ತಾಯಿ ಜತೆ ಜಗಳವಾಡುತ್ತಿದ್ದ ಮದ್ಯವ್ಯಸನಿ ತಂದೆಯ ತಲೆಗೆ ಕಟ್ಟಿಗೆಯಿಂದ ಹೊಡೆದ ಪುತ್ರ: ಮುಂದೆ ಏನಾಯಿತು ಗೊತ್ತಾ?

ಬಾಗಲಕೋಟೆ: ಪಾನಮತ್ತನಾಗಿ ಬಂದು ತಾಯಿಯ ಜತೆ ಅಪ್ಪ ಜಗಳವಾಡುತ್ತಿದ್ದ. ಜಗಳ ಬಿಡಿಸಲು ಪುತ್ರ ಮುಂದಾಗಿದ್ದ. ಆದರೆ, ಇದರಿಂದ ಸಿಟ್ಟಿಗೆದ್ದ ತಂದೆ ಮಗನ ಜತೆಗೂ ಜಗಳಕ್ಕಿಳಿದಿದ್ದ. ಕೋಪದ ಕೈಗೆ ಬುದ್ದಿ ಕೊಟ್ಟ ಪುತ್ರ ಕೈಗೆ ಸಿಕ್ಕಿದ ಕಟ್ಟಿಗೆ ತುಂಡಿನಿಂದ ತಂದೆಯ ತಲೆಗೆ ಹೊಡೆದ. ಅಪ್ಪ ಸ್ಥಳದಲ್ಲೇ ಸತ್ತು ಬಿದ್ದ.

ಮುಧೋಳ ನಗರದ ಬಂಡಿವಡ್ಡರ ಕಾಲನಿಯ ನಿವಾಸಿ ಶೆಟ್ಟೆಪ್ಪ ಬಂಡಿವಡ್ಡರ (45) ಮೃತ. ಮಂಜು ಬಂಡಿವಡ್ಡರ (19) ಕೊಲೆ ಮಾಡಿದವ.

ಮದ್ಯವ್ಯಸನಿಯಾಗಿದ್ದ ಶೆಟ್ಟೆಪ್ಪ ದಿನವೂ ಪಾನಮತ್ತನಾಗಿ ಬಂದು ಪತ್ನಿ ಜತೆ ಜಗಳವಾಡುತ್ತಿದ್ದ. ಆಕೆಯನ್ನು ಹೊಡೆಯುತ್ತಿದ್ದ. ಪ್ರತಿದಿನವೂ ಪುತ್ರ ಮಂಜು ಅಪ್ಪ ಮತ್ತು ಅಮ್ಮನ ಜಗಳ ಬಿಡಿಸುತ್ತಿದ್ದ. ಎಂದಿನಂತೆ ಶುಕ್ರವಾರ ರಾತ್ರಿ ಕೂಡ ಶೆಟ್ಟೆಪ್ಪ ಕುಡಿದು ಬಂದು ಪತ್ನಿ ಜತೆ ಜಗಳ ಆರಂಭಿಸಿದ್ದ. ಆಕೆಯ ಮೇಲೆ ಹಲ್ಲೆ ಮಾಡಲು ಆರಂಭಿಸಿದ್ದ.

ಇಬ್ಬರ ಜಗಳ ಬಿಡಿಸಲು ಮಂಜು ಮುಂದಾಗಿದ್ದ. ಆದರೆ, ಪುತ್ರನ ಮೇಲೆ ಕೋಪಗೊಂಡ ಶೆಟ್ಟಪ್ಪ ಆತನನ್ನೂ ನಿಂದಿಸಿ, ಹೊಡೆಯಲು ಮುಂದಾಗಿದ್ದ. ಈ ಸಂದರ್ಭದಲ್ಲಿ ಮಂಜು ಕೈಗೆ ಸಿಕ್ಕ ಕಟ್ಟಿಗೆ ತುಂಡು ಹಿಡಿದು ಅಪ್ಪನನ್ನು ಬೆದರಿಸಲು ಯತ್ನಿಸಿದ್ದಾನೆ. ದುರದೃಷ್ಟವಶಾತ್​ ಅದು ನಿಜವಾಗಿಯೂ ಶೆಟ್ಟೆಪ್ಪನ ತಲೆಗೆ ಬಡಿದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಮುಧೋಳ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *