ಮೈತ್ರಿಧರ್ಮ ಮುರಿದ ಜೆಡಿಎಸ್

ಶೇಖರ್ ಸಂಕೋಡ್ನಳ್ಳಿ ಅರಸೀಕೆರೆ: ರಾಜ್ಯ ಸಮ್ಮಿಶ್ರ ಸರ್ಕಾರದ ಮಾದರಿಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿಯೂ ಮೈತ್ರಿಧರ್ಮ ಕಾಪಾಡಬೇಕು ಎಂಬ ಕಾಂಗ್ರೆಸ್ ಕೂಗಿಗೆ ಜಿಲ್ಲೆಯಲ್ಲಿ ಜೆಡಿಎಸ್ ಮುಖಂಡರು ಸೊಪ್ಪು ಹಾಕುತ್ತಿಲ್ಲ ಎನ್ನುವ ಆರೋಪಕ್ಕೆ ಪುಷ್ಟಿ ನೀಡುವಂತೆ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆಡಳಿತ ಮಂಡಳಿಗೆ ಮೀಸಲಿದ್ದ 3 ನಾಮ ನಿರ್ದೇಶಿತ ಸ್ಥಾನಗಳನ್ನೂ ಜೆಡಿಎಸ್ ತನ್ನದಾಗಿಸಿಕೊಂಡಿರುವುದು ಕಾಂಗ್ರೆಸ್ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.

ನಾಮನಿರ್ದೇಶಿತ ಸ್ಥಾನಗಳಲ್ಲಿ ತಮಗೂ ಪಾಲು ಸಿಗಲಿದೆ ಎಂಬ ನಿರೀಕ್ಷೆ ಹೊಂದಿದ್ದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಜೆಡಿಎಸ್ ಮುಖಂಡರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕ್ಷೇತ್ರದ ಮೇಲೆ ಬಿಗಿ ಹಿಡಿತ ಹೊಂದಿರುವ ಶಾಸಕ ಕೆ.ಎಂ.ಶಿವಲಿಂಗೇಗೌಡ, ತಮ್ಮ ಬೆಂಬಲಿಗರನ್ನು ಎಪಿಎಂಸಿಗೆ ನಾಮನಿರ್ದೇಶನ ಮಾಡಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಮುಖಂಡರಿಗೆ ಆಘಾತ ಉಂಟು ಮಾಡಿದ್ದಾರೆ. ಈಗಾಗಲೇ ಮೊದಲ ಹಂತದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಹಾಗೂ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ತಮ್ಮ ಬೆಂಬಲಿಗರು ಮಾತ್ರವೇ ನೇಮಕವಾಗುವಂತೆ ನೋಡಿಕೊಂಡಿದ್ದ ಶಾಸಕರು ಈಗ ಶ್ಯಾನೆಗರೆ ಗ್ರಾಪಂ ಮಾಜಿ ಅಧ್ಯಕ್ಷ ವಿಜಯ್‌ಕುಮಾರ್, ಜೆಡಿಎಸ್ ತಾಲೂಕು ಘಟಕದ ಕಾರ್ಯಾಧ್ಯಕ್ಷ ಕಾಳೇನಹಳ್ಳಿ ಅಡವಿಸ್ವಾಮಿ ಹಾಗೂ ಗುತ್ತಿನಕೆರೆ ಪ್ರೇಮಾ ರಘು ಅವರನ್ನು ನಾಮ ನಿರ್ದೇಶನ ಮಾಡಿಸುವ ಮೂಲಕ ಎಪಿಎಂಸಿ ಮೇಲೂ ಹಿಡಿತ ಸಾಧಿಸಿದ್ದಾರೆ.
ಈ ಮೂಲಕ ಕಾಂಗ್ರೆಸ್ ಮುಖಂಡರು ಜಿಲ್ಲೆಯಲ್ಲಿ ಮೈತ್ರಿ ಧರ್ಮ ಪಾಲಿಸುವಂತೆ ಮುಂದಿಟ್ಟ ಬೇಡಿಕೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಇದು ಜಿಲ್ಲೆಯಲ್ಲಿನ ಕಾಂಗ್ರೆಸ್ ಮುಖಂಡರ ಜೆಡಿಎಸ್ ವಿರೋಧಿ ನಿಲುವು ಬಲಗೊಳ್ಳಲು ಕಾರಣವಾಗುವ ಸಾಧ್ಯತೆಯಿದೆ.

ಅಪಾಯ ತಡೆಯಲು ತಂತ್ರ: 16 ಸದಸ್ಯ ಬಲದ ಎಪಿಎಂಸಿಯಲ್ಲಿ ಸದ್ಯ ನಾಲ್ವರು ಕಾಂಗ್ರೆಸ್, 8 ಜೆಡಿಎಸ್ ಹಾಗೂ ಒಬ್ಬ ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. ಮೈತ್ರಿ ಧರ್ಮ ಪಾಲಿಸಿದರೆ ಎರಡು ಸ್ಥಾನಗಳು ಕಾಂಗ್ರೆಸ್ ಪಾಲಾಗಿ ಆ ಪಕ್ಷದ ಸದಸ್ಯರ ಸಂಖ್ಯೆ ಆರಕ್ಕೇರುತ್ತದೆ. ಇದರಿಂದ ತಮ್ಮ ಪಕ್ಷದ ಪ್ರಭಾವ ಕೊಂಚ ತಗ್ಗಬಹುದು ಎಂದು ಲೆಕ್ಕಾಚಾರ ಹಾಕಿರುವ ಶಾಸಕ ಕೆ.ಎಂ.ಶಿವಲಿಂಗೇಗೌಡ, ತಮ್ಮ ಪಕ್ಷ ಬೆಂಬಲಿತ ಸದಸ್ಯರ ಸಂಖ್ಯೆ ಹೆಚ್ಚಿಸಿಕೊಳ್ಳಲು ನಾಮ ನಿರ್ದೇಶನಕ್ಕೆ ಆತುರ ತೋರಿದ್ದರು ಎನ್ನಲಾಗಿದೆ. ಇದಕ್ಕೆ ನಿದರ್ಶನ ಎನ್ನುವಂತೆ ಮೊದಲ ಅವಧಿಗೆ ಅಧ್ಯಕ್ಷರಾಗಿದ್ದ ಜೆಡಿಎಸ್ ಮುಖಂಡ ಕೆ.ಎಸ್.ಚಂದ್ರಶೇಖರ್ ಆಂತರಿಕ ಒಪ್ಪಂದದಂತೆ ರಾಜೀನಾಮೆ ನೀಡಿದ್ದಾರೆ. ತೆರವಾದ ಅಧ್ಯಕ್ಷ ಸ್ಥಾನಕ್ಕೆ ಜ.28 ರಂದು ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯೇ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಮುಖಂಡರ ನಿರುತ್ಸಾಹವೇ ಅಡ್ಡಿ: ವಿಧಾನಸಭಾ ಚುನಾವಣೆ ಬಳಿಕ ಸಮ್ಮಿಶ್ರ ಸರ್ಕಾರ ರಚನೆಗಾಗಿ ಕಾಂಗ್ರೆಸ್ ವರಿಷ್ಠರು ಜೆಡಿಎಸ್ ಎದುರು ಮಂಡಿಯೂರಿದ ಪರಿಣಾಮವನ್ನು ತಾವು ಅನುಭವಿಸುತ್ತಿದ್ದೇವೆ ಎಂದು ಕಾಂಗ್ರೆಸ್ ಮುಖಂಡರು ಬೇಸರ ವ್ಯಕ್ತಪಡಿಸುತ್ತಾರೆ. ಜೆಡಿಎಸ್ ತವರು ಜಿಲ್ಲೆಯ ಮೇಲೆ ಬಿಗಿ ಹಿಡಿತ ಹೊಂದಿರುವುದರಿಂದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿರೋಧದ ಮೂಲಕವಷ್ಟೆ ಅಸ್ತಿತ್ವ ಉಳಿಸಿಕೊಳ್ಳಬೇಕಾದ ಸ್ಥಿತಿ ಇದೆ. ಆದರೆ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಜಿ.ಬಿ.ಶಶಿಧರ್ ಸೌಮ್ಯ ಸ್ವಭಾವದವರಾಗಿದ್ದು, ಗಟ್ಟಿಯಾಗಿ ಮಾತನಾಡುವುದಿಲ್ಲ. ಅರಸೀಕೆರೆ ಹಾಗೂ ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಯಾವುದಕ್ಕೂ ಉತ್ಸಾಹ ತೋರಿಸದೆ ನಿಷ್ಕ್ರಿಯರಾಗಿದ್ದಾರೆ. ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಮು ಕ್ಷೇತ್ರದತ್ತ ತಲೆ ಹಾಕುವುದನ್ನೇ ಬಿಟ್ಟಿದ್ದಾರೆ. ಇದರಿಂದಾಗಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರಿಗೆ ಮೈತ್ರಿ ಧರ್ಮ ನೆನಪಿಸುವ ಕೆಲಸವೂ ಆಗುತ್ತಿಲ್ಲ ಎಂದು ಕಾರ್ಯಕರ್ತರು ತಮ್ಮ ಪಕ್ಷದ ಮುಖಂಡರ ಕಾರ್ಯವೈಖರಿಯನ್ನು ಟೀಕಿಸುತ್ತಿದ್ದಾರೆ.

ಶೀಘ್ರದಲ್ಲಿಯೇ ಲೋಕಸಭೆ ಚುನಾವಣೆ ಎದುರಾಗಲಿದೆ ಎನ್ನುವುದನ್ನು ಜಿಲ್ಲೆಯ ಜೆಡಿಎಸ್ ನಾಯಕರು ಮರೆತಿದ್ದಾರೆ. ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ವತಿಯಿಂದ ನಡೆಯುವ ಎಲ್ಲ ನಾಮನಿರ್ದೇಶನಗಳಲ್ಲಿ 3:1ಮೈತ್ರಿ ಧರ್ಮ ಪಾಲನೆ ಕಡ್ಡಾಯ ಎನ್ನುವ ಸಂದೇಶವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ. ಒಪ್ಪಂದದ ಹೊರತಾಗಿಯೂ ನಾಮನಿರ್ದೇಶನದಲ್ಲಿ ತಾರತಮ್ಯವಾಗಿರುವುದು ಬಹಿರಂಗವಾಗಿದೆ. ಇಂತಹ ಘೋರ ಅನ್ಯಾಯ ಸಹಿಸಲು ಸಾಧ್ಯವಿಲ್ಲ. ಲೋಪದ ಬಗ್ಗೆ ವರಿಷ್ಠರಲ್ಲಿ ಚರ್ಚಿಸುತ್ತೇನೆ. ತಕ್ಷಣವೇ ಲೋಪ ಸರಿಪಡಿಸದಿದ್ದರೆ ಜಿಲ್ಲಾ ಕಾಂಗ್ರೆಸ್ ಮುಖಂಡರೊಂದಿಗೆ ಬೀದಿಗಿಳಿದು ಹೋರಾಟ ನಡೆಸುತ್ತೇನೆ.
ಜಾವಗಲ್ ಮಂಜುನಾಥ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ.

ಸಮ್ಮಿಶ್ರ ಸರ್ಕಾರದಲ್ಲಿನ ನಾಮನಿರ್ದೇಶನದಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಜಾವಗಲ್ ಹೋಬಳಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇದರ ಹೊಣೆಯನ್ನು ಶಾಸಕ ಕೆ.ಎಸ್.ಲಿಂಗೇಶ್ ಹೊರಬೇಕು. ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ.
ಜೆಸಿಬಿ ದೇವರಾಜ್, ಎಪಿಎಂಸಿ ಸದಸ್ಯ, ದೇಶಾಣಿ, ಜಾವಗಲ್ ಹೋಬಳಿ