More

  ಇಡೀ ಕಲ್ಯಾಣವೇ ಒಂದು ಆಧ್ಯಾತ್ಮಿಕ ಸಾಧನಾರಂಗ

  ಇಡೀ ಕಲ್ಯಾಣವೇ ಒಂದು ಆಧ್ಯಾತ್ಮಿಕ ಸಾಧನಾರಂಗ ಅಲ್ಲಮಪ್ರಭು ಸಿದ್ಧರಾಮಯ್ಯನ ಜೊತೆ ಕಲ್ಯಾಣಕ್ಕೆ ಬಂದಾಗ ಅವನು ಅಲ್ಲಿ ಹಾಕಿದ್ದ ‘ಶಾಸನವನ್ನು ಓದುತ್ತಿದ್ದದ್ದು ಸರಿಯಷ್ಟೆ. ಕಲ್ಯಾಣದ ವಿಸ್ತೀರ್ಣ, ಅಲ್ಲಿರುವ ದ್ವಾರವಟ್ಟಗಳು, ಕದಗಳು, ಮಹಾಮನೆಗಳು, ಕೋಟೆಗಳು-ಇವನ್ನೆಲ್ಲಾ ತಿಳಿದುಕೊಂಡೆವು. ಇಲ್ಲೆಲ್ಲಾ ಹೇಳಿರುವ ವಿವರಗಳನ್ನು ಗಮನಿಸಿದಾಗ ‘ಕಲ್ಯಾಣಪುರ’ ಒಂದು ಬೆಡಗಾಗಿ, ಒಂದು ವಿಸ್ಮಯವಾಗಿ ನಮ್ಮನ್ನು ಆವರಿಸುತ್ತದೆ. ‘ಕಲ್ಯಾಣ’ದ ಮುಂದಿನ ವಿವರಕ್ಕೆ ಹೋಗುವ ಮುನ್ನ ಅಲ್ಲಮಪ್ರಭುಗಳ ವಚನವೊಂದನ್ನು ನಾವು ಪರಾಂಬರಿಸಬಹುದು! ಅಲ್ಲಮಪ್ರಭು ಸಿದ್ಧರಾಮನನ್ನು ಒಡಗೊಂಡು ಕಲ್ಯಾಣಕ್ಕೆ ಬಂದಾಗ ನುಡಿದ ವಚನವೊಂದು ಹೀಗಿದೆ: ಮರ್ತ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು/ಕರ್ತನಟ್ಟಿದನಯ್ಯ ಒಬ್ಬ ಶಿವಶರಣನ/ ಆ ಶರಣ ಬಂದು ಕಲ್ಯಾಣವೆಂಬ ಶಿವಪುರವ ಕೈಲಾಸವ ಮಾಡಿ,/ರುದ್ರಗಣ ಪ್ರಮಥಗಣಂಗಳೆಲ್ಲರ ಹಿಡಿತಂದು/ ಅಸಂಖ್ಯಾತರೆಂದು ಹೆಸರಿಟ್ಟು ಕರೆದು/ಭಕ್ತಿಯ ಕುಳಸ್ಥಳವ, ಶ್ರುತ ದೃಷ್ಟಪವಾಡವಂ ಮೆರೆದು./ ತೋರಿ ಜಗವರಿಯೆ ಶಿವಾಚಾರದ ಧ್ವಜವನೆತ್ತಿಸಿ/ಮರ್ತ್ಯಲೋಕ ಶಿವಲೋಕವೆರಡಕ್ಕೆ ನಿಚ್ಬಣಿಯಾದನು. (ಅಲ್ಲಮ-ವಚನ-1007)

  ಈ ವಚನವು, ಚನ್ನಬಸವರಾಜ ದೇವರು ಕಲ್ಯಾಣದ ದ್ವಾರದಲ್ಲಿ ಹಾಕಿಸಿದ ಶಾಸನದ ಸಂಕ್ಷಿಪ್ತೀಕರಣವಾಗಿದೆ. ‘ಕಲ್ಯಾಣವೆಂಬ ಶಿವಪುರ ಕೈಲಾಸವ ಮಾಡಿ’ ಎಂದು ಅಲ್ಲಮಪ್ರಭುಗಳು ಹೇಳುತ್ತಿದ್ದಾರೆ. ಇಲ್ಲಿ ಬಂದಿರುವ ಕಲ್ಯಾಣ, ಶಿವಪುರ ಕೈಲಾಸ ಒಂದಕ್ಕೊಂದು ಏರಿಕೆಯ ಕ್ರಮದಲ್ಲೂ ಇವೆ. ಅವುಗಳನ್ನು ಸಮಾನಾಂತರ ನೆಲೆಯಲ್ಲೂ ಕಾಣಲಾಗುತ್ತಿದೆ. ಕಲ್ಯಾಣವನ್ನು ಶಿವಪುರವಾಗಿಸಿರುವವನು ಬಸವಣ್ಣನೆಂಬುದು ಇಲ್ಲಿ ಗಮ್ಯಗೋಚರ. ನಾವು ಮರಳಿ ಕಲ್ಯಾಣದ ನೆಲೆಯನ್ನು ಶಿವಗಣಪ್ರಸಾದಿಯ ಮಾತಿನಲ್ಲಿ ಕೇಳೋಣ.

