು ಅವರಿಗೆ ಬಿಟ್ಟ ವಿಚಾರವಾಗಿದೆ ಎಂದರು.

ಅಳಿಯನಿಗಾಗಿ ರಮೇಶ ಎಡವಟ್ಟು

ರಮೇಶ ಜಾರಕಿಹೊಳಿ ಅವರ ಅಳಿಯ ಅಂಬಿರಾವ್ ಪಾಟೀಲ ಅವರ ಕುಟುಂಬದವರಿಗೆ ಮಹಾರಾಷ್ಟ್ರದ ಗಡಹಿಂಗ್ಲಜ್‌ನಲ್ಲಿ ಟಿಕೆಟ್ ಕೊಡಿಸುವ ಉದ್ದೇಶದಿಂದ ಬಿಜೆಪಿ ಸೇರುತ್ತಾರೆ ಎಂಬುದು ನಮಗೆ ಬಂದಿರುವ ಮಾಹಿತಿ. ಅವರ ಸಮಸ್ಯೆ ಏನು ಎಂಬುದನ್ನು ಹೇಳಿದರೆ ಮಾತ್ರ ಎಲ್ಲರಿಗೂ ಗೊತ್ತಾಗುವುದು. ಅಳಿಯನಿಗಾಗಿ ರಮೇಶ ಜಾರಕಿಹೊಳಿ ಕೆಲ ಎಡವಟ್ಟುಗಳನ್ನು ಮಾಡಿಕೊಂಡು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಉತ್ತರ ಕರ್ನಾಟಕ ಭಾಗದ ಹಾಗೂ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಸಚಿವ ಡಿ.ಕೆ.ಶಿವಕುಮಾರ ಮಧ್ಯಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ ಅವತ್ತು ನಾವೆಲ್ಲಾ ಒಗ್ಗಟ್ಟಾಗಿ ಬಂಡಾಯ ಎದ್ದಿರುವುದು ನಿಜ. ಆ ವೇಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಿದ್ದರಿಂದ ನಾವೆಲ್ಲ ಬಂಡಾಯ ಅಲ್ಲಿಗೆ ಕೈ ಬಿಟ್ಟಿದ್ದೇವೆ. ಆದರೆ,ರಮೇಶ ಜಾರಕಿಹೊಳಿ ಬಂಡಾಯ ಮುಂದುವರಿಸಿದ್ದಾರೆ.
|ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