ಪೊಲೀಸ್​ ಸಿಬ್ಬಂದಿಯ ಪ್ರಯತ್ನದ ಹೊರತಾಗಿ ಸಿಡಿಯಲಿಲ್ಲ 22 ಕುಶಾಲ ತೋಪು: ಮಾಜಿ ಸಿಎಂಗೆ ಸಿಗಲಿಲ್ಲ ಸರ್ಕಾರಿ ಗೌರವ!

ಸುಪಾಲ್​: ಬಿಹಾರದ ಮಾಜಿ ಸಿಎಂ ಜಗನ್ನಾಥ ಮಿಶ್ರಾ ಇತ್ತೀಚೆಗೆ ನಿಧನರಾಗಿದ್ದರು. ಇವರಿಗೆ ಸರ್ಕಾರಿ ಗೌರವ ಕೊಡಲು ನಿತೀಶ್​ ಕುಮಾರ್​ ನೇತೃತ್ವದ ಸರ್ಕಾರ ನಿರ್ಧರಿಸಿತ್ತು. ಅದರಂತೆ ಅಂತ್ಯಸಂಸ್ಕಾರದ ವೇಳೆ 22 ರೈಫಲ್​ಗಳಲ್ಲಿ ಕುಶಾಲ ತೋಪು ಸಿಡಿಸಿ ಸರ್ಕಾರಿ ಗೌರವ ಸಲ್ಲಿಸಲು ಪೊಲೀಸ್​ ಸಿಬ್ಬಂದಿಯೂ ಸಜ್ಜಾಗಿದ್ದರು. ದುರದೃಷ್ಟವಶಾತ್​ ಎಲ್ಲ 22 ಕುಶಾಲತೋಪುಗಳು ಸಿಡಿಯಲು ನಿರಾಕರಿಸಿದವು… ಸಾಕಷ್ಟು ಹಗ್ಗಜಗ್ಗಾಟದ ಬಳಿಕವೂ ರೈಫಲ್​ಗಳಿಂದ ಗಾಳಿಯಲ್ಲಿ ಗುಂಡು ಸಿಡಿಯದಿದ್ದಾಗ ಪೊಲೀಸ್​ ಸಿಬ್ಬಂದಿ ಕೂಡ ಕೈಚೆಲ್ಲಿದರು.

ಇದರಿಂದಾಗಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಸಿಎಂ ನಿತೀಶ್​ ಕುಮಾರ್​, ಉಪಮುಖ್ಯಮಂತ್ರಿ ಸುಶೀಲ್​ ಕುಮಾರ್​ ಮೋದಿ ಮತ್ತು ಆರೋಗ್ಯ ಸಚಿವ ಮಂಗಲ್​ ಪಾಂಡೆ ತೀವ್ರ ಮುಜುಗರಕ್ಕೆ ಒಳಗಾದರು.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಪಿಪ್ರಾ ವಿಧಾನಸಭಾ ಕ್ಷೇತ್ರದ ರಾಷ್ಟ್ರೀಯ ಜನತಾದಳ ಶಾಸಕ ಯದುವಂಶ ಕುಮಾರ್​ ಯಾದವ್​, ಇದು ಬಿಹಾರದ ಮಾಜಿ ಸಿಎಂ ಜಗನ್ನಾಥ ಮಿಶ್ರಾ ಅವರಿಗೆ ಮಾಡಿದ ಅಪಮಾನ. ಸರ್ಕಾರಿ ಗೌರವ ನೀಡುವ ಸಂದರ್ಭದಲ್ಲಿ 22 ರೈಫಲ್​ಗಳ ಪೈಕಿ ಒಂದೆರಡು ರೈಫಲ್​ಗಳು ವಿಫಲವಾಗುವುದನ್ನು ಕ್ಷಮಿಸಬಹುದು. ಆದರೆ, 22ಕ್ಕೆ 22 ರೈಫಲ್​ಗಳೂ ವಿಫಲವಾಗುತ್ತವೆ ಎಂದರೆ ಅದಕ್ಕಿಂತ ದೊಡ್ಡ ಅವಮಾನ ಮತ್ತೊಂದಿಲ್ಲ. ಆದ್ದರಿಂದ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಸಿಎಂ ನಿತೀಶ್​ ಕುಮಾರ್​ ಅವರನ್ನು ಆಗ್ರಹಿಸಿದರು.

ಬಿಹಾರದ ಸಿಎಂ ಆಗಿದ್ದ ಜಗನ್ನಾಥ ಮಿಶ್ರಾ ಆ.19ರಂದು ನಿಧನರಾಗಿದ್ದರು. ಪ್ರೊಫೆಸರ್​ ಆಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ಕಾಂಗ್ರೆಸ್​ ಸೇರಿದ ಬಳಿಕ 3 ಬಾರಿ ಬಿಹಾರದ ಸಿಎಂ ಗಾದಿ ಮೇಲೆ ಕೂರುವ ಅವಕಾಶ ಅವರನ್ನು ಹುಡುಕಿಕೊಂಡು ಬಂದಿತ್ತು. (ಏಜೆನ್ಸೀಸ್​)

Leave a Reply

Your email address will not be published. Required fields are marked *