More

  ಕಲ್ಯಾಣವೆಂಬ ಪಟ್ಟಣವನ್ನು ಪ್ರಣತೆಯ ರೂಪಕದಲ್ಲಿ ಕಂಡ ಅಲ್ಲಮ

  venkateshಅಲ್ಲಮ ಪ್ರಭುದೇವರ ಸಂಚಾರ ಕೇವಲ ಭೌತಿಕ ವಿಹಾರವಲ್ಲ. ಅವರು ಅನಿಮಿಷ ದೇವರಿಂದ ಹಸ್ತ-ಮಸ್ತಕ ಸಂಯೋಗದ ಮೂಲಕವೂ ಅಂಗದ ಮೇಲೆ ಲಿಂಗ ಸ್ವಾಯತವಾದ ಚಿದ್ಬೆಳಗಿನಲ್ಲೂ ಲೋಕಸಂಚಾರಕ್ಕೆ ಹೊರಟರಷ್ಟೆ. ಇದೊಂದು ಆಧ್ಯಾತ್ಮಿಕ ಸಂಚಾರ. ನಾವು ಭೌತಿಕ ವಿವರಗಳಿಂದ ಇದನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಇದು ಮಾನುಷ ವ್ಯಾಪಾರದ ನೆಲೆಗೆ ನಿಲುಕುವುದಿಲ್ಲ. ಸ್ವಾಮಿ ವಿವೇಕಾನಂದರನ್ನು ಶ್ರೀ ರಾಮಕೃಷ್ಣ ಪರಮಹಂಸರು ಸೆಳೆದಂತೆ; ಕಾವ್ಯಕಂಠ ಗಣಪತಿ ಮುನಿಗಳನ್ನು ರಮಣ ಮಹರ್ಷಿಗಳು ಸೆಳೆದಂತೆ; ಟಿ.ವಿ.ಕಪಾಲಶಾಸ್ತ್ರಿಗಳನ್ನು ಶ್ರೀ ಅರವಿಂದ ಮಹರ್ಷಿಗಳು ಆಕರ್ಷಿಸಿದಂತೆ ಅನೇಕ ಶರಣರು ಅಲ್ಲಮಪ್ರಭುಗಳ ಸೆಳೆತಕ್ಕೆ ಒಳಗಾದರು. ಪ್ರತಿಯೊಬ್ಬರಿಗೂ ಅವರವರ ಆಧ್ಯಾತ್ಮಿಕ ಸಾಮರ್ಥ್ಯಕ್ಕೆ ತಕ್ಕಂತೆ ಅವರು ಹಾದಿಯನ್ನು ತೋರಿಸಿದರು; ಶಿವಶಕ್ತಿಯ ಮರ್ಮವನ್ನು ಸೂಕ್ಷ್ಮವಾಗಿ ತಿಳಿಸಿಕೊಟ್ಟರು! ಸೊನ್ನಲಿಗೆಯ ಸಿದ್ಧರಾಮನಿಗೆ ಶಕ್ತಿ-ಭಕ್ತಿಯ ಜೋಡಣೆಯನ್ನು ತಿಳಿಸಿಕೊಟ್ಟು ಕಲ್ಯಾಣದ ಕಡೆ ಪ್ರಭುದೇವರು ಮುಖ ಮಾಡಿದ್ದು ಸರಿಯಷ್ಟೆ. ಅಲ್ಲಮನ ಜೊತೆಗೆ ಸಿದ್ಧರಾಮನೂ ಹೊರಟದ್ದು ಅವನ ಸುಯೋಗ. ಅದೊಂದು ಶಿವಯೋಗ!

  ಎಂಟುನೂರು ವರ್ಷಗಳ ಹಿಂದೆ ‘ಕಲ್ಯಾಣ’ಕ್ಕೆ ಹೋಗುವ ದಾರಿ ಅಜಪಥವೂ ಆಗಿತ್ತು. ಮುಂದೆ ಅದು ಗಜಪಥವೂ ಆಯಿತು. ಬಿಜ್ಜಳನ ಆಳ್ವಿಕೆ. ಬಸವಣ್ಣನವರು ದಂಡಾಧೀಶರಾಗಿದ್ದ ಕಾಲ. ಆಗ್ಗೆ ಸುಖವಾದ ಮಳೆ ಸುರಿಯುತ್ತಿತ್ತು. ದಟ್ಟವಾದ ಅರಣ್ಯಪ್ರದೇಶ. ಎತ್ತ ತಿರುಗಿದರೂ ಬೆಟ್ಟ-ಗುಡ್ಡಗಳು ದಾರಿಯುದ್ದಕ್ಕೂ ನೂರಾರು ಕೆರೆಗಳಿದ್ದವು. ಅಲ್ಲಲ್ಲಿ ತಾವರೆಗಳಿಂದ ಕೂಡಿದ ಸರೋವರಗಳು ಕಣ್ಣಿಗೆ ಬೀಳುತ್ತಿದ್ದವು. ಪ್ರತಿಯೊಂದು ಊರಿನ ಒಳ-ಹೊರಗು ಬಾವಿಗಳು. ಅಲ್ಲಲ್ಲಿ ನೀರು ಹರಿಯುವ ಕಾಲುವೆಗಳು. ಊರಿನ ಗುಡಿಗಳ ಬದಿಯಲ್ಲಿ ಹೂಗಿಡಗಳು. ರಮಣೀಯವಾದ ತೋಟಗಳು. ದಾರಿಯುದ್ದಕ್ಕೂ ಮೌದಲದ ಮರಗಳು, ನಾನಾ ಜಾತಿಯ ಮಾವಿನ ಮರಗಳು ಕಾಣಿಸುತ್ತಿದ್ದವು. ಇನ್ನು ನೇರಳೆ, ಹಲಸಿನ ಮರಗಳು ಪಥಿಕರನ್ನು ಆಹ್ವಾನಿಸುತ್ತಿದ್ದವು. ದಾರಿಹೋಕರು ಅಲ್ಲಲ್ಲಿದ್ದ ಅರವಟ್ಟಿಗೆಯಲ್ಲಿ ತಮ್ಮ ದಾಹವನ್ನು ತೀರಿಸಿಕೊಳ್ಳುತ್ತಿದ್ದರು. ಸಂಜೆಯಾದಾಗ ಛತ್ರಗಳಲ್ಲಿ ಪಥಿಕರು ಉಳಿದುಕೊಳ್ಳುತ್ತಿದ್ದರು. ಊರಿನವರು ದಾಸೋಹಕ್ಕೆ ವ್ಯವಸ್ಥೆ ಮಾಡಿಕೊಡುತ್ತಿದ್ದರು. ಬೇಸಗೆ ಕಾಲದಲ್ಲಿ ಬಿಸಿಲಿನ ತಾಪವನ್ನು ಹೋಗಲಾಡಿಸಿಕೊಳ್ಳಲು ನೆಳಲ ಮನೆಗಳು ಇರುತ್ತಿದ್ದವು. ದಟ್ಟವಾದ ಅಡವಿಯಲ್ಲಿ ಜನ ಪ್ರಯಾಣಿಸುವಾಗ ಅಲ್ಲಲ್ಲಿ ಕಿರುಮನೆಗಳು ಇರುತ್ತಿದ್ದವು. ಅಲ್ಲಿ ಪಥಿಕರಿಗೆ ಉಪಚಾರ ದೊರಕುತ್ತಿತ್ತು. ಇದೆಲ್ಲದರ ಕಾಣ್ಕೆಯ ಹಿಂದೆ ಬಸವಣ್ಣನವರ ಲೋಕಕಲ್ಯಾಣವೂ ಮನೆಮಾಡಿಕೊಂಡಿತ್ತು. ಅಲ್ಲಮಪ್ರಭುದೇವರು ಸೊನ್ನಲಿಗೆಯಿಂದ ಕಲ್ಯಾಣಕ್ಕೆ ಬರುವಾಗ, ಬಸವಣ್ಣ ಪಥಿಕರಿಗಾಗಿ ಮಾಡಿಸಿದ್ದ ಸಕಲ ಸೌಲಭ್ಯಗಳನ್ನು ಕಂಡರು. ಬಿಜ್ಜಳನ ಆಸ್ಥಾನದ ದಂಡಾಧಿಪನಾಗಿ ಜನಾನುರಾಗ ಪಡೆದಿದ್ದನ್ನು ಪ್ರಭುದೇವರು ಕಂಡರು, ಬೆರಗು ಪಟ್ಟರು. ಸಿದ್ಧರಾಮನ ಜೊತೆ ಕಲ್ಯಾಣದ ಸಮೀಪಕ್ಕೆ ಪ್ರಭುದೇವರು ಬಂದರು.

  ಅಲ್ಲಮ ಪ್ರಭುದೇವರು, ಬಸವಣ್ಣ ನವರನ್ನು ಇಪ್ಪತ್ತೈದಕ್ಕೂ ಹೆಚ್ಚು ವಚನಗಳಲ್ಲಿ ಪ್ರಸ್ತಾವಿಸಿದ್ದಾರೆ. ಪ್ರಭುದೇವರು ಮೊದಲ ಬಾರಿಗೆ ಕಲ್ಯಾಣಕ್ಕೆ ಬಂದಾಗ, ಆ ಪಟ್ಟಣವು ಭೌತಿಕವಾಗಿ ಸಮೃದ್ಧವಾಗಿತ್ತು. ಶರಣರ ಸಂದೋಹವೇ ತುಂಬಿ ತುಳುಕುತ್ತಿತ್ತು. ಅಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ. ಆದರೆ, ಪ್ರಭುದೇವರಿಗೆ ಕಂಡ ಕಲ್ಯಾಣ ಮಾತ್ರ ವಿಶಿಷ್ಟವಾಗಿತ್ತು.

  ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು/ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು/ತೊಳಗಿ ಬೆಳಗುತಿರ್ದುದಯ್ಯ ಶಿವನ ಪ್ರಕಾಶ!/ ಶಿವಭಕ್ತರಿರ್ದ ಕ್ಷೇತ್ರ ಅವಿಮುಕ್ತಕ್ಷೇತ್ರವೆಂಬುದು ಹುಸಿಯೇ?/ಶಿವಭಕ್ತರಿರ್ದ ದೇಶವು ಪಾವನವೆಂಬುದು ಹುಸಿಯೆ?/ಗುಹೇಶ್ವರ ಲಿಂಗದಲ್ಲಿ ಎನ್ನ ಪರಮಾರಾಧ್ಯ ಸಂಗನ ಬಸವಣ್ಣನ ಕಂಡು/ ಬದುಕಿದೆ ಕಾಣಾ ಸಿದ್ಧರಾಮಯ್ಯ. (ಅಲ್ಲಮ-ವ.1258)

  ಇದೊಂದು ವಿಶಿಷ್ಟ ವಚನ. ಅಲ್ಲಮನ ಈ ವಚನವು ಕಲ್ಯಾಣದ ಭೌತಿಕ ಸ್ವರೂಪವನ್ನು ಹೇಳುತ್ತಿಲ್ಲ. ಆದರೆ, ತುಸು ಬಗೆದು ನೋಡಿದರೆ ‘ಕಲ್ಯಾಣದ ಭೌತಿಕರೂಪ’ವನ್ನು ನಾವಿಲ್ಲಿ ಮನಗಾಣಬಹುದು. ಕಲ್ಯಾಣವೆಂಬ ಪಟ್ಟಣವನ್ನು ಪ್ರಣತೆಯ ರೂಪಕದಲ್ಲಿ ಅಲ್ಲಮರು ನೋಡುತ್ತಿದ್ದಾರೆ. ಆ ಪ್ರಣತೆಯಲ್ಲಿ ‘ಭಕ್ತಿರಸ’ವೆಂಬ ತೈಲವುಂಟು. ಆ ತೈಲಕ್ಕೆ ಆಚಾರವೆಂಬುದೇ ಬತ್ತಿ. ಈ ಬತ್ತಿ ಉರಿಯಬೇಕಾದರೆ ಜ್ಯೋತಿ ಬೇಕಷ್ಟೆ. ಬಸವಣ್ಣನೇ ಜ್ಯೋತಿ ಸ್ವರೂಪನಾಗಿದ್ದಾನೆ. ಜ್ಯೋತಿಯು ಪವಿತ್ರವಾಗಿ ಬೆಳಗುತ್ತ ‘ಶಿವಪ್ರಕಾಶ’ವನ್ನೇ ಎಲ್ಲೆಲ್ಲೂ ಬೀರುತ್ತಿದೆ. ಇಂಥ ಬೆಳಗಿನಲ್ಲಿ ಕಲ್ಯಾಣದಲ್ಲಿರುವ ಅಸಂಖ್ಯಾತರಾದ ಭಕ್ತರು ತಮ್ಮ ತಮ್ಮ ತಮವನ್ನು ಕಳೆದುಕೊಂಡು ಬೆಳಗುತ್ತಿದ್ದಾರೆ. ಇಂಥ ಶಿವಭಕ್ತರು ಇರುವ ಕ್ಷೇತ್ರವೇ ‘ಅವಿಮುಕ್ತಕ್ಷೇತ್ರ’ವಾಗಿದೆ. ಇವೆಲ್ಲಕ್ಕೂ ಆದಿಕಾರಣ ಬಸವಣ್ಣ! ಇಂಥ ಬಸವಣ್ಣನನ್ನು ಕಂಡು ಅಲ್ಲಮಪ್ರಭುಗಳು ಬದುಕಿದರು. ಅಲ್ಲಮಪ್ರಭುದೇವರು ಸಿದ್ಧರಾಮಯ್ಯನಿಗೆ ತೋರಿಸಿದ್ದು ಭೌತಿಕ ಜಗತ್ತಿನೊಳಗಿದ್ದ ಶಿವನ ಪ್ರಕಾಶದ ಜಗತ್ತನ್ನು! ಚಕ್ಷುರಿಂದ್ರಿಯಕ್ಕೆ ಗೋಚರವಾಗುವ ಕಲ್ಯಾಣ ಇರುವಂತೆ; ಅಂತಃಚಕ್ಷುವಿಗೆ ಗೋಚರವಾಗುವ ಕಲ್ಯಾಣವೊಂದುಂಟು. ಅಲ್ಲಮಪ್ರಭುದೇವರು ಚಕ್ಷುರಿಂದ್ರಿಯದ ಕಲ್ಯಾಣವನ್ನು ತೋರಿಸುತ್ತಲೇ, ಶಿವನಪ್ರಕಾಶದಿಂದ ಬೆಳಗುತ್ತಿರುವ ಕಲ್ಯಾಣವನ್ನು ನಮಗೆ ಕಾಣಿಸುತ್ತಿದ್ದಾರೆ.

  ಡಿಕೆ ಬ್ರದರ್ಸ್​ ಕೋಟೆಯಲ್ಲಿ ಅಮಿತ್ ಶಾ ಬೃಹತ್ ರೋಡ್​ ಶೋ..!ಫೋಟೋಗಳು ಇಲ್ಲಿವೆ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts