ಗುಜರಾತ್​ನಲ್ಲಿ ಬಿಜೆಪಿಗೆ ಗೆಲುವು ಕಷ್ಟವಾಗುವಂತೆ ಮಾಡಿದ್ದ ‘ಜಾದೂಗಾರ’ ಅಶೋಕ್​ ಗೆಹ್ಲೋಟ್​ ಬಗ್ಗೆ ಗೊತ್ತಿರದ ಸಂಗತಿಗಳಿವು

ನವದೆಹಲಿ: ರಾಜಸ್ಥಾನದ ಮುಖ್ಯಮಂತ್ರಿಯಾಗಿ ಅಶೋಕ್​ ಗೆಹ್ಲೋಟ್​ ಅವರನ್ನು ಕಾಂಗ್ರೆಸ್​ ಹೈಕಮಾಂಡ್​ ಕೊನೆಗೂ ಆಯ್ಕೆ ಮಾಡಿದೆ. ಪಕ್ಷದ ಗೆಲುವಿಗೆ ಅವಿರತ ಶ್ರಮಿಸಿದ್ದ ಸಚಿನ್​ ಪೈಲಟ್​ರಂಥ ಯುವ ನಾಯಕ ಇದ್ದಾಗಲೂ ಅದಾಗಲೇ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಅಶೋಕ್​ ಗೆಹ್ಲೋಟ್​ ಅವರನ್ನೇ ಕಾಂಗ್ರೆಸ್​ ಪಕ್ಷ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿಕೊಂಡಿದೆ.

ಮೂರನೇ ಬಾರಿಗೆ ಗೆಹ್ಲೋಟ್​ ಅವರಿಗೆ ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನ ಸುಲಭಕ್ಕೆ ಸಿಕ್ಕ ಉಡುಗೊರೆಯಲ್ಲ. ರಾಜಕಾರಣವೇ ಗೊತ್ತಿರದ ಕುಟುಂಬದಿಂದ ಬಂದ ಅಶೋಕ್​ ಗೆಹ್ಲೋಟ್​ ತಮ್ಮ ‘ಮಾಂತ್ರಿಕ’ ಗುಣದಿಂದ ಅದನ್ನು ಗೆದ್ದುಕೊಂಡಿದ್ದಾರೆ ಎಂದರೆ ತಪ್ಪಲ್ಲ.

ಅವರ ಜೀವನ, ರಾಜಕೀಯದ ರೋಚಕ ಸಂಗತಿಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಓದಿ..

 • ರಾಜಸ್ಥಾನ ಮುಖ್ಯಮಂತ್ರಿ ಸ್ಥಾನಕ್ಕೆ ನಿಯೋಜನೆಗೊಂಡಿರುವ ಅಶೋಕ್​ ಗೆಹ್ಲೋಟ್​ ಬಡ ಕುಟುಂಬದಿಂದ ಬಂದವರು.
 • ಗೆಲ್ಹೋಟ್​ ರಾಜಸ್ಥಾನದ ಹಿಂದುಳಿದ ಜಾತಿಗಳಲ್ಲಿ ಒಂದಾದ ಮಾಲಿ ಸಮುದಾಯಕ್ಕೆ ಸೇರಿದವರು.
 • ಅವರ ತಂದೆ ಲಚಮನ ಸಿಂಗ್ ದಕ್ಷ್​​. ಅವರು ವೃತ್ತಿಯಿಂದ ಜಾದೂಗಾರರು. ಊರೂರು ತಿರುಗಿ ಜಾದೂ ಮಾಡುವುದು ಅವರ ಕಸುಬಾಗಿತ್ತು.
 • ಅಶೋಕ್​ ಗೆಹ್ಲೋಟ್​ ಕೂಡ ಚಿಕ್ಕಂದಿನಲ್ಲಿ ತಂದೆಯ ಜತೆಗೆ ಊರೂರುಗಳಿಗೆ ತೆರಳಿ ಜಾದು ಮಾಡುತ್ತಿದ್ದರು. ಜನರನ್ನು ಹೇಗೆ ಸೆಳೆಯಬೇಕು, ಅವರ ಸ್ಪಂದನೆ ಹೇಗೆ ಗಳಿಸಬೇಕು, ಅವರೊಂದಿಗೆ ಹೇಗೆ ಬೆರೆಯಬೇಕು ಎಂಬುದನ್ನು ಗೆಹ್ಲೋಟ್​ ಅರಿತಿದ್ದೇ ಹೀಗೆ.
 • ಸದಾ ಜನರೊಂದಿಗೆ ಇರುವ, ಬೆರೆಯುವ ಗುಣದಿಂದ ಮತ್ತು ಅವರ ಸರಳತೆಯ ಕಾರಣಕ್ಕಾಗಿಯೇ ಅವರು ರಾಜಸ್ಥಾನದಲ್ಲಿ ಮಾಸ್​ ಲೀಡರ್​ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಅವರಿಗೆ ರಾಜಸ್ಥಾನದ ಗಾಂಧಿ ಎಂಬ ಉಪಮೆಯೂ ಇದೆ.
 • ಗೆಹ್ಲೋಟ್​ ರಾಜಕೀಯಕ್ಕೆ ಬರುವುದಕ್ಕೂ ಮೊದಲು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. 1971ರಲ್ಲಿ ಪಶ್ಚಿಮ ಬಂಗಾಳಿ ನಿರಾಶ್ರಿತರ ಬಿಕ್ಕಟ್ಟು ಎದುರಾದಾಗ ಗೆಹ್ಲೋಟ್​ ಪಶ್ಚಿಮ ರಾಜ್ಯಗಳಿಗೆ ತೆರಳಿ ನಿರಾಶ್ರಿತರ ಕ್ಯಾಂಪ್​ಗಳಲ್ಲಿ ಸೇವೆ ಸಲ್ಲಿಸಿದ್ದರು. ಅಂದಿಗೆ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರು ಅಶೋಕ್​ ಗೆಹ್ಲೋಟ್​ ಅವರ ಸಂಘಟನಾ ಚಾತುರ್ಯವನ್ನು ಖುದ್ದು ಕಣ್ಣಾರೆ ಕಂಡಿದ್ದರು.
 • 1971ರಲ್ಲೇ ಗೆಹ್ಲೋಟ್​ ಅವರಲ್ಲಿ ಭವಿಷ್ಯದ ನಾಯಕನನ್ನು ಕಂಡಿದ್ದ ಇಂದಿರಾ, ಅಶೋಕ್​ ಗೆಹ್ಲೋಟ್​ ಅವರನ್ನು ಎನ್​ಎಸ್​ಯುಐನ ರಾಜಸ್ಥಾನ ಘಟಕದ ಅಧ್ಯಕ್ಷರನ್ನಾಗಿ ಮಾಡಿದ್ದರು.
 • 1985ರಲ್ಲಿ ಅವರು ತಮ್ಮ 34ನೇ ವಯಸ್ಸಿಗೇ ರಾಜಸ್ಥಾನ ಕಾಂಗ್ರೆಸ್​ನ ಅಧ್ಯಕ್ಷರಾಗಿದ್ದರು. ಹೀಗೆ ಇಂದಿರಾ ಅವರ ಮೂಲಕ ರಾಜಕೀಯಕ್ಕೆ ಬಂದ ಗೆಹ್ಲೋಟ್​ ಗಾಂಧಿ ಕುಟುಂಬದ ಅತ್ಯಂತ ಆಪ್ತ ಹಾಗೂ ನಿಷ್ಟರೆನಿಸಿಕೊಂಡರು.
 • ಅಶೋಕ್​ ಗೆಹ್ಲೋಟ್​ ಎರಡು ಬಾರಿ ರಾಜಸ್ಥಾನ ಮುಖ್ಯಮಂತ್ರಿಯಾಗಿದ್ದರೂ, ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಸಮಾನವಾದ ಪ್ರಭಾವ ಹೊಂದಿದ್ದಾರೆ.
 • ಅವರು ಮೊದಲಿಗೆ ಆಯ್ಕೆಯಾಗಿದ್ದೇ ಸಂಸತ್​ಗೆ. ನಂತರ ಅವರು ಐದು ಬಾರಿ ಸಂಸತ್​ ಸದಸ್ಯರಾದರು. ಕೇಂದ್ರದಲ್ಲಿ ಮಂತ್ರಿಯಾಗಿಯೂ ಸೇವೆ ಸಲ್ಲಿಸಿರುವ ಅವರು, ಐದು ಬಾರಿ ವಿಧಾನಸಭೆಗೂ ಆಯ್ಕೆಯಾಗಿದ್ದಾರೆ.
 • ಸರ್ದಾರ್​ಪುರ ವಿಧಾನಸಭೆ ಕ್ಷೇತ್ರದಿಂದ ಸತತ ಐದು ಬಾರಿ ಆಯ್ಕೆಯಾಗಿರುವ ಅವರು, ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ.
 • 2003ರಲ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ ದೇಶಕ್ಕೆ ಮಾದರಿ ಎನಿಸುವ ಕಾರ್ಯಕ್ರಮಗಳನ್ನು ನೀಡಿದ್ದರು. ಬರ ನಿರ್ವಹಣೆ, ಉಚಿತ ಔಷಧ ವಿತರಣೆ ಕಾರ್ಯಕ್ರಮಗಳು ದೇಶದ ಗಮನ ಸೆಳೆದಿದ್ದವು.
 • ಕಳೆದ ವರ್ಷ ಗುಜರಾತ್​ನಲ್ಲಿ ವಿಧಾನಸಭೆ ಚುನಾವಣೆ ಎದುರಾಗುವ ಒಂದು ತಿಂಗಳ ಮೊದಲು ಕಾಂಗ್ರೆಸ್ ಹೈಕಮಾಂಡ್​ ಅಶೋಕ್​ ಗೆಹ್ಲೋಟ್​ ಅವರನ್ನು ಗುಜರಾತ್​ ಕಾಂಗ್ರೆಸ್​ನ ಉಸ್ತುವಾರಿಯಾಗಿ ನೇಮಿಸಿತ್ತು. ಮೋದಿ ಅವರ ಪ್ರಬಲ ಅಲೆ ಇರುವ ಗುಜರಾತ್​ನಲ್ಲಿ ಬಿಜೆಪಿ ಏದುಸಿರು ಬಿಟ್ಟು ಕಾಂಗ್ರೆಸ್​ಗಿಂತಲೂ ಕೆಲವೇ ಸ್ಥಾನಗಳ ಅಂತರದಲ್ಲಿ ಗೆದ್ದು ಅಧಿಕಾರಕ್ಕೆ ಬಂದಿತ್ತು. ಒಂದು ಹಂತದಲ್ಲಿ ಗುಜರಾತ್​ನಲ್ಲೇ ಬಿಜೆಪಿಗೆ ಸೋಲಿನ ಭೀತಿ ಎದುರಾಗಿತ್ತು. ಅಲ್ಲಿ ಬಿಜೆಪಿ ಅಷ್ಟು ಕಷ್ಟಪಟ್ಟು ಗೆಲ್ಲವಂತಾಗಿದ್ದು ಇದೇ ಗೆಹ್ಲೋಟ್ ಅವರ ಜಾದೂವಿನಿಂದ.
 • ಚುನಾವಣೆಗೂ ಒಂದು ತಿಂಗಳ ಮೊದಲಷ್ಟೇ ಗುಜರಾತ್​ಗೆ ಬಂದಿದ್ದ ಗೆಹ್ಲೋಟ್​, ಸಂಘಟನೆಯನ್ನು ಚುರುಕುಗೊಳಿಸಿದ್ದರು.
 • ಕರ್ನಾಟಕ ಅಂತಂತ್ರ ವಿಧಾನಸಭೆಗೆ ಸಾಕ್ಷಿಯಾಗಲಿದೆ ಎಂಬುದನ್ನು ಫಲಿತಾಂಶ ಪ್ರಕಟವಾಗುವುದಕ್ಕೂ ಮೊದಲೇ ಗ್ರಹಿಸಿದ್ದ ಅಶೋಕ್​ ಗೆಹ್ಲೋಟ್​, ಜೆಡಿಎಸ್​ನೊಂದಿಗೆ ಸಂಪರ್ಕ ಸಾಧಿಸಿ ಮೈತ್ರಿ ಸರ್ಕಾರ ರಚನೆಯಾಗುವಂತೆ ನೋಡಿಕೊಂಡಿದ್ದರು. 

ಲೋ ಪ್ರೊಫೈಲ್​ ರಾಜಕಾರಣಿ ಎನಿಸಿಕೊಳ್ಳುವ ಅಶೋಕ್​ ಗೆಹ್ಲೋಟ್​, ರಾಜಕೀಯವಾಗಿ ಹೈಪ್ರೊಫೈಲ್​ ಹೊಂದಿರುವವರು. ಗಾಂಧಿ ಕುಟುಂಬದ ನಿಷ್ಟರೂ, ಸಂಘಟನಾ ಚತುರರೂ ಆಗಿರುವ ಅವರು ಜನಸಾಮಾನ್ಯರೊಂದಿಗೆ ಸಾಮಾನ್ಯರಂತೆಯೇ ಬೆರೆಯಬಲ್ಲರು. ಇದೆಲ್ಲ ಕಾರಣಗಳು ಅವರನ್ನು ಮೂರನೇ ಬಾರಿಗೆ ಸಿಎಂ ಹುದ್ದೆ ಬಳಿಗೆ ಎಳೆದು ತಂದಿದೆ.