ತಾರಕಕ್ಕೇರಿದ ಕೊನೇ ಹಂತದ ಪ್ರಚಾರ

ಬೆಂಗಳೂರು: ರಾಜ್ಯದ ಐದು ಕ್ಷೇತ್ರಗಳ ಉಪಚುನಾವಣೆ ಮತದಾನಕ್ಕೆ ಇನ್ನು ಮೂರು ದಿನಗಳಷ್ಟೇ ಬಾಕಿಯಿದ್ದು, ಬಹಿರಂಗ ಪ್ರಚಾರಕ್ಕೆ ಕೆಲವೇ ಗಂಟೆ ಉಳಿದಿದೆ. ಜಮಖಂಡಿ, ರಾಮನಗರ ವಿಧಾನಸಭಾ ಹಾಗೂ ಬಳ್ಳಾರಿ, ಶಿವಮೊಗ್ಗ, ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ರಾಜಕೀಯ ನಾಯಕರ ಟೀಕೆಗಳು ತಾರಕಕ್ಕೇರಿದ್ದು, ಆರೋಪ ಪ್ರತ್ಯಾರೋಪ ಅಂಚು ಮೀರಿದೆ.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಸಿಎಂ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಸ್ ಗುಂಡೂರಾವ್, ಡಿಸಿಎಂ ಡಾ.ಜಿ.ಪರಮೇಶ್ವರ್ ಆದಿಯಾಗಿ ಇಡೀ ಸಚಿವ ಸಂಪುಟ ಪ್ರಚಾರದಲ್ಲಿ ತೊಡಗಿದೆ. ಮೈತ್ರಿ ಪಕ್ಷಗಳು ತಮ್ಮ ಸಂಪೂರ್ಣ ಶಕ್ತಿ ಧಾರೆ ಎರೆದು ಐದೂ ಕ್ಷೇತ್ರಗಳನ್ನು ಗೆಲ್ಲಲು ಕಾರ್ಯೋನ್ಮುಖವಾಗಿವೆ. ಈ ನಡುವೆಯೇ ವೈಯಕ್ತಿಕ ಟೀಕೆ ವಿಪರೀತವಾಗಿದ್ದು, ಇನ್ನೆರಡು ದಿನಗಳಲ್ಲಿ ರಾಜಕೀಯ ನಾಯಕರ ಇನ್ನಷ್ಟು ಒಳಗುಟ್ಟುಗಳು ಬಹಿರಂಗವಾಗುವ ಲಕ್ಷಣವಿದೆ.

ನ.1ರಂದು ಸುದ್ದಿಗೋಷ್ಠಿ ನಡೆಸಿ ಪ್ರಮುಖ ವಿಚಾರ ಹೊರಹಾಕುವುದಾಗಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿರುವ ಬೆನ್ನ ಹಿಂದೆಯೇ ಬಿಜೆಪಿ ಕಡೆಯಿಂದಲೂ ಮಾತಿನ ಪ್ರತಿರೋಧ ಹೆಚ್ಚಾಗಿದೆ. ಜಾತಿ ವಿಚಾರ, ಅಕ್ರಮ ಗಣಿಗಾರಿಕೆ, ಜನಾರ್ದನ ರೆಡ್ಡಿ ವಿಚಾರ ಬಳ್ಳಾರಿಯಲ್ಲಿ ಪ್ರಮುಖ ರಾಜಕೀಯ ವಾಗ್ಯುದ್ಧಕ್ಕೆ ವಿಷಯವಾದರೆ, ಶಿವಮೊಗ್ಗದಲ್ಲಿ ಕುಟುಂಬ ರಾಜಕಾರಣ ಹಾಗೂ ವೈಯಕ್ತಿಕ ಟೀಕೆಯೇ ಮಾತಿನ ಸಮರಕ್ಕೆ ಕಾರಣವಾಗಿದೆ. ರಾಜಕೀಯ ನಾಯಕರು ಲಾಜಿಕ್ ಇಲ್ಲದ ಭರವಸೆಗಳನ್ನು ನೀಡುತ್ತಾ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳಲು ಹೆಣಗಾಡುತ್ತಿದ್ದು, ಜನರೇ ಭರವಸೆ ಕಂಡು ಕಕ್ಕಾಬಿಕ್ಕಿಯಾಗಲಾರಂಭಿಸಿದ್ದಾರೆ.

