ಸರ್ಕಾರಿ ನೌಕರರ ಪ್ರತಿಭಟನೆ

ಆಲಮಟ್ಟಿ: ಸ್ಥಳೀಯ ಡ್ಯಾಂ ಸೈಟ್‌ನ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಶಾಖೆಯಲ್ಲಿ ಅವ್ಯವಸ್ಥೆ, ಸಿಬ್ಬಂದಿ ಕೊರತೆ, ಹಲವು ಸೇವೆಯಲ್ಲಿ ವ್ಯತ್ಯಯ ಆರೋಪಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನೌಕರರು ಸೋಮವಾರ ಬ್ಯಾಂಕ್ ಮುಂಭಾಗ ಮುಷ್ಕರ ನಡೆಸಿದರು.

ನೌಕರರ ಸಂಘದ ಅಧ್ಯಕ್ಷ ಸದಾಶಿವ ದಳವಾಯಿ, ತಾಂತ್ರಿಕ ಸಹಾಯಕ ಜೆ.ಎಚ್. ಮಂಜುನಾಥಪ್ಪ, ಆರ್‌ಎಫ್​ಓ ಮಹೇಶ ಪಾಟೀಲ ಮಾತನಾಡಿ, ನಿತ್ಯ ಹಲವು ಕೋಟಿ ರೂ. ವ್ಯವಹಾರ ನಡೆಸುವ ಈ ಸ್ಟೇಟ್ ಬ್ಯಾಂಕ್ ಶಾಖೆಯಿಂದಲೇ ಆಲಮಟ್ಟಿ ಕೆಬಿಜೆಎನ್‌ಎಲ್‌ನ ಎಲ್ಲ ನೌಕರರ ಸಂಬಳ ಆಗುತ್ತವೆ. ಕೆಬಿಜೆಎನ್‌ಎಲ್ ಗುತ್ತಿಗೆದಾರರ ವಹಿವಾಟು ಕೂಡ ಇದೇ ಬ್ಯಾಂಕ್ ಮೂಲಕ ಆಗುತ್ತದೆ. ವಾರ್ಷಿಕ ಕೆಬಿಜೆಎನ್‌ಎಲ್ ಒಂದರಿಂದಲೇ ಇಲ್ಲಿಯ ವಹಿವಾಟು 400 ಕೋಟಿ ರೂ. ದಾಟುತ್ತದೆ. ಆದರೆ ಬ್ಯಾಂಕ್‌ನಲ್ಲಿ ಕೇವಲ 6 ಸಿಬ್ಬಂದಿ ಮಾತ್ರ ಕಾರ್ಯ ಮಾಡುತ್ತಾರೆ ಎಂದು ದೂರಿದರು.

ಸೋಮವಾರ ಇಬ್ಬರೇ ಸಿಬ್ಬಂದಿ ಮಾತ್ರ ಹಾಜರಾಗಿದ್ದರು. ಸೆಕ್ಯೂರಿಟಿ ಗಾರ್ಡ್ ಕೂಡ ಇಲ್ಲ. ಬ್ಯಾಂಕ್ ಡಿಡಿ, ಆರ್‌ಟಿಜಿಎಸ್, ಕೆವೈಸಿ ಸೇರಿದಂತೆ ಪ್ರತಿಯೊಂದು ಸೇವೆಗೂ ಒಂದು ದಿನ ಕಾಲಾವಕಾಶ ಹೇಳುತ್ತಾರೆ. ಒಂದೇ ದಿನ ಯಾವುದೇ ಕಾರ್ಯ ನೆರವೇರಿಸುವುದಿಲ್ಲ, ಪ್ರತಿಯೊಬ್ಬರಿಗೂ ಮರುದಿನವೇ ಸೇವೆ ಒದಗಿಸಲಾಗುತ್ತಿದೆ. ಕೆಬಿಜೆಎನ್‌ಎಲ್‌ದಿಂದ ಬ್ಯಾಂಕ್ ಕಟ್ಟಡ, ಸಿಬ್ಬಂದಿಗೆ ವಸಾಹತು ನೀಡಲಾಗಿದೆ. ಆದರೆ ಸೇವೆಯಲ್ಲಿ ಮಾತ್ರ ನ್ಯೂನತೆ ಹೆಚ್ಚಿದೆ. ಇರುವ ಬ್ಯಾಂಕ್ ಸಿಬ್ಬಂದಿ ಕೂಡ ಗ್ರಾಹಕರ ಜತೆ ಸರಿಯಾಗಿ ವರ್ತಿಸುವುದಿಲ್ಲ. ಒಟ್ಟಾರೆ ಬ್ಯಾಂಕ್ ಇದ್ದು ಇಲ್ಲದಂತಾಗಿದೆ ಎಂದು ಆರೋಪಿಸಿದರು.

ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ಎಸ್. ಪಾಟೀಲ, ವೈ.ಎಂ. ಪಾತ್ರೋಟ, ಬಸವರಾಜ ಬನ್ನೂರ, ಐ.ಎಂ. ಕಳಸಾ, ಬಂಡಿವಡ್ಡರ, ಪರಶುರಾಮ ಭಂಡಾರಿ, ವೈ.ಎಚ್. ನಾಗಣಿ, ಜಿ.ಸಿ. ಮುತ್ತಲದಿನ್ನಿ ಸೇದಂತೆ ಇತರರು ಇದ್ದರು.