ವಿಮಾನ ದುರಂತ: 189 ಜನ ಜಲ ಸಮಾಧಿ

ಜಕಾರ್ತ: 189 ಪ್ರಯಾಣಿಕರಿದ್ದ ಇಂಡೋನೇಷ್ಯಾದ ಲಯನ್ ಏರ್ ಪ್ಯಾಸೆಂಜರ್ ವಿಮಾನ ಸೋಮವಾರ ಟೇಕಾಫ್ (ಬೆಳಿಗ್ಗೆ 6.20) ಆದ 13 ನಿಮಿಷ ಬಳಿಕ ಸಮುದ್ರದಲ್ಲಿ ಪತನವಾಗಿದೆ. ಟೇಕಾಫ್ ಆದ 2-3 ನಿಮಿಷಗಳಲ್ಲಿ ನಿಲ್ದಾಣಕ್ಕೆ ಹಿಂದಿರುಗುವ ಬಗ್ಗೆ ಪೈಲಟ್ ಮನವಿ ಮಾಡಿದ್ದರು ಎನ್ನಲಾಗಿದೆ. ದುರಂತದ ತನಿಖೆ ನಡೆಸುವಂತೆ ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೊಡೊ ಆದೇಶಿಸಿದ್ದಾರೆ.

ಹೇಗಾಯಿತು ಪತನ: ಜಕಾರ್ತದ ಸೊಯಿಕಾರ್ನೆ ಹಟ್ಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಯನ್ ಏರ್ ಫ್ಲೈಟ್ ಜೆಟಿ 610 ಪಾಂಗ್ಕಲ್ ಪಿನಾಂಗ್​ಗೆ (ಬಾಂಗ್ಕಾ ಬೆಲಿತುಂಗ್ ದ್ವೀಪದ ಪ್ರಮುಖ ನಗರ) ಪ್ರಯಾಣ ಆರಂಭಿಸಿತ್ತು. ಟೇಕಾಫ್ ಆದ ಕೆಲವೇ ನಿಮಿಷದಲ್ಲಿ ನಿಯಂತ್ರಣ ಕೇಂದ್ರದೊಂದಿಗೆ ಸಂಪರ್ಕ ಕಡಿತಗೊಂಡು ಸಮುದ್ರಕ್ಕೆ ಬಿದ್ದಿದೆ. ಕಾಕ್​ಪಿಟ್ ವಾಯ್್ಸ ರೆಕಾರ್ಡರ್, ಫ್ಲೈಟ್ ಡಾಟಾ ರೆಕಾರ್ಡರ್​ಗಾಗಿ ಶೋಧ ನಡೆಸಲಾಗುತ್ತಿದೆ. ಇವು ಸಿಕ್ಕ ಬಳಿಕ ದುರಂತಕ್ಕೆ ನಿಖರ ಕಾರಣ ಏನು ಎಂಬುದು ತಿಳಿಯಲಿದೆ.

ದೆಹಲಿಯ ಪೈಲಟ್: ದೆಹಲಿ ಮೂಲದ ಭಾವ್ಯೆ ಸುನೇಜಾ ವಿಮಾನದ ಕ್ಯಾಪ್ಟನ್ ಆಗಿದ್ದರು ಎಂದು ತಿಳಿದುಬಂದಿದೆ. ಅವರ ಜತೆಗೆ ಹಾರ್ವಿನೊ ಎಂಬುವವರು ಸಹ ಪೈಲಟ್ ಆಗಿದ್ದರು. ಒಟ್ಟು 6 ಮಂದಿ ಕ್ಯಾಬಿನ್ ಸಿಬ್ಬಂದಿ ಇದ್ದರು. 2011ರ ಮಾರ್ಚ್​ನಿಂದ ಸುನೇಜಾ ಲಯನ್ ಏರ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಎಲ್ಲ ಪ್ರಯಾಣಿಕರು ಮೃತ: ಸಮುದ್ರ ತೀರದಿಂದ 15 ಕಿ.ಮೀ ದೂರದಲ್ಲಿ ವಿಮಾನ ಪತನವಾಗಿದೆ. ಪ್ರಯಾಣಿಕರ ಸಾಮಗ್ರಿಗಳು, ಕೆಲ ಮೃತ ದೇಹಗಳು ಸಿಕ್ಕಿದೆ. 23 ಸರ್ಕಾರಿ ಅಧಿಕಾರಿಗಳು ಕೂಡ ವಿಮಾನದಲ್ಲಿದ್ದರು ಎಂದು ರಕ್ಷಣಾ ಕಾರ್ಯದ ಮುಖ್ಯಸ್ಥ ಮುಹಮ್ಮದ್ ಸ್ಯಯುಗಿ ತಿಳಿಸಿದ್ದಾರೆ.

ಆಗಸ್ಟ್​ನಲ್ಲಿ ಖರೀದಿಸಿದ್ದ ವಿಮಾನ

ಸಮುದ್ರಕ್ಕೆ ಬಿದ್ದ ಜೆಟಿ610 ವಿಮಾನ ಬೋಯಿಂಗ್ 737 ಮ್ಯಾಕ್ಸ್ 8 ಮಾದರಿ ಯದ್ದು. ಕಳೆದ ಆಗಸ್ಟ್​ನಲ್ಲಿ ಇದನ್ನು ಖರೀದಿಸಲಾಗಿತ್ತು. ಇದು ಕೇವಲ 800 ಗಂಟೆಗಳ ಹಾರಾಟ ನಡೆಸಿತ್ತು.

ಬಾಲಿಯಿಂದ ಜಕಾರ್ತಕ್ಕೆ ಬರುವ ವೇಳೆಯೇ ವಿಮಾನದಲ್ಲಿ ತಾಂತ್ರಿಕ ದೋಷ ಕಂಡಿತ್ತು ಎನ್ನಲಾಗಿದೆ. ಹಾಗಿದ್ದ ಮೇಲೆ ನಿಯಮದಂತೆ ದುರಸ್ತಿ ಕಾರ್ಯ ಕೈಗೊಳ್ಳಬೇಕಿತ್ತು. ತನಿಖೆ ನಡೆಸಿ ತಪ್ಪು ಪತ್ತೆ ಹಚ್ಚಲಿದ್ದೇವೆ.

| ಎಡ್ವರ್ಡ್ ಸಿರೈತ್, ಲಯನ್ ಏರ್ ಗ್ರೂಪ್ ಸಿಇಒ