ಆಲಿಯಾ-ರಣಬೀರ್ ಶಾದಿ?

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜೋಡಿ ಇತ್ತೀಚೆಗೆ ಹೆಚ್ಚು ಸುದ್ದಿ ಮಾಡುತ್ತಿದೆೆ. ಅದಕ್ಕೆ ‘ಬ್ರಹ್ಮಾಸ್ತ್ರ’ ಚಿತ್ರ ಕಾರಣವಾಗಿದ್ದರೂ, ಅವರಿಬ್ಬರ ನಡುವೆ ಪ್ರೀತಿ ಇದೆ ಎಂಬ ವಿಚಾರದ ಪಾಲು ದೊಡ್ಡದಿದೆ. ಈಗ ಈ ವಿಚಾರಕ್ಕೆ ಪುಷ್ಟಿ ನೀಡುವಂತೆ ಟ್ವೀಟ್ ಮಾಡಿದ್ದಾರೆ ರಣಬೀರ್ ತಂದೆ ರಿಷಿ ಕಪೂರ್! ಈ ಟ್ವೀಟ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯೇ ನಡೆಯುತ್ತಿದೆ!

ಅಷ್ಟಕ್ಕೂ ರಿಷಿ ಮಾಡಿದ ಟ್ವೀಟ್ ಏನು? ‘ಮಹೇಶ್ ಭಟ್, ಮುಕೇಶ್ ಭಟ್, ರಾಬಿನ್ ಭಟ್, ಪೂರ್ಣಿಮಾ, ಸೋನಿ ಭಟ್, ಪೂಜಾ ಭಟ್, ಇಮ್ರಾನ್ ಹಶ್ಮಿ, ಆಲಿಯಾ ಭಟ್ ಹೀಗೆ ಭಟ್ ಕುಟುಂಬದ ಸದಸ್ಯರು ಹಾಗೂ ಸಂಬಂಧಿಗಳ ಜತೆ ನಾನು ಕೆಲಸ ಮಾಡಿದ್ದೇನೆ. ಎಲ್ಲರಿಗೂ ಧನ್ಯವಾದ!’ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ನೋಡಿ ಅಭಿಮಾನಿಗಳು ಖುಷಿ ಪಟ್ಟುಕೊಳ್ಳುವ ವೇಳೆಗೆ ಆಲಿಯಾ ಅದನ್ನು ರಿಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ,‘ನಾವು ಮತ್ತೊಮ್ಮೆ ಒಟ್ಟಿಗೆ ಕೆಲಸ ಮಾಡುವ ಭರವಸೆ ಇದೆ. ಆದರೆ, ಈ ಬಾರಿ ಎಲ್ಲರೂ ಸೇರಿ ಕೆಲಸ ಮಾಡೋಣ’ ಎಂದಿದ್ದಾರೆ.

ಭಟ್ ಕುಟುಂಬದ ಎಲ್ಲರೂ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಕಷ್ಟದ ವಿಚಾರ. ಹಾಗಾಗಿ ಆಲಿಯಾ ಮತ್ತು ರಣಬೀರ್ ಮದುವೆಗಾಗಿ ಅವರೆಲ್ಲ ಒಂದಾಗುತ್ತಿದ್ದಾರೆ ಎಂಬ ಲೆಕ್ಕಾಚಾರ ಹಾಕಿದ್ದಾರೆ ಅಭಿಮಾನಿಗಳು. ಅಷ್ಟೇ ಅಲ್ಲ, ಇಬ್ಬರು ಮಾಡಿರುವ ಟ್ವೀಟ್​ನ ಕಮೆಂಟ್ ಬಾಕ್ಸ್​ನಲ್ಲಿ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ. ‘ಆಲಿಯಾ ಹೆಸರನ್ನು ಆಲಿಯಾ ಕಪೂರ್ ಎಂದು ಬದಲಾಯಿಸಲು ರಿಷಿ ಸಿದ್ಧರಿದ್ದಂತೆ ಕಾಣುತ್ತದೆ’ ಎಂದು ಕೆಲವರು ಕಮೆಂಟ್ ಮಾಡಿದರೆ, ಇನ್ನೂ ಕೆಲವರು, ‘ರಣಬೀರ್+ಆಲಿಯಾ ಇದು ನಿಜವಾ’ ಎಂದು ಪ್ರಶ್ನಿಸಿದ್ದಾರೆ. ಸದ್ಯ, ಆಲಿಯಾ ‘ರಾಜಿ’ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರ ಬಿಡುಗಡೆಯಾದ ಎರಡೇ ವಾರಕ್ಕೆ 91 ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. -ಏಜೆನ್ಸೀಸ್

Leave a Reply

Your email address will not be published. Required fields are marked *