ಭಾರತದಲ್ಲಿ ವಾಯುಮಾಲಿನ್ಯದಿಂದ ಆಗುತ್ತಿರುವ ಸಾವಿನ ಸಂಖ್ಯೆ 2009ರಿಂದ 2019ರವರೆಗಿನ 10 ವರ್ಷಗಳ ಅವಧಿಯಲ್ಲಿ 43 ಲಕ್ಷದಿಂದ 73 ಲಕ್ಷಕ್ಕೆ ಏರಿದೆ ಎಂದು ಜನಪ್ರಿಯ ವಿಜ್ಞಾನ ನಿಯತಕಾಲಿಕ ಲ್ಯಾನ್ಸೆಟ್ನ ‘ಪ್ಲಾನೆಟರಿ ಹೆಲ್ತ್’ ವರದಿ ತಿಳಿಸಿದೆ. ಪಿಎಂ (ಪಾರ್ಟಿಕ್ಯುಲೇಟ್ ಮ್ಯಾಟರ್) 2.5ನಷ್ಟಿರುವ ಕಲುಷಿತ ಗಾಳಿಯನ್ನು ದೀರ್ಘ ಕಾಲ ಉಸಿರಾಡಿದ್ದರ ಪರಿಣಾಮ ಇದು. ದೊಡ್ಡ ಪ್ರಮಾಣದಲ್ಲಿ ಪ್ರಾಣಹಾನಿ ಆಗಿರುವುದು ಎಚ್ಚರಿಕೆಯ ಗಂಟೆಯೇ ಸರಿ. ಏಕೆಂದರೆ, ವಾಯುಮಾಲಿನ್ಯದ ಸ್ಥಿತಿ ವರ್ಷದಿಂದ ವರ್ಷಕ್ಕೆ ಗಂಭೀರವಾಗುತ್ತಿದೆ. ಹಲವು ದಶಕಗಳಿಂದ ತೋರಿದ ನಿರ್ಲಕ್ಷ್ಯ ಇದಕ್ಕೆ ಕಾರಣ ಎನ್ನಬಹುದು. ಮಕ್ಕಳ ಆರೋಗ್ಯದ ಮೇಲೂ ವಾಯುಮಾಲಿನ್ಯ ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಸಣ್ಣ ವಯಸ್ಸಿನಲ್ಲೇ ಅಸ್ತಮಾಗೆ ತುತ್ತಾಗುತ್ತಿದ್ದಾರೆ.
ಭಾರತದಲ್ಲಿ ವಾಯುಮಾಲಿನ್ಯದ ಪ್ರಮಾಣ ಭೌಗೋಳಿಕವಾಗಿ ವಿಸ್ತರಣೆಯಾಗಿದೆ ಮತ್ತು ಉತ್ತರ ಭಾರತದಲ್ಲಿ ಇದೇ ಪ್ರಮಾಣ ಮುಂದುವರಿದರೆ ಆ ಭಾಗದ ಜನರು ತಮ್ಮ ಆಯುಷ್ಯದಲ್ಲಿ ಒಂಬತ್ತಕ್ಕೂ ಹೆಚ್ಚಿನ ವರ್ಷಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಆತಂಕಕಾರಿ ವಿಚಾರವನ್ನು ಷಿಕಾಗೋ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್ಸ್ಟಿಟ್ಯೂಟ್ನ ಅಧ್ಯಯನ ವರದಿ 2022ರಲ್ಲಿ ತಿಳಿಸಿತ್ತು. ಪ್ರತಿ 10 ಲಕ್ಷ ಜನರಲ್ಲಿ 18 ಸಾವಿರ ಜನರು ವಾಯುಮಾಲಿನ್ಯದ ಕಾರಣ ವಿವಿಧ ರೋಗ, ತೊಂದರೆಗೆ ಸಿಲುಕಿ ಮೃತರಾಗುತ್ತಿದ್ದಾರೆ. ಇದು ವಿಶ್ವದಲ್ಲೇ ಗರಿಷ್ಠ ಮಟ್ಟವಾಗಿದೆ ಎಂಬುದು ಕಳವಳದ ಸಂಗತಿ.
ವಾಯು ಗುಣಮಟ್ಟ ಸೂಚ್ಯಂಕ (ಎಕ್ಯುಐ) ಅಪಾಯದ ಮಟ್ಟ ಮೀರುತ್ತಿದೆ. ಭಾರತದ ಸುಮಾರು 14 ಕೋಟಿ ಜನರು ಎಕ್ಯುಐನ ಅಪಾಯಕಾರಿ ಮಟ್ಟಕ್ಕಿಂತ 10ರಿಂದ 15 ಪಟ್ಟು ಹೆಚ್ಚು ಮಾಲಿನ್ಯ ಹೊಂದಿರುವ ಗಾಳಿ ಸೇವಿಸುತ್ತಿದ್ದಾರೆ. ಕೈಗಾರಿಕೆಗಳಿಂದ ಬರುವ ಕಲುಷಿತ ಹೊಗೆಯಿಂದ ಶೇಕಡ 50, ವಾಹನಗಳಿಂದ ಬರುವ ಹೊಗೆಯಿಂದ ಶೇ. 25, ಬೆಳೆಯ ಕಳೆ ಸುಡುವುದರಿಂದ ಶೇಕಡ 15, ಕಸ ಸುಡುವುದರಿಂದ ಶೇ. 15ರಷ್ಟು ವಾಯುಮಾಲಿನ್ಯವಾಗುತ್ತಿದೆ ಎಂಬುದು ತಜ್ಞರ ಅಂಬೋಣ.
ನಾವು ಉಸಿರಾಡುವ ಗಾಳಿಯಲ್ಲಿ ಗಂಧಕದ ಡೈಆಕ್ಸೈಡ್, ಸಾರಜನಕ ಡೈಆಕ್ಸೈಡ್, ಇಂಗಾಲದ ಮೊನಾಕ್ಸೈಡ್ (ಇದಂತೂ ಭಾರಿ ವಿಷಕಾರಕ) ಸೀಸ, ಜತೆಗೆ ಕ್ಲೋರೋಫೋರೋ ಕಾರ್ಬನ್ (ಇದು ಓಜೋನ್ ಪದರಕ್ಕೆ ಹಾನಿ ಮಾಡುತ್ತದೆ) ಸೇರಿಕೊಂಡಿವೆ. ವಾಯುಮಾಲಿನ್ಯ ಗಂಭೀರ ಸಮಸ್ಯೆ ಎಂದು ಪರಿಗಣಿಸಿ, ಪರಿಹಾರದ ದಾರಿಯಲ್ಲಿ ಬಲವಾದ ಹೆಜ್ಜೆಗಳನ್ನು ಇರಿಸದಿದ್ದರೆ, ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಅಪಾಯ ಎದುರಿಸಬೇಕಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಹಾಗಾಗಿ, ಈ ವಿಷಯವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು. ವಾಯುಮಾಲಿನ್ಯದ ಪ್ರಮಾಣವನ್ನು ನಿಯಂತ್ರಣಕ್ಕೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
ಎಲ್ಲ ಜವಾಬ್ದಾರಿಯನ್ನು ಸರ್ಕಾರದ ಮೇಲೆ ವರ್ಗಾಯಿಸಿ, ಜನಸಾಮಾನ್ಯರು ನಾಗರಿಕಪ್ರಜ್ಞೆ ಮರೆಯುವ ಹಾಗಿಲ್ಲ. ಮಾಲಿನ್ಯ ತಗ್ಗಿಸುವಿಕೆ ಸೇರಿದಂತೆ ಪರಿಸರ ರಕ್ಷಣೆಯ ಹೊಣೆ ಜನರ ಮೇಲೂ ಇದೆ. ಬರಲಿರುವ ನಾಳೆಗಳು ನೆಮ್ಮದಿಯಿಂದ ಕೂಡಿರಬೇಕಾದರೆ ಅಭಿವೃದ್ಧಿ ಮತ್ತು ಪರಿಸರ ವಿಷಯದಲ್ಲಿ ಸಮತೋಲನ ಸಾಧಿಸುವುದು, ಹಸಿರು ಜೀವನಶೈಲಿಗೆ ಮರಳುವುದು ಅವಶ್ಯ ಎಂಬುದನ್ನು ಮರೆಯುವಂತಿಲ್ಲ.
Champions Trophy ಸ್ವರೂಪದಲ್ಲಿ ಪ್ರಮುಖ ಬದಲಾವಣೆ? ಭಾರತ-ಪಾಕ್ ವಿವಾದದ ನಡುವೆಯೇ ಕೇಳಿ ಬಂತು ಹೊಸ ವಿಚಾರ
ರಾಮಾಯಣಕ್ಕಾಗಿ ಸಸ್ಯಾಹಾರಿಯಾದ್ರಾ Sai Pallavi? ನಟಿ ನೀಡಿದ ಸ್ಪಷ್ಟನೆ ಹೀಗಿದೆ