ವಿದಾಯದ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿ ಹಲವು ದಾಖಲೆ ಬರೆದ ಕುಕ್​

ಲಂಡನ್: ಕ್ರಿಕೆಟ್ ಜೀವನದ ಕೊನೆಯ ಟೆಸ್ಟ್​ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸುವ ಮೂಲಕ ಇಂಗ್ಲೆಂಡ್​ನ ಅನುಭವಿ ಆಟಗಾರ ಅಲಸ್ಟೈರ್ ಕುಕ್ ಹಲವು ದಾಖಲೆಗಳನ್ನು ಬರೆದಿದ್ದಾರೆ.

ಭಾರತದ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿಯ ಕೊನೆಯ ಪಂದ್ಯದ 2ನೇ ಇನಿಂಗ್ಸ್​ನಲ್ಲಿ ಕುಕ್​ ಭರ್ಜರಿ 147 ರನ್​ ಗಳಿಸುವ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ 33ನೇ ಶತಕ ದಾಖಲಿಸಿದರು. ಈ ಮೂಲಕ ಅವರು ಟೆಸ್ಟ್​ ಕ್ರಿಕೆಟ್​ನ ಪದಾರ್ಪಣೆ ಪಂದ್ಯ ಮತ್ತು ವಿದಾಯದ ಪಂದ್ಯದಲ್ಲಿ ಶತಕ ಗಳಿಸಿದ ಐದನೆಯ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.

ಕುಕ್​ 2006ರಲ್ಲಿ ನಾಗಪುರದಲ್ಲಿ ಭಾರತದ ವಿರುದ್ಧ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಅವರು ಭಾರತದ ವಿರುದ್ಧವೇ ಅಂತಿಮ ಪಂದ್ಯವಾಡಿದರು. ಈ ಎರಡೂ ಪಂದ್ಯಗಳಲ್ಲಿ ಅವರು ಶತಕ ದಾಖಲಿಸುವ ಮೂಲಕ ತಮ್ಮ ವಿದಾಯದ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು.

ಇದಕ್ಕೂ ಮುನ್ನ ಆಸ್ಟ್ರೇಲಿಯಾದ ರೆಜಿನಾಲ್ಡ್ ಡಫ್, ಆಸ್ಟ್ರೇಲಿಯಾದ ಬಿಲ್ ಪೊನ್ಸ್ಫೋರ್ಡ್, ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್​ ಗ್ರೇಗ್​ ಚಾಪಲ್​ ಮತ್ತು ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್​ ಅಜರುದ್ದೀನ್​ ತಮ್ಮ ಪದಾರ್ಪಣೆ ಮತ್ತು ವಿದಾಯದ ಪಂದ್ಯದಲ್ಲಿ ಶತಕ ಗಳಿಸಿದ ಸಾಧನೆ ಮಾಡಿದ್ದರು.

ಇದೇ ಸಂದರ್ಭದಲ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ 12,472 ರನ್​ ಕಲೆ ಹಾಕುವ ಮೂಲಕ ಟೆಸ್ಟ್​ನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಎಡಗೈ ಆಟಗಾರ ಎಂಬ ದಾಖಲೆ ಬರೆದರು. ಇದಕ್ಕೂ ಮುನ್ನ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ 12,400 ರನ್​ ಗಳಿಸುವ ಮೂಲಕ ಯಶಸ್ವಿ ಎಡಗೈ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದರು. (ಏಜೆನ್ಸೀಸ್​)