ಮುಧೋಳ: ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಕಬ್ಬಿನ ಬಾಕಿ ಬಿಲ್ ಬಿಡುಗಡೆ, ದರ ಘೋಷಣೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಧೋಳ ತಹಸೀಲ್ದಾರ್ ಕಚೇರಿ, ಹೊರಗಿನ ನಾಲ್ಕೂ ಗೇಟ್‌ಗಳಿಗೆ ರೈತರು ಬೀಗ ಹಾಕಿ ಗುರುವಾರ ಪ್ರತಿಭಟನೆ ನಡೆಸಿದರು.
ಬುಧವಾರ ಅಹೋರಾತ್ರಿ ನಡೆದ ರೈತರ ಹೋರಾಟ ಗುರುವಾರ ಏಕಾಏಕಿ ಉಗ್ರ ಸ್ವರೂಪ ಪಡೆಯಿತು. ಗುರುವಾರ ಬೆಳಗ್ಗೆ ಆಗಮಿಸಿದ ತಾಲೂಕು ಆಡಳಿತ ಕಚೇರಿ ನೌಕರರನ್ನು ಒಳಗಡೆ ಹಾಕಿ ಸಂಜೆವರೆಗೂ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ ಮಾತನಾಡಿ, ರೈತರ ಬೇಡಿಕೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲು ಸಮಯ ಕೊಡುತ್ತೇವೆ. ಅಷ್ಟರೊಳಗೆ ಜಿಲ್ಲಾಧಿಕಾರಿಗಳು ಕಾರ್ಖಾನೆ ಮಾಲೀಕರೊಂದಿಗೆ ಸಭೆ ಮಾಡಿದ ನಿರ್ಣಯ ತಿಳಿಸಬೇಕು. ಇಲ್ಲವಾದರೆ ಮುಂದಿನ ಹೋರಾಟ ಇನ್ನಷ್ಟು ಉಗ್ರ ಸ್ವರೂಪ ಪಡೆಯಲಿದೆ ಎಂದರು.
ಜಿಲ್ಲಾಧಿಕಾರಿಗಳು ರೈತರ ಬಾಕಿ ನೀಡುವಂತೆ ಕಾರ್ಖಾನೆ ಮಾಲೀಕರಿಗೆ ಸೂಚಿಸಿದ್ದರೂ ಇದುವರೆಗೆ ಪೂರ್ಣಪ್ರಮಾಣದ ಬಾಕಿ ಜಮಾ ಮಾಡಿಲ್ಲ. ಇದರ ಮಧ್ಯೆ ಸರ್ಕಾರ ಕಾರ್ಖಾನೆ ಆರಂಭಕ್ಕೆ ಆದೇಶ ನೀಡಿರುವುದು ಯಾವ ನ್ಯಾಯ? ನ.15ರಿಂದ ಕಾರ್ಖಾನೆ ಆರಂಭಿಸುವಂತೆ ಆದೇಶಿಸಿದ್ದ ಸಕ್ಕರೆ ಸಚಿವರು, ಈಗ ನ.8ರಂದು ಕಾರ್ಖಾನೆ ಆರಂಭಕ್ಕೆ ಆದೇಶಿಸಿದ್ದು ಸರಿಯಲ್ಲ ಎಂದರು.
ಕಬ್ಬು ಬೆಳೆಗಾರರ ಸಂಘಟನೆ ತಾಲೂಕು ಅಧ್ಯಕ್ಷ ದುಂಡಪ್ಪ ಯರಗಟ್ಟಿ ಮಾತನಾಡಿ, ಯಾರದೋ ಹಿತಾಸಕ್ತಿಗಾಗಿ ತರಾತುರಿಯಲ್ಲಿ ಕಾರ್ಖಾನೆಗಳನ್ನು ಆರಂಭಿಸಿದರೆ ರೈತರಿಗೆ ಅನ್ಯಾಯವೆಸಗಿದಂತಾಗುತ್ತದೆ. ಸರ್ಕಾರ ಕೂಡಲೇ ಆದೇಶ ಹಿಂಪಡೆದು ರೈತರ ಬಾಕಿ ಮೊತ್ತ ಚುಕ್ತಾ ಆದ ಬಳಿಕ ಕಾರ್ಖಾನೆ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಮಾತನಾಡಿ, ಜಿಲ್ಲಾ ವ್ಯಾಪ್ತಿಯಲ್ಲಿ ಎಲ್ಲ ಸಕ್ಕರೆ ಕಾರ್ಖಾನೆಗಳ ಮಾಲೀಕರ ಹಾಗೂ ಹೋರಾಟಗಾರರ ಸಭೆ ಕರೆಯಬೇಕು. ನ.8ರೊಳಗೆ ಎಲ್ಲ ಬಾಕಿ ಮೊತ್ತ ಪಾವತಿಸಬೇಕು ಎಂದು ತಿಳಿಸಿದರು.
ದುಂಡಪ್ಪ ಯರಗಟ್ಟಿ, ವೆಂಕಣ್ಣ ಮಳಲಿ, ಸುಭಾಷ ಶಿರಬೂರ, ಹನುಮಂತ ನಬಾಬ, ಸುರೇಶ ಚಿಂಚಲಿ, ಸುಭಾಸ ಶಿರಬೂರ,ನಾಗೇಶ ಗೋಲಶೆಟ್ಟಿ ಇತರರು ಇದ್ದರು.
ಡಿವೈಎಸ್ಪಿ ಶಾಂತವೀರ ಈ., ಸಿಪಿಐ ಮಹಾದೇವ ಶಿರಹಟ್ಟಿ ನೇತತ್ವದಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಅಹೋರಾತ್ರಿ ಪ್ರತಿಭಟನೆ: ಬುಧವಾರ ಮಧ್ಯಾಹ್ನ ಮೂರು ಗಂಟೆಗೆ ಆರಂಭವಾದ ಪ್ರತಿಭಟನೆ ಗುರುವಾರ ಅಹೋರಾತ್ರಿ ಸಾಗಿದೆ. ರೈತರು ಸ್ಥಳಕ್ಕೆ ಜಿಲ್ಲಾಧಿಕಾರಿಗಳೇ ಬರಬೇಕು ಎಂದು ಪಟ್ಟು ಹಿಡಿದ ಕಾರಣ ಉಪವಿಭಾಗಾಧಿಕಾರಿಗಳ ಮಟ್ಟದಲ್ಲಿ ಸಂಧಾನ ಸಭೆ ವಿಲಗೊಂಡಿದೆ. ಜಿಲ್ಲಾಧಿಕಾರಿಗಳ ನೇತತ್ವದಲ್ಲಿ ನ.8ರಂದು ನಡೆಯಲಿರುವ ಸಭೆಯಲ್ಲಿನ ನಿರ್ಣಯಗಳ ಮೇಲೆ ಪ್ರತಿಭಟನೆ ಸ್ವರೂಪ ಯಾವ ಹಂತ ತಲುಪಲಿದೆ ಎಂದು ಗೊತ್ತಾಗಲಿದೆ.