ಡೊನಾಲ್ಡ್​ಗೆ ಭಯ ನೀಡಿದ್ದ ಬ್ಯಾಟ್ಸ್​ಮನ್!

ಬೌನ್ಸರ್ ಏಟಿನಿಂದ ಪಾರಾಗಲು ಬ್ಯಾಟ್ಸ್​ಮನ್​ಗಳು ಹೆಲ್ಮೆಟ್ ಧರಿಸಿ ಕ್ರೀಸ್​ಗೆ ಇಳಿಯುತ್ತಾರೆ. ಒಬ್ಬೊಬ್ಬ ಬೌಲರ್​ಗಳ ಉರಿವೇಗದ ಬೌನ್ಸರ್​ಗಳು ಅದೆಷ್ಟು ವೇಗವಾಗಿ ಬಡಿಯುತ್ತದೆ ಎಂದು ಅಂದಾಜು ಮಾಡುವುದೇ ಕಷ್ಟ. ವಿಶ್ವ ಕಂಡ ಪ್ರಚಂಡ ವೇಗಿ ಅಲನ್ ಡೊನಾಲ್ಡ್​ರ ಎಸೆತವನ್ನು ಹೆಲ್ಮೆಟ್ ಇಲ್ಲದೆ ಎದುರಿಸಿದ ದಾಖಲೆ ವಿಶ್ವಕಪ್ ಪುಟದಲ್ಲಿದೆ.

1996ರ ವಿಶ್ವಕಪ್, ಟೂರ್ನಿಯ ಆರಂಭಿಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಯುಎಇ ಎದುರಾಳಿ. ಅದೇ ಮೊದಲ ಬಾರಿಗೆ ವಿಶ್ವಕಪ್​ನಲ್ಲಿ ಆಡಿದ್ದ ಯುಎಇ ವಿರುದ್ಧ ದಕ್ಷಿಣ ಆಫ್ರಿಕಾ 321 ರನ್ ಚಚ್ಚಿ ಹಾಕಿತ್ತು. ಚೇಸಿಂಗ್ ಮಾಡಿದ ಯುಎಇ 50ರ ಗಡಿ ದಾಟಿ ಮುಂದೆ ಹೋಗಿತ್ತಷ್ಟೇ, 6 ವಿಕೆಟ್​ಗಳು ಉರುಳಿದ್ದವು. ಈ ಹಂತದಲ್ಲಿ ಮೈದಾನಕ್ಕೆ ಕಣಕ್ಕಿಳಿದ ನಾಯಕ ಸುಲ್ತಾನ್ ಜಾರಾವಾನಿಯನ್ನು ನೋಡಿದವರಿಗೆಲ್ಲ ಅಚ್ಚರಿ. ಯುಎಇ ತಂಡದಲ್ಲಿದ್ದ ಏಕೈಕ ಯುಎಇ ಮೂಲದ ಆಟಗಾರ, ಪ್ರಚಂಡ ವೇಗಿ ಡೊನಾಲ್ಡ್​ರನ್ನು ಎದುರಿಸಲು ಹೆಲ್ಮೆಟ್ ಧರಿಸದೇ ಬಂದಿದ್ದರು. ಡೊನಾಲ್ಡ್​ರ ಎಸೆತ ಅದೆಷ್ಟು ವೇಗವಾಗಿ ಬರುತ್ತಿತ್ತೆಂದರೆ ವಿಶ್ವಕಪ್​ನಲ್ಲಿ ಯಾವ ಬ್ಯಾಟ್ಸ್​ಮನ್ ಕೂಡ ಇಂಥ ಸಾಹಸಕ್ಕೆ ಕೈಹಾಕಿರಲಿಲ್ಲ. ಈ ಸಾಹಸಕ್ಕೆ ಕೈಹಾಕಿದ ಜಾರಾವಾನಿ ಮೊದಲ ಎಸೆತದಲ್ಲಿಯೇ ಆಘಾತ ಕಂಡರು. ಬೆಂಕಿಚೆಂಡಿನಂತೆ ಬಂದ ಚೆಂಡು ಜಾರಾವಾನಿಯ ನೆತ್ತಿಗೆ ಬಡಿಯಿತು. ತಲೆಯ ಮೇಲೆ ಕೈ ಇಡುತ್ತಲೇ ಕ್ರೀಸ್​ನಿಂದ ಆಚೆ ಸರಿದ ಜಾರಾವಾನಿ ಸ್ವಲ್ಪ ಹೊತ್ತು ಸಾವರಿಸಿಕೊಂಡು ಮತ್ತೆ ಆಡಲಿಳಿದರು. ಆಗಲೂ ಅವರು ಹೆಲ್ಮೆಟ್ ಧರಿಸುವುದಕ್ಕೆ ಹೋಗಲಿಲ್ಲ. 6 ಎಸೆತ ಎದುರಿಸಿ ಶೂನ್ಯಕ್ಕೆ ಔಟಾದರು. ಈ ಘಟನೆಯನ್ನು ನೆನೆಸಿಕೊಳ್ಳುವ ಅಲನ್ ಡೊನಾಲ್ಡ್, ಅಯ್ಯೋ ಬ್ಯಾಟ್ಸ್​ಮನ್​ಅನ್ನು ಸಾಯಿಸಿಬಿಟ್ಟೆ ಎನ್ನುವ ಭಯ ಆಗ ನನ್ನಲ್ಲಿ ಮೂಡಿತ್ತು ಎಂದಿದ್ದರು.

ಇದರ ಬಗ್ಗೆ ಹಲವು ಚರ್ಚೆಗಳು ನಡೆದಿವೆ. ತಂಡದಲ್ಲಿ ಆತ್ಮವಿಶ್ವಾಸ ತುಂಬುವ ಕಾರಣ, ಜಾರಾವಾನಿ ಹೆಲ್ಮೆಟ್ ಇಲ್ಲದೆ ಆಡಿದ್ದರು ಎಂದರೆ, ಇನ್ನೂ ಕೆಲವರು ತಲೆಬುರುಡೆಯಲ್ಲಿ ಬಿರುಕು ಮೂಡಿಸಿಕೊಳ್ಳಲು ಈ ಸಾಹಸಕ್ಕೆ ಕೈ ಹಾಕಿದ್ದರು ಎಂದು ಛೇಡಿಸಿದ್ದರು.

Leave a Reply

Your email address will not be published. Required fields are marked *