  ಆ ಪಟ್ಟಣದಲ್ಲಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶಿವಾಲಯವುಂಟು. ಆ ಶಿವಾಲಯಗಳಲ್ಲಿ ತ್ರಿಪುರಾಂತಕ ದೇವಾಲಯ ಮುಖ್ಯವಾದುದು. ಅಲ್ಲಿ ಮುನ್ನೂರ ಅರುವತ್ತು ಪದ್ಮಪತ್ರದ ಸರೋವರಗಳು ಮನೋಹರವಾಗಿವೆ. ಎರಡು ಲಕ್ಷ ಎಂಬತ್ತೈದು ಸಾವಿರದ ಏಳುನೂರೆಪ್ಪತ್ತು ದಾಸೋಹ ನೀಡುವ ಮಠಗಳುಂಟು. ಆ ಮಠಗಳಲ್ಲಿ ಬಸವರಾಜದೇವರ ಮಠ ವಿಶಿಷ್ಟವಾದುದು. ಕಲ್ಲುಗೆಲಸದಿಂದ ಮಾಡಿದ ಗೋಡೆ, ಅತಿಸೂಕ್ಷ್ಮವಾಗಿ ಕುಸುರಿಗೆಲಸ ಮಾಡಿರುವ ಐದು ದ್ವಾರಗಳು. ಅವಕ್ಕೆ ಪಂಚಾಕ್ಷರಿಯ ಶಾಸನ. ರುದ್ರಾಕ್ಷಿಯ ಸೂಸಕ ಕಣ್ಣಿಗೆ ಒತ್ತುತ್ತಿವೆ. ಅಲ್ಲಿಯೇ ನಂದಿಯ ಕಂಭಧ್ವಜ, ಎತ್ತರವಾದ ಪತಾಕೆ, ವ್ಯಾಸಧ್ವಜ ಉಂಟು. ಗುರುಲಿಂಗ ಜಂಗಮರಿಗೆ ಪಾದಾರ್ಚನೆ ಮಾಡಲು ನಾಲ್ಕು ಪುರುಷ ಪ್ರಮಾಣದ ಪುಷ್ಕರಣಿ, ಪಾದೋದಕದ ತುಂಬ ನುಚ್ಚಿ ಬೆಳೆವ ರಾಜಶಾಲಿಯ ಗದ್ದೆ ಹನ್ನೆರಡು ಕಂಡುಗ. ಆ ಅರಮನೆಯ ವಿಸ್ತೀರ್ಣದೊಳಗೆ ಲಿಂಗಾರ್ಚನೆ ಮಾಡುವ ಲಕ್ಷದ ಮೇಲೆ ತೊಂಬತ್ತಾರು ಸಾವಿರ ವಿಸ್ತೀರ್ಣದ ಮಠಗಳ ನೆಲಸು ಉಂಟು.

  ಈ ಸಂಗತಿಗಳನ್ನು ಗಮನಿಸಿದಾಗ ‘ಅಸಂಖ್ಯತ್ವ’ ಎಂಬ ತಾತ್ತಿ್ವಕ ನೆಲೆ ಕಾಣುತ್ತದೆ. ಇಡಿ ಕಲ್ಯಾಣವೇ ಒಂದು ಆಧ್ಯಾತ್ಮಿಕ ಸಾಧನಾರಂಗ. ಅಲ್ಲಿಗೆ ಸಹಸ್ರಾರು ಶರಣರು ಬಂದು ನೆಲೆ ನಿಂತಿದ್ದಾರೆ! ಭಿನ್ನ ಭಿನ್ನ ಪರಿಸರದಿಂದ ಬಂದವರು ಲಿಂಗಾಂಗ ಸಯೋಗದಿಂದ ಏಕತ್ರವಾದ ‘ಶಿವಯೋಗ’ದ ದಾರಿಯಲ್ಲಿ ನಿಂತಿದ್ದಾರೆ! ಶಿವಯೋಗಕ್ಕೆ ಸಂಖ್ಯಾಶಾಸ್ತ್ರದ ಇನ್ನೊಂದು ನೆಲೆಯೂ ಉಂಟು! ‘ಕಲ್ಯಾಣಪುರ’ವನ್ನು ಭೌತಿಕವಾಗಿಯೇ ನಾವು ನೋಡಬೇಕಾಗಿಲ್ಲ. ಅದೊಂದು ‘ಅವಿಮುಕ್ತಕ್ಷೇತ್ರ’ವೆಂದೂ ‘ಸಾಂಖ್ಯಯೋಗ’ದ ಅಸಂಖ್ಯತ್ವವೆಂದೂ ನೋಡಬೇಕಾಗುತ್ತದೆ. ಆಗ ಕಲ್ಯಾಣಪುರಕ್ಕೆ ಶಿವಾದ್ವೈತದ ನೆಲೆಯೊಂದು ಪ್ರಾಪ್ತವಾಗುತ್ತದೆ. ಶಿವಾದ್ವೈತ ತತ್ತ್ವವನ್ನು ಸಂಖ್ಯೆಗಳ ಮೂಲಕ ನೋಡುವ ಪರಿಕ್ರಮವನ್ನು ನಾವು ತಿಳಿದಂತಾಗುತ್ತದೆ.

  ಆ ಕಲ್ಯಾಣದಲ್ಲಿರುವ ಮಠಗಳಿಗಂತೂ ಕೊನೆಯಿಲ್ಲ. ಹನ್ನೆರಡು ಸಾವಿರ ಕಟ್ಟಳೆಯ ನೇಮದ ಮಠಗಳುಂಟು. ಇನ್ನು ಎಪ್ಪತ್ತೆರಡು ಸಾವಿರದ ಮಹಾಮನೆಗಳು, ಹತ್ತು ಸಾವಿರ ನಿತ್ಯನೇಮಿಗಳ ಮಠಗಳು, ಹದಿನೈದು ಸಾವಿರ ಚೆಲುಮೆಯಗ್ಛವಣಿಯ ವ್ರತಸ್ಥರ ಮಠಗಳು, ವೀರವ್ರತನೇಮಿಗಳ ಕಟ್ಟಳೆಯ ಹನ್ನೆರಡು ಸಾವಿರ ಮಠಗಳು, ಅಚ್ಚಪ್ರಸಾದಿಗಳ ಒಂದು ಸಾವಿರ ಮಠ. ಪ್ರತಿನಿತ್ಯ ಒಂದು ಸಾವಿರ ಜಂಗಮರಿಗೆ ಆರೋಗಣೆ ಮಾಡಿಸುವ ಮೂವತ್ತೆರಡು ಸಾವಿರ ದಾಸೋಹದ ಮಠಗಳು, ಸತ್ಯಸದಾಚಾರಿಗಳ ಐವತ್ತೆಂಟು ಸಾವಿರ ಮಠಗಳು, ನಿತ್ಯ ಸಾವಿರದ ನೂರು ಜಂಗಮರುಗಳಿಗೆ ದಾಸೋಹ

  ಗಳ ಮಠ ಹನ್ನೊಂದು ಸಾವಿರ, ಸಮಯಾಚಾರದಿಂದ ಲಿಂಗಾರ್ಚನೆ ಮಾಡುವ ಜಂಗಮಭಕ್ತರ ಎರಡುಸಾವಿರದ ಏಳುನೂರೆಪ್ಪತ್ತು ಮಠಗಳುಂಟು. ಇಲ್ಲಿ ವಿವಿಧ ಬಗೆಯ ಮಠಗಳನ್ನು ಹೇಳಲಾಗಿದೆ. ಆ ಮಠಗಳ ಸಂಖ್ಯೆಗಳನ್ನು ಹೇಳಲಾಗಿದೆ. ಎಪ್ಪತ್ತೆರಡು ಸಾವಿರ ಮಠ

  ಗಳೆಂದಾಗ ಕೂಡಿಸಿದರೆ ಒಂಬತ್ತು ಬರುತ್ತದೆ. ಇನ್ನು ಹತ್ತು- ಹನ್ನೆರಡು- ಹದಿನೈದು ಸಂಖ್ಯೆಗಳು ಬಂದಿವೆ. ಅವು ಕ್ರಮವಾಗಿ ಶೂನ್ಯ, ಒಂದು, ಮೂರು, ಆರು- ಸಮ- ಬೆಸ ಸಂಖ್ಯೆಗಳಾಗುತ್ತವೆ. ಸಮಸಂಖ್ಯೆಗಳು ಭೇದ ಪ್ರಮಾಣಗಳನ್ನು ಸಂಕೇತಿಸುತ್ತಿದ್ದರೆ; ಬೆಸಸಂಖ್ಯೆಗಳು ಅಭೇದಪ್ರಮಾಣಗಳನ್ನು ಸೂಚಕವಾಗಿ ಸಂಕೇತಿಸುತ್ತವೆ. ಒಟ್ಟು ಶಿವಯೋಗದ ಸ್ಥಲಗಳನ್ನೂ ಯೋಗಿ-ಶರಣರಲ್ಲಿರುವ ಎಪ್ಪತ್ತೆರಡು ಸಾವಿರದ ನಾಡಿಗಳನ್ನು ಪರೋಕ್ಷವಾಗಿ ಸಂಕೇತಿಸುತ್ತವೆ.

  ತೆಲಂಗಾಣದಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತ, ಮದುವೆಗೆ ಹೊರಟಿದ್ದ 65 ಮಂದಿ ಪ್ರಾಣಾಪಾಯದಿಂದ ಪಾರು!

  ಆಂಧ್ರ ಚುನಾವಣೆ: ಜನಸೇನಾ ಸಂಸ್ಥಾಪಕ ಪವನ್ ಕಲ್ಯಾಣ್ ಆಸ್ತಿಯ ಮೌಲ್ಯ ಎಷ್ಟು ಗೊತ್ತಾ…?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts