ಒಂದೇ ಸೂರಿನಲ್ಲಿ ಎಲ್ಲ ಸೌಲಭ್ಯ

  • ರುದ್ರಣ್ಣ ಹರ್ತಿಕೋಟೆ

ಬೆಂಗಳೂರು: ತಾಲೂಕು ಕಚೇರಿಗಳಲ್ಲಿ ವಿವಿಧ ಯೋಜನೆಗಳನ್ನು ಒದಗಿಸುವ ‘ಪಡಸಾಲೆ‘ ಯೋಜನೆ ಜಾರಿಗೊಳಿಸಿದ ಬೆನ್ನಲ್ಲೇ ಇದೀಗ ಜಿಲ್ಲಾ ಕೇಂದ್ರಗಳಲ್ಲಿ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ‘ಸ್ಪಂದನ ಜನಸೇವಾ ಏಕಗವಾಕ್ಷಿ ಕೇಂದ್ರ’ಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರದ ಯೋಜನೆಗಳ ಫಲ ಪಡೆಯಲು ಬರುವವರು ಇಲಾಖೆಯಿಂದ ಇಲಾಖೆಗೆ ಅಲೆದಾಡಿ, ಸಮಯ ವ್ಯರ್ಥ ಮಾಡಿಕೊಳ್ಳಬಾರದೆಂಬ ಉದ್ದೇಶದಿಂದ ಸರ್ಕಾರ ಈ ಜನಸೇವಾ ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಿದ್ದು, ಇದೊಂದು ಹೊಸ ಪ್ರಯೋಗವಾಗಿದೆ.

ಸರ್ಕಾರ ಈಗಾಗಲೇ ನಾಡಕಚೇರಿಗಳಲ್ಲಿ ಅಟಲ್ಜೀ ಜನಸ್ನೇಹಿ ಕೇಂದ್ರಗಳನ್ನು, ಗ್ರಾಮ ಪಂಚಾಯಿತಿಗಳಲ್ಲಿ ಬಾಪೂಜಿ ಜನಸ್ನೇಹಿ ಕೇಂದ್ರಗಳನ್ನು ತೆರೆದಿದ್ದು, ಗ್ರಾಮೀಣ ಪ್ರದೇಶದ ಜನರಿಗೆ 100ಕ್ಕೂ ಅಧಿಕ ಸೇವೆಗಳನ್ನು ಸಮರ್ಪಕವಾಗಿ ನೀಡಲಾಗುತ್ತಿದ್ದು, ಈ ಕೇಂದ್ರಗಳು ಯಶಸ್ವಿಯಾಗಿದೆ. ಆ ಕೇಂದ್ರಗಳನ್ನು ಈಗ ಮತ್ತಷ್ಟು ವಿಸ್ತರಿಸಿ ಜಿಲ್ಲಾ ಕೇಂದ್ರಗಳಲ್ಲೂ ವಿವಿಧ ಇಲಾಖೆಯ ಸೌಲಭ್ಯಗಳು ಜನರಿಗೆ ಸಿಗುವಂತೆ ನೋಡಿಕೊಳ್ಳಲು ಸರ್ಕಾರ ಮುಂದಾಗಿದೆ.

ಐದು ಜಿಲ್ಲಾ ಕೇಂದ್ರಗಳಲ್ಲಿ ಪ್ರಾಯೋಗಿಕ ಆರಂಭ: ಸರ್ಕಾರ ಪ್ರಾಯೋಗಿಕವಾಗಿ ಮೈಸೂರು, ದಾವಣಗೆರೆ, ಬಾಗಲಕೋಟೆ, ಗದಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಈ ಕೇಂದ್ರಗಳನ್ನು ಆರಂಭಿಸುತ್ತಿದೆ. ಆ ನಂತರ ಉಳಿದ ಜಿಲ್ಲೆಗಳಿಗೆ ವಿಸ್ತರಣೆ ಮಾಡಲಿದೆ. ಇದಕ್ಕೆ ಹೆಚ್ಚಿನ ಮೊತ್ತವನ್ನೇನೂ ಖರ್ಚು ಮಾಡುತ್ತಿಲ್ಲ. ಕಂದಾಯ ಇಲಾಖೆಗೆ ಬಜೆಟ್ನಲ್ಲಿ ಒದಗಿಸಿರುವ 5532 ಕೋಟಿ ರೂ.ಗಳ ಮೊತ್ತದಲ್ಲೇ ಈ ಉದ್ದೇಶಕ್ಕೂ ಹಣ ಬಳಕೆ ಮಾಡಲಾಗುತ್ತಿದೆ ಎಂದು ಕಂದಾಯ ಇಲಾಖೆ ಮೂಲಗಳು ಖಚಿತಪಡಿಸಿವೆ.

ಎಫ್ಐಆರ್ ದಾಖಲಿಸಲು ಅವಕಾಶ

ಬಹು ಮುಖ್ಯವಾಗಿ ಈ ಕೇಂದ್ರಗಳಲ್ಲಿ ಎಫ್ಐಆರ್ ದಾಖಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಮಾತ್ರ ಪೊಲೀಸ್ ದೂರು ನೀಡುವ ಕಿಯಾಸ್ಕ್ ಗಳನ್ನು ಸ್ಥಾಪಿಸಲಾಗಿತ್ತು. ಆದರೆ ಅವು ವಿಫಲವಾಗಿದ್ದವು. ಆದರೆ ಈ ಸ್ಪಂದನ ಜನಸೇವಾ ಕೇಂದ್ರಗಳಲ್ಲಿ ಎಫ್ಐಆರ್ ದಾಖಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಎಫ್ಐಆರ್ನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಂಬಂಧಪಟ್ಟ ಠಾಣೆಗಳಿಗೆ ಕಳುಹಿಸಲಾಗುತ್ತದೆ.

ಏನೇನು ಸೇವೆ?

ನಾಡ ಕಚೇರಿಗಳಲ್ಲಿರುವ ಅಟಲ್ಜಿ ಜನಸ್ನೇಹಿ ಕೇಂದ್ರ, ಭೂಮಿ, ಸರ್ವೆ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಸಾರಿಗೆ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಾಗುವ ಸೇವೆಗಳನ್ನು ಕಾಲಾವಧಿಯಲ್ಲಿ ಒದಗಿಸುವುದು ಈ ಕೇಂದ್ರಗಳ ಸ್ಥಾಪನೆಯ ಉದ್ದೇಶವಾಗಿದೆ. ಅಟಲ್ಜಿ ಕೇಂದ್ರಗಳಲ್ಲಿ ಜಾತಿ, ಆದಾಯ, ಮದುವೆ, ಭೂಮಿ ವಸತಿ, ಕೃಷಿ, ವಿಧವಾ, ನಿರುದ್ಯೋಗ ಪ್ರಮಾಣ ಪತ್ರಗಳು ದೊರಕುತ್ತವೆ. ಆ ಸೇವೆಗಳಿಗೆ ಜಿಲ್ಲಾ ಕೇಂದ್ರಗಳಲ್ಲಿ ಅಟಲ್ಜಿ ಕೇಂದ್ರವನ್ನು ಹುಡುಕಿ ಅಲೆಯಬೇಕಾಗಿಲ್ಲ. ಪಡಿತರ ಚೀಟಿ, ಆಹಾರ ಪೂರೈಕೆಯ ಸಮಸ್ಯೆ, ಡಿಎಲ್ಗೆ ಅರ್ಜಿ, ಪಹಣಿ ಹೀಗೆ ವಿವಿಧ ಸೌಲಭ್ಯಗಳು ಒಂದೇ ಸೂರಿನಲ್ಲಿ ದೊರಕುತ್ತವೆ. ಇಲ್ಲಿ ದಾಖಲಾಗುವ ಅರ್ಜಿಗಳನ್ನು ಕಾಲಮಿತಿಯಲ್ಲಿ ಇಲಾಖೆಗಳ ಮೂಲಕ ವಿಲೇವಾರಿ ಮಾಡಲಾಗುತ್ತದೆ. ತಕ್ಷಣ ನೀಡಬಹುದಾದ ಸೌಲಭ್ಯಗಳನ್ನು ಅಲ್ಲಿಯೇ ಒದಗಿಸಲಾಗುತ್ತದೆ. ಎಷ್ಟು ಸೇವೆಗಳು ಒದಗಿಸಬೇಕು ಎಂಬುದು ಸದ್ಯದಲ್ಲಿಯೇ ನಿರ್ಧಾರವಾಗಲಿದೆ. ಸಾಧಕಬಾಧಕಗಳನ್ನು ಪರಿಶೀಲನೆ ಮಾಡಿಕೊಂಡು ಇನ್ನೂ ಹೆಚ್ಚಿನ ಇಲಾಖೆಗಳ ಸೇವೆಗಳನ್ನು ಒದಗಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ.

ಜಿಲ್ಲಾಧಿಕಾರಿಗೆ ಜವಾಬ್ದಾರಿ

ಜಿಲ್ಲಾಧಿಕಾರಿಗಳು ಈ ಕೇಂದ್ರಗಳ ಸ್ಥಾಪನೆಯ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಅಗತ್ಯ ಸಿಬ್ಬಂದಿ ಹಾಗೂ ಸೌಲಭ್ಯಗಳನ್ನು ಜಿಲ್ಲಾಧಿಕಾರಿಗಳ ಕಚೇರಿಯ ಮೂಲಕವೇ ಒದಗಿಸಲಾಗುತ್ತದೆ. ಸಿಬ್ಬಂದಿಯನ್ನು ಹೊರಗುತ್ತಿಗೆಯ ಮೂಲಕ ನೇಮಕ ಮಾಡುವ ಬಗ್ಗೆಯೂ ನಿರ್ಧರಿಸಲಾಗಿದೆ. ಡಿಸೆಂಬರ್ನಲ್ಲಿ ಐದು ಜಿಲ್ಲೆಗಳಲ್ಲಿಯೂ ಸೇವೆ ಆರಂಭಕ್ಕೆ ಎಲ್ಲ ಸಿದ್ಧತೆ ಮಾಡಲಾಗಿದೆ ಎಂದು ಕಂದಾಯ ಇಲಾಖೆ ಉನ್ನತ ಮೂಲಗಳು ಖಚಿತಪಡಿಸಿವೆ.

ಬಾಪೂಜಿ ಕೇಂದ್ರ ಯಶಸ್ವಿ

ರಾಜ್ಯದ 4545 ಗ್ರಾಮ ಪಂಚಾಯಿತಿಗಳಲ್ಲಿ ಆರಂಭವಾಗಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಪಹಣಿ ಕೊಡುವ ಯೋಜನೆ ಯಶಸ್ವಿಯಾಗಿದ್ದು ಕೇವಲ 5 ತಿಂಗಳಿನಲ್ಲಿ 6,78,459 ಪಹಣಿಯನ್ನು ನೀಡಲಾಗಿದೆ. ಆ ಕೇಂದ್ರದ ಯಶಸ್ಸೇ ಸ್ಪಂದನ ಜನಸೇವಾ ಏಕಗವಾಕ್ಷಿ ಕೇಂದ್ರದ ಸ್ಥಾಪನೆಗೆ ಕಾರಣ ಎಂದು ಮೂಲಗಳು ಖಚಿತಪಡಿಸಿವೆ.

ಸಾಫ್ಟ್ವೇರ್ ಸಿದ್ಧ

ಭೂ ಮಾಲೀಕರಿಗೆ ಪಹಣಿಯಲ್ಲಿ ಆಗುವ ಬದಲಾವಣೆಗಳ ಮಾಹಿತಿಯನ್ನು ಎಸ್ಎಂಎಸ್ ಮೂಲಕ ರವಾನಿಸುವ ಕಾರ್ಯವನ್ನು ಕಂದಾಯ ಇಲಾಖೆ ಕೈಗೆತ್ತಿಕೊಂಡಿದೆ. ಅದಕ್ಕಾಗಿ ತಂತ್ರಾಂಶವನ್ನು ಸಿದ್ಧಪಡಿಸಿದೆ. ಭೂಮಾಲೀಕರ ಆಧಾರ್ ಸಂಖ್ಯೆ, ಭಾವಚಿತ್ರವನ್ನು ಸರ್ವೆ ನಂಬರ್ ಜತೆಗೆ ಜೋಡಿಸಲಾಗುತ್ತಿದೆ. ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಈ ಯೋಜನೆ ಶೀಘ್ರದಲ್ಲಿ ಆರಂಭವಾಗಲಿದೆ.

Leave a Reply

Your email address will not be published. Required fields are marked *