ಹೋಲ್​ಸೇಲ್ ಸಂಪುಟ ಸ್ಥಾನ!

|ರಮೇಶ ದೊಡ್ಡಪುರ

ಬೆಂಗಳೂರು: ಮೈತ್ರಿ ಸರ್ಕಾರ ಬೀಳದಂತೆ ಸರಿದೂಗಿಸಿಕೊಂಡು ಹೋಗುವ ಸಲುವಾಗಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡರು ಕಂಡುಕೊಂಡಿರುವ ಮಾರ್ಗ ಎಂದರೆ ಎಲ್ಲರಿಗೂ ಸಂಪುಟ ದರ್ಜೆ ಭಾಗ್ಯ!

ಹೌದು. ನಿಗಮ-ಮಂಡಳಿ ಮುಖ್ಯಸ್ಥರಾಗಿ ಸಿಎಂ ಕುಮಾರಸ್ವಾಮಿ ನೇಮಿಸಿರುವ ಕಾಂಗ್ರೆಸ್​ನ ಎಲ್ಲ ಶಾಸಕರಿಗೆ ಸಂಪುಟ ದರ್ಜೆ ಸ್ಥಾನ ದಯಪಾಲಿಸಲಾಗಿದೆ. ಕರ್ನಾಟಕದ ಬಜೆಟ್ ಗಾತ್ರಕ್ಕೆ ಹೋಲಿಸಿದರೆ ಹಣಕಾಸಿನ ಮಟ್ಟಿಗೇನೂ ಬಹುದೊಡ್ಡ ಹೊರೆಯಾಗದಿರುವ ಈ ನಿರ್ಧಾರದಿಂದ ನಿಗಮ-ಮಂಡಳಿ ಅಧ್ಯಕ್ಷರಿಗೆ ಆಡಳಿತಾತ್ಮಕ ಅಧಿಕಾರ ಹೆಚ್ಚುವ ಜತೆಗೆ ಸಂಪುಟ ದರ್ಜೆಯ ಲಾಲಿಪಪ್ ನೀಡಿ ಸಮಾಧಾನಿಸುವ ಮೂಲಕ ಸರ್ಕಾರವನ್ನು ಕಾಪಾಡಿಕೊಳ್ಳುವ ತಂತ್ರ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಅಧೀನದಲ್ಲಿ ಒಟ್ಟು 76 ನಿಗಮ-ಮಂಡಳಿಗಳಿವೆ. 8 ಸಂಸದೀಯ ಕಾರ್ಯದರ್ಶಿಗಳನ್ನು ಹೊರತುಪಡಿಸಿ ಇಲ್ಲಿವರೆಗೆ ಸಿಎಂ ನೇಮಕ ಮಾಡಿರುವ 18 ನಿಗಮಗಳ ಮುಖ್ಯಸ್ಥರಿಗೂ ಸಂಪುಟ ದರ್ಜೆ ಸ್ಥಾನಮಾನ ನೀಡಿದೆ.

ಎಲ್ಲ ನಿಗಮ-ಮಂಡಳಿಗಳೂ ಒಂದಾದರೊಂದು ಇಲಾಖೆಗಳ ಅಧೀನದಲ್ಲಿ ಬರುತ್ತವೆ. ಇಲಾಖೆಗೆ ಸಚಿವರಾಗಿರುವವರಿಗೆ ಸಹಜವಾಗಿ ಸಂಫುಟ ದರ್ಜೆ ಇರುವ ಕಾರಣ ಅದರ ಅಧೀನದ ಸಂಸ್ಥೆಯ ಮುಖ್ಯಸ್ಥರಿಗೂ ಸಂಪುಟ ದರ್ಜೆ ನೀಡುವುದು ಸಭೆ, ಸಮಾರಂಭಗಳಲ್ಲಿ ಮುಜುಗರಕ್ಕೀಡಾಗಬಹುದು ಎಂಬ ಕಾರಣಕ್ಕೆ ರಾಜ್ಯ ಸಂಪುಟ ಸ್ಥಾನಮಾನ ನೀಡುವ ಸಂಪ್ರದಾಯ ಪಾಲನೆಯಲ್ಲಿದೆ. ರಾಜಕೀಯ ಹೊಯ್ದಾಟ ಕಡಿಮೆಗೊಳಿಸುವ ಸಲುವಾಗಿ ಈ ಸರ್ಕಾರದಲ್ಲಿ ಮಾತ್ರ ಎಲ್ಲ ನಿಗಮ-ಮಂಡಳಿ ಮುಖ್ಯಸ್ಥರಿಗೂ ಹೋಲ್​ಸೇಲ್ ಸಂಪುಟ ದರ್ಜೆ ನೀಡಲಾಗುತ್ತಿದೆ. ಮೊದಲ ಬಾರಿಗೆ ಶಾಸಕರಾಗಿ ಸಚಿವರಾದವರಿಗೂ ಸಂಪುಟ ದರ್ಜೆಯನ್ನೇ ನೀಡುವುದು ಸಂಪ್ರದಾಯವಾಗಿರುವಾಗ ಅದೇ ನಡವಳಿಕೆ ನಿಗಮ-ಮಂಡಳಿಗೂ ಹಬ್ಬಿದೆ.

ಆರ್ಥಿಕ ಹೊರೆ

ಸಂಪುಟ ದರ್ಜೆ ಹಾಗೂ ರಾಜ್ಯ ಸಚಿವ ದರ್ಜೆಯಲ್ಲಿ ಹಣಕಾಸು ಹಾಗೂ ಆಡಳಿತಾತ್ಮಕ ವ್ಯತ್ಯಾಸವಿದೆ. ಮಾಸಿಕ 80 ಸಾವಿರ ರೂ. ಮನೆ ಬಾಡಿಗೆ, ಕಟ್ಟಡ ನಿರ್ವಹಣೆಗೆ 20 ಸಾವಿರ ರೂ., 1,000 ಲೀಟರ್ ಇಂಧನ ಭತ್ಯೆಗಳು ಎರಡೂ ದರ್ಜೆಗೆ ಸಮನಾಗಿವೆ. ಆದರೆ ಸಂಪುಟ ಹಾಗೂ ರಾಜ್ಯ ದರ್ಜೆಗೆ ಮಾಸಿಕ ವೇತನ ಕ್ರಮವಾಗಿ 50 ಸಾವಿರ ರೂ., 35 ಸಾವಿರ ರೂ. ಇದೆ. ವಾರ್ಷಿಕ ಆತಿಥ್ಯ ವೆಚ್ಚ ಕ್ರಮವಾಗಿ 3 ಲಕ್ಷ ರೂ. ಹಾಗೂ 2 ಲಕ್ಷ ರೂ. ಇದೆ. ಹೆಚ್ಚಿನ ಸಿಬ್ಬಂದಿ ನೇಮಿಸಿಕೊಳ್ಳುವ ಅವಕಾಶ ಸಂಪುಟ ದರ್ಜೆಗಿದೆ. ರಾಜ್ಯ ಸಚಿವರು 5 ಕೋಟಿ ರೂ.ವರೆಗೆ ಹಣಕಾಸಿನ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೊಂದಿದ್ದರೆ, ಸಂಪುಟ ದರ್ಜೆಗೆ 10 ಕೋಟಿ ರೂ. ಮಿತಿಯಿದೆ. ಎಲ್ಲ ನಿಗಮ-ಮಂಡಳಿಗಳ ಮುಖ್ಯಸ್ಥರಿಗೂ ಸಂಫುಟ ದರ್ಜೆ ನೀಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ಅಂದಾಜು 2 ಕೋಟಿ ರೂ. ವೆಚ್ಚವಾಗುತ್ತದೆ. ಕರ್ನಾಟಕದ ಬಜೆಟ್ ಗಾತ್ರಕ್ಕೆ ಹೋಲಿಸಿದರೆ ಈ ಆರ್ಥಿಕ ಹೊರೆ ಲೆಕ್ಕಕ್ಕಿಲ್ಲ. ಆದರೆ ರಾಜಕೀಯವಾಗಿ ಸರ್ಕಾರವನ್ನು ತೂಗಿಸುವಲ್ಲಿ ಪರಿಣಾಮಕಾರಿಯಾಗಲಿದೆ ಎಂಬುದು ಮೈತ್ರಿ ಸರ್ಕಾರದ ಚುಕ್ಕಾಣಿ ಹಿಡಿದವರ ಲೆಕ್ಕಾಚಾರ.

76 ನಿಗಮ ಮಂಡಳಿಗಳು

ಮೈಸೂರು ಮಿನರಲ್ಸ್ ಲಿಮಿಟೆಡ್, ಎಂಎಸ್​ಐಎಲ್, ಬೆಸ್ಕಾಂ, ಬಿಎಂಟಿಸಿ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಕರ್ನಾಟಕ ಆಹಾರ ನಿಗಮ ನಿಯಮಿತದಂತಹ ಹೆಚ್ಚಿನ ಹಣದ ಹರಿವಿರುವ ಹಾಗೂ ಜನಸಂಪರ್ಕ ಹೆಚ್ಚಿರುವ ಕೆಲ ನಿಗಮಗಳಷ್ಟೇ ಜನಮಾನಸದಲ್ಲಿ ಪರಿಚಿತ. ಕರ್ನಾಟಕ ರಾಜ್ಯ ಕಟ್ಟಡ ಕೇಂದ್ರ, ದಕ್ಷಿಣ ಪ್ರಾದೇಶಿಕ ಇಂಧನ ಸಮಿತಿ, ತೆಂಗಿನ ನಾರು ಅಭಿವೃದ್ಧಿ ಮಂಡಳಿ, ಶ್ರೀಕಂಠೀರವ ಸ್ಟುಡಿಯೋಸ್, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ, ಮೈಸೂರು ಪೈಂಟ್ಸ್ ಆಂಡ್ ವಾರ್ನಿಷ್ ಲಿಮಿಟೆಡ್​ನಂತಹ ನಿಗಮ-ಮಂಡಳಿಗಳು ಆಯಾ ಕ್ಷೇತ್ರದಲ್ಲಿ ಸಕ್ರಿಯವಾಗಿರುವವರಿಗಷ್ಟೇ ಪರಿಚಿತ.

Leave a Reply

Your email address will not be published. Required fields are marked *