ಕಳೆದ ವಿಧಾನಸಭೆಯಲ್ಲಿ ಸೋಲುಂಡ ಕಾಗೋಡು ತಿಮ್ಮಪ್ಪ ಅವರನ್ನು ವಿಧಾನಪರಿಷತ್​ಗೆ ಕಳಿಸಿ ಮಂತ್ರಿ ಮಾಡುವುದಾಗಿ ಸಿಎಂ ಕುಮಾರಸ್ವಾಮಿ ಶಿವಮೊಗ್ಗದಲ್ಲಿ ಭರವಸೆ ನೀಡಿ ಒಂದು ದಿನ ಕಳೆಯುವಷ್ಟರಲ್ಲಿ ಡಿಸಿಎಂ ಜಮಖಂಡಿ ಪ್ರತ್ಯೇಕ ಜಿಲ್ಲೆಯ ವಿಷಯ ಪ್ರಸ್ತಾಪಿಸಿದ್ದಾರೆ. ಹೇಗಾದರೂ ಚುನಾವಣೆ ಗೆಲ್ಲಲೇಬೇಕೆಂದು ತರೇಹವಾರಿ ಪಟ್ಟುಗಳನ್ನು ಹಾಕುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.

ಸೊರಬ ಶಾಸಕ ಕುಮಾರ್ ಬಂಗಾರಪ್ಪ ಅವರು ಸಿಎಂ ‘ಮೀ ಟೂ’ ವಿಚಾರ ಪ್ರಸ್ತಾಪಿರುವುದು ಜೆಡಿಎಸ್-ಕಾಂಗ್ರೆಸ್​ಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದರೆ, ಸಿದ್ದರಾಮಯ್ಯ ಪುತ್ರನ ಸಾವಿನ ಬಗ್ಗೆ ಜನಾರ್ದನ ರೆಡ್ಡಿ ಆಡಿದ ಮಾತುಗಳು ಮತ್ತು ಸಿದ್ದರಾಮಯ್ಯ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವುದು ಬಿಜೆಪಿ ಪಾಲಿಗೆ ಕಿರಿಕಿರಿ ಉಂಟುಮಾಡಿದೆ.

ಗೀತಾ ಪ್ರತ್ಯಕ್ಷ

ಶಿವಮೊಗ್ಗ ಉಪ ಚುನಾವಣೆ ಬಹಿರಂಗ ಪ್ರಚಾರಕ್ಕೆ ಒಂದು ದಿನ ಬಾಕಿ ಇರುವಾಗ ಗೀತಾ ಶಿವರಾಜ್​ಕುಮಾರ್ ಪ್ರಚಾರ ಕಣದಲ್ಲಿ ಕಾಣಿಸಿಕೊಂಡಿದ್ದಾರೆ.

ಮಧುಗೆ 5.5 ವರ್ಷಕ್ಕಾಗಿ ಮತ ಕೊಡಿ!

ನಾವೆಲ್ಲರೂ ಮಧು ಬಂಗಾರಪ್ಪಗೆ ಕೇವಲ ಐದು ತಿಂಗಳ ಅವಧಿಗೆ ಮತ ಕೇಳಲು ಬಂದಿಲ್ಲ. ಬದಲಿಗೆ ಮುಂದಿನ ಐದು ವರ್ಷ, ಐದು ತಿಂಗಳ ಅವಧಿಗೆ ಮತ ಕೇಳುತ್ತಿದ್ದೇವೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳುವ ಮೂಲಕ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲೂ ಮಧು ಅವರನ್ನೇ ಮೈತ್ರಿಕೂಟದ ಅಭ್ಯರ್ಥಿ ಎಂಬ ಸುಳಿವು ನೀಡಿದರು. ಶಿವಮೊಗ್ಗದಲ್ಲಿ ನಡೆದ ಜೆಡಿಎಸ್-ಕಾಂಗ್ರೆಸ್ ಜಂಟಿ ಪ್ರಚಾರ ಸಭೆಯಲ್ಲಿ ಡಿಕೆಶಿ ಈ ಮಾತು ಹೇಳಿದರು.

ಕೇಂದ್ರದಿಂದ ಧರ್ಮಗಳ ನಡುವೆ ಒಡಕು ಸೃಷ್ಟಿ

ಶಿವಮೊಗ್ಗ: ಪ್ರಧಾನಿ ಹುದ್ದೆಯ ಗೌರವ ಎತ್ತಿ ಹಿಡಿಯುವ ಉದ್ದೇಶದಿಂದ ಇದುವರೆಗೆ ನರೇಂದ್ರ ಮೋದಿ ಆಡಳಿತದ ಬಗ್ಗೆ ಟೀಕೆ ಮಾಡಲಿಲ್ಲ. ಇನ್ಮುಂದೆ ಸುಮ್ಮನಿರಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಗುಡುಗಿದ್ದಾರೆ. ಒಕ್ಕಲಿಗರ ಸಮಾನ ಮನಸ್ಕರ ವೇದಿಕೆ ಆಯೋಜಿಸಿದ್ದ ಸಭೆ ಉದ್ಘಾಟಿಸಿ ಮಾತನಾಡಿ, ಎನ್​ಡಿಎ ಸರ್ಕಾರ ಕೊನೆಯ ಘಟ್ಟದಲ್ಲಿದೆ. ಮೋದಿ ಆಡಳಿತದಲ್ಲಿ ಮುಸ್ಲಿಮರು ಮತ್ತು ಕ್ರೖೆಸ್ತರನ್ನು ದೇಶದಿಂದಲೇ ಹೊರಗಟ್ಟುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

