ವಿದೇಶಗಳಲ್ಲಿ ಕ್ರೀಡಾಪಟುಗಳೇ ದೊಡ್ಡ ಆಸ್ತಿ

ಆಲಮಟ್ಟಿ: ವಿದೇಶಗಳಲ್ಲಿ ಕ್ರೀಡಾಪಟುಗಳೇ ಆ ದೇಶದ ದೊಡ್ಡ ಆಸ್ತಿ, ಆದರೆ, ಇದಕ್ಕೆ ವಿರುದ್ಧವಾದ ಸ್ಥಿತಿ ಭಾರತದಲ್ಲಿದೆ. ಆದರೂ ಕೆಲ ಕ್ರೀಡಾಪಟುಗಳು ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಸಮಾಧಾನಕರ ಸಂಗತಿ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ನಿಡಗುಂದಿ ಬಿಎಂಎಸ್ ಶಾಲೆ ಆಶ್ರಯದಲ್ಲಿ ಪಟ್ಟಣದ ಶಾಸಕರ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡ ಪಪೂ ಕಾಲೇಜಿನ ನಿಡಗುಂದಿ ನೂತನ ತಾಲೂಕುಮಟ್ಟದ ಪ್ರಥಮ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಮೊಬೈಲ್ ಬಳಕೆ ಅತಿಯಾಗಿದ್ದರಿಂದಾಗಿ ಕ್ರೀಡೆಯತ್ತ ಆಸಕ್ತಿ ಕಡಿಮೆಯಾಗಿದೆ. 12 ವರ್ಷದ ವಿದ್ಯಾರ್ಥಿಗಳಿಗೂ ಊಟ ಮಾಡಿಸಲು ಪಾಲಕರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕೊಬ್ಬರಿ ಬೆಲ್ಲ ತಿನ್ನಬೇಕಾದ ವಿದ್ಯಾರ್ಥಿಗಳು ಗುಟ್ಖಾದತ್ತ ಚಿತ್ತ ಹರಿಸಿದ್ದು ವಿಷಾದದ ಸಂಗತಿ ಎಂದರು.
ಪಪೂ ಮಟ್ಟದಲ್ಲಿ ಕ್ರೀಡೆಗೂ ಪಿಯು ಇಲಾಖೆ ಹೆಚ್ಚಿನ ಆದ್ಯತೆ ನೀಡಿದರೆ, ವಿಶ್ವವಿದ್ಯಾಲಯ ಮಟ್ಟದಲ್ಲಿ ಅವರ ಸಾಧನೆ ಮುಂದುವರಿದು ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಲು ಸಾಧ್ಯ ಎಂದರು.
ಪಿಯು ಇಲಾಖೆ ಜಿಲ್ಲಾ ಉಪನಿರ್ದೇಶಕ ಜೆ.ಎಸ್. ಪೂಜೇರಿ ಮಾತನಾಡಿ, ಪಿಯು ಕಾಲೇಜಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳಿಲ್ಲ, ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕರೇ ನಮ್ಮ ಇಲಾಖೆಯೊಂದಿಗೆ ಸಹಕರಿಸಿ ವಿದ್ಯಾರ್ಥಿಗಳಿಗೆ ಕ್ರೀಡೆ ಕಲಿಸುತ್ತಿದ್ದಾರೆ. ಲಭ್ಯವಾದ ಸೀಮಿತ ಅವಧಿಯಲ್ಲೇ ಪಪೂ ಮಟ್ಟದಲ್ಲಿ ಕ್ರೀಡೆಗೆ ಆದ್ಯತೆ ನೀಡಿ, ಕಟ್ಟುನಿಟ್ಟಾಗಿ ಕಲಿಸಲಾಗುತ್ತಿದೆ ಎಂದರು.
ಶಾಸಕ ಶಿವಾನಂದ ಪಾಟೀಲ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಕ್ರೀಡಾಪಟುಗಳು ತಂದ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಬಿಎಂಎಸ್ ಸಂಸ್ಥೆ ಅಧ್ಯಕ್ಷ ಎಸ್.ಎಂ. ನಾಗರಬೆಟ್ಟ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯರ ಮಹಾಮಂಡಳದ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಸ್. ಹೊಸಮನಿ, ಆರ್.ಎ. ಜಹಾಗೀರದಾರ್, ಎಸ್.ವೈ. ಅಮಾತೆ, ಹೆರಕಲ್ಲ, ಎಚ್.ಎಚ್. ದೊಡಮನಿ, ಸೋಮು ನಾಗರಬೆಟ್ಟ ಮತ್ತಿತರರಿದ್ದರು. ಎಸ್.ಎಸ್. ಮಾಳಜಿ ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಿದರು. ಮಹೇಶ ಗಾಳಪ್ಪಗೋಳ ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *