ಐತಿಹಾಸಿಕ ಅಲಹಾಬಾದ್ ಅನ್ನು ಪ್ರಯಾಗ್​ ರಾಜ್​ ಎಂದು ನಾಮಕರಣ ಮಾಡಿದ ಯೋಗಿ ಸರ್ಕಾರ; ಭಾರಿ ಟೀಕೆ

ಲಖನೌ : ಉತ್ತರ ಪ್ರದೇಶದ ಐತಿಹಾಸಿಕ ನಗರ ಅಲಹಾಬಾದ್​ ಅನ್ನು ‘ಪ್ರಯಾಗ್​ ರಾಜ್​’ ಎಂದು ಯೋಗಿ ಆದಿತ್ಯನಾಥ್​ ನೇತೃತ್ವದ ಬಿಜೆಪಿ ಸರ್ಕಾರ ಮರುನಾಮಕರಣ ಮಾಡಿದೆ.

ಹೆಸರು ಬದಲಾವಣೆ ಮಾಡುವ ಪ್ರಸ್ತಾವವನ್ನು ಯೋಗಿ ಸರ್ಕಾರದ ಸಚಿವ ಸಂಪುಟ ಮಂಗಳವಾರ ಅಂಗೀಕರಿಸಿತು. ಸಚಿವ ಸಂಪುಟ ಸಭೆ ನಂತರ ಈ ಕುರಿತು ಮಾತನಾಡಿರುವ ಉತ್ತರಪ್ರದೇಶದ ಸರ್ಕಾರದ ಸಚಿವ ಸಿದ್ಧಾರ್ಥ ನಾತ್​ ಸಿಂಗ್​, ” ಅಲಹಾಬಾದ್​ ಅನ್ನು ಇನ್ನು ಮುಂದೆ ಪ್ರಯಾಗ್​ ರಾಜ್​ ಎಂದು ಕರೆಯಲಾಗುತ್ತದೆ,” ಎಂದು ಹೇಳಿದರು.

ಅಲಹಾಬಾದ್​ಗೆ ಮರು ನಾಮಕರಣ ಮಾಡುವ ಪ್ರಸ್ತಾವನೆಯನ್ನು ಕಾಂಗ್ರೆಸ್​, ಎಸ್​ಪಿ ಸೇರಿದಂತೆ ಉತ್ತರ ಪ್ರದೇಶದ ಹಲವು ಸಂಘ, ಸಂಸ್ಥೆಗಳು ವಿರೋಧಿಸಿದ್ದವು. ಆದರೆ, ಪ್ರತಿಭಟನೆಗಳನ್ನೂ ಲೆಕ್ಕಿಸದೇ ಪ್ರಸ್ತಾವನೆಯನ್ನು ಸರ್ಕಾರ ಅಂಗೀಕರಿಸಿದೆ. ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮತಗಳ ಧ್ರುವೀಕರಣಕ್ಕಾಗಿ ಬಿಜೆಪಿ ಈ ನಡೆ ಅನುಸರಿಸಿದೆ ಎಂದು ವಿಪಕ್ಷಗಳು ಆರೋಪಿಸಿವೆ.
ಮರು ನಾಮಕರಣಕ್ಕೆ ಸಮಾಜದ ಹಲವು ರಂಗದ ಪ್ರಮುಖರು, ಬುದ್ಧಿಜೀವಿಗಳು, ಶಿಕ್ಷಕರು ಮತ್ತು ಶ್ರೀಸಾಮಾನ್ಯರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ನಡುವೆ ಬಿಜೆಪಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿರುವ ಕಾಂಗ್ರೆಸ್​. ” ಸ್ವಾತಂತ್ರ್ಯ ಚಳುವಳಿಯಲ್ಲಿ ಅಲಹಾಬಾದ್​ ನಗರ ಪ್ರಮುಖ ಪಾತ್ರ ನಿರ್ವಹಿಸಿದೆ. ಮರು ನಾಮಕರಣದಿಂದ ಈ ನಗರ ತನ್ನ ಪ್ರಾಮುಖ್ಯತೆ ಕಳೆದುಕೊಳ್ಳಲಿದೆ,” ಎಂದು ಆತಂಕ ವ್ಯಕ್ತಪಡಿಸಿದೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​, ” ನಗರಗಳನ್ನು ಮರುನಾಮಕರಣ ಮಾಡುವುದೇ ಈ ಸರ್ಕಾರದ ಕೆಲಸವಾಗಿದೆ. ಅರ್ದ್​ ಕುಂಬ್​ ಅನ್ನು ಈ ಸರ್ಕಾರ ಕುಂಬ್​ ಎಂದು ಹೆಸರಿಸಿತು. ಈ ಸರ್ಕಾರ ನಂಬಿಕೆ ಮತ್ತು ಸಂಪ್ರದಾಯಗಳ ವಿರುದ್ಧ ಆಟವಾಡುತ್ತಿದೆ,” ಎಂದು ಟ್ವೀಟ್​ ಮಾಡಿದ್ದಾರೆ.