ಸೋಲಿನ ಸುಳಿವು ನೀಡಿದ್ದೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಫಲಿತಾಂಶದ ಹಿಂದಿನ ದಿನವೇ ಕಾಂಗ್ರೆಸ್ ಸೋಲಿನ ಸುಳಿವನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ನೀಡಿದ್ದೆ. ರಾಜ್ಯದಲ್ಲಿ ಕಾಂಗ್ರೆಸ್ 80 ಸೀಟು ಮಾತ್ರ ಗೆಲ್ಲಲಿದೆ. ಅದು ನಮ್ಮ ಹಣೆಬರಹ ಎಂದಿದ್ದೆ. ಅದೇ ದಿನವೇ ಜೆಡಿಎಸ್ ಜತೆ ಮೈತ್ರಿಗೆ ರಾಷ್ಟ್ರೀಯ ವರಿಷ್ಠರು ಗ್ರೀನ್ ಸಿಗ್ನಲ್ ನೀಡಿದ್ದರು. ಕೋಮುವಾದಿ ಬಿಜೆಪಿಯನ್ನು ದೂರವಿಡುವ ಸಲುವಾಗಿ ಯಾವುದೇ ಒಪ್ಪಂದವಿಲ್ಲದೆ ಸರ್ಕಾರ ರಚನೆಗೆ ಬೆಂಬಲ ನೀಡಲು ಸಿದ್ಧವಾಗಿದ್ದೆವು. ಅದರಂತೆ ಫಲಿತಾಂಶದಲ್ಲಿ ಕಾಂಗ್ರೆಸ್ ಸೋಲನುಭವಿಸಿತ್ತು ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಮೈತ್ರಿ ಉಪಚುನಾವಣೆಗೆ ಸೀಮಿತವಲ್ಲ

ಶಿವಮೊಗ್ಗ: ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದಲ್ಲಿ ಸಮಸ್ಯೆ ಇಲ್ಲ, ಚುನಾವಣಾ ಹೊಂದಾಣಿಕೆ ಉಪಚುನಾವಣೆಗೆ ಮಾತ್ರ ಸೀಮಿತವಲ್ಲ, ಬರಲಿರುವ ಲೋಕಸಭಾ ಚುನಾವಣೆಯಲ್ಲೂ ಪೂರ್ಣ ಮನಸ್ಸಿನಿಂದಲೇ 28 ಕ್ಷೇತ್ರಗಳಿಗೆ ಹೊಂದಾಣಿಕೆ ಮಾಡಿಕೊಳ್ಳಲಿದ್ದೇವೆ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಐದು ಕ್ಷೇತ್ರಗಳ ಉಪಚುನಾವಣೆ ಬರುವ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಆಗಲಿದೆ. ಸೀಟು ಹಂಚಿಕೆಯಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನ.6ಕ್ಕೆ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂದು ಯಡಿಯೂರಪ್ಪ, ಜಗದೀಶ ಶೆಟ್ಟರ್ ಸೇರಿ ಬಿಜೆಪಿ ಹಲವು ನಾಯಕರು ಹೇಳುತ್ತಿದ್ದಾರೆ. ಇವರೆಲ್ಲ ಜ್ಯೋತಿಷಿಗಳೇ? ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಐಎಎಸ್ ಅಧಿಕಾರಿ ನೇಮಕ: 24 ರಾಷ್ಟ್ರೀಕೃತ ಬ್ಯಾಂಕ್​ಗಳು ರೈತರ ಸಾಲ ಮನ್ನಾ ಮಾಡಲು ಮುಂದೆ ಬಂದಿದ್ದು, 16.76 ಲಕ್ಷ ರೈತರ ಸಾಲಮನ್ನಾ ಕುರಿತು ಪ್ರತ್ಯೇಕ ಘಟಕ ತೆರೆದು ಐಎಎಸ್ ಅಧಿಕಾರಿಯೊಬ್ಬರನ್ನು ನಿಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಕಾಂಗ್ರೆಸ್ಸಿಲ್ಲದೆ ತೃತೀಯ ರಂಗ ಸಾಧ್ಯವಿಲ್ಲ. ಜಾತ್ಯತೀತ ವ್ಯವಸ್ಥೆಯ ಶಕ್ತಿ ಪ್ರದರ್ಶನ ಮಾಡಿ ದೇಶವನ್ನು ಹೊಸ ಬೆಳವಣಿಗೆಯತ್ತ ಕೊಂಡೊಯ್ಯುವ ಯತ್ನವಾಗಿದೆ. ದೇಶದಲ್ಲಿ ಕಳೆದ 13 ಉಪಚುನಾವಣೆಗಳಲ್ಲಿ ಬಿಜೆಪಿ ಕೇವಲ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಿದೆ. ದಕ್ಷಿಣ ಭಾರತದ ಬಿಜೆಪಿ ಹೆಬ್ಬಾಗಿಲನ್ನು ಮುಚ್ಚುತ್ತೇವೆ.

| ಎಚ್.ಡಿ.ದೇವೇಗೌಡ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ

 

ಕರಾವಳಿ ಜಿಲ್ಲೆಗಳಲ್ಲಿ ಬಿಜೆಪಿಯವರು ಭಾವನಾತ್ಮಕ ವಿಷಯ ಮುಂದಿಟ್ಟು ಚುನಾವಣೆಯಲ್ಲಿ ವೋಟು ಪಡೆದ ಬಳಿಕ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಹಿಂದುತ್ವ ಹೆಸರಿನಲ್ಲಿ ಅಮಾಯಕರನ್ನು ಮುಂಚೂಣಿಗೆ ಬಿಟ್ಟು ಅವರ ಜೀವದ ಮೇಲೆ ಅಧಿಕಾರ ನಡೆಸುವ ಬಿಜೆಪಿಗೆ ಉಪಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಬೇಕು.

| ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

 

ಬಳ್ಳಾರಿ ಪ್ರಚಾರಕ್ಕೆ ಹೋಗಲ್ಲ

ಬೆಂಗಳೂರು: ಬಳ್ಳಾರಿಯಲ್ಲಿ ಡಿ.ಕೆ.ಶಿವಕುಮಾರ್ ಕೆಲಸ ಮಾಡುತ್ತಿದ್ದು, ಒಳ್ಳೆಯ ವಾತಾವರಣವಿದೆ. ಈಗಾಗಲೇ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಇದ್ದು, ನಾನು ಹೋಗುವುದಿಲ್ಲ. ಇಬ್ಬರ ಅಗತ್ಯ ಅಲ್ಲಿಲ್ಲ. ಒಂದು ವೇಳೆ ಕೆಪಿಸಿಸಿ ಅಧ್ಯಕ್ಷರು ಕರೆದರೆ ಹೋಗುತ್ತೇನೆ. ನನ್ನ ಡಿಕೆಶಿ ಜಗಳ ವಿಚಾರ ತೀರಾ ವೈಯಕ್ತಿಕ. ಅದನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ, ಈಗ ಚುನಾವಣೆಯಷ್ಟೇ ಮುಖ್ಯ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ನನಗೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಕೊಟ್ಟಿದ್ದರು. ಅಲ್ಲಿ ಹೋಗಿ ಪ್ರಚಾರ ಕೈಗೊಂಡು ಬಂಡಾಯ ಶಮನ ಮಾಡಿ ಬಂದಿದ್ದೇನೆ ಎಂದರು.

ನ.3ಕ್ಕೆ ಸರ್ಕಾರಿ ನೌಕರರಿಗೆ ವೇತನ ಸಹಿತ ರಜೆ ಸೌಲಭ್ಯ

ಬೆಂಗಳೂರು: ಶಿವಮೊಗ್ಗ, ಬಳ್ಳಾರಿ, ಮಂಡ್ಯ ಲೋಕಸಭಾ ಹಾಗೂ ಜಮ ಖಂಡಿ, ರಾಮನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನ.3ರಂದು ನಡೆಯಲಿದೆ. ಈ ಕ್ಷೇತ್ರಗಳ ವ್ಯಾಪ್ತಿಯ ಅರ್ಹ ಮತದಾರರಾಗಿರುವ ಎಲ್ಲ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳ, ಶಾಲೆ, ಕಾಲೇಜುಗಳ (ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಸರ್ಕಾರಿ ನೌಕರರಿಗೆ ಅಂದು ವೇತನ ಸಹಿತ ರಜೆ ಘೋಷಿಸಲಾಗಿದೆ. ಈ ರಜೆ ತುರ್ತು ಸೇವೆಗಳ ಮೇಲೆ ಇರುವ ನೌಕರರಿಗೆ ಅನ್ವಯಿಸು ವುದಿಲ್ಲ ಎಂದು ಸರ್ಕಾರ ತಿಳಿಸಿದೆ.