ಶಾಂತಿಯುತ ಮತದಾನಕ್ಕೆ ಯಾದಗಿರಿ ಸಕಲ ರೀತಿಯಲ್ಲಿ ಸಜ್ಜು; 9,88,392 ಮಂದಿಗೆ ಮತದಾನದ ಹಕ್ಕು

ಯಾದಗಿರಿ: 2019ನೇ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ರಾಜ್ಯದಲ್ಲಿ ನಾಳೆ ನಡೆಯಲಿದ್ದು, ಯಾದಗಿರಿ ಜಿಲ್ಲೆ ಸಕಲ ಸಿದ್ಧತೆಗಳೊಂದಿಗೆ ಮತದಾನಕ್ಕೆ ಸಜ್ಜಾಗಿದೆ.


ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಒಂದಾಗಿರುವ ಯಾದಗಿರಿ ಜಿಲ್ಲೆಯಲ್ಲಿಯೂ ಚುನಾವಣೆ ಕಣ ರಂಗೇರಿದೆ. ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಒಟ್ಟು 9,88,392 ಮತದಾರರಿದ್ದಾರೆ. ಕಲಬುರ್ಗಿಯ ಲೋಕಸಭಾ ಕ್ಷೇತ್ರಕ್ಕೆ ಜಿಲ್ಲೆಯ ಗುರುಮೀಠಕಲ್​​​ ವಿಧಾನ ಕ್ಷೇತ್ರ ಒಳಪಡುತ್ತದೆ. ಈ ಕ್ಷೇತ್ರವು ಒಟ್ಟು 2,45,251 ಮತದಾರರನ್ನು ಒಳಗೊಂಡಿದೆ.


ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರವು ಒಟ್ಟು 2,75,491 ಮತದಾರರನ್ನು ಒಳಗೊಂಡಿದ್ದು, ಈ ಕ್ಷೇತ್ರ ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ಯಾದಗಿರಿ ಲೋಕಸಭಾ ಕ್ಷೇತ್ರಕ್ಕೆ ಯಾದಗಿರಿ ಹಾಗೂ ಶಹಾಪುರ ಕ್ಷೇತ್ರಗಳು ಒಳಪಡಲಿವೆ. ಯಾದಗಿರಿಯಲ್ಲಿ 2,38,533 ಮತ್ತು ಶಹಾಪುರದಲ್ಲಿ ಒಟ್ಟು 2,29,117 ಮತದಾರರಿದ್ದಾರೆ.


ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 1,135 ಮತಗಟ್ಟೆಗಳಿವೆ. ಇದರಲ್ಲಿ ಸುರಪುರ 319, ಶಹಾಪುರ 265, ಯಾದಗಿರಿ 267 ಗುರುಮೀಠಕಲ್ 284 ಮತಗಟ್ಟೆಗಳನ್ನು ಒಳಗೊಂಡಿದೆ. ಜಿಲ್ಲೆಯ ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಒಟ್ಟು 7061 ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಅದರಲ್ಲಿ ಸುರಪುರ 1978, ಶಹಾಪುರ 1652, ಯಾದಗಿರಿ 1666 ಗುರುಮೀಠಕಲ್ 1765 ಸಿಬ್ಬಂದಿ ನಿಯೋಜನೆಯಾಗಿದ್ದಾರೆ.


ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತ ಮತದಾನ ನಡೆಸುವ ಉದ್ದೇಶದಿಂದ ರಾಜ್ಯ ಪೋಲಿಸ್ ಇಲಾಖೆ 1,748 ಭದ್ರತಾ ಸಿಬ್ಬಂದಿ ನೇಮಕ ಮಾಡಿದೆ. (ದಿಗ್ವಿಜಯ ನ್ಯೂಸ್